೧೨ ಮಾರ್ಚ್ ೨೦೨೪ ವು `ವಿಶ್ವ ಅಗ್ನಿಹೋತ್ರ ದಿನ’ವಾಗಿದೆ. ಅದರ ನಿಮಿತ್ತ…
`ಯಜ್ಞದಿಂದ ವಾಯುಮಂಡಲ ಮಲಿನವಾಗುತ್ತದೆ’, ಎಂದು ಬುದ್ಧಿಜೀವಿಗಳಿಗೆ ಅನಿಸುತ್ತದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ
೧. ವೇದದಲ್ಲಿ ಮನುಷ್ಯನಿಗೆ ಪ್ರತಿದಿನ ಮಾಡಲು ಹೇಳಿರುವ ಪಂಚ-ಮಹಾಯಜ್ಞಗಳು !
`ಎಲ್ಲ ಪ್ರಾಣಿಮಾತ್ರರ ಜೀವನ ವನ್ನು ಉದ್ಧಾರ ಮಾಡಲು ಹಾಗೂ ಸೃಷ್ಟಿಯನ್ನು ಸುರಕ್ಷಿತ ವಾಗಿಡಲು ವೇದಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಪ್ರತಿದಿನ ಬ್ರಹ್ಮಯಜ್ಞ, ದೇವ ಯಜ್ಞ, ಪಿತೃಯಜ್ಞ, ಅತಿಥಿ ಯಜ್ಞ ಹಾಗೂ ಬಲಿವೈಶ್ವದೇವ ಯಜ್ಞ ಈ ೫ ಮಹಾಯಜ್ಞ ಮಾಡಲು ಹೇಳಲಾಗಿದೆ.
೨. ನಿಸರ್ಗದಲ್ಲಿನ ಪ್ರದೂಷಣಕಾರಿ ಪದಾರ್ಥಗಳನ್ನು ಉಚ್ಚಾಟಣೆ ಮಾಡುವ ಒಂದು ಉತ್ತಮ ಮಾರ್ಗ !
ಎಲ್ಲಿಯವರೆಗೆ ಮನುಷ್ಯ ಪ್ರತಿದಿನ ವೇದಗಳಲ್ಲಿ ಹೇಳಿರುವ ಪಂಚ-ಮಹಾಯಜ್ಞಗಳನ್ನು ಮಾಡುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದನೋ, ಅಲ್ಲಿಯವರೆಗೆ ಅವನು ತ್ರಿವಿಧ ತಾಪತ್ರಯಗಳಿಂದ (ಆಧಿಭೌತಿಕ, ಆಧಿದೈವಿಕ ಹಾಗೂ ಆಧ್ಯಾತ್ಮಿಕ) ದೂರವಿದ್ದನು. ಕಾಲಕ್ರಮೇಣ ಮನುಷ್ಯನು ಈ ಮಹಾಯಜ್ಞಗಳನ್ನು ಪ್ರತಿದಿನ ಮಾಡದಂತಾದನು. ಅದರ ಪರಿಣಾಮದಿಂದ ಮನುಷ್ಯನ ಜೀವನವು ನಾನಾವಿಧಗಳ ನೈಸರ್ಗಿಕ ಪ್ರಕೋಪ ಹಾಗೂ ವ್ಯಾಧಿಗಳಿಂದ ದುಃಖದಾಯಕವಾಯಿತು. ವಾಸ್ತವದಲ್ಲಿ ಭಗವಂತನು ವೇದಗಳಲ್ಲಿ ಹೇಳಿರುವ ಮಹಾಯಜ್ಞಗಳ ನಿಯಮವು ಮನುಷ್ಯ ಸಹಿತ ಸಂಪೂರ್ಣ ಪ್ರಾಣಿಮಾತ್ರರ ಹಾಗೂ ವನಸ್ಪತಿಗಳ ಹಿತಕ್ಕಾಗಿಯೇ ಇದೆ. ಅದೇ ರೀತಿ ಮಾನವನ ಅಯೋಗ್ಯ ಕೃತಿಗಳಿಂದ ನಿಸರ್ಗದಲ್ಲಿ ಹರಡಿರುವ ಮಲಿನ ಪದಾರ್ಥಗಳನ್ನು ಉಚ್ಚಾಟಿಸಲು ಇದೊಂದು ಉತ್ತಮ ಮಾರ್ಗವಾಗಿದೆ; ಆದ್ದರಿಂದ ಮನುಷ್ಯನು ಈ ಯಜ್ಞಗಳನ್ನು ಮಾಡಿ ಕೇವಲ ತನ್ನ ಉದ್ಧಾರ ಮಾತ್ರವಲ್ಲ; ಎಲ್ಲ ಪ್ರಾಣಿಮಾತ್ರರ ಉದ್ಧಾರ ಮಾಡುತ್ತಿದ್ದಾನೆ.
೩. ಪಂಚಮಹಾಭೂತಗಳ ಮಾಲಿನ್ಯವನ್ನು ನಿರ್ಮೂಲನೆ ಮಾಡಲು ಅಗ್ನಿಹೋತ್ರವು ಉತ್ತಮ ಉಪಾಯವಾಗಿದೆ !
ಪಂಚಮಹಾಯಜ್ಞಗಳ ಪೈಕಿ ಒಂದು ದೇವಯಜ್ಞವಾಗಿದೆ. ದೇವಯಜ್ಞದ ಮೂಲಕ ಮೂಲತಃ ಚೈತನ್ಯಮಯವಾಗಿರುವ ಎಲ್ಲ ದೇವತೆಗಳಿಗೆ ತರ್ಪಣ ನೀಡಲಾಗುತ್ತದೆ, ಅಂದರೆ ಅವರನ್ನು ಸಂತುಷ್ಟಗೊಳಿಸಲಾಗುತ್ತದೆ. ಮಾನವಸಹಿತ ಸಂಪೂರ್ಣ ಪ್ರಾಣಿ ಮಾತ್ರರ ಹಾಗೂ ವನಸ್ಪತಿಗಳ ನಿರ್ಮಿತಿಯು ಪೃಥ್ವಿ, ಆಪ, ತೇಜ, ವಾಯು ಹಾಗೂ ಆಕಾಶ ಈ ಪಂಚಮಹಾಭೂತಗಳ ಸಂಯೋಗದಿಂದಾಗಿದೆ. ಮನುಷ್ಯನ ಜನ್ಮದಿಂದ ಮೃತ್ಯುವಿನ ತನಕ ಅವನ ವಿನಾಶಕಾರಿ ಜೀವನಪದ್ಧತಿ ಹಾಗೂ ಅಯೋಗ್ಯ ಕೃತಿಯಿಂದ ನಿಶ್ಚಿತವಾಗಿ ಪಂಚಮಹಾಭೂತಗಳು ಮಲಿನವಾಗುತ್ತವೆ. ವೇದ ಸ್ವರೂಪಿ ಭಗವಂತನು ಈ ಮಾಲಿನ್ಯದ ನಿರ್ಮೂಲನೆಗಾಗಿ ಅಗ್ನಿಹೋತ್ರದಂತಹ ಉತ್ತಮ ಉಪಾಯವನ್ನು ಹೇಳಿದ್ದಾನೆ. ಅಗ್ನಿಹೋತ್ರವು ವಿಚಾರಪೂರ್ವಕ, ವಿಧಿಪೂರ್ವಕ ಹಾಗೂ ಶ್ರದ್ಧಾಪೂರ್ವಕ ಮಂತ್ರಪಠಣದ ಮೂಲಕ ಮಾಡುವ ಒಂದು ಕರ್ಮಕಾಂಡವಾಗಿದೆ. ಇದೊಂದು ವೈಜ್ಞಾನಿಕ ಪ್ರಕ್ರಿಯೆ ಆಗಿದೆ.
೪. ಅಗ್ನಿಹೋತ್ರದಿಂದ ಮನುಷ್ಯನ ೫ ಕೋಶಗಳ ಶುದ್ಧಿಯಾಗುವುದು !
ಯಜ್ಞದ ಮೂಲ ತಿರುಳು ಶ್ರದ್ಧೆಯಾಗಿದೆ. ಅಗ್ನಿಹೋತ್ರವನ್ನು ಶ್ರದ್ಧೆಯಿಂದ ಮಾಡುವುದರಿಂದ ಯೋಗ, ಆತ್ಮಾ, ಪರಮಾತ್ಮಾ ಹಾಗೂ ಸೃಷ್ಟಿ ಇವುಗಳ ಜ್ಞಾನವಾಗುತ್ತದೆ. ಮನುಷ್ಯನ ಶರೀರವು ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಹಾಗೂ ಆನಂದಮಯ ಈ ೫ ಕೋಶಗಳಿಂದ ಆಗಿದೆ. ಅಗ್ನಿಹೋತ್ರ ಮಾಡುವುದರಿಂದ ಈ ೫ ಕೋಶಗಳ ಶುದ್ಧಿಯಾಗುತ್ತದೆ.
೫. ಅಗ್ನಿಹೋತ್ರ ಮಾಡುವುದರಲ್ಲಿ ಪಾರಮಾರ್ಥಿಕ ಭಾವನೆಯಿದೆ. ಇದರಿಂದ ಕರ್ತನಿಗೆ ಆಧ್ಯಾತ್ಮಿಕ, ಆಧಿಭೌತಿಕ, ಆಧ್ಯಾತ್ಮಿಕ ಈ ತ್ರಿವಿಧ ತೊಂದರೆಗಳಿಂದ ಶಾಂತಿ ಸಿಗುತ್ತದೆ.
೬. ನಾವು ಅಗ್ನಿಹೋತ್ರವನ್ನು ಮಾಡುವಾಗ ಶ್ರದ್ಧೆಯಿಂದ ವೇದಮಂತ್ರಗಳನ್ನು ಮಧುರಸ್ವರದಲ್ಲಿ ಉಚ್ಚರಿಸಿ ಅಗ್ನಿ ದೇವರಿಗೆ ಆಹುತಿಯನ್ನು ಕೊಡುತ್ತೇವೆ. ಅದರಿಂದ ಪಂಚಮಹಾಭೂತ ಸ್ವರೂಪದ ಮೂಲ ದೇವತೆಗಳ ಹಾಗೂ ಋಷಿಗಳ ಋಣದಿಂದ ಮುಕ್ತರಾಗಬಹುದು.
೭. ಅಗ್ನಿಹೋತ್ರದ ಬಗ್ಗೆ ವಿಜ್ಞಾನಕ್ಕೆ ತಿಳಿದಿರುವ ಲಾಭಗಳು !
ಪ್ರತ್ಯಕ್ಷ ಅಗ್ನಿಯಲ್ಲಿ ಹಾಕಿದ ತುಪ್ಪ ಹಾಗೂ ಹವನ ಸಾಮಗ್ರಿಗಳ ಸೂಕ್ಷ್ಮ ಪರಮಾಣುಗಳು ವಿಭಜನೆಯಾಗಿ ಅವು ವಾಯುಮಂಡಲವನ್ನು ಶುದ್ಧಗೊಳಿಸುತ್ತವೆ. ಆಧುನಿಕ ಪಾಶ್ಚಾತ್ಯ ವಿಜ್ಞಾನಿಗಳು ಅಗ್ನಿಹೋತ್ರದ ಬಗ್ಗೆ ಸಂಶೋಧನೆ ಮಾಡಿ ಅಗ್ನಿಹೋತ್ರವು ವಾಯುಶುದ್ಧಿಗಾಗಿ ಸರ್ವೋತ್ತಮವಾಗಿದೆಯೆಂದು ಸಿದ್ಧಪಡಿಸಿದ್ದಾರೆ. ಈ ಸಂಶೋಧನೆಯಲ್ಲಿ ಗಾಳಿಯಲ್ಲಿರುವ ಆರೋಗ್ಯಕ್ಕೆ ಹಾನಿಕರವಾಗಿರುವ ವೈರಾಣುಗಳು ಮತ್ತು ಜೀವಾಣುಗಳು ಅಗ್ನಿಹೋತ್ರದ ಧೂಮದಿಂದ ನಾಶವಾಗುತ್ತವೆ, ಎಂದು ಹೇಳಲಾಗಿದೆ. ಹವನ ಸಾಮಗ್ರಿಗಳನ್ನು ಸುಡುವುದರಿಂದ ನಿರ್ಮಾಣವಾಗುವ ವಾಯು (ಗ್ಯಾಸ್) ವಾಯುಮಂಡಲದಲ್ಲಿರುವ ಮೋಡಗಳೊಂದಿಗೆ ಮಿಶ್ರಣವಾಗಿ ಮಳೆಯ ರೂಪದಲ್ಲಿ ಶುದ್ಧ ಜಲದ ವೃಷ್ಟಿಯಾಗುತ್ತದೆ.
ಅಗ್ನಿಹೋತ್ರದ ಬೂದಿಯಿಂದ ಗಂಭೀರ ಚರ್ಮರೋಗಗಳು ಗುಣವಾಗುತ್ತವೆ. ಈ ಬೂದಿ ಜಲಶೋಧಕವೂ ಆಗಿದೆ. ವೃಕ್ಷ-ವನಸ್ಪತಿಗಳ ಬುಡಕ್ಕೆ ಈ ಬೂದಿಯನ್ನು ಹಾಕುವುದರಿಂದ ಮನುಷ್ಯನಿಗೆ ಮಧುರ ರಸಭರಿತ ಫಲಗಳು ಸಿಗುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಅಗ್ನಿಹೋತ್ರದಿಂದ ಪ್ರಭಾವಿತರಾದ ಜನರು ಯಜ್ಞ ಉಪಚಾರ ಪದ್ಧತಿಯಲ್ಲಿ (ಥೆರಪಿ) ರೋಗಗಳಿಗೆ ಉಪಚಾರ ಮಾಡುತ್ತಿದ್ದಾರೆ.
೮. ಋಷಿಮುನಿಗಳು ಹೇಳಿರುವ ಸಾಮೂಹಿಕ ಅಗ್ನಿಹೋತ್ರದ ನಿಯಮಗಳನ್ನು ಪಾಲಿಸುವುದು ಆವಶ್ಯಕ !
ನಮ್ಮ ಋಷಿಮುನಿಗಳು ಪ್ರತಿದಿನ ಅಗ್ನಿಹೋತ್ರ ಮಾಡುವುದರ ಜೊತೆಗೆ ಸಮಾಜದ ರಕ್ಷಣೆಗಾಗಿ ಸಾಮೂಹಿಕ ಅಗ್ನಿಹೋತ್ರದ ನಿಯಮವನ್ನೂ ಹೇಳಿದ್ದಾರೆ. ದೀಪಾವಳಿ ಹಾಗೂ ಹೋಳಿಯಂತಹ ಶುಭಕಾಲದಲ್ಲಿ ಋತು ಬದಲಾವಣೆಯಾಗುವಾಗ ರೋಗಗಳ ಸೋಂಕಾಗುವ ಸಾಧ್ಯತೆ ಇರುತ್ತದೆ; ಆದ್ದರಿಂದ ಈ ಶುಭಕಾಲದಲ್ಲಿ ಸಾಮೂಹಿಕವಾಗಿ ಭವ್ಯಸ್ವರೂಪದಲ್ಲಿ ಅಗ್ನಿಹೋತ್ರವನ್ನು ಆಯೋಜಿಸಲಾಗುತ್ತಿತ್ತು. ಇಂದು ನಾವು ಅಜ್ಞಾನದಿಂದಾಗಿ ನಮ್ಮ ಈ ಅಮೂಲ್ಯ ಆಚರಣೆಯನ್ನು ಮರೆತಿದ್ದೇವೆ. ಇಂದು ನಾವು ಇದನ್ನು ಪುನರ್ಪ್ರತಿಷ್ಠೆ ಮಾಡುವ ಅವಶ್ಯಕತೆಯಿದೆ.’
– ನವೀನಕುಮಾರ, ಸಹಸಂಪಾದಕರು (ಆಧಾರ : `ಗೀತಾ ಸ್ವಾಧ್ಯಾಯ’, ಮಾರ್ಚ್ ೨೦೨೦)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |