ನಿಸರ್ಗವು ಏನನ್ನೋ ಹೇಳಲಿಚ್ಛಿಸುತ್ತಿದೆ !

ಬಿರುಗಾಳಿ, ನೆರೆ, ಜ್ವಾಲಾಮುಖಿ ಮತ್ತು ಭೂಕಂಪದ ಸ್ಥಿತಿ ತೋರಿಸುವ ಸಾಂಕೇತಿಕ ಚಿತ್ರ

‘ಹವಾಮಾನದಲ್ಲಿ ಬದಲಾವಣೆ’ ಈ ಶಬ್ದ ಈಗ ನಮಗೆ ಪರಿಚಿತÀ ಶಬ್ದವಾಗಿದೆ. ಈ ಶಬ್ದವು ಚಿಕ್ಕದಾಗಿದ್ದರೂ, ಅದರ ಪರಿಣಾಮ ದೂರಗಾಮಿ ಮತ್ತು ಅನೇಕ ಬಾರಿ ಭೀಕರವಾಗಿರುತ್ತದೆ. ನಿಸರ್ಗವು ಈ ಮಾಧ್ಯಮದಿಂದ ತನ್ನ ಶಕ್ತಿಯನ್ನು ತೋರಿಸುತ್ತಿರುತ್ತದೆ ಮತ್ತು ನಮಗೆ ಯೋಗ್ಯ ಮಾರ್ಗದಲ್ಲಿ ಸಾಗುವ ಸೂಚನೆಯನ್ನು ಕೊಡುತ್ತಿರುತ್ತದೆ, ನಾವು ಮಾತ್ರ ಎಂದಿನಂತೆ ಅದನ್ನು ದುರ್ಲಕ್ಷಿಸುತ್ತೇವೆ. ಸುಲಭ ಭಾಷೆಯಲ್ಲಿ ಹೇಳುವುದಾದರೆ, ಹವಾಮಾನ ಬದಲಾವಣೆ, ಅಂದರೆ ‘ಬಿಸಿಲು, ಗಾಳಿ, ಮಳೆ ಈ ನೈಸರ್ಗಿಕ ವಿಷಯಗಳಲ್ಲಿ ಮನುಷ್ಯನ ವಿವಿಧ ಕೃತಿಗಳಿಂದಾಗುವ ಅಯೋಗ್ಯ ಪರಿಣಾಮಗಳು. ಇದರಿಂದ ನಿಸರ್ಗದ ಸಮತೋಲನ ಹಾಳಾಗುತ್ತದೆ ಮತ್ತು ಆಪತ್ತುಗಳು ಬರುವ ಸಾಧ್ಯತೆಯಿರುತ್ತದೆ.’ ಸದ್ಯ ಜಗತ್ತು ಇಂತಹ ಆಪತ್ತುಗಳನ್ನೇ ಎದುರಿಸುತ್ತಿದೆ. ಟರ್ಕಿಯಲ್ಲಿ ಭಾರಿ ನೆರೆ ಬಂದಿತ್ತು. ಕೆನಡಾದಲ್ಲಿ ಅರಣ್ಯವು ಕಾಡ್ಗಿಚ್ಚಿಗೆ ಬಲಿಯಾಗುತ್ತಿದೆ. ಬ್ರೆಜಿಲ್‌ನಲ್ಲಿ ಬರಗಾಲ ಬಿದ್ದು ಅಲ್ಲಿನ ತಾಪಮಾನ ಎಷ್ಟೊಂದು ಹೆಚ್ಚಾಗಿದೆ, ಎಂದರೆ ಅಲ್ಲಿನ ಒಂದು ಕೆರೆಯಲ್ಲಿ ೧೦೦ ‘ಡಾಲ್ಫಿನ್’ ಮೀನುಗಳು ಸತ್ತಿವೆ. ಇವುಗಳಿಗೆಲ್ಲ ಕಾರಣಗಳೆಂದರೆ ಹವಾಮಾನ ಬದಲಾವಣೆ; ಆದರೆ ಇದೆಲ್ಲವೂ ಒಂದೇ ದಿನದಲ್ಲಿ ಘಟಿಸಿದವೇನು ? ಎಂಬ ವಿಚಾರವನ್ನು ಮಾಡಬೇಕು.

ಕು. ಅನ್ನದಾ ಮರಾಠೆ

೧. ಹವಾಮಾನ ಬದಲಾವಣೆಯ ಧೋರಣೆಗಳಿಗೆ ತುರ್ತುಕ್ರಮದ ಆವಶ್ಯಕತೆಯಿದೆ !

ಬ್ರೆಜಿಲ್‌ನಲ್ಲಿ ಇಂದು ಬರಗಾಲ ಬೀಳುತ್ತಿದ್ದರೂ, ಕಳೆದ ೧- ೨ ವರ್ಷಗಳಲ್ಲಿ ಅಲ್ಲಿನ ಅರಣ್ಯಕ್ಕೆ ಭಯಂಕರ ಬೆಂಕಿ ಹತ್ತಿದೆ. ಸತತವಾಗಿ ನೆರೆ ಮತ್ತು ಭೂಕಂಪಗಳು ಅನೇಕ ಕಡೆಗಳಲ್ಲಿ ಸಂಭವಿಸುತ್ತಿರುತ್ತವೆ. ಫೆಬ್ರವರಿ ೨೦೨೨ ರಲ್ಲಿ ಟರ್ಕಿಯಲ್ಲಿ ಮತ್ತು ಅಕ್ಟೋಬರ್‌ ೨೦೨೩ ರಲ್ಲಿ ಅಫ್ಘಾನಿಸ್ತಾನದಲ್ಲಿ ಭೂಕಂಪವಾಗಿತ್ತು, ಅದರಲ್ಲಿ ೪ ಸಾವಿರಗಳಿಗಿಂತಲೂ ಹೆಚ್ಚು ಜನರು ಮೃತಪಟ್ಟರು.

ಜಗತ್ತಿದಾದ್ಯಂತ ಈ ರೀತಿ ಚಕ್ರವು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಇಂದು ಜಗತ್ತಿನಾದ್ಯಂತದ ೧೮೦ ದೇಶಗಳು ಹವಾಮಾನ ಬದಲಾವಣೆಯನ್ನು ಎದುರಿಸುತ್ತಿವೆ. ಹೆಚ್ಚುತ್ತಿರುವ ಇಂತಹ ಘಟನೆಗಳಿಂದ ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿವಿಧ ಸಮ್ಮೇಳನಗಳನ್ನು ಜಗತ್ತಿನಾದ್ಯಂತ ಆಯೋಜಿಸಲಾಗುತ್ತಿದೆ. ನಮ್ಮಲ್ಲಾದ ‘ಜಿ-೨೦’ ಸಮ್ಮೇಳನದಲ್ಲಿಯೂ (‘ಜಿ-೨೦’ ಎಂದರೆ, ೧೯ ದೇಶ ಮತ್ತು ಯುರೋಪಿಯನ್‌ ಒಕ್ಕೂಟ ಇವುಗಳ ಹಣಕಾಸು ಸಚಿವರು ಮತ್ತು ಮಧ್ಯವರ್ತಿ ಬ್ಯಾಂಕ್‌ ಗವರ್ನರ್‌ಗಳ ಸಂಘಟನೆ) ಹವಾಮಾನ ಬದಲಾವಣೆಯ ಬಗ್ಗೆ ಚರ್ಚಿಸಲಾಗಿದೆ; ಆದರೆ ಇಂದು ಇಡೀ ವಿಶ್ವವೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುತ್ತಿರುವುದು ಕಾಣುತ್ತಿದೆ. ಅದರತ್ತ ಕೂಡಲೇ ಗಮನಹರಿಸುವ ಆವಶ್ಯಕತೆ ಇದೆ.

೨. ಹಿಂದೂ ಸಂಸ್ಕೃತಿಯಲ್ಲಿ ಹೇಳಲಾದ ಪರಿಸರದ ಮಹತ್ವ

ಈ ಬದಲಾವಣೆಯನ್ನು ಮೊದಲಿಗೆ ಭಾರತವೇ ಆರಂಭಿಸ ಬಲ್ಲದು; ಏಕೆಂದರೆ ನಮ್ಮಲ್ಲಿ ಹಿಂದಿನ ಕಾಲದಿಂದಲೂ ಪ್ರಕೃತಿಯ ಆರಾಧನೆಯನ್ನು ಹೇಳಲಾಗಿದೆ; ಆದರೆ ನಾವು ಅದನ್ನು ನಿರ್ಲಕ್ಷಿಸು ತ್ತಿದ್ದೇವೆ. ಆದ್ದರಿಂದಲೇ ನಮ್ಮ ಭಾರತವೂ ವಿವಿಧ ಹವಾಮಾನ ಬದಲಾವಣೆಗಳನ್ನು ಎದುರಿಸುತ್ತಿದೆ. ಅಕಾಲಿಕ ಮಳೆ, ಅಲ್ಲಲ್ಲಿ ಬರುವ ನೆರೆ, ಹಿಮಾಲಯ ಪ್ರದೇಶಗಳಲ್ಲಿ ಆಗುವ ಭೂಕುಸಿತಗಳು ಇವೆಲ್ಲವೂ ಅದರ ಉದಾಹರಣೆಗಳಾಗಿವೆ; ಹೀಗಿದ್ದರೂ ಇದರಿಂದ ನಾವೇ ಪರಿಹಾರೋಪಾಯವನ್ನು ತೆಗೆಯಬಹುದು. ನಮ್ಮ ಸಂಸ್ಕೃತಿಯಲ್ಲಿ ಪರಿಸರಕ್ಕೆ ತುಂಬಾ ಮಹತ್ವವನ್ನು ಕೊಡಲಾಗಿದೆ. ಪರಿಸರದ ಬಗ್ಗೆ ಕೃತಜ್ಞತೆಯಿಂದಿರಲು ಮತ್ತು ನಮಗೆ ಅದನ್ನು ರಕ್ಷಿಸಲು ಹೇಳಲಾಗಿದೆ. ‘ಮಾತಾ ಭೂಮಿಃ ಪುತ್ರೋಽಹಂ ಪೃಥಿವ್ಯಾಃ |’ (ಅಥರ್ವವೇದ, ಕಾಂಡ ೧೨, ಸೂಕ್ತ ೧, ಖಂಡ ೧೨) ಅಂದರೆ ಹಿಂದೂ ಸಂಸ್ಕೃತಿಯಲ್ಲಿ ‘ಪೃಥ್ವಿಯು ನನ್ನ ತಾಯಿ, ನಾನು ಅವಳ ಪುತ್ರನಾಗಿದ್ದೇನೆ’, ಎಂದು ಹೇಳಲಾಗಿದೆ; ಆದರೆ ನಾವು ಮಾತ್ರ ಅದನ್ನು ದುರ್ಲಕ್ಷಿಸುತ್ತಿದ್ದೇವೆ. ಅವಳನ್ನು ಪರಚಲು ಪ್ರಯತ್ನಿಸುತ್ತಿದ್ದೇವೆ; ಆದರೆ ತಾಯಿಗೆ ದುಃಖ ನೀಡಿ ಯಾರೂ ಎಂದಿಗೂ ಸುಖವಾಗಿರಲು ಸಾಧ್ಯವಿಲ್ಲ, ಎಂಬುದನ್ನು ನಾವು ಮರೆತಿದ್ದೇವೆ. ನಾವು ಅವಳ ಕಾಳಜಿಯನ್ನು ಮಾಡಲೇಬೇಕು.

೩. ಪರಿಸರ ಮತ್ತು ಹಬ್ಬಗಳ ಬಗ್ಗೆ ಜಾಗರೂಕತೆ ಬೇಕು !

ನಾಪ್ಸು ಮೂತ್ರಂ ಪುರೀಷಂ ವಾ ಷ್ಠೀವನಂ ವಾ ಸಮುತ್ಸೃಜೇತ್‌ |
ಅಮೇಧ್ಯಾಲಿಪ್ತಮನ್ಯದ್‌ ವಾ ಲೋಹಿತಂ ವಾ ವಿಷಾಣಿ ವಾ ||

– ಮನುಸ್ಮೃತಿ, ಅಧ್ಯಾಯ ೪, ಶ್ಲೋಕ ೫೬

ಅರ್ಥ : ನೀರಿನಲ್ಲಿ ಮಲ-ಮೂತ್ರಗಳಂತಹ ತ್ಯಾಜ್ಯವನ್ನು ಎಸೆಯಬಾರದು, ಉಗುಳಬಾರದು, ಹಾಗೆಯೇ ಕಸ, ರಕ್ತ ಅಥವಾ ವಿಷಕಾರಿ ಪದಾರ್ಥಗಳನ್ನು ಹಾಕಬಾರದು ಎಂದು ನಮಗೆ ನಮ್ಮ ಧರ್ಮವು ಮಾರ್ಗದರ್ಶನ ಮಾಡಿದೆ, ಅಂದರೆ ಪರಿಸರದ ಸಮತೋಲನದ ಬಗ್ಗೆ ನಮ್ಮ ಋಷಿಮುನಿಗಳು ಬಹಳ ಹಿಂದೆಯೇ ಅಧ್ಯಯನವನ್ನು ಮಾಡಿದ್ದರು, ಎಂಬುದು ನಮಗೆ ತಿಳಿಯುತ್ತದೆ. ಆದ್ದರಿಂದಲೇ ನಾವು ನದಿಯನ್ನು ತಾಯಿ ಎಂದು ತಿಳಿದು ಅವಳನ್ನು ಪೂಜಿಸುತ್ತೇವೆ. ವಟಪೂರ್ಣಿಮೆಯಂತಹ ಹಬ್ಬಗಳಂದು ನಾವು ಮರಗಳನ್ನು ಪೂಜಿಸುತ್ತೇವೆ. ನಾಗಪಂಚಮಿ, ಕಾರಹುಣ್ಣಿಮೆಯಂದು ಪ್ರಾಣಿಗಳ ಪೂಜೆಯನ್ನು ಮಾಡುತ್ತೇವೆ. ಈ ಎಲ್ಲವುಗಳ ಬಗ್ಗೆ ಕೃತಜ್ಞತಾಭಾವವನ್ನು ಇಟ್ಟಿರುವುದರಿಂದ ಪರಿಸರದ ಬಗ್ಗೆ ತನ್ನಿಂದ ತಾನೇ ನಮಗೆ ಅರಿವು ಮೂಡುತ್ತದೆ; ಆದರೆ ಇಂದು ನಮ್ಮ ಈ ಹಬ್ಬಗಳ ಬಗೆಗಿನ ಜಾಗರೂಕತೆಯು ಕಡಿಮೆಯಾಗತೊಡಗಿದೆ. ನಾವು ಪರಿಸರದಿಂದ ಸಹಜವಾಗಿಯೇ ದೂರ ಹೋಗುತ್ತಿದ್ದೇವೆ. ನಿಸರ್ಗದಿಂದ ದೂರ ಹೋಗಿ ನಾವು ಇಂದು ಬಹುಶಃ ಸುಖವನ್ನು ಭೋಗಿಸುತ್ತಿದ್ದರೂ ಇದರ ದೂರ ಗಾಮಿ ಪರಿಣಾಮವು ಖಂಡಿತ ಒಳ್ಳೆಯದಾಗುವುದಿಲ್ಲ.

೪. ಪರಿಸರದ ಸಮತೋಲನ ಕೆಡಬಾರದೆಂದು ಪರಿಹಾರೋಪಾಯ ಪ್ರಾರಂಭಿಸುವುದು ಆವಶ್ಯಕ !

ಕೆಲವು ಸ್ಥಳಗಳಲ್ಲಿ ದೈವೀವನ (ದೇವರಕಾಡು) ಇದ್ದು ‘ಅರಣ್ಯ ವನ್ನು ದೇವರ ಅರಣ್ಯ’ವೆಂದು ಸಂರಕ್ಷಿಸಲಾಗಿದೆ, ಹಾಗೆಯೇ ಅನೇಕ ಆದಿವಾಸಿಗಳು ಯಾವುದಾದರೊಂದು ಮರವನ್ನು ಕಡಿಯುವಾಗ ಅದರ ಬಳಿ ಕ್ಷಮೆ ಕೇಳುತ್ತಾರೆ ಮತ್ತು ಅನೇಕ ಬಾರಿ ತಮಗೆ ಬೇಕಾಗಿರುವ ಭಾಗವನ್ನಷ್ಟೇ ತೆಗೆದುಕೊಳ್ಳುತ್ತಾರೆ. ಈ ಎಲ್ಲ ವಿಷಯಗಳ ಹಿಂದೆ ಪರಿಸರದ ಸಮತೋಲನಕ್ಕೆ ಹಾನಿ ಆಗಬಾರದು ಎಂಬ ಕಾರಣವಿದೆ; ಆದರೆ ವಿಕಾಸದ ಹೆಸರಿನಲ್ಲ್ಲಿ ತಗಲಿದ ದುರಾಸೆಯು ಈ ವಿಚಾರವನ್ನೇ ಮಾಡಲು ಬಿಡುವುದಿಲ್ಲ.

ಹೀಗಿದ್ದರೂ, ಈಗ ಮಾತ್ರ ನಮಗೆ ಇದರ ವಿಚಾರವನ್ನು ಮಾಡುವ ಆವಶ್ಯಕತೆಯುಂಟಾಗಿದೆ. ಪರಿಸರದ ಸಮತೋಲನ ವನ್ನು ನಾವು ನಮ್ಮಿಂದಲೇ ಪ್ರಾರಂಭಿಸಬೇಕು. ಶೀತಕಪಾಟು (ಫ್ರಿಜ್‌), ಹವಾನಿಯಂತ್ರಿತಯಂತ್ರ (ಎಸಿ) ಇಂತಹ ಉಪಕರಣ ಗಳ ಬಳಕೆಯನ್ನು ಕಡಿಮೆ ಮಾಡಬೇಕು, ವರ್ಷಕ್ಕೆ ಕನಿಷ್ಟ ೨ ಗಿಡಗಳನ್ನು ನೆಟ್ಟು ಅವುಗಳ ಕಾಳಜಿಯನ್ನು ಒಂದು ವರ್ಷವಾದರೂ ತೆಗೆದುಕೊಳ್ಳಬೇಕು, ಬಟ್ಟೆಯ ಚೀಲವನ್ನು ಉಪಯೋಗಿಸುವುದು, ಸುತ್ತಮುತ್ತ ಸಂಚರಿಸಲು ಸೈಕಲ್‌ನ್ನು ಉಪಯೋಗಿಸುವುದು ಅಥವಾ ಕಾಲ್ನಡಿಗೆಯಿಂದ ಹೋಗುವುದು ಇಂತಹ ಸಣ್ಣ ಸಣ್ಣ ವಿಷಯಗಳನ್ನು ನಾವಾಗಿ ಪ್ರಾರಂಭಿಸಿದರೆ ಖಂಡಿತ ಬದಲಾವಣೆ ಆಗುವುದು; ಏಕೆಂದರೆ ನಿಸರ್ಗವು ಏನನ್ನೋ ಹೇಳಲು ಬಯಸುತ್ತಿದೆ, ನಾವು ಅದನ್ನು ಕೇಳಬೇಕು.

– ಕು. ಅನ್ನದಾ ಮರಾಠೆ, ಚಿಪಳೂಣ, ರತ್ನಾಗಿರಿ ಜಿಲ್ಲೆ.