ಬ್ರಿಟನ್‌ನ ದೇವಸ್ಥಾನಗಳು ಸಂಕಟದಲ್ಲಿ !

ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಮಂತ್ರಿ ಋಷಿ ಸುನಕ್‌ ಇವರ ಸರಕಾರ ಇರುವಾಗ ಹಿಂದೂಗಳಿಗೆ ಇತ್ತೀಚೆಗೆ ದುಃಖದ ವಾರ್ತೆಯನ್ನು ಕೇಳ ಬೇಕಾಯಿತು. ಅಲ್ಲಿ ಭಾರತೀಯ ಪುರೋಹಿತರಿಗೆ ವೀಸಾ ನೀಡಲು ನಿರಾಕರಿಸಲಾಗುತ್ತಿದೆ. ಪುರೋಹಿತರ ಅಭಾವದಿಂದ ಅಲ್ಲಿನ ೫೦೦ ರಲ್ಲಿ ೫೦ ದೇವಸ್ಥಾನಗಳನ್ನು ಮುಚ್ಚಲಾಗಿದೆ. ೫೦ ಇದೇನೂ ಸಣ್ಣ ಸಂಖ್ಯೆಯಲ್ಲ. ಇಂದು ವಿಶ್ವದಾದ್ಯಂತ ಹಿಂದೂ ಮತ್ತು ಹಿಂದುತ್ವಕ್ಕಾಗಿ ಗೌರವದ ವಾತಾವರಣವಿರುವಾಗ ಬ್ರಿಟನ್‌ನಲ್ಲಿನ ಘಟನೆ ಹಿಂದೂಗಳನ್ನು ಚಿಂತೆಗೀಡು ಮಾಡುತ್ತದೆ. ಇದು ಹಿಂದೂಗಳಿಗೆ ಅವಮಾನಾಸ್ಪದವಾಗಿದೆ. ಪುರೋಹಿತರಿಲ್ಲದ ಕಾರಣ ದೇವಸ್ಥಾನಗಳ ಅನೇಕ ರೀತಿಯ ವ್ಯವಸ್ಥೆಗಳು ಸಹ ಸ್ತಬ್ಧವಾಗಿವೆ. ದೇವಸ್ಥಾನಗಳಲ್ಲಿ ನಡೆಯುವ ಕಾರ್ಯಕ್ರಮಗಳು, ವಿವಾಹವಿಧಿಗಳಿಗಾಗಿ ಪುರೋಹಿತರಿಲ್ಲದ ಕಾರಣ ಅಡಚಣೆಯುಂಟಾಗುತ್ತಿದೆ. ‘ಬ್ರಿಟನ್‌ ಸರಕಾರ ‘ವೀಸಾ’ ನೀಡುವ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಬೇಕಾಗಿದೆ. ‘ಹಿಂದೂ ಆಗಿರುವುದರಿಂದ ಋಷಿ ಸುನಕ್‌ ಇವರಿಗೆ ನಮ್ಮ ಸಮಸ್ಯೆಯು ತಿಳಿಯಬಹುದು’, ಎಂದು ಅನಿಸಿತ್ತು; ಆದರೆ ಸರಕಾರ ಅದರಲ್ಲಿ ವಿಫಲವಾಗಿದೆ’, ಎಂದು ಬರ್ಮಿಂಘಾಮ್‌ನ ಲಕ್ಷ್ಮಿನಾರಾಯಣ ಮಂದಿರದ ಸಹಾಯಕ ಪುರೋಹಿತ ಸುನೀಲ್‌ ಶರ್ಮಾ ಇವರು ಹೇಳಿದರು. ಈ ಘಟನೆಯ ವಿಷಯದಲ್ಲಿ ಸುನಕ್‌ ಸರಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.

ದೇವಸ್ಥಾನಗಳೆಂದರೆ ಪ್ರತಿಯೊಬ್ಬ ಹಿಂದೂವಿನ ಪ್ರಾಣಪ್ರಿಯ ಹಾಗೂ ಧಾರ್ಮಿಕ ಭಾವಭಾವನೆಗಳ ವಿಷಯವಾಗಿರುತ್ತದೆ. ಭಾರತ ದೇಶವು ಹಿಂದೂ ಬಹುಸಂಖ್ಯಾತವಾಗಿದ್ದರಿಂದ ಇಲ್ಲಿ ಲಕ್ಷಗಟ್ಟಲೆ ದೇವಸ್ಥಾನಗಳಿವೆ, ಆದರೆ ಬ್ರಿಟನ್‌ನಂತಹ ದೇಶದಲ್ಲಿ ೫೦೦ ದೇವಸ್ಥಾನಗಳಿರುವುದು ಕೂಡ ಶ್ರದ್ಧಾವಂತ ಹಿಂದೂಗಳಿಗೆ ಮಹತ್ವದ್ದಾಗಿದೆ. ಹೀಗಿರುವಾಗ ಅದರಲ್ಲಿನ ೫೦ ದೇವಸ್ಥಾನಗಳನ್ನು ಮುಚ್ಚಿಡುವುದೆಂದರೆ ಇದು ಹಿಂದೂಗಳಿಗೆ ದೊಡ್ಡ ಆಘಾತಕಾರಿ ವಿಷಯವಾಗಿದೆ. ಇದರಿಂದ ಅಲ್ಲಿನ ಹಿಂದೂಗಳು ಆಕ್ರೋಶಗೊಂಡು ಸುನಕ್‌ ಸರಕಾರದ ವಿಷಯ ದಲ್ಲಿ ದುಃಖ ವ್ಯಕ್ತಪಡಿಸುತ್ತಿದ್ದಾರೆ. ‘ದೇವಾಲಯಗಳನ್ನೇ ಮುಚ್ಚಲಾರಂಭಿಸಿದರೆ, ಹಿಂದೂಗಳು ಹೋಗುವುದು ಎಲ್ಲಿಗೆ ?’ ಎಂಬುದರ ಉತ್ತರವನ್ನು ಸುನಕ್‌ ಸರಕಾರವು ಹಿಂದೂಗಳಿಗೆ ನೀಡಬೇಕು. ‘ದೇವಸ್ಥಾನವೆಂದರೆ ಭಾರತೀಯ ಮೌಲ್ಯ, ಸಂಸ್ಕೃತಿ ಮತ್ತು ಜಗತ್ತಿನ ಮುಂದಿರುವ ಯೋಗದಾನದ ಚಿತ್ರಣವನ್ನು ತೋರಿಸುವ ಮಹತ್ವದ ಸಂಕೇತವಾಗಿದೆ’, ಎಂದು ಸುನಕ್‌ ಇವರೇ ಇತ್ತೀಚೆಗೆ ಹೇಳಿದ್ದರು. ಹಾಗಾದರೆ ಈ ಸಂಕೇತವೇ ಅಳಿಸಿ ಹೋಗುತ್ತಿದ್ದರೆ ಅದಕ್ಕೇನು ಹೇಳಬೇಕು ? ದೇವಸ್ಥಾನಗಳ ವಿಷಯದಲ್ಲಿ ಧಾರ್ಮಿಕದೃಷ್ಟಿಯಲ್ಲಿ ಸಂವೇದನಶೀಲತೆ ಇರುವ ಸುನಕ್‌ ಇವರಿಂದ ಹಿಂದೂಗಳು ಇದನ್ನು ನಿರೀಕ್ಷಿಸಿರಲಿಲ್ಲ. ತದ್ವಿರುದ್ಧ ಅಸ್ತಿತ್ವದಲ್ಲಿರುವ ದೇವಸ್ಥಾನಗಳ ಜೋಪಾಸನೆ ಹಾಗೂ ಸಂವರ್ಧನೆಯೊಂದಿಗೆ ತಮ್ಮ ದೇಶದಲ್ಲಿ ಇನ್ನೂ ದೇವಸ್ಥಾನಗಳನ್ನು ಹೆಚ್ಚಿಸುವರು ಹಾಗೂ ಅವುಗಳ ಮೂಲಕ ಧಾರ್ಮಿಕತೆಯನ್ನು ಕಾಪಾಡಲು ಪ್ರಯತ್ನಿಸುವರು, ಎನ್ನುವ ನಿರೀಕ್ಷೆಯಿತ್ತು; ಆದರೆ ದುರದೃಷ್ಠವಶಾತ್‌ ಹಾಗಾಗಲಿಲ್ಲ. ಬ್ರಿಟನ್‌ನಲ್ಲಿ ಭಾರತೀಯ ಹಿಂದೂಗಳ ಜನಸಂಖ್ಯೆ ೨೦ ಲಕ್ಷದಷ್ಟಿದೆ. ೫೦ ದೇವಸ್ಥಾನಗಳಿಗೆ ಹೋಗುವ ಸಾವಿರಾರು ಹಿಂದೂಗಳಿರಬಹುದು. ಈಗ ಅವರು ಎಲ್ಲಿಗೆ ಹೋಗಬೇಕು ?
ಈ ದೇವಸ್ಥಾನಗಳಿಗೆ ಸಂಬಂಧಿಸಿರುವ ವ್ಯಕ್ತಿಗಳ ಉದರ ಪೋಷಣೆಯ ಸಾಧನವನ್ನು ಎಲ್ಲಿ ಹುಡುಕಬೇಕು ?

ಇಂದು ೫೦ ದೇವಸ್ಥಾನಗಳು ಮುಚ್ಚಲ್ಪಟ್ಟಿವೆ, ಭವಿಷ್ಯದಲ್ಲಿ ಅದು ಇನ್ನೂ ಹೆಚ್ಚಾದರೆ ನಂತರ ಅಲ್ಲಿನ ಹಿಂದೂಗಳ ಅಸ್ತಿತ್ವವೂ ಅಪಾಯಕ್ಕೀಡಾಗಬಹುದು. ಇದು ಮತ್ತು ಇಂತಹ ಗಂಭೀರ ಪರಿಣಾಮಗಳ ಬಗ್ಗೆ ಗಹನವಾಗಿ ವಿಚಾರ ಮಾಡಬೇಕಾಗಿದೆ. ಇದೆಲ್ಲವನ್ನೂ ನೋಡುವಾಗ ಸರಕಾರ ಪುರೋಹಿತರಿಗೆ ವೀಸಾ ಪೂರೈಸಬೇಕು ಅಥವಾ ಅದನ್ನು ಪೂರೈಸುವ ಪ್ರಕ್ರಿಯೆಯಲ್ಲಿನ ಅಡಚಣೆಯನ್ನು ದೂರ ಮಾಡಬೇಕು. ಬ್ರಿಟನ್‌ನ ಕೆಲವು ದೇವಸ್ಥಾನಗಳ ವೈಶಿಷ್ಟ್ಯವೆಂದರೆ ಅವುಗಳು ಸಾವಿರಾರು ವರ್ಷಗಳಷ್ಟು ಹಳೆಯದಾಗಿವೆ. ಕೆಲವೇ ವರ್ಷಗಳ ಹಿಂದೆ ಅವುಗಳು ಪತ್ತೆಯಾಗಿವೆ. ಬ್ರಿಟನ್‌ನಲ್ಲಿ ಸಾವಿರಾರು ವರ್ಷಗಳಿಂದ ದೇವಸ್ಥಾನಸಂಸ್ಕೃತಿ ಅಸ್ತಿತ್ವದಲ್ಲಿದ್ದ ಸಂಕೇತ ಇದಾಗಿದೆ. ಇದನ್ನು ಗಮನಿಸಿದರೆ ದೇವಸ್ಥಾನ ಪರಂಪರೆಯನ್ನು ಕಾಪಾಡುವುದು ಹಾಗೂ ಅವುಗಳ ಸಂವರ್ಧನೆ ಮಾಡುವುದು ಬ್ರಿಟಿಷ ಸರಕಾರ ಮತ್ತು ಅಲ್ಲಿನ ಹಿಂದೂಗಳ ಹೊಣೆ ಹಾಗೂ ಧರ್ಮಕರ್ತವ್ಯವಾಗಿದೆ. ಅದನ್ನು
ನೆರವೇರಿಸುವುದು ಕಾಲಕ್ಕನುಸಾರ ಯೋಗ್ಯವೆನಿಸುವುದು !

ಪ್ರಧಾನಮಂತ್ರಿಗಳ ಹೇಳಿಕೆ ಹಾಗೂ ವಾಸ್ತವಿಕತೆ !

ಋಷಿ ಸುನಕ್‌ ಪ್ರಧಾನಮಂತ್ರಿ ಹುದ್ದೆಯಲ್ಲಿ ವಿರಾಜ ಮಾನರಾಗುವುದು, ಹಿಂದೂ ಮತ್ತು ಹಿಂದೂ ಧರ್ಮಕ್ಕೆ ಆಶಾದಾಯಕವಾಗಿತ್ತು. ಅವರು ೨೦೨೩ ರಲ್ಲಿ ನವ ದೆಹಲಿಗೆ ಬಂದಾಗ ಹೇಳಿದ್ದರು, ”ನನಗೆ ನಾನು ಭಾರತೀಯ ಮೂಲದ ಮತ್ತು ಭಾರತದೊಂದಿಗೆ ವಿಶೇಷ ಸಂಬಂಧವಿರುವುದರ ಬಗ್ಗೆ ಹೆಮ್ಮೆಯಿದೆ. ‘ಹೆಮ್ಮೆ ಇರುವ ಹಿಂದೂ’ವಿನ ಅರ್ಥವೇನೆಂದರೆ, ಭಾರತ ಹಾಗೂ ಭಾರತದಲ್ಲಿನ ಜನರೊಂದಿಗೆ ನನ್ನ ಸಂಬಂಧ ಶಾಶ್ವತವಾಗಿರುವುದು.” ಭಾರತೀಯ ಮೂಲದ ಬಗ್ಗೆ ಹೆಮ್ಮೆ ಇದ್ದರೆ, ಅವರಿಂದ ದೇವಸ್ಥಾನಗಳ ವಿಷಯದಲ್ಲಿ ಸಂವೇದನಶೀಲತೆ ಹಾಗೂ ಗೌರವ ಕಂಡುಬರಬೇಕಿತ್ತು. ಭಾರತೀಯ ಪುರೋಹಿತರಿಗೆ ವೀಸಾ ನೀಡಿ ನ್ಯಾಯ ನೀಡುವುದು ಯೋಗ್ಯವೆನಿಸುತ್ತದೆ. ಆದರೆ ಹಾಗಾಗದ ಕಾರಣ ‘ಸುನಕ್‌ ಈ ವಿಷಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿಫಲರಾಗಿದ್ದಾರೆ’, ಎಂದು ಹೇಳಬಹುದು. ಪ್ರಧಾನಮಂತ್ರಿ ಆಗುವ ಮೊದಲು ಸುನಕ್‌ ಹೇಳಿದ್ದರು, ”ನಾನು ಜನರಿಗೆ ಏನು ಬೇಕು, ಎಂಬುದನ್ನು ಕೊಡದೆ ರಾಷ್ಟ್ರಹಿತದ ನಿರ್ಣಯ ತೆಗೆದುಕೊಳ್ಳುವೆನು.” ರಾಷ್ಟ್ರದ ಹಿತದಲ್ಲಿ ಧರ್ಮದ ಹಿತವೂ ಸಮಾವೇಶವಿರುತ್ತದೆ. ಆದ್ದರಿಂದ ಅವರು ಎರಡೂ ಬದಿಯನ್ನು ಅರ್ಥ ಮಾಡಿಕೊಂಡು ಕೃತಿಶೀಲರಾಗಬೇಕು. ‘ನನಗೆ ನಾನು ಬ್ರಿಟಿಷ ಆಗಿರುವುದರೊಂದಿಗೆ ಹಿಂದೂ ಆಗಿರುವುದರ ಅಭಿಮಾನವಿದೆ. ನನ್ನ ಕುಟುಂಬದವರು ಹವನ, ಪೂಜೆ ಹಾಗೂ ಆರತಿ ಮಾಡುತ್ತಾರೆ. ನಾನು ರಾಮಾಯಣ, ಭಗವದ್ಗೀತೆ ಮತ್ತು ಹನುಮಾನಚಾಲೀಸಾ ಓದುತ್ತೇನೆ. ಗಣಪತಿಯ ಸ್ವರ್ಣಮೂರ್ತಿ ನನ್ನ ಕಾರ್ಯಾಲಯದ ಮೇಜಿನ ಮೇಲಿರುತ್ತದೆ. ಶ್ರೀ ಗಣೇಶ ನನಗೆ ಯಾವುದೇ ಕೃತಿ ಮಾಡುವ ಮೊದಲು ಕೇಳಲು ಹಾಗೂ ಚಿಂತನೆ ಮಾಡಲು ಕಲಿಸುತ್ತಾನೆ’, ಈ ಹೇಳಿಕೆಯೂ ಸುನಕ್‌ ಇವರದ್ದೆ !

ಬ್ರಿಟನ್‌ನಲ್ಲಿನ ದೇವಸ್ಥಾನಗಳ ಸದ್ಯದ ಸ್ಥಿತಿ ನೋಡಿದರೆ ಸುನಕ್‌ ಇವರ ಹೇಳಿಕೆಗಳೊಂದಿಗೆ ಕೆಲವು ಅಂಶಗಳು ಅಸಂಬದ್ಧವಾಗಿ ಕಾಣಿಸುತ್ತವೆ, ಅದು ಹಿಂದೂಗಳಿಗೆ ಅಪೇಕ್ಷಿತವಿರಲಿಲ್ಲ. ಅವರು ಪ್ರಧಾನಮಂತ್ರಿಯಾದಾಗ ಬ್ರಿಟನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದುತ್ವದ ಉದ್ಘೋಷ ಮಾಡಲಾಗಿತ್ತು. ಹಿಂದೂಗಳಿಗೂ ಅಲ್ಲಿ ಸುರಕ್ಷಿತ ಹಾಗೂ ಒಳ್ಳೆಯ ಭವಿಷ್ಯದ ಸಂಕೇತ ಕಾಣಿಸುತ್ತಿತ್ತು; ಆದರೆ ಈಗ ದೇವಸ್ಥಾನಗಳ ನಿರ್ಬಂಧದಿಂದಾಗಿ ಇದರಲ್ಲಿ ಕಪ್ಪು ಚುಕ್ಕೆ ಕಾಣಿಸುತ್ತಿದೆ, ಎಂದು ಹೇಳುವಂತಾಗಿದೆ.

೨೦ ಲಕ್ಷ ಹಿಂದೂಗಳ ಹೂಂಕಾರ ಕೇಳಿಸಬೇಕು !

ಸದ್ಯಸ್ಥಿತಿಯಲ್ಲಿ ಭಾರತವಿರಲಿ ಅಥವಾ ವಿದೇಶ, ಪೃಥ್ವಿಯಲ್ಲಿ ಎಲ್ಲಿಯೂ ‘ಹಿಂದೂ’ ಎಂದು ಉಚ್ಚರಿಸಿದರೆ ಅವನನ್ನು ದುರ್ಲಕ್ಷಿಸಲಾಗುತ್ತದೆ ಅಥವಾ ಅವನನ್ನು ದ್ವೇಷಿಸಲಾಗುತ್ತದೆ. ಆದ್ದರಿಂದ ಹಿಂದೂಗಳಿಗೆ ಸಮಾಧಾನವೆನಿಸುವುದಿಲ್ಲ. ಇಂತಹ ಸ್ಥಿತಿಯಲ್ಲಿ ದೇವಸ್ಥಾನಗಳು ಮುಚ್ಚುತ್ತಾ ಹೋದರೆ ಅದು ಹಿಂದೂಗಳ ಮೇಲೆ ಧಾರ್ಮಿಕ ದಬ್ಬಾಳಿಕೆಯೇ ಆಗಬಹುದು. ಬ್ರಿಟನ್‌ನಲ್ಲಿನ ಹಿಂದೂಗಳು ಈ ದಬ್ಬಾಳಿಕೆಯನ್ನು ಸಹಿಸಿಕೊಳ್ಳದೆ ಇದರ ವಿರುದ್ಧ ಧ್ವನಿಯೆತ್ತಬೇಕು. ಸಂಘಟಿತರಾಗಿ ಪುರೋಹಿತರಿಗೆ ವೀಸಾ ನೀಡಬೇಕೆಂದು ಹಾಗೂ ತಕ್ಷಣ ದೇವಸ್ಥಾನಗಳನ್ನು ತೆರೆಯಬೇಕೆಂದು ಸರಕಾರಕ್ಕೆ ವಿನಂತಿಸಬೇಕು. ಬ್ರಿಟನ್‌ನಲ್ಲಿನ ೨೦ ಲಕ್ಷ ಹಿಂದೂಗಳ ಹೂಂಕಾರ ಈ ೫೦ ದೇವಸ್ಥಾನಗಳ ಅಸ್ತಿತ್ವಕ್ಕಾಗಿ ಪ್ರತಿಧ್ವನಿಸಬೇಕು. ಕೇವಲ ಬ್ರಿಟನ್‌ ಅಷ್ಟೇ ಅಲ್ಲದೇ, ಹಿಂದೂಬಹುಸಂಖ್ಯಾತ ಭಾರತದ ಹಿಂದೂಗಳು ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ ಕೇಂದ್ರ ಸರಕಾರವೂ ಬ್ರಿಟನ್‌ನಲ್ಲಿನ ಘಟನೆಯನ್ನು ಅವಲೋಕಿಸಿ ದೇವಸ್ಥಾನಗಳನ್ನು ತೆರೆಯುವಂತೆ ಬ್ರಿಟನ್‌ ಸರಕಾರವನ್ನೂ ಬೆಂಬತ್ತಬೇಕು. ದೇವಸ್ಥಾನಗಳ ರಕ್ಷಣೆಯ ಚಳುವಳಿ ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಂಡು ಬ್ರಿಟನ್‌ ಸರಕಾರವನ್ನು ಖಂಡಿಸಬೇಕು. ಹಾಗೆ ಮಾಡಿದರೆ ಮಾತ್ರ ಸರಕಾರವು ಪುನಃ ದೇವಸ್ಥಾನಗಳನ್ನು ಮುಚ್ಚುವ ವಿಚಾರ ಮಾಡಲಿಕ್ಕಿಲ್ಲ ಹಾಗೂ ಮುಚ್ಚಲ್ಪಟ್ಟ ದೇವಸ್ಥಾನಗಳು ಪುನಃ ತೆರೆಯಲ್ಪಡುವವು. ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ೫೦೦ ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷ ೨೦೨೪ ರಲ್ಲಿ ಮುಗಿಯಿತು ಹಾಗೂ ಶ್ರೀರಾಮಲಲ್ಲಾನ ಮೂರ್ತಿ ಮಂದಿರದಲ್ಲಿ ವಿರಾಜಮಾನವಾಯಿತು. ನಿತ್ಯನಿಯಮಕ್ಕನುಸಾರ ಅದರ ಪೂಜಾರ್ಚನೆಯು ಆರಂಭವಾಯಿತು. ವಾರಣಾಸಿಯ ಜ್ಞಾನವಾಪಿ ಪರಿಸರದ ವ್ಯಾಸ ನೆಲಮಾಳಿಗೆಯಲ್ಲಿ ೩೧ ವರ್ಷಗಳಿಂದ ನಿರ್ಬಂಧ ಹೇರಿದ್ದ ಪೂಜೆಯು ಪುನಃ ಪ್ರಾರಂಭವಾಯಿತು. ಇದು ಭಾರತ ದೇಶದಲ್ಲಿ ನಡೆಯುತ್ತಿರುವಾಗ ಬ್ರಿಟನ್‌ನಲ್ಲಿ ದೇವಸ್ಥಾನಗಳು ಮುಚ್ಚಲ್ಪಡುವುದೆಂದರೆ ಇದು ಹಿಂದೂ ಧರ್ಮದ ಅವಮಾನವೆಂದೇ ಹೇಳಬೇಕು. ‘ಸುನಕ್‌ ಸರಕಾರ ತಕ್ಕ ಸಮಯದಲ್ಲಿ ಜಾಗೃತವಾಗಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ಜೋಪಾನ ಮಾಡಲು ಭಾರತೀಯ ಪುರೋಹಿತರ ವೀಸಾ ಪ್ರಕ್ರಿಯೆಗೆ ಚಾಲನೆ ನೀಡಬೇಕು’, ಇದು ವಿಶ್ವದಾದ್ಯಂತದ ಹಿಂದೂಗಳ ಅಪೇಕ್ಷೆಯಾಗಿದೆ !