ಪಹಲಗಾಮ್ನ ದಾಳಿಯನ್ನು ಜಗತ್ತಿನಾದ್ಯಂತ ಖಂಡನೆ

ನವದೆಹಲಿ – ಕಾಶ್ಮೀರದಿಂದ ಅತ್ಯಂತ ಅಸ್ವಸ್ಥಗೊಳಿಸುವ ಸುದ್ದಿ ಬಂದಿದೆ. ಭಯೋತ್ಪಾದನೆಯ ವಿರುದ್ಧ ಅಮೆರಿಕ ಭಾರತದೊಂದಿಗೆ ದೃಢವಾಗಿ ನಿಂತಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಪ್ರಧಾನಮಂತ್ರಿ ಮೋದಿ ಮತ್ತು ಭಾರತದ ಜನರಿಗೆ ನಮ್ಮ ಸಂಪೂರ್ಣ ಬೆಂಬಲ ಮತ್ತು ಸಹಾನುಭೂತಿ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಹಲಗಾಮ್ನ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತಾ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಅವರಂತೆಯೇ ಅನೇಕ ದೇಶಗಳ ನಾಯಕರು ಸಹ ಈ ದಾಳಿಯನ್ನು ಖಂಡಿಸಿದ್ದಾರೆ.
ಭಯೋತ್ಪಾದನೆಯಲ್ಲಿ ಬಲಿಯಾದವರಿಗೆ ಸಂತಾಪ ಸೂಚಿಸುತ್ತೇವೆ! – ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ತಮ್ಮ ಕುಟುಂಬದೊಂದಿಗೆ ಭಾರತದ ಪ್ರವಾಸದಲ್ಲಿದ್ದಾರೆ. ಅವರು ದಾಳಿಯ ಕುರಿತು ಮಾತನಾಡಿ, ಪತ್ನಿ ಉಷಾ ಮತ್ತು ನಾನು ಭಾರತದ ಪಹಲಗಾಮ್ನಲ್ಲಿ ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಬಗ್ಗೆ ಸಂತಾಪ ಸೂಚಿಸುತ್ತೇವೆ. ಕಳೆದ ಕೆಲವು ದಿನಗಳಿಂದ ಈ ದೇಶದ ಮತ್ತು ಜನರ ಸೌಂದರ್ಯದಿಂದ ನಾವು ಮಂತ್ರಮುಗ್ಧರಾಗಿದ್ದೇವೆ. ಈ ಭಯಾನಕ ದಾಳಿಯ ಬಗ್ಗೆ ದುಃಖ ವ್ಯಕ್ತಪಡಿಸುತ್ತಾ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರೊಂದಿಗೆ ಇವೆ ಎಂದಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಭಾರತದೊಂದಿಗೆ ಇದ್ದೇವೆ! – ರಷ್ಯಾದ ಅಧ್ಯಕ್ಷ ಪುಟಿನ್
ಭಯೋತ್ಪಾದನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇವೆ. ಈ ದಾಳಿಯ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ ಎಂದು ನಾವು ಭಾವಿಸುತ್ತೇವೆ. ಭಯೋತ್ಪಾದನೆಯ ಎಲ್ಲಾ ಪ್ರಕಾರಗಳ ವಿರುದ್ಧದ ಹೋರಾಟದಲ್ಲಿ ನಾವು ಭಾರತದೊಂದಿಗೆ ಇದ್ದೇವೆ ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದರಂತೆಯೇ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಸಂಯುಕ್ತ ಅರಬ್ ಸಂಸ್ಥಾನ, ಇರಾನ್, ಫ್ರಾನ್ಸ್, ಇಸ್ರೇಲ್ ಮುಂತಾದ ದೇಶಗಳ ನಾಯಕರು ಸಹ ಈ ದಾಳಿಯನ್ನು ಖಂಡಿಸಿ ತಾವು ಭಾರತದೊಂದಿಗೆ ಇರುವುದಾಗಿ ಹೇಳಿದ್ದಾರೆ.