ನಮಗೆ ಹಿಂದೂ ಧರ್ಮದವರಿಗೆ ಒಂದು ಅತ್ಯಂತ ಕೆಟ್ಟ ಅಭ್ಯಾಸವಿದೆ, ಅದೆಂದರೆ ಮರೆವು ! ಇಂದು ನವಹಿಂದುತ್ವನಿಷ್ಠರು, ಒಂದೇಸಮನೇ ‘ಶಂಕರಾಚಾರ್ಯರು, ಸಾಧುಗಳು, ಸನ್ಯಾಸಿಗಳು ಇವರೆಲ್ಲರೂ ಶ್ರೀರಾಮ ಮಂದಿರ ಮತ್ತು ಹಿಂದುತ್ವಕ್ಕಾಗಿ ಏನು ಮಾಡಿದರು ? ಎಂದು ಕೇಳುತ್ತಿದ್ದಾರೆ. ನಮಗೆ ಇತಿಹಾಸವನ್ನು ತಿಳಿದುಕೊಳ್ಳುವುದು ಬೇಕಿಲ್ಲ, ಅದಕ್ಕಾಗಿ ಶ್ರಮಪಡುವ ತಯಾರಿಯಿಲ್ಲ. ನಮ್ಮ ಕೈಯಲ್ಲಿರುವ ಸಂಚಾರವಾಣಿಯಲ್ಲಿ ಬೆರಳಚ್ಚು ಮಾಡಿ ಏನೇನೋ ಪ್ರಶ್ನೆಗಳನ್ನು ಕೇಳಿ ಗೇಲಿ ಮಾಡುವವರಿಗೆ ಮತ್ತು ಪ್ರಶ್ನೆಗಳನ್ನು ಕೇಳುವವರಿಗಾಗಿ ಈ ಲೇಖನವಿದೆ.
೧. ಧರ್ಮಸಮ್ರಾಟ ಕರಪಾತ್ರಿಸ್ವಾಮಿ, ರಾಜಾ ಪಾಟೇಶ್ವರಿ ಪ್ರಸಾದ ಸಿಂಹ, ಮಹಂತ ದಿಗ್ವಿಜಯನಾಥ ಮತ್ತು ಕೆ.ಕೆ. ನಾಯರ್ ಇವರು ಪ್ರಾರಂಭಿಸಿದ ಶ್ರೀರಾಮಜನ್ಮಭೂಮಿಮುಕ್ತಿ ಆಂದೋಲನ !
ಬ್ರಹ್ಮೀಭೂತ ಧರ್ಮಸಮ್ರಾಟ ಕರಪಾತ್ರಿ ಸ್ವಾಮಿಗಳು ಅತ್ಯಂತ ಪರಿಶ್ರಮೀ ಕರ್ಮಯೋಗಿ ಸನ್ಯಾಸಿಗಳಾಗಿದ್ದರು. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಗೊಂಡಾ ಜಿಲ್ಲೆಯ ಬಲರಾಮಪುರದಲ್ಲಿನ ರಾಜಾ ಪಾಟೇಶ್ವರಿ ಪ್ರಸಾದ ಸಿಂಹ ಇವರು ಅಲ್ಲಿನ ಸಂಸ್ಥಾನಿಕರಾಗಿದ್ದರು. ಧಾರ್ಮಿಕ ಸ್ವಭಾವ ಮತ್ತು ಟೆನ್ನಿಸ್ ಆಟದಲ್ಲಿ ವಿಶೇಷ ಆಸಕ್ತಿಯಿರುವ ಈ ರಾಜಾಸಾಹೇಬರ ರಾಜ್ಯದಲ್ಲಿ ಅನೇಕ ಯಜ್ಞಯಾಗಗಳು ಮತ್ತು ಧರ್ಮಶಾಸ್ತ್ರದ ಬಗ್ಗೆ ಚರ್ಚೆಯಾಗುತ್ತಿತ್ತು. ಅನೇಕ ಸಾಧುಸಂತರು ವಿದ್ವಾಂಸರು ಇಲ್ಲಿಗೆ ಬರುತ್ತಿದ್ದರು. ಅಲ್ಲಿ ಒಮ್ಮೆ ಧರ್ಮಸಮ್ರಾಟ ಕರಪಾತ್ರಿಸ್ವಾಮೀಜಿ ಮತ್ತು ರಾಜಾಸಾಹೇಬ ಇವರ ಭೇಟಿಯಾಯಿತು ಮತ್ತು ಅವರಲ್ಲಿ ಸ್ನೇಹಭಾವ ಬೆಳೆಯಿತು. ಸುಮಾರು ೧೯೪೭ ರ ಪ್ರಾರಂಭದಲ್ಲಿರಬಹುದು. ಆ ಸಮಯದಲ್ಲಿ ‘ಶ್ರೀರಾಮಜನ್ಮಭೂಮಿಯನ್ನು ಮುಕ್ತಗೊಳಿಸಬೇಕು, ಎಂದು ಕಾನೂನು ಪ್ರಕಾರ ಮತ್ತು ಜನಾಂದೋಲನದ ಮೂಲಕ ಹೋರಾಡಬೇಕು, ಎಂದು ನಿರ್ಧರಿಸಲಾಯಿತು. ಆ ಸಮಯದಲ್ಲಿ ಗೋರಕ್ಷಪೀಠದ ವಿದ್ಯಮಾನ ಪೀಠಾಧೀಶರಾದ ಮಹಂತ ದಿಗ್ವಿಜಯನಾಥ ಮತ್ತು ಆಗಿನ ಫೈಜಾಬಾದ್, ಅಂದರೆ ಅಯೋಧ್ಯೆಯ ಜಿಲ್ಲಾ ನ್ಯಾಯಾಧೀಶರಾಗಿರುವ ಕೆ.ಕೆ. ನಾಯರ್ ಎಂಬ ಈ ಸಮವಿಚಾರಿ ಮತ್ತು ಧರ್ಮಾಭಿಮಾನಿ ಹಿಂದೂ ಬಾಂಧವರ ಅಮೂಲ್ಯ ಜೊತೆಗಾರಿಕೆಯು ಈ ಉಪಕ್ರಮಕ್ಕೆ ಸಿಕ್ಕಿತು. ‘ಸ್ವಾತಂತ್ರ್ಯ ಹೋರಾಟ ಪ್ರಾರಂಭವಾದ ಕೂಡಲೇ ಅದರೊಂದಿಗೆ ಶ್ರೀರಾಮಜನ್ಮಭೂಮಿಯನ್ನು ಮುಕ್ತಗೊಳಿಸಬೇಕು, ಎಂದು ನಿರ್ಧರಿಸಲಾಯಿತು. ವಿಶೇಷವೆಂದರೆ ಮಹಂತಜಿ ಮತ್ತು ರಾಜಾಸಾಹೇಬ ಈ ಇಬ್ಬರೂ ಲಾನ್ ಟೆನ್ನಿಸ್‌ನ ಉತ್ತಮ ಆಟಗಾರರಾಗಿದ್ದರು. ನಾಯರ್ ಸಾಹೇಬರೂ ಟೆನ್ನಿಸ್ ಆಟವನ್ನು ಚೆನ್ನಾಗಿ ಆಡುತ್ತಿದ್ದರು. ಟೆನ್ನಿಸ್ ಮತ್ತು ಧರ್ಮಪ್ರೇಮ ಈ ವಿಷಯಗಳಿಂದ ಈ ಮೂವರು ಕರಪತ್ರಿಸ್ವಾಮಿಗಳಂತಹ ಸದ್ಗುಣಶೀಲ ಮತ್ತು ತಪೋನಿಷ್ಠ ವಿದ್ವಾಂಸರಿಂದಾಗಿ ಉತ್ತಮ ಸ್ನೇಹಿತರಾದರು. ೨೨ ಮತ್ತು ೨೩ ಡಿಸೆಂಬರ್ ೧೯೪೯ ಈ ಎರಡು ದಿನಗಳಲ್ಲಿನ ನಡುವಿನ ರಾತ್ರಿ ಶ್ರೀರಾಮಜನ್ಮಭೂಮಿಯಲ್ಲಿ ಈ ೪ ಜನ ಮಹಾನ ವ್ಯಕ್ತಿಗಳಿಂದಲೇ ಭಗವಾನ ಶ್ರೀರಾಮ ಮತ್ತು ಇತರ ಮೂರ್ತಿಗಳು ಪ್ರಕಟವಾದವು !
೨. ಧರ್ಮಸಮ್ರಾಟ ಕರಪಾತ್ರಿಸ್ವಾಮೀಜಿಯವರಿಂದ ‘ಹಿಂದೂ ಕೋಡ್ ಬಿಲ್ನ ವಿರುದ್ಧ ಆಂದೋಲನ – ಅವರ ಬಂಧನ
ಧರ್ಮಸಮ್ರಾಟ ಕರಪಾತ್ರಿಸ್ವಾಮಿಯವರು, ‘ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಹಿಂದೂ ಧರ್ಮೀಯರ ಧಾರ್ಮಿಕ ಸ್ಥಳಗಳು ಯವನರ (ಮುಸಲ್ಮಾನರ) ದಾಸ್ಯದಿಂದ ಮುಕ್ತವಾಗಬೇಕು, ಗೋವಂಶದ ರಕ್ಷಣೆ ಯಾಗಬೇಕು, ಎಂದು ಒತ್ತಾಯಿಸಿದರು ಮತ್ತು ಈ ಆಂದೋಲನಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಬೆಂಬಲವು ಮತ್ತು ಉತ್ತರಭಾರತದ ಕೆಲವು ಪ್ರದೇಶಗಳಲ್ಲಿ ರಾಜಾಶ್ರಯದ (ಆಡಳಿತದ) ಭಾರೀ ಬೆಂಬಲ ಸಿಕ್ಕಿತು. ಆ ಸಮಯದಲ್ಲಿ ಹೆಚ್ಚು ಸಂಪರ್ಕ ಸಾಧನಗಳಿಲ್ಲದಿದ್ದರೂ ಉತ್ತರಭಾರತ, ರಾಜಸ್ಥಾನ, ದೆಹಲಿ, ಗುಜರಾತ ಮುಂತಾದ ಪ್ರದೇಶಗಳಲ್ಲಿ ಆಂದೋಲನಗಳು ಹೆಚ್ಚಾಗತೊಡಗಿತು. ೧೯೪೮ ರಲ್ಲಿ ಸ್ವಾಮೀಜಿಯವರು ಹಿಂದೂಗಳಿಗಾಗಿ ‘ರಾಮರಾಜ್ಯ ಪರಿಷದ್ ಎಂಬ ಹೆಸರಿನ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ವಿಭಜನೆಯ ನಂತರ ವಿಶಿಷ್ಟ ಸಮುದಾಯದಿಂದ ಲಕ್ಷಗಟ್ಟಲೆ ಹಿಂದೂಗಳ ಶಿರಚ್ಛೇದ, ಮಹಿಳೆಯರ ಮೇಲಿನ ಬಲಾತ್ಕಾರ, ದೇವಸ್ಥಾನಗಳನ್ನು ನಾಶಗೊಳಿಸುವುದು ಇಂತಹ ಅನೇಕ ರೀತಿಯ ಅನ್ಯಾಯಗಳಾದವು, ಆದರೂ ಅವರನ್ನು ಅತಿಯಾಗಿ ಓಲೈಸುವುದನ್ನು ಗುಲಾಮಿ ಮನೋವೃತ್ತಿಯ ಕಾಂಗ್ರೆಸ್ ಪಕ್ಷವು ಮುಂದುವರೆಸಿತು. ಆ ಸಮಯದಲ್ಲಿ ‘ಕಾಂಗ್ರೆಸ್ ಬಿಟ್ಟರೆ ಬೇರೆ ದಾರಿಯಿಲ್ಲ ಎಂಬಂತೆ ಹಿಂದೂಗಳು ಕುರುಡರಂತೆ ವರ್ತಿಸು ತ್ತಿದ್ದರು. ಇಂತಹ ಸಮಯದಲ್ಲಿ ಒಂದು ಕಿಡಿ ಬಿದ್ದಿತು, ಅದೆಂದರೆ ಈ ಚಳುವಳಿಯು (‘ರಾಮರಾಜ್ಯ ಪರಿಷದ್) ೧೯೫೨ ರ ಚುನಾವಣೆಯಲ್ಲಿ ೩ ಸ್ಥಾನಗಳನ್ನು ಗೆದ್ದಿತು. ಮುಂದಿನ ೩ ಚುನಾವಣೆಗಳಲ್ಲಿ ಸುಮಾರು ೧೨-೧೩ ಸ್ಥಾನಗಳನ್ನು ಈ ‘ರಾಮರಾಜ್ಯ ಪರಿಷದ್ ಪಕ್ಷವು ಗಳಿಸಿತು. ಪಂಡಿತ ನೆಹರು ಮತ್ತು ಡಾ. ಬಾಬಾಸಾಹೇಬ್ ಅಂಬೇಡಕರ ಇವರು ಸಂವಿಧಾನ ದಲ್ಲಿ ‘ಹಿಂದೂ ಕೋಡ್ ಬಿಲನ್ನು ಕೇವಲ ಹಿಂದೂಗಳಿಗಾಗಿ ತಂದರು ಹಾಗೂ ಅದರಲ್ಲಿ ಬಹುಪತ್ನಿತ್ವದ ಬಂಧನ ಮುಂತಾದವುಗಳನ್ನು ತಂದರು. ಸ್ವಾಮೀಜಿಯವರು ಇವುಗಳನ್ನು ಆಕ್ಷೇಪಿಸುತ್ತಾ, ‘ಇಡೀ ಭಾರತದಲ್ಲಿ ಒಂದೇ ಕಾನೂನು ಇರಬೇಕು. ಒಂದು ವೇಳೆ ಹಿಂದೂಗಳಿಗೆ ಎರಡು ವಿವಾಹಗಳಿಗೆ ಕಾನೂನು ನಿಷೇಧಿಸಿದ್ದರೆ ಇದೇ ನಿಯಮ ಮುಸಲ್ಮಾನರಿಗೂ ಇರಬೇಕು. ಇಲ್ಲದಿದ್ದರೆ ಹಿಂದೂಗಳಿಗೂ ಬಹುಪತ್ನಿತ್ವಕ್ಕೆ ಅನುಮತಿಯನ್ನು ನೀಡಿ ಎಂದು ಹೇಳಿದರು. ಕಾಂಗ್ರೆಸ್ ಸರಕಾರವು ಇದನ್ನು ವಿರೋಧಿಸಿತು, ಅಷ್ಟೇ ಅಲ್ಲದೇ ಅನೇಕ ಹಿಂದೂಗಳೂ ಕರಪಾತ್ರಿ ಸ್ವಾಮೀಜಿಯವರನ್ನು ‘ಒಬ್ಬಳನ್ನು (ಹೆಂಡತಿಯನ್ನು) ನೋಡಿ ಕೊಳ್ಳುವುದು ಕಠಿಣವಾಗಿರುವಾಗ ಇಬ್ಬರು ಹೆಂಡತಿಯರು ಏಕೆ ? ಈ ಸನ್ಯಾಸಿಗೆ ಸಂಸಾರ ಎಷ್ಟು ಕಠಿಣವಾಗಿರುತ್ತದೆ, ಎಂದು ಹೇಗೆ ಗೊತ್ತಾಗುವುದು ? ಈ ರೀತಿ ಗೇಲಿ ಮಾಡತೊಡಗಿದರು. ಕರಪಾತ್ರಿಸ್ವಾಮೀಜಿಯವರು ಸಾರಿ ಸಾರಿ ಹೇಳುತ್ತಿದ್ದರು, ‘ಒಂದು ವೇಳೆ ಯವನರಿಗೆ ಬಹುಪತ್ನಿತ್ವ ಮತ್ತು ಬಹುಸಂತಾನಕ್ಕೆ ಕಾನೂನು ಅನುಮತಿ ನೀಡಿದರೆ ಮತ್ತು ಹಿಂದೂಗಳಿಗೆ ಅದು ಇಲ್ಲದಿದ್ದರೆ, ಮುಂದಿನ ಕಾಲದಲ್ಲಿ ಭಾರತದಲ್ಲಿ ಯವನರ ಪ್ರಾಬಲ್ಯ ಹೆಚ್ಚಾಗುವುದು ಮತ್ತು ಹಿಂದೂಗಳು ಅಲ್ಪಸಂಖ್ಯಾತರಾಗುವರು. ಕಾನೂನು ಇಬ್ಬರಿಗೂ ಸಮಾನವಾಗಿರಬೇಕು ಇಬ್ಬರಿಗೂ ಒಂದೇ ಏಕಪತ್ನಿತ್ವ ಕಾನೂನು ಮತ್ತು ಸಂತಾನ ನಿಯಮವನ್ನು ಇಡಬೇಕು. ಇಂದು ಈಗ ಸಮಾನ ನಾಗರಿಕ ಕಾನೂನು ಆವಶ್ಯಕವೆನಿಸುತ್ತಿದೆ; ಆದರೆ ತುಂಬಾ ಸಮಯ ಮೀರಿ ಹೋಗಿದೆ. ಕರಪಾತ್ರಿಸ್ವಾಮಿಜಿಯವರನ್ನು ಚಳುವಳಿಯ ಸಮಯದಲ್ಲಿ ಸೆರೆಮನೆಯಲ್ಲಿಡಲಾಯಿತು. ಅಲ್ಲಿ ಅವರ ಮೇಲೆ ಯವನರು ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದರು. ಅದರಲ್ಲಿ ಅವರ ಒಂದು ಕಣ್ಣನ್ನು ಕಬ್ಬಿಣದ ಸಲಾಕೆಯನ್ನು ಚುಚ್ಚಿ ಕೀಳಲಾಯಿತು. ಕಾಂಗ್ರೆಸ್ ಸರಕಾರಕ್ಕೆ ಮೊದಲೇ ಸ್ವಾಮೀಜಿಯವರ ಬಗ್ಗೆ ಸಿಟ್ಟು, ಅಂದರೆ ‘ಶ್ರೀರಾಮಜನ್ಮಭೂಮಿಯಲ್ಲಿ ರಾಮನು ಪ್ರಕಟನಾದನು, ಎಂಬ ಸಿಟ್ಟು ಇತ್ತು, ಅದು ಈಗ ಹೊರಬಿದ್ದಿತು. ಆದರೆ ಮುಂದೆ ಈ ಚಳುವಳಿಯು ತೀವ್ರವಾಯಿತು. ಈ ಹೋರಾಟದಲ್ಲಿ ಸ್ವಾಮೀಜಿಯವರೊಂದಿಗೆ ಬಹಳ ಮಹತ್ವದ ಸಹಾಯಕರಾಗಿ ಪುರಿ ಪೀಠದ ಶಂಕರಾಚಾರ್ಯರಾದ ಪೂರ್ವಾಮ್ನಾಯ ನಿರಂಜನದೇವ ತೀರ್ಥ ಮತ್ತು ವಿದ್ಯಮಾನ ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಮಹಾರಾಜರು ಇದ್ದರು ! ಇವರು ಆಗ ಯುವಕರಾಗಿದ್ದರು; ಆಗ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.
೩. ಸಂತರ ಚಳುವಳಿಯನ್ನು ಕ್ರೂರವಾಗಿ ಹತ್ತಿಕ್ಕಿದ ಇಂದಿರಾ ಗಾಂಧಿ ಮತ್ತು ಧರ್ಮಸಮ್ರಾಟ ಕರಪಾತ್ರಸ್ವಾಮಿಗಳ ಶಾಪ !
ಮುಂದೆ ಉತ್ತರಭಾರತದಲ್ಲಿ ಹಿಂದೂ ಮಹಾಸಭೆ ಮತ್ತು ಧರ್ಮಸಮ್ರಾಟ ಕರಪಾತ್ರಿಸ್ವಾಮೀಜಿಯವರ ‘ರಾಮರಾಜ್ಯ ಪರಿಷದ್ ಪಕ್ಷದ ಪ್ರಾಬಲ್ಯವು ಹೆಚ್ಚಾಗತೊಡಗಿತು. ಇದರಿಂದ ಇಂದಿರಾ ಗಾಂಧಿಯವರಿಗೆ ಕ್ರಮೇಣ ಹಿಂದುತ್ವನಿಷ್ಠ ಸಂಘಟನೆಯು ಒಂದುಗೂಡುತ್ತಿದೆ, ಎಂಬುದು ಗಮನಕ್ಕೆ ಬಂದಿತು. ಇದನ್ನು ನೋಡಿ ಮತ್ತು ಮುಂಬರುವ ಚುನಾವಣೆಯಲ್ಲಿ ಸೋಲುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇಂದಿರಾ ಗಾಂಧಿಯವರು ಸಂತರೊಂದಿಗೆ ಸಂವಾದ ಸಾಧಿಸಿದರು. ಇಂದಿರಾ ಗಾಂಧಿಯವರು, ‘ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಆಯ್ಕೆಯಾದ ತಕ್ಷಣ ರಾಜ್ಯವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಸಂತರ ಬೇಡಿಕೆ ಗಳನ್ನು ಸ್ವೀಕರಿಸುತ್ತೇವೆ, ಎಂದು ಸಾರ್ವಜನಿಕ ಆಶ್ವಾಸನೆಯನ್ನು ನೀಡಿದರು. ಅವರ ಮಾತುಗಳನ್ನು ಎಲ್ಲರೂ ನಂಬಿದರು ಮತ್ತು ಕಾಂಗ್ರೆಸ್ ಬಹುಮತದಿಂದ ಆಯ್ಕೆಯಾಗಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾದರು.
ಕಮ್ಯೂನಿಸ್ಟರು ಮತ್ತು ಮುಸಲ್ಮಾನರು ಮಾತ್ರ ಇಂದಿರಾ ಗಾಂಧಿಯ ಮೇಲೆ ಒತ್ತಡವನ್ನು ತಂದು ಹಿಂದೂಗಳ ಬೇಡಿಕೆಗಳನ್ನು ತಳ್ಳಿ ಹಾಕಿದರು. ಜೈನ ಸಾಧುಗಳು, ಹಿಂದೂ ಮಹಾಸಭೆ, ೪ ಪೀಠಗಳ ಶಂಕರಾಚಾರ್ಯರು, ವಿವಿಧ ಆಖಾಡಾಗಳ ಸಾಧುಸಂತರು ಮತ್ತು ಧರ್ಮಸಮ್ರಾಟ ಕರಪಾತ್ರಿಸ್ವಾಮೀಜಿಯವರು ಸಂಸತ್ತಿಗೆ ಮುತ್ತಿಗೆ ಹಾಕಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದರು. ಜೈನ ಮುನಿಗಳಾದ ಸುಶೀಲಕುಮಾರ, ಸಾರ್ವದೇಶ ಸಭೆಯ ಲಾಲಾ ರಾಮಗೋಪಾಲ ಶಾಲವಾಲೆ, ಹಿಂದೂ ಮಹಾಸಭೆಯ ಪ್ರಧಾನ ಪ್ರಾ. ರಾಮಸಿಂಹಜಿ ಇವರು ಇದರಲ್ಲಿ ಪ್ರಮುಖರಾಗಿದ್ದರು. ಮೂವರು ಸಂತರು ಆಮರಣ ಉಪವಾಸವನ್ನು ಪ್ರಾರಂಭಿಸಿದರು. ಋಗ್ವೇದಿಯ ಪೂರ್ವಮ್ನಾಯ ಪುರಿ ಶಂಕರಾಚಾರ್ಯ ನಿರಂಜನದೇವ ತೀರ್ಥರು, ಸಂತ ಪ್ರಭುದತ್ತ ಬ್ರಹ್ಮಚಾರಿ, ಮಹಾತ್ಮಾ ಸಂತ ರಾಮಚಂದ್ರ ವೀರ ಇವರು ಚಳುವಳಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದರು. ೭ ನವೆಂಬರ್ ೧೯೬೬, ಅಂದರೆ ಗೋಕುಲಷ್ಠಮಿಯ ದಿನದಂದು ಶಾಂತಿಯಿಂದ ಸಂಸತ್ತಿನ ಹೊರಗೆ ಶಂಕರಾಚಾರ್ಯರು, ಸಾಧುಸಂತರು ಮತ್ತು ಹಿಂದೂ ಮಹಾಸಭೆ ಇವರ ವತಿಯಿಂದ ಚಳುವಳಿಯನ್ನು ನಡೆಸಲಾಗುತ್ತಿತ್ತು. ಇಂದಿರಾ ಗಾಂಧಿಯವರು ಈ ಚಳುವಳಿಯನ್ನು ಹತ್ತಿಕ್ಕಲು ನಿರಾಯುಧ ಸಂತರ ಮೇಲೆ ಗುಂಡು ಹಾರಿಸಲು ಆಜ್ಞೆಯನ್ನು ನೀಡಿದರು. ಸಾವಿರಾರು ಸಾಧುಗಳು ಸಾವನ್ನಪ್ಪಿದರು, ಜೈಲುಪಾಲಾದರು, ಅಕ್ಷರಶಃ ಶಂಕರಾಚಾರ್ಯರ ಸಹಿತ ಎಲ್ಲರ ಮೇಲೆ ಗುಂಡು ಹಾರಿಸಲಾಯಿತು, ಅನೇಕರನ್ನು ಜೈಲಿನಲ್ಲಿಟ್ಟರು, ಪೊಲೀಸರು ಅವರನ್ನು ಅಮಾನುಷವಾಗಿ ಥಳಿಸಿದರು. ಈ ಚಳುವಳಿಯಲ್ಲಿ ಪ್ರಸ್ತುತ ಪುರಿಯ ವಿದ್ಯಮಾನ ಶಂಕರಾಚಾರ್ಯರಾದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಯವರು ಭಾಗವಹಿಸಿದ್ದರು. ಆಗ ಅವರು ಯುವಕ ಮತ್ತು ವಿದ್ಯಾರ್ಥಿ ಗಳಾಗಿದ್ದರು. ಚಳುವಳಿಯನ್ನು ಹತ್ತಿಕ್ಕಲಾಗುತ್ತಿದ್ದರೂ ಓರ್ವ ಸಾಧುಗಳು ಅಮರಣಾಂತ ಉಪವಾಸವನ್ನು ಮುಂದುವರೆಸಿದರು ಮತ್ತು ೧೬೬ ದಿನಗಳ ನಂತರ ಅವರು ಪ್ರಾಣತ್ಯಾಗ ಮಾಡಿದರು. ಅವರ ಹೆಸರು ಮಹಾತ್ಮಾ ಸಂತ ರಾಮಚಂದ್ರ ವೀರ ಆಗಿತ್ತು ! ಆಗ ಈ ಚಳುವಳಿಯನ್ನು ಇಷ್ಟೊಂದು ಕ್ರೂರ ರೀತಿಯಲ್ಲಿ ಕೊನೆಗೊಳಿಸಲಾಯಿತು. ಹೀಗಿದ್ದರೂ ಇಂದು ಅನೇಕ ಜನರು, ‘ಶಂಕರಾಚಾರ್ಯರು ಮತ್ತು ಸಾಧುಸಂತರು ರಾಮಜನ್ಮಭೂಮಿಗಾಗಿ, ಹಿಂದೂಗಳಿಗಾಗಿ ಏನು ಮಾಡಿದರು ? ಎಂದು ಕೇಳುತ್ತಾರೆ. ಗೋರಕ್ಷನಾಥ ಪೀಠದ ಮಹಂತ ಅವೈದ್ಯನಾಥ ಇವರಂತೂ ಅಯೋಧ್ಯೆಯ ಶಂಕುಸ್ಥಾಪನೆಯು ಅಸ್ಪೃಶ್ಯ ವ್ಯಕ್ತಿಯಿಂದಾಗಬೇಕು, ಎಂದು ಹೇಳಿದರು ಮತ್ತು ಅದರಂತೆಯೇ ಮಾಡಿದರು, ಇದೂ ಅನೇಕರಿಗೆ ಗೊತ್ತಿತ್ತು. ಧರ್ಮಸಮ್ರಾಟ ಕರಪಾತ್ರಿಸ್ವಾಮೀಜಿಯವರು ಅದೇ ಸಮಯ ದಲ್ಲಿ ಇಂದಿರಾ ಗಾಂಧಿಯವರಿಗೆ ಮತ್ತು ಕಾಂಗ್ರೆಸ್‌ಗೆ, ‘ನಿಮ್ಮ ವಂಶ ವಿಚ್ಛೇದವಾಗುವುದು, ನೀವು ಸಾಧುಸಂತರು ಅಜಾಗರೂಕ ರಾಗಿದ್ದಾಗ ಅವರನ್ನು ಹೇಗೆ ಕೊಂದಿರುವಿರೋ, ಅದೇ ರೀತಿ ನೀವು ಸಾಯುವಿರಿ ಎಂಬ ಶಾಪವನ್ನು ಕೊಟ್ಟಿದ್ದರು. ನೀವು ನಂಬುತ್ತಿರೋ ಇಲ್ಲವೋ, ನಿಷ್ಠುರ ನಡತೆಯ ತಪಸ್ವಿಯ ಶಾಪವು ಗಾಂಧಿ ಮನೆತನಕ್ಕೆ ತಗಲಿತು. ಬಾಬರನು ದೇವಸ್ಥಾನವನ್ನು ಕೆಡವಿದ ನಂತರ ಸಾಧು ಸಂತರು ಹೋರಾಡುತ್ತಲೇ ಇದ್ದರು. ಮುಂದೆ ಧರ್ಮಸಮ್ರಾಟ ಕರಪಾತ್ರಿಸ್ವಾಮೀಜಿಯವರು ಸಜೀವ ಸಮಾಧಿಯನ್ನು ತೆಗೆದುಕೊಂಡರು.
೪. ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ಶ್ರೀರಾಮಮಂದಿರಕ್ಕಾಗಿ ಮಾಡಿದ ಕಾರ್ಯ !
ದ್ವಾರಕಾ ಹಾಗೂ ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ಹಿಂದೂಗಳಿಗಾಗಿ, ಗಂಗಾನದಿ, ರಾಮಸೇತುವೆ ಮತ್ತು ಶ್ರೀರಾಮಮಂದಿರಕ್ಕಾಗಿ ಹೋರಾಡಿದರು. ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿಯವರು ಅವರ ಭಕ್ತರಾಗಿದ್ದರು. ರಾಜೀವ ಗಾಂಧಿ ಇವರಿಗೆ ಹೇಳಿ ದೂರದರ್ಶನದಲ್ಲಿ ‘ರಾಮಾಯಣ ಮತ್ತು ‘ಮಹಾಭಾರತದ ಧಾರಾವಾಹಿ ಗಳನ್ನು ನಡೆಸಲು ಸ್ವಾಮೀಜಿಯವರೇ ಆಗ್ರಹಿಸಿದ್ದರು. ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ಕರಪಾತ್ರಿ ಸ್ವಾಮೀಯವರೊಂದಿಗೆ ಚಳುವಳಿಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಶ್ರೀರಾಮಜನ್ಮಭೂಮಿ ಚಳುವಳಿಯು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರಿಗಾಗಿ ಅದೇನು ಹೊಸದಾಗಿರಲಿಲ್ಲ. ಮುಂದೆ ಶಹಬಾನೋ ಪ್ರಕರಣವು ಕೈಮೀರಿ ಹೋಯಿತು. ಮುಸಲ್ಮಾನರ ಓಲೈಕೆಯ ಮನೋವೃತ್ತಿಯ ಕಾಂಗ್ರೆಸ್‌ಗೆ ಕಾನೂನು ಬದಲಾಯಿಸಬೇಕಾಯಿತು ಮತ್ತು ಸಾರ್ವಜನಿಕ ಅಭಿಪ್ರಾಯವು ರಾಜೀವ ಗಾಂಧಿಯ ವಿರೋಧದಲ್ಲಿ ತಿರುಗಿತು. ಆಗ ಸ್ವಾಮೀಜಿಯವರು, ‘ಇನ್ನೂ ಸಮಯ ಹೋಗಿಲ್ಲ. ಭಗವಾನ್ ಶ್ರೀರಾಮನಿಗೆ ಶರಣಾಗು ಎಂದು ಹೇಳಿದರು. ಆಗ ಇಷ್ಟ ಇಲ್ಲದಿದ್ದರೂ, ರಾಜೀವ ಗಾಂಧಿಯವರು ನ್ಯಾಯಾಲಯದಲ್ಲಿ ಭದ್ರತೆಯ ಭರವಸೆಯನ್ನು ನೀಡಿ ವಿವಾದಿತ ಜಾಗದ ಬೀಗಗಳನ್ನು ತೆರೆದು ಡೇರೆಯಲ್ಲಿ ಶ್ರೀರಾಮನ ಪೂಜೆಗೆ ದಾರಿ ಮಾಡಿಕೊಟ್ಟರು. (ಸ್ವಾತಂತ್ರ್ಯವೀರ ಸಾವರಕರ ಇವರ ಗೀತೆ ರೇಡಿಯೋದಲ್ಲಿ ಹಾಕಲಾಯಿತು; ಆದ್ದರಿಂದ ಕಾಂಗ್ರೆಸ್ ಸರಕಾರವು ಪಂಡಿತ ಹೃದಯನಾಥ ಮಂಗೇಶಕರ ಇವರನ್ನು ಆಕಾಶವಾಣಿಯ ನೌಕರಿಯಿಂದ ತೆಗೆದಿತ್ತು. ಇಂತಹ ವಿರೋಧಿ ಮನಸ್ಸಿನವರಿಗೆ ಹೇಳಿ ಸರಕಾರಿ ವಾಹಿನಿಯಲ್ಲಿ ‘ರಾಮಾಯಣ ಮತ್ತು ‘ಮಹಾಭಾರತವನ್ನು ತೋರಿಸಲು ಹೇಳುವ ಸ್ವಾಮೀಜಿಯವರಿಗೆ ಅನೇಕ ಜನರು ‘ಕಾಂಗ್ರೆಸ್ ಚಮಚಾ ಎಂದು ಕರೆದರು.)
೪ ಅ. ಪ್ರಮುಖ ಸಂತರನ್ನು ಮತ್ತು ಮಹಂತರನ್ನು ಸಂಘಟಿಸಿ ಶ್ರೀರಾಮಮಂದಿರಕ್ಕಾಗಿ ಪುನಃ ಚಳುವಳಿಯನ್ನು ಪ್ರಾರಂಭಿಸುವುದು :
ನಿರ್ಮೋಹಿ ಮತ್ತು ಇತರ ಕೆಲವು ಆಖಾಡಾಗಳಲ್ಲಿನ ಸಂತರು, ಮಹಂತರು ೧೯೮೯ ರಲ್ಲಿ ಮಾಘಮೇಳದಲ್ಲಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರ ಬಳಿ ಬಂದು ಸ್ವಾಮೀಜಿಯವರಿಗೆ, ‘ನಮಗೆ ಈಗ ಈ ಹೋರಾಟದ ಮುಂದಾಳತ್ವವನ್ನು ವಹಿಸಲು ಆಗುವುದಿಲ್ಲ. ನೀವು ಮುಂದಾಳತ್ವವನ್ನು ವಹಿಸಬೇಕು. ನಾವು ನಿಮ್ಮ ಜೊತೆಯಲ್ಲಿದ್ದೇವೆ ಎಂದು ಹೇಳಿದರು. ಚಿತ್ರಕೂಟ ಪರ್ವತದ ಮೇಲೆ ೩ ಜೂನ್ ೧೯೮೯ ರಂದು ಸ್ವಾಮೀಜಿಯವರು ದೇಶದಾದ್ಯಂತದ ೧ ಸಾವಿರ ಪ್ರಮುಖ ಸಂತರು, ಮಹಂತರನ್ನು ಕರೆದರು ಮತ್ತು ಶ್ರೀರಾಮಮಂದಿರ ಪುನರನಿರ್ಮಾಣದ ಶಂಖನಾದವನ್ನು ಮೊಳಗಿಸಿದರು. ಸಾವಿರಾರು ಸಾಧುಸಂತರು, ಅವರ ಶಿಷ್ಯರು ಮತ್ತು ಸನ್ಯಾಸಿಗಳಿಗೆ ಈ ಚಳುವಳಿಯಲ್ಲಿ ಭಾಗವಹಿಸಲು ಆಹ್ವಾನಿಸಲಾಯಿತು. ೧೯೮೯ ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಆಗಲಿಕ್ಕಿತ್ತು. ಸ್ವಾಮೀಜಿಯವರು ಎಲ್ಲರನ್ನು ಜಾಗೃತಗೊಳಿಸಿದ್ದರು. ಅಕ್ಟೋಬರ್ ೧೯೮೯ ರಲ್ಲಿ ಸ್ವಾಮೀಜಿಯವರು ಅನೇಕ ವಿದ್ವಾಂಸರು, ಸ್ಥಾಪತ್ಯ(ವಾಸ್ತುಶಾಸ್ತ್ರ) ಅಭಿಯಂತರು, ಶಿಲ್ಪಕಾರರೊಂದಿಗೆ ಅಯೋಧ್ಯೆಗೆ ಭೇಟಿ ನೀಡಿದರು ಮತ್ತು ದೇವಸ್ಥಾನದ ಸ್ವರೂಪವು ಹೇಗಿರಬೇಕೆಂಬ ಅಧ್ಯಯನವನ್ನು ಮಾಡಿದರು ಮತ್ತು ದೇವಸ್ಥಾನದ ಪ್ರತಿಕೃತಿಯನ್ನು ಸಿದ್ಧಪಡಿಸಿದರು. ನ್ಯಾಯಾಲಯದಲ್ಲಿ ಶ್ರೀರಾಮಮಂದಿರಕ್ಕೆ ಸಂಬಂಧಿಸಿದಂತೆ ಬಲವಾದ ವಾದವನ್ನು ಮಂಡಿಸಲು ಸಾಧ್ಯವಾಗಬೇಕೆಂದು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ‘ಅಖಿಲ ಭಾರತೀಯ ರಾಮಜನ್ಮಭೂಮಿ ಪುನರುದ್ಧಾರ ಸಮಿತಿಯನ್ನು ರಚಿಸಿದರು. ಈ ಸಮಿತಿಯು ನ್ಯಾಯಾಲಯದಲ್ಲಿ ರಾಮಲಲ್ಲಾನ ಪರವಾಗಿ ವಿಷಯವನ್ನು ಬಲವಾಗಿ ಮಂಡಿಸಿತು. ಶ್ರೀರಾಮಜನ್ಮಭೂಮಿ ಚಳುವಳಿಯಲ್ಲಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ದಕ್ಷಿಣದಿಂದ ಉತ್ತರದವರೆಗಿನ ಎಲ್ಲ ಸಾಧುಸಂತರನ್ನು ಒಟ್ಟಿಗೆ ತಂದರು. ಸ್ವಾಮೀಜಿಯವರು ನಾಲ್ಕೂ ಪೀಠಗಳ ಶಂಕರಾಚಾರ್ಯರನ್ನು ಒಟ್ಟಿಗೆ ಸೇರಿಸಿ ಅನೇಕ ಆಖಾಡಗಳು, ಶೈವ ಮತ್ತು ವೈಷ್ಣವ ಸಂಪ್ರದಾಯದ ಸಾಧು ಸಂತರನ್ನು ಅಂದರೆ, ಎಲ್ಲ ದ್ವೈತ ಮತ್ತು ಅದೆತವಾದಿಗಳೆಲ್ಲರನ್ನು ಎಲ್ಲ ಪೀಠಾಚಾರ್ಯರನ್ನು ಒಟ್ಟಿಗೆ ಸೇರಿಸಿದರು. ‘ಮಂದಿರವು ಭವ್ಯ ದಿವ್ಯವಾಗಿರಬೇಕು, ಅದು ಶಾಸ್ತ್ರೋಕ್ತ ಪದ್ಧತಿಯಿಂದಾಗಬೇಕು. ದೇವಸ್ಥಾನದ ಆಡಳಿತದಲ್ಲಿ ಯಾವುದೇ ರಾಜಕೀಯ ವ್ಯಕ್ತಿ ಇರಬಾರದು. ಜನರ ಮತ್ತು ಸಂತರ ಸಹಭಾಗಿತ್ವದಲ್ಲಿ ಕಂಬೋಡಿಯಾದಲ್ಲಿನ ಅಂಕೋರವಾಟದಂತೆ ಭವ್ಯ ದೇವಾಲಯವನ್ನು ನಿರ್ಮಿಸುವ ಅಭಿಲಾಷೆ ಹೊಂದಿದ್ದರು. ಈ ಚಳುವಳಿಯಲ್ಲಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಯವರು ಅನೇಕಬಾರಿ ಕಾರಾಗೃಹದಲ್ಲಿದ್ದರು.
೫. ಗಂಗಾ ನದಿಗೆ ‘ರಾಷ್ಟ್ರೀಯ ಸ್ಥಾನಮಾನವನ್ನು ದೊರಕಿಸಲು ಮತ್ತು ‘ಸೇತುಸಮುದ್ರಮ್ ಯೋಜನೆಯನ್ನು ವಿರೋಧಿಸಿದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ !
ಕಾಂಗ್ರೆಸ್ ನಾಯಕರು ಮತ್ತು ಅಂದಿನ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಹ ಇವರ ಕಾಲದಲ್ಲಿ ಗಂಗಾ ನದಿಗೆ ‘ರಾಷ್ಟ್ರೀಯ ಸ್ಥಾನಮಾನ ಸಿಕ್ಕಿತು. ಅದಕ್ಕಾಗಿ ಸ್ವಾಮೀಜಿಯವರು ಚಳುವಳಿ ಹೂಡಿದ್ದರು. ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ‘ರಾಮಸೇತುವು ಕಾಲ್ಪನಿಕ ಅಥವಾ ಮಾನವನಿರ್ಮಿತಿಯಲ್ಲ, ಅದು ರಾಷ್ಟ್ರೀಯ ಸಂಸ್ಕೃತಿ, ಎಂದು ಧೃಢವಾಗಿ ಹೇಳಿದ್ದರು. ಸ್ವಾಮೀಜಿಯವರು, ‘ರಾಮಸೇತುವೆ ಕಾಲ್ಪನಿಕವಲ್ಲ. ಅದನ್ನು ಒಡೆದು ‘ಸೇತುಸಮುದ್ರಮ್ ಯೋಜನೆಯನ್ನು ಮಾಡಬಾರದು, ಎಂದು ಸರಕಾರಕ್ಕೆ ಒತ್ತಾಯಿಸಿ ಆ ಯೋಜನೆಯನ್ನು ತೆಗೆದುಹಾಕಲು ಹೇಳಿದ್ದರು, ಇದು ಅನೇಕ ಜನರಿಗೆ ಗೊತ್ತಿಲ್ಲ.
೬. ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಮತ್ತು ಕೇಂದ್ರ ಸರಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ !
ನರಸಿಂಹ ರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಇವರ ಕಾಲದಲ್ಲಿ ಶ್ರೀರಾಮಜನ್ಮಭೂಮಿಯ ವಿವಾದವನ್ನು ಪರಿಹರಿಸಲು ೨ ಪ್ರಯತ್ನಗಳಾದವು. ಅವೆಂದರೆ ಇಬ್ಬರು ಪ್ರಧಾನ ಮಂತ್ರಿಗಳು ‘ಮಂದಿರ ಮತ್ತು ಮಸೀದಿಯನ್ನು ಅಕ್ಕಪಕ್ಕದಲ್ಲಿ ಕಟ್ಟಿ ವಿವಾದವನ್ನು ಒಮ್ಮೆ ಕೊನೆಗೊಳಿಸೋಣ, ಎಂಬ ಸಿದ್ಧತೆ ಯನ್ನು ತೋರಿಸಿದ್ದರು; ಆದರೆ ‘ಕಾಶಿವಿಶ್ವನಾಥನಂತೆ ನಮ್ಮ ಶ್ರೀರಾಮಮಂದಿರದ ಪಕ್ಕದಲ್ಲಿ ಮುಸಲ್ಮಾನರ ಜಾಗ ಮಸೀದಿ ಇರುವುದು ನಮಗೆ ಒಪ್ಪಿಗೆ ಇಲ್ಲ. ಅದು ಲಕ್ಷಗಟ್ಟಲೆ ಜನರ ಬಲಿದಾನದ ತ್ಯಾಗದ ಅವಮಾನವಾಗುವುದು. ಸಂಪೂರ್ಣ ಶ್ರೀರಾಮಜನ್ಮಭೂಮಿಯನ್ನು ಹೋರಾಡಿ ಪಡೆಯುವೆವು. ಇಂತಹ ಪರಿಹಾರವೇ ಬೇಡ, ಎಂದು ಪ್ರತಿವಾದಿಸಿ ಹೊರಗೆ ಬರುವವರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯೇ ಆಗಿದ್ದರು. ಅಲಹಾಬಾದ್ ಉಚ್ಚ ನ್ಯಾಯಾಲಯ ‘ರಾಮಜನ್ಮಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸಬೇಕು, ಎಂದು ತೀರ್ಪು ನೀಡಿತು. ‘ಅದು ನಮಗೆ ಒಪ್ಪಿಗೆ ಇಲ್ಲ. ನಾವು ಕೊನೆಯ ವರೆಗೆ ಹೋರಾಡಿ ಸಂಪೂರ್ಣ ಜಾಗವನ್ನು ಪಡೆಯುವೆವು, ಎಂದು ಹೇಳುವವರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರೇ ಆಗಿದ್ದರು.
ಇನ್ನೂ ಬಹಳಷ್ಟು ಬರೆಯಬಹುದು; ಆದರೆ ಇಷ್ಟೇ ಹೇಳ ಬಯಸುತ್ತೇನೆ, ‘ಶಂಕರಾಚಾರ್ಯರು ಏನು ಮಾಡಿದರು ?, ಹೀಗೆ ಮಾತ್ರ ಕೇಳಬೇಡಿ. ನೀವು ಈ ಕಾರ್ಯದಲ್ಲಿನ ಶೇ. ೧ ರಷ್ಟಾದರೂ ಕಾರ್ಯವನ್ನು ಮಾಡಿದ್ದೀರಾ ನೋಡಿ ? ಏಕೆಂದರೆ ಟೀಕಿಸುವುದು ಸುಲಭವಾಗಿರುತ್ತದೆ.
– ವೇದಮೂರ್ತಿ ಭೂಷಣ ದಿಗಂಬರ ಜೋಶಿ, ಸಿಂಧುದುರ್ಗ. (೧೬.೧.೨೦೨೪)