ಬಾಬರನ ಆಕ್ರಮಣದಿಂದ ರಕ್ಷಿಸಲ್ಪಟ್ಟ ಶ್ರೀರಾಮನ ಮೂಲ ವಿಗ್ರಹವಿರುವ ಅಯೋಧ್ಯೆಯ ಪುರಾತನ ಶ್ರೀ ಕಾಳೆರಾಮ ಮಂದಿರ !

ಶ್ರೀ. ನೀಲೇಶ ಕುಲಕರ್ಣಿ

ನಾಶಿಕದ ಸುಪ್ರಸಿದ್ಧ ಶ್ರೀ ಕಾಳೆರಾಮ ದೇವಸ್ಥಾನವು ಎಲ್ಲರಿಗೂ ಗೊತ್ತಿದೆ; ಆದರೆ ಅಯೋಧ್ಯೆಯಲ್ಲಿಯೂ ಪ್ರಾಚೀನ ಶ್ರೀ ಕಾಳೆರಾಮ ದೇವಸ್ಥಾನವಿರುವುದು ಅನೇಕರಿಗೆ ಗೊತ್ತಿಲ್ಲ. ಅಂದರೆ ಹೊಸ ಶ್ರೀರಾಮಮಂದಿರಕ್ಕೆ ಭಕ್ತರು ದರ್ಶನಕ್ಕಾಗಿ ಹೇಗೆ ಬರುತ್ತಿದ್ದಾರೆಯೋ, ಅದೇ ರೀತಿ ಈಗ ಪ್ರಾಚೀನ ಶ್ರೀಕಾಳೆರಾಮ ದೇವಸ್ಥಾನಕ್ಕೂ ದರ್ಶನಕ್ಕಾಗಿ ದೂರದೂರದಿಂದ ಭಕ್ತರು ಬರುತ್ತಿದ್ದಾರೆ. ಈ ದೇವಸ್ಥಾನದ ಮಹಾತ್ಮೆಯನ್ನು ತಿಳಿದುಕೊಳ್ಳಲು ಶ್ರೀ ಕಾಳೆರಾಮ ದೇವಸ್ಥಾನದ ಮುಖ್ಯ ಅರ್ಚಕರಾದ ಶ್ರೀ. ಗೋಪಾಲ ದೇಶಪಾಂಡೆ ಇವರನ್ನು ಭೇಟಿಯಾದಾಗ, ಅವರು ಸಂಪೂರ್ಣ ಇತಿಹಾಸವನ್ನು ಹೇಳಿದರು.

ಶ್ರೀ. ಗೋಪಾಲ ದೇಶಪಾಂಡೆ

೧. ಸಾಮ್ರಾಟ ವಿಕ್ರಮಾದಿತ್ಯನು ಸ್ಥಾಪಿಸಿದ ಮೂರ್ತಿ !

ಅಖಂಡ ಸಾಲಿಗ್ರಾಮ ಶಿಲೆಯ ಶ್ರೀರಾಮನ ಮೂರ್ತಿ

ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದೆ ಉಜ್ಜೈನಿಯ ಸಾಮ್ರಾಟ ವಿಕ್ರಮಾದಿತ್ಯ ರಾಜನು ಅಯೋಧ್ಯೆಯಲ್ಲಿನ ಶ್ರೀರಾಮಜನ್ಮಭೂಮಿಯಲ್ಲಿ ಅತ್ಯಂತ ವಿಶಾಲವಾದ ದೇವಸ್ಥಾನವನ್ನು ಕಟ್ಟಿದನು. ಅವನು ಒಂದೇ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಿರುವ ೫ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ಸ್ಥಾಪಿಸಿದ್ದನು.

೨. ಪ್ರಾಚೀನ ಮೂರ್ತಿಯ ಅಲೌಕಿಕ ವೈಶಿಷ್ಟ್ಯ !

ಅಖಂಡ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾದ ೫ ಮೂರ್ತಿಗಳು ಈ ದೇವಸ್ಥಾನದ ವೈಶಿಷ್ಟ್ಯವಾಗಿದೆ. ಇದರಲ್ಲಿ ಮಧ್ಯಭಾಗದಲ್ಲಿ ಶ್ರೀರಾಮ, ಎಡಬದಿಯಲ್ಲಿ ಸೀತಾಮಾತೆ, ಬಲಬದಿಯಲ್ಲಿ ಲಕ್ಷ್ಮಣ, ಒಂದು ಬದಿಯಲ್ಲಿ ಭರತ ಮತ್ತು ಇನ್ನೊಂದು ಬದಿಯಲ್ಲಿ ಶತ್ರುಘ್ನ ಇವರ ವಿಗ್ರಹಗಳಿವೆ. ಈ ಮೂರ್ತಿಗಳನ್ನು ನೋಡಿಯೇ ಭಕ್ತರ ಭಾವಜಾಗೃತವಾಗುತ್ತದೆ.

೩. ಬಾಬರನ ಆಕ್ರಮಣದಿಂದ ಮೂರ್ತಿಗಳನ್ನು ರಕ್ಷಿಸಿದ ಸಂತ ಶ್ರೀ ರಾಮಾನಂದ ಸರಸ್ವತಿ !

ಬಾಬರನು ಶ್ರೀರಾಮಮಂದಿರದ ಮೇಲೆ ಆಕ್ರಮಣ ಮಾಡುವನು, ಎಂದು ಮೊದಲೇ ತಿಳಿದುಕೊಂಡಿರುವ ಇಲ್ಲಿನ ಓರ್ವ ಸಂತ ಶ್ರೀ ರಾಮಾನಂದ ಸರಸ್ವತಿಯವರು, ಈ ಮೂರ್ತಿಯನ್ನು ಶರಯೂ ನದಿಯ ಆಳದಲ್ಲಿ ಬಿಟ್ಟರು. ಮುಂದೆ ಬಾಬರನು ಆಕ್ರಮಣ ಮಾಡಿ ಶ್ರೀರಾಮಮಂದಿರವನ್ನು ಧ್ವಂಸಗೊಳಿಸಿ ಅಲ್ಲಿ ಮಸೀದಿಯನ್ನು ಕಟ್ಟಿದನು.

ಶ್ರೀ ಮಾರುತಿಯ ಸ್ತ್ರೀ ರೂಪದ ಮೂರ್ತಿ ಇರುವ ಭಾರತದ ಏಕೈಕ ದೇವಸ್ಥಾನ !

೪. ೨೨೦ ವರ್ಷಗಳ ನಂತರ ಶರಯೂ ನದಿಯಿಂದ ಹೊರ ತೆಗೆದ ಮೂರ್ತಿಗಳಿಗೆ ‘ಕಾಳೆರಾಮ’ ಎಂದು ನಾಮಕರಣವಾಯಿತು !

ಈ ಮೂರ್ತಿಗಳು ೧೫೨೮ ರಿಂದ ೧೭೪೮ ರ ಅವಧಿಯಲ್ಲಿ, ಅಂದರೆ ೨೨೦ ವರ್ಷಗಳ ವರೆಗೆ ನದಿಯಲ್ಲಿಯೇ ಇದ್ದವು. ೧೭೪೮ ರಲ್ಲಿ ಮಹಾರಾಷ್ಟ್ರದ ಬ್ರಾಹ್ಮಣ ನರಸಿಂಹರಾವ್‌ ಮೊಘೆ ಇವರಿಗೆ ಶರಯೂ ನದಿಯಲ್ಲಿ ಸ್ನಾನವನ್ನು ಮಾಡುತ್ತಿರುವಾಗ ಈ ಮೂರ್ತಿಗಳು ಸಿಕ್ಕಿದವು ಮತ್ತು ಅವರು ಅವುಗಳನ್ನು ಒಂದು ಮರದ ಕೆಳಗೆ ಸ್ಥಾಪಿಸಿದರು. ಮೂರ್ತಿಗಳು ಸಿಕ್ಕಿದ ಕೂಡಲೇ ಅವರ ಬಾಯಿಯಿಂದ, ‘ಕಾಳೆರಾಮಜಿ ಮಿಳಾಲೆ’, ಎಂದು ಮೊದಲನೇ ಶಬ್ದ ಬಂದಿತು. ಆದ್ದರಿಂದ ಅಂದಿನಿಂದ ‘ಕಾಳೆರಾಮ’ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.”

೫. ಭಗವಾನ ಶ್ರೀರಾಮನ ಸ್ವಪ್ನದೃಷ್ಟಾಂತ !

ಭಗವಾನ ಶ್ರೀರಾಮನು ಓರ್ವ ಭಕ್ತನಿಗೆ ‘ಇಲ್ಲಿ ಸತತವಾಗಿ ನನ್ನ ಅಸ್ತಿತ್ವ ಇರುವುದು’, ಎಂಬ ಸ್ವಪ್ನದೃಷ್ಟಾಂತ ನೀಡಿದ್ದನು. ಆದ್ದರಿಂದ ಅಲ್ಲಿನ ಮೂರ್ತಿಗಳು ಜಾಗೃತವಾಗಿವೆ. ಈಗಲೂ ಈ ದೇವಸ್ಥಾನದಲ್ಲಿ ಶ್ರೀರಾಮನ ಅಸ್ತಿತ್ವದ ಅರಿವಾಗುತ್ತಿರುವುದರಿಂದ ದರ್ಶನಕ್ಕೆ ಬರುವ ಭಕ್ತರು ಇಲ್ಲಿ ತಮ್ಮ ಇಚ್ಛೆಯನ್ನು ಅಥವಾ ಮನೋಕಾಮನೆಗಳನ್ನು ಶ್ರೀರಾಮನ ಮುಂದೆ ಮಂಡಿಸುತ್ತಾರೆ ಮತ್ತು ಅವರ ಮನೋಕಾಮನೆಗಳು ಪೂರ್ತಿಯಾಗುತ್ತವೆ, ಎಂದು ಅವರಲ್ಲಿ ಶ್ರದ್ಧೆಯಿದೆ. ಅದಕ್ಕಾಗಿ ಈ ದೇವಸ್ಥಾನದಲ್ಲಿ ಬರುವ ಭಕ್ತರ ಸಂಖ್ಯೆಯು ಅಪಾರವಿದೆ. ಭಕ್ತರಿಗಾಗಿ ಈ ದೇವಸ್ಥಾನವು ಬೆಳಗ್ಗೆ ೭ ರಿಂದ ಮಧ್ಯಾಹ್ನ ೧೨ ಮತ್ತು ಸಂಜೆ ೪.೩೦ ರಿಂದ ರಾತ್ರಿ ೯ ರವರೆಗೆ ದರ್ಶನಕ್ಕಾಗಿ ತೆರೆದಿರುತ್ತದೆ.

೬. ಅಯೋಧ್ಯೆಯಲ್ಲಿನ ೭ ಮುಖ್ಯ ದೇವಸ್ಥಾನಗಳಲ್ಲಿ ಸಮಾವೇಶ !

ಅಯೋಧ್ಯೆಯ ೭ ಮುಖ್ಯ ದೇವಸ್ಥಾನಗಳಲ್ಲಿ ಶ್ರೀ ಕಾಳೆರಾಮ ದೇವಸ್ಥಾನವೂ ಸೇರಿದೆ. ಶ್ರೀರಾಮಜನ್ಮ ಭೂಮಿಯಲ್ಲಿರುವ ಶ್ರೀರಾಮಮಂದಿರ, ಕನಕ ಮಂದಿರ, ರಾಜಗಾದಿ, ಲಕ್ಷ್ಮಣ ಮಂದಿರ, ಮಹಾದೇವ ಮಂದಿರ, ನಾಗೇಶ್ವರ ನಾಥ ಮಂದಿರ ಹೀಗೆ ಉಳಿದ ೬ ಮುಖ್ಯ ಮಂದಿರಗಳಿವೆ.

– ಶ್ರೀ. ನೀಲೇಶ ಕುಲಕರ್ಣಿ, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ, ಅಯೋಧ್ಯೆ.