ಆಯುರ್ವೇದದಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಾಳಜಿಯನ್ನು ಹೇಗೆ ವಹಿಸಬೇಕು ಎಂಬುದರ ಪ್ರಾಥಮಿಕ ಮಾರ್ಗದರ್ಶನವನ್ನು ನೀಡಲಾಗಿದೆ. ಒಂದು ವೇಳೆ ನಾವು ಆ ನಿಯಮಗಳನ್ನು ಪಾಲಿಸುತ್ತಿದ್ದರೆ, ನಮ್ಮ ಆರೋಗ್ಯ ಚೆನ್ನಾಗಿರುವುದು. ವಯಸ್ಸಾದವರಿಗೆ (ಹಿರಿಯ ನಾಗರಿಕರಿಗೆ) ಆರೋಗ್ಯದ ಚಿಕ್ಕ – ದೊಡ್ಡ ಸಮಸ್ಯೆಗಳು ಬರುತ್ತಿರುತ್ತವೆ. ಈ ವಯಸ್ಸಿನಲ್ಲಿ ದೊಡ್ಡ ಪ್ರಮಾಣದಲ್ಲಿ ಶರೀರದ ಸವೆತ ಆಗುತ್ತಿರುತ್ತದೆ. ಒಂದು ವೇಳೆ ನಾವು ನಮ್ಮ ಆರೋಗ್ಯದ ಸೂಕ್ತ ಕಾಳಜಿಯನ್ನು ವಹಿಸಿದರೆ ವೃದ್ಧಾಪ್ಯದಲ್ಲಿಯೂ ನಾವು ಆರೋಗ್ಯಕರ ಜೀವನವನ್ನು ನಡೆಸಬಹುದು. ಇಂದಿನ ಲೇಖನದಲ್ಲಿ ‘ಹಿರಿಯ ನಾಗರಿಕರು ತಮ್ಮ ಆರೋಗ್ಯದ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬೇಕು?’ ಎಂಬುದರ ಮಾಹಿತಿಯನ್ನು ನೀಡಲಿದ್ದೇವೆ.
೧.ವಯಸ್ಸಿನ ಅವಸ್ಥೆಗನುಸಾರ ತೆಗೆದುಕೊಳ್ಳಬೇಕಾದ ಕಾಳಜಿ
ವಯಸ್ಸಿನ ಅವಸ್ಥೆಗನುಸಾರ ನಮ್ಮ ಶರೀರದಲ್ಲಿ ದೋಷ ಗಳ ಪ್ರಾಬಲ್ಯ ಹೆಚ್ಚಿರುತ್ತದೆ. ಬಾಲ್ಯದಲ್ಲಿ ಬಲವಾದ ಕಫ ಪ್ರವೃತ್ತಿಯಿಂದಾಗಿ, ಮಕ್ಕಳು ತಕ್ಷಣವೇ ಶೀತ ಮತ್ತು ಕೆಮ್ಮಿನಂತಹ ಕಫಕ್ಕೆ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಾರೆ. ಮಧ್ಯಮ ವಯಸ್ಸಿನಲ್ಲಿ ಪಿತ್ತ ಪ್ರಕೃತಿ ಪ್ರಬಲವಾಗಿದ್ದರಿಂದ ಆಮ್ಲಪಿತ್ತದಂತಹ ತೊಂದರೆಗಳಿಂದ ಬಳಲುತ್ತಾರೆ, ಆದರೆ ವೃದ್ಧಾಪ್ಯದಲ್ಲಿ ಬಲವಾದ ವಾತ ಪ್ರವೃತ್ತಿಯಿಂದ, ಕೀಲು ನೋವು, ಮಲಬದ್ಧತೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ನಾವು ಒಂದು ವೇಳೆ ವಾತದ ಬಗ್ಗೆ ಸರಿಯಾಗಿ ಗಮನವನ್ನು ಇರಿಸಿದರೆ ವೃದ್ದಾಪ್ಯದಲ್ಲಿ ಬರುವ ಅನೇಕ ಅನಾರೋಗ್ಯದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡಬಹುದು.
೨. ಶರೀರದಲ್ಲಿ ಹೆಚ್ಚುವ ವಾತವನ್ನು ನಿಯಂತ್ರಣದಲ್ಲಿರಿಸಲು ‘ಮಾಲೀಶು’ ಆವಶ್ಯಕ !
ನಾವು ಆರಂಭದ ಲೇಖನಗಳಲ್ಲಿ ವಾತದ ಗುಣಗಳನ್ನು ನೋಡಿದ್ದೆವು, ಉದಾ. ವಾತವು ಶುಷ್ಕ ಅಂದರೆ ಒರಟು, ಸೂಕ್ಷ್ಮ, ತಂಪು ಹಾಗೂ ಚಂಚಲ ಸ್ವಭಾವದಿಂದ ಕೂಡಿದೆ. ದೇಹದಲ್ಲಿ ಯಾವಾಗ ವಾತ ಹೆಚ್ಚಾಗುತ್ತದೆಯೋ, ಆಗ ಶರೀರದಲ್ಲಿ ಶುಷ್ಕತೆ ಹೆಚ್ಚುತ್ತದೆ. ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಕೀಲುಗಳಲ್ಲಿ ಶುಷ್ಕತೆ ಉತ್ಪನ್ನವಾಗುವುದರಿಂದ ಕೀಲು ನೋವು ಪ್ರಾರಂಭವಾಗುತ್ತವೆ. ಈ ಶುಷ್ಕತೆಯನ್ನು ಕಡಿಮೆಮಾಡಲು, ಇಡೀ ಶರೀರಕ್ಕೆ ಉಗುರು ಬೆಚ್ಚಗಿನ ಎಳ್ಳೆಣ್ಣೆಯಿಂದ ಮಾಲೀಶು ಮಾಡಬೇಕು. ಇಲ್ಲಿ ತುಂಬಾ ಹಗುರವಾದ ಕೈಗಳಿಂದ ಮಾಲೀಶು ಮಾಡಬೇಕು, ಹೆಚ್ಚು ಒತ್ತಡಹಾಕಿ ಅಥವಾ ಬಲವನ್ನು ಉಪಯೋಗಿಸಿ ಮಾಲೀಶ ಮಾಡಬಾರದು. ಇಲ್ಲಿ ಕೇವಲ ಶರೀರದಲ್ಲಿ ಎಣ್ಣೆಯನ್ನು ಹೀರಿಕೊಳ್ಳುವುದು ಅಪೇಕ್ಷಿತವಿದೆ. ಎಣ್ಣೆಯ ಗುಣವು ಸ್ನಿಗ್ದತೆಯಾಗಿದ್ದರಿಂದ, ಅದು ಶರೀರದಲ್ಲಿ ಹೆಚ್ಚುತ್ತಿರುವ ವಾತವನ್ನು ನಿಯಂತ್ರಿಸುತ್ತದೆ. ಪ್ರತಿದಿನ ಸ್ನಾನಕ್ಕಿಂತ ಮೊದಲು ಕೈಗಳಿಂದ ಶರೀರ ಹಾಗೂ ಕೀಲುಗಳ ಮೇಲೆ ನಿಯಮಿತವಾಗಿ ಎಣ್ಣೆಯನ್ನು ಹಚ್ಚುವುದರಿಂದ ಕೀಲುನೋವುಗಳು ನಿಯಂತ್ರಣದಲ್ಲಿರುತ್ತವೆ. ಮಾಲೀಶು ಮಾಡುವುದರಿಂದ ರಕ್ತದ ಹರಿಯುವಿಕೆಯಲ್ಲಿ ಸುಧಾರಣೆಯಾಗುತ್ತದೆ ಮತ್ತು ಹಸಿವು ಹೆಚ್ಚಾಗಿ ಜೀರ್ಣಕ್ರಿಯೆ ವೃದ್ಧಿಸುತ್ತದೆ. ದೇಹದಲ್ಲಿನ ಎಲ್ಲಾ ಗ್ರಂಥಿಗಳ ಕಾರ್ಯ ಸುಧಾರಿಸುವ ಮೂಲಕ, ಶರೀರದ ಸವೆತವನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
೩. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು
ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಅನೇಕ ಜನರು ತಣ್ಣೀರಿನಿಂದ ಸ್ನಾನ ಮಾಡುವುದು ಉತ್ತಮ ಎಂದು ಹೇಳುತ್ತಾರೆ; ಆದರೆ ತಣ್ಣೀರಿನಿಂದ ವಾತ ಹೆಚ್ಚಾಗುತ್ತದೆ; ಆದ್ದರಿಂದ ನಲವತ್ತು ವರ್ಷದ ನಂತರ ಎಲ್ಲರೂ ಉಗುರುಬೆಚ್ಚಗಿನ ನೀರಿನಿಂದಲೇ ಸ್ನಾನ ಮಾಡಬೇಕು.
೪. ತಂಪು ಗಾಳಿಯಿಂದ ರಕ್ಷಿಸಿಕೊಳ್ಳಬೇಕು
ಹಿರಿಯ ನಾಗರಿಕರು ತಣ್ಣಗಿನ ಗಾಳಿಯ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು. ವೇಗವಾಗಿ ತಿರುಗುವ ಫ್ಯಾನ್ ಅಡಿಯಲ್ಲಿ ಮಲಗುವುದನ್ನು ತಪ್ಪಿಸಬೇಕು. ಪ್ರಯಾಣ ಮಾಡುವಾಗ ವಾಹನದ ಕಿಟಕಿಯಿಂದ ಕಿವಿಗಳಿಗೆ ತಣ್ಣನೆಯ ಗಾಳಿ ನೇರವಾಗಿ ಬರದಂತೆ ನೋಡಿಕೊಳ್ಳಬೇಕು. ಇಂತಹ ಸಮಯದಲ್ಲಿ, ಕಿವಿಯಲ್ಲಿ ಹತ್ತಿಯನ್ನು ಇಟ್ಟುಕೊಳ್ಳಬೇಕು ಅಥವಾ ಕಿವಿಗಳ ಮೇಲೆ ಕರವಸ್ತ್ರವನ್ನು ಕಟ್ಟಿಕೊಳ್ಳಬೇಕು.
೫. ಹಿರಿಯರು ಮಾಡಬಹುದಾದ ವ್ಯಾಯಾಮಗಳು !
ತುಂಬಾ ದೂರದ ಕಾಲ್ನಡಿಗೆ, ಶಾರೀರಿಕ ಮತ್ತು ಮಾನಸಿಕ ಒತ್ತಡದಿಂದ ದೂರ ಇರಬೇಕು. ಸರಳ, ಯೋಗಾಸನ, ದಿನಕ್ಕೆ ೨೦ ರಿಂದ ೨೫ ನಿಮಿಷಗಳಷ್ಟು ಕಾಲ್ನಡಿಗೆ ಇಂತಹ ಸಾದಾ ವ್ಯಾಯಾಮಗಳನ್ನು ಮಾಡಬೇಕು. ಪ್ರಾಣಾಯಾಮವನ್ನು ಅವಶ್ಯ ಮಾಡಬೇಕು.
೬. ಮಲಬದ್ಧತೆಗೆ ಸಂಬಂಧಿಸಿದ ದೂರುಗಳನ್ನು ಕಡಿಮೆ ಮಾಡುವ ಉಪಾಯಗಳು
ನೀರು ದೇಹದಲ್ಲಿ ಅತಿಯಾಗಿ ಹೀರಿಕೊಳ್ಳುವುದರಿಂದ, ವೃದ್ದಾಪ್ಯದಲ್ಲಿ ಮಲಬದ್ಧತೆಗೆ ಸಂಬಂಧಿಸಿದ ಸಮಸ್ಯೆಗಳು ಅತೀ ಹೆಚ್ಚು ಕಂಡುಬರುತ್ತವೆ. ಅನೇಕ ಜನರು ಪ್ರತಿದಿನ ಹೊಟ್ಟೆಯನ್ನು ಸ್ವಚ್ಛಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆರಂಭದಲ್ಲಿ ಅರ್ಧ ಮಾತ್ರೆ ಕೂಡ ಪರಿಣಾಮಕಾರಿಯಾಗುತ್ತದೆ; ಆದರೆ ಅನಂತರ ಒಂದು ಪೂರ್ಣ ಮಾತ್ರೆ, ನಂತರ ಎರಡು ಮಾತ್ರೆಗಳು; ಹೀಗೆ ಮಾತ್ರೆಗಳ ಪ್ರಮಾಣ ಹೆಚ್ಚಿಸಿದರೂ ಹೊಟ್ಟೆ ಸ್ವಚ್ಛ ಆಗುವುದಿಲ್ಲ, ಹೀಗಾಗಿ ಮೂಲ ಸಮಸ್ಯೆ ಹಾಗೆಯೇ ಉಳಿಯುತ್ತದೆ. ವಾರಕ್ಕೊಮ್ಮೆ ಹೊಟ್ಟೆ ಸ್ವಚ್ಛವಾಗುವ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಆಗುವುದಿಲ್ಲ; ಆದರೆ ಪ್ರತಿದಿನ ಹೊಟ್ಟೆ ಸ್ವಚ್ಛ ಆಗುವ ಔಷಧಿಯನ್ನು ತೆಗೆದುಕೊಳ್ಳುವ ಅಭ್ಯಾಸವು ತಪ್ಪಾಗಿದೆ. ಇದಕ್ಕೆ ಸಾಮಾನ್ಯ ಪರಿಹಾರವೆಂದರೆ ರಾತ್ರಿ ಮಲಗುವ ಮೊದಲು ಅರ್ಧ ಕಪ್ ಬಿಸಿ ಹಾಲಿಗೆ ೨ ಚಮಚ ತುಪ್ಪವನ್ನು ಬೆರೆಸಿ ಕುಡಿಯುವುದು. ಇದು ಮಲಬದ್ಧತೆಯ ಸಮಸ್ಯೆಯನ್ನು ನಿಯಂತ್ರಣದಲ್ಲಿಡುತ್ತದೆ. ಇನ್ನೊಂದು ಪರಿಹಾರವೆಂದರೆ ರಾತ್ರಿ ಮಲಗುವ ಮೊದಲು ೮ ರಿಂದ ೧೦ ಕಪ್ಪು ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಅವುಗಳನ್ನು ಜಗಿದು ತಿನ್ನುವುದು. ಆಗಲೂ ಮಲಬದ್ಧತೆಯ ಸಮಸ್ಯೆ ಮುಂದುವರಿದರೆ ವೈದ್ಯರ ಮಾರ್ಗದರ್ಶನದಲ್ಲಿ ‘ಬಸ್ತಿ’ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು.
೭. ಇತರ ಉಪಾಯಗಳು
ದೇಹದ ಸವತೆಯನ್ನು ಸರಿದೂಗಿಸಲು, ಪ್ರತಿದಿನ ಬೆಳಗ್ಗೆ ಒಂದು ಚಮಚ ಚ್ಯವನಪ್ರಾಶವನ್ನು ತಿನ್ನಬೇಕು. ಊಟದ ಸಮಯವನ್ನು ನಿಗದಿಪಡಿಸಿ ಆ ಸಮಯದಲ್ಲಿ ಬಿಸಿ ಮತ್ತು ತಾಜಾ ಆಹಾರವನ್ನು ತೆಗೆದುಕೊಳ್ಳಬೇಕು. ಹಳಸಿದ ಆಹಾರವನ್ನು ಎಂದಿಗೂ ಸೇವಿಸಬಾರದು. ಆಹಾರದಲ್ಲಿ ಬೇಳೆ ಹಾಗೂ ಸೂಪ್ ಇರಬೇಕು. ಇದಕ್ಕೆ ಬೆಳ್ಳುಳ್ಳಿ ಅಥವಾ ಇಂಗು ಮತ್ತು ಜೀರಿಗೆಯ ಒಗ್ಗರಣೆ ನೀಡುವುದರಿಂದ ಹೊಟ್ಟೆಯಲ್ಲಿರುವ ಗ್ಯಾಸ್ (ವಾಯು) ಕಡಿಮೆಯಾಗುತ್ತದೆ. ರಾತ್ರಿ ತಡಮಾಡಿ ಆಹಾರವನ್ನು ಸೇವಿಸಬಾರದು. ಚಹಾ – ಕಾಫಿಯನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು ಅಥವಾ ಸಂಪೂರ್ಣ ತ್ಯಜಿಸಿದಲ್ಲಿ ಉತ್ತಮ. ಹಗಲಿನಲ್ಲಿ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ. ಪ್ರತಿಬಾರಿ ಉಗುರು ಬೆಚ್ಚಗಿನ ನೀರನ್ನು ಕುಡಿಯಲು ಸಾಧ್ಯವಾಗದಿದ್ದರೆ, ಕುದಿಸಿ ತಣ್ಣಗಾದ ನೀರನ್ನು ಕುಡಿಯಿರಿ.
೭ ಅ. ವಯಸ್ಸಾದಂತೆ, ನಿದ್ರೆ ಕಡಿಮೆಯಾಗುತ್ತದೆ ಅಥವಾ ಗಾಢ ನಿದ್ರೆ ಬರುವುದಿಲ್ಲ. ಅಂತಹ ಸಮಯದಲ್ಲಿ, ಮಲಗುವ ಮೊದಲು ನಿಮ್ಮ ಪಾದಗಳಿಗೆ ಎಣ್ಣೆಯಿಂದ ಮಾಲೀಶು ಮಾಡಬೇಕು.
೭ ಆ. ತಾವು ತೆಗೆದುಕೊಳ್ಳುತ್ತಿರುವ ನಿತ್ಯದ ಔಷಧಗಳನ್ನು ವೈದ್ಯರ ಮಾರ್ಗದರ್ಶನದಲ್ಲಿ ನಿಯಮಿತವಾಗಿ ತೆಗೆದುಕೊಳ್ಳಬೇಕು. ಯಾವುದೇ ರೋಗವನ್ನು ನಿರ್ಲಕ್ಷಿಸಬಾರದು.
– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ (೫.೯.೨೦೨೩)