ಭಾರತಭೂಮಿಯೇ ಪ್ರಜಾಪ್ರಭುತ್ವದ ಜನನಿ !

ಜನವರಿ ೨೬ ರಂದು ಇರುವ ಪ್ರಜಾಪ್ರಭುತ್ವ ದಿನ ನಿಮಿತ್ತ……

ನಮ್ಮ ದೇಶದ ಸದ್ಯದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಜೀ-೨೦’ಯ (ಜೀ ೨೦ ಅಂದರೆ ೧೯ ದೇಶಗಳು ಮತ್ತು ಯುರೋಪಿಯನ್ ಯೂನಿಯನ್ (ಇದರಲ್ಲಿ ೨೭ ದೇಶಗಳಿವೆ.) ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್‌ಗಳ ಗವರ್ನರ್‌ಗಳ ಸಂಘಟನೆ) ರಾಷ್ಟ್ರಪ್ರಮುಖರಿಗೆ ಮತ್ತು ಈ ಪರಿಷತ್ತಿಗೆ ಬಂದಿರುವ ಎಲ್ಲ ಗಣ್ಯವ್ಯಕ್ತಿಗಳಿಗೆ ಭಾರತ ಸರಕಾರದ ವತಿಯಿಂದ ‘ಭಾರತ ಪ್ರಜಾಪ್ರಭುತ್ವದ ಜನನಿ’ ಎಂಬ ೫೨ ಪುಟಗಳ ಆಂಗ್ಲ ಪುಸ್ತಕವನ್ನು ಉಡುಗೊರೆ ಎಂದು ನೀಡಿದರು. ಈ ಪುಸ್ತಕದಿಂದ ನಮ್ಮ ದೇಶದ ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ಸಂಕ್ಷಿಪ್ತ ಇತಿಹಾಸವನ್ನು ಜಗತ್ತಿಗೆ ತಲುಪಿಸಲಾಯಿತು. ಇಲ್ಲಿನ ವರೆಗಿನ ಒಬ್ಬ ಪ್ರಧಾನಮಂತ್ರಿಯೂ ಅಧಿಕೃತವಾಗಿ ನಮ್ಮ ದೇಶದ ಸಂಸ್ಕೃತಿ, ರಾಜಕೀಯ ಮತ್ತು ಧಾರ್ಮಿಕ ಪರಂಪರೆಯನ್ನು ಜಗತ್ತಿನ ವ್ಯಾಸಪೀಠದಿಂದ ಪರಿಚಯ ಮಾಡಿಕೊಟ್ಟಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಕಾರ್ಯವನ್ನು ಮಾಡಿ ಸಂಸ್ಕೃತಿನಿಷ್ಠ ದೇಶಬಾಂಧವರ ಮನಸ್ಸಿನಲ್ಲಿ ಗೌರವದ ಸ್ಥಾನವನ್ನು ಶಾಶ್ವತವಾಗಿ ಮೂಡಿಸಿದ್ದಾರೆ. ಅವರು ಮಾಡಿದ ಈ ಶ್ರೇಷ್ಠ ಕಾರ್ಯಕ್ಕಾಗಿ ಅವರನ್ನು ಗೌರವಿಸುವುದು ಭಾರತದ ನಾಗರಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ.

‘ಭಾರತ ಪ್ರಜಾಪ್ರಭುತ್ವದ ಜನನಿ

೧. ಭಾರತೀಯ ಇತಿಹಾಸ ಮತ್ತು ಹಿಂದೂ ಸಂಸ್ಕೃತಿ ಇವುಗಳ ಶ್ರೇಷ್ಠತೆಯನ್ನು ತೋರಿಸುವ ಅಭಿಮಾನಾಸ್ಪದ ಪ್ರಯತ್ನ !

ಯಾವುದೇ ಪ್ರಕಾರದ ಮಾನಸಿಕ, ವೈಚಾರಿಕ ಮತ್ತು ಬೌದ್ಧಿಕ ಗುಲಾಮಗಿರಿಯನ್ನು ಸ್ವತಂತ್ರ ಭಾರತ ಇನ್ನು ಮುಂದೆ ಎಂದಿಗೂ ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ, ಎಂಬುದರ ಸಾಕ್ಷಿಯನ್ನು ಪ್ರಧಾನಮಂತ್ರಿಗಳು ಆಗಾಗ ನೀಡಿದ್ದಾರೆ. ಈಗಂತೂ ಅವರು ಸರಕಾರದ ವತಿಯಿಂದ ಅಧಿಕೃತವಾಗಿ ಶಬ್ದರೂಪಗಳಲ್ಲಿ ನಮ್ಮ ದೇಶದ ವೈಶಿಷ್ಟ್ಯಪೂರ್ಣ ಸಮಾಜವ್ಯವಸ್ಥೆ, ರಾಜ್ಯವ್ಯವಸ್ಥೆಯ ಕಾಗದಪತ್ರಗಳನ್ನು ಜಗತ್ತಿನೆದುರು ಪ್ರಸ್ತುತ ಪಡಿಸಿದ್ದಾರೆ. ಸಂಪೂರ್ಣ ಜಗತ್ತು ನಮ್ಮ ದೇಶದ ಹಿಂದೂ ಸಂಸ್ಕೃತಿಯನ್ನು ಅಪಮಾನಿಸಿ ನಮ್ಮ ಮೇಲೆ ದಾಸ್ಯತ್ವವನ್ನು ಹೇರಿತು. ಪರಕೀಯರ ಭಾಷೆ, ಅವರ ಸಂಸ್ಕೃತಿಯೇ ಶ್ರೇಷ್ಠವೆಂದು ಅಪಪ್ರಚಾರ ಮಾಡಿ ಭಾರತೀಯ ಇತಿಹಾಸ ಮತ್ತು ಹಿಂದೂ ಸಂಸ್ಕೃತಿಯನ್ನು ಭ್ರಷ್ಟಗೊಳಿಸಿತು. ಪರಕೀಯ ಆಕ್ರಮಣಕಾರರು ಮಾಡಿದ ಭ್ರಷ್ಟತನವನ್ನು ನಾಶ ಮಾಡಿ ಅದನ್ನು ಶುದ್ಧ ಮತ್ತು ಪವಿತ್ರವಾಗಿ ರೂಪಾಂತರಿಸುವುದು ಮತ್ತು ಸತ್ಯವನ್ನು ಜಗತ್ತಿನ ಮುಂದಿಡುವ ಹೊಣೆಯನ್ನು ಇಂದಿನ ವರೆಗೆ ಯಾವ ಒಬ್ಬ ಪ್ರಧಾನಮಂತ್ರಿಯೂ ಮಾಡಲಿಲ್ಲ. ಮೋದಿಯವರು ಈ ಕಳಂಕವನ್ನು ನಾಶ ಮಾಡಿ ನಮ್ಮ ದೇಶದ ಹಿರಿಮೆಯನ್ನು ಸಂಪೂರ್ಣ ಜಗತ್ತಿಗೆ ಹೇಳಿದರು, ಇದು ನಿಜಕ್ಕೂ ಅಭಿಮಾನಾಸ್ಪದ ಸಂಗತಿಯಾಗಿದೆ.

೨. ಭಾರತದ ಪ್ರಜಾಪ್ರಭುತ್ವದ ವೈಶಿಷ್ಟ್ಯ

ಭಾರತದ ಪ್ರಜಾಪ್ರಭುತ್ವದ ವೈಶಿಷ್ಟ್ಯವು ಇಲ್ಲಿನ ಸಮಾಜದ ವೈವಿಧ್ಯದಲ್ಲಿ ಅಡಗಿದೆ. ಭಾರತದ ಭೂಮಿಯು ವಿಶಾಲವಾಗಿದೆ ಮತ್ತು ಹಿಂದೂ ಸಂಸ್ಕೃತಿ ವಿಶ್ವವನ್ನು ತನ್ನಲ್ಲಿ ಸಮಾವೇಶಗೊಳಿಸುವಂತಹದ್ದಾಗಿದೆ; ಆದ್ದರಿಂದ ಭಾರತದ ಪ್ರಜಾಪ್ರಭುತ್ವ ಸರ್ವಸಮಾವೇಶಕವಾಗಿದೆ. ಭಾರತದ ಈ ವೈಶಿಷ್ಟ್ಯವನ್ನು ಇಂದಿನವರೆಗೆ ಜಗತ್ತಿನ ಮುಂದೆ ಯಾರೂ ಮಂಡಿಸಿರಲಿಲ್ಲ. ‘ನಮ್ಮ ದೇಶಕ್ಕೆ ಕೋಟ್ಯಾಂತರ ವರ್ಷಗಳ ಪರಂಪರೆಯಿದೆ’, ಎಂದು ಹೇಳಿದರೆ, ಜಗತ್ತು ಅದನ್ನು ನಂಬುವುದಿಲ್ಲ, ಇದು ದುರದೃಷ್ಠದ ಸಂಗತಿ ಆಗಿದೆ. ಜಗತ್ತು ವಿಶ್ವಾಸ ಇಡುವುದಿಲ್ಲ ಎಂದು ‘ಭಾರತಕ್ಕೆ ಕೋಟ್ಯಾವಧಿ ವರ್ಷಗಳ ಪರಂಪರೆ ಇದೆ’, ಎನ್ನುವುದು ಸುಳ್ಳಾಗುವುದಿಲ್ಲ, ಇದನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕು.

೩. ದೇಶದಲ್ಲಿನ ವೈವಿಧ್ಯಗಳೇ ಭಾರತದ ವೈಶಿಷ್ಟ್ಯ

ಭಾರತಭೂಮಿಯಲ್ಲಿ ಹೆಜ್ಜೆ ಹೆಜ್ಜೆಗೂ ನಮಗೆ ವೈವಿಧ್ಯ ಕಂಡುಬರುತ್ತದೆ. ಈ ದೇಶದಲ್ಲಿ ವಿವಿಧ ಪ್ರಕಾರದ ಜಾತಿ, ಉಪಜಾತಿಗಳಿವೆ. ಅನೇಕ ಪಂಥಗಳು ಮತ್ತು ಉಪಪಂಥಗಳೂ ಇವೆ. ಈ ಜಾತಿ, ಉಪಜಾತಿ ಮತ್ತು ವಿವಿಧ ಪಂಥಗಳಿದ್ದರೂ, ಈ ಹಿಂದೆ ಇದರಲ್ಲಿ ಯಾವುದೇ ಪ್ರಕಾರದ ಭೇದಭಾವವನ್ನು ಮಾಡುತ್ತಿರಲಿಲ್ಲ ಇದರ ಕಾರಣವೆಂದರೆ, ‘ಭಾರತದ ಸಮಾಜರಚನೆಯು ಯಾವುದೇ ಮನುಷ್ಯ ಇನ್ನೊಬ್ಬ ಮನುಷ್ಯನಿಗಿಂತ ಶ್ರೇಷ್ಠನಲ್ಲ’, ಎಂಬ ಸಿದ್ಧಾಂತದಲ್ಲಿ ಅಡಗಿದೆ. ಈ ಸಿದ್ಧಾಂತವು ಭಾರತದ ಪ್ರಜಾಪ್ರಭುತ್ವದ ಮೂಲತತ್ತ್ವವಾಗಿದೆ.

ಭಾರತದಲ್ಲಿ ವಿವಿಧ ಪ್ರಕಾರದ ರೂಢಿಪರಂಪರೆಗಳು ಕಾಣಿಸುತ್ತವೆ. ಭಾರತದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೆ ನೀಡಿರುವ ಸ್ವಾತಂತ್ರ್ಯ ಸಮಾನವಾಗಿದೆ. ಭಾರತವನ್ನು ಹೊರತು ಪಡಿಸಿ ಜಗತ್ತಿನ ಅನೇಕ ಭಾಗಗಳಲ್ಲಿ ಗುಲಾಮಗಿರಿ ಅಸ್ತಿತ್ವದಲ್ಲಿತ್ತು. ಭಾರತದಲ್ಲಿ ಮಾತ್ರ ಗುಲಾಮಗಿರಿ ಬೇರೂರಲು ಸಾಧ್ಯವಾಗಲಿಲ್ಲ. ಭಾರತದ ಈ ವೈಶಿಷ್ಟ್ಯವನ್ನು ಭಾರತೀಯರಿಗೂ ಹೇಳಲೇ ಇಲ್ಲ. ನಮ್ಮ ದೇಶದಲ್ಲಿನ ವಿವಿಧ ಪ್ರಕಾರದ ಜೀವನಶೈಲಿ, ವಿವಿಧ ಭಾಷೆಗಳು ಮತ್ತು ಆಡುಭಾಷೆಗಳು ಭಾರತೀಯ ಸಮಾಜ ಜೀವನವನ್ನು ಅರಳಿಸಿವೆ. ವಿವಿಧ ಪ್ರಕಾರದ

ಅಡುಗೆಯ ಪದ್ಧತಿಯೂ ಭಾರತದ ಒಂದು ವೈಶಿಷ್ಟ್ಯವೇ ಆಗಿದೆ. ದುರದೃಷ್ಠವಶಾತ್ ಭಾರತದ ಈ ವೈವಿಧ್ಯವನ್ನು ವೈಷಮ್ಯ ಎಂದು ಜಗತ್ತಿನ ಮುಂದೆ ಪ್ರಸ್ತುತಪಡಿಸಲಾಯಿತು.

೪. ಭಾರತೀಯರು ದೇಶದ ಉಜ್ವಲ ಪರಂಪರೆ ಮತ್ತು ಗುಣವೈಶಿಷ್ಟ್ಯಗಳ ಪರಿಚಯ ಮಾಡಿಕೊಳ್ಳುವುದು ಆವಶ್ಯಕ !

ಜಾತಿಪಾತಿಗಳಲ್ಲಿ ವೈಮನಸ್ಸು ಇಲ್ಲದಿರುವಾಗಲೂ ಪರಕೀಯ ಆಕ್ರಮಣಕಾರರು ಉದ್ದೇಶಪೂರ್ವಕ ಒಗ್ಗಟ್ಟಾಗಿದ್ದ ಭಾರತೀಯ ಸಮಾಜವನ್ನು ವಿಭಜಿಸಲು ಪ್ರಯತ್ನಿಸಿದರು. ಅದರ ದುಷ್ಪರಿಣಾಮವನ್ನು ನಾವು ಇಂದಿಗೂ ಅನುಭವಿಸುತ್ತಿದ್ದೇವೆ. ಒಂದು ವೇಳೆ ಭಾರತೀಯ ಸಮಾಜವು ನಿರ್ಧರಿಸಿದರೆ, ಜಾತಿ, ಪಂಥ, ಉಪಪಂಥದಂತಹ ವೈವಿಧ್ಯವನ್ನು ಶಾಶ್ವತವಾಗಿಟ್ಟುಕೊಂಡು ಸಂಪೂರ್ಣ ಭಾರತೀಯ ಸಮಾಜ ಒಗ್ಗಟ್ಟಾಗಿರಲು ಸಾಧ್ಯವಿದೆ. ಅದಕ್ಕಾಗಿ ಪ್ರತಿಯೊಬ್ಬ ನಾಗರಿಕ ತನ್ನ ದೇಶದ ಉಜ್ವಲ ಪರಂಪರೆ ಮತ್ತು ಗುಣವೈಶಿಷ್ಟ್ಯ ಇವುಗಳ ಪರಿಚಯ ಮಾಡಿಕೊಳ್ಳಬೇಕು, ಹಾಗೆ ಮಾಡಿದರೆ ಮಾತ್ರ ನಮಗೆ ನಮ್ಮ ನಿಜವಾದ ಪರಿಚಯ ತಿಳಿಯುವುದು ಮತ್ತು ನಮ್ಮ ತಪ್ಪುಗಳನ್ನು ನಾವು ಸುಧಾರಿಸಿಕೊಳ್ಳಬಹುದು. ಇದೇ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಭಾರತ ಪ್ರಜಾಪ್ರಭುತ್ವದ ಜನನಿ’ ಎಂಬ ೫೨ ಪುಟಗಳ ಪುಸ್ತಕವನ್ನು ಜಾಗತಿಕ ರಾಜಕಾರಣದ ವ್ಯಾಸಪೀಠದ ಮುಂದೆ ಮಂಡಿಸಿದ್ದಾರೆ. ಶತ್ರುಗಳು ಬರೆದಿರುವ ಭಾರತದ ಇತಿಹಾಸವನ್ನು ಅನೇಕ ಪೀಳಿಗೆಗಳಿಗೆ ಕಲಿಸಲಾಯಿತು. ಇದರಿಂದ ಭಾರತದ ಸಮಾಜರಚನೆಯಲ್ಲಿನ ಗುಣವೈಶಿಷ್ಟ್ಯ ಗಳು ಭಾರತೀಯರಿಗೆ ತಿಳಿಯಲಿಲ್ಲ.

೫. ಭಾರತೀಯ ಸಮಾಜವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಪದ್ಧತಿ ಇವುಗಳ ವೈಶಿಷ್ಟ್ಯಗಳು

ಇದರಲ್ಲಿ ಭಾರತೀಯ ಸಮಾಜವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಪದ್ಧತಿಯ ವೈಶಿಷ್ಟ್ಯಗಳನ್ನು ದಪ್ಪ ಅಕ್ಷರ ಗಳಲ್ಲಿ ಮಂಡಿಸಲಾಗಿದೆ. ಅವು ಈ ಮುಂದಿನಂತಿವೆ…

ಅ. ವೈದಿಕ ಕಾಲದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸಹಭಾಗವಿತ್ತು.
ಆ. ರಾಜನನ್ನು ಜನಸಾಮಾನ್ಯರು ಆರಿಸುತ್ತಿದ್ದರು.
ಇ. ಭಾರತದಲ್ಲಿನ ಪ್ರಜಾಪ್ರಭುತ್ವಕ್ಕೆ ಧರ್ಮದ ಆಧಾರ ಬಹಳವಿತ್ತು. ಭಾರತೀಯ ಪ್ರಜಾಪ್ರಭುತ್ವದ ಅರ್ಥ ‘ಲೋಕಕಲ್ಯಾಣದ ವಿಚಾರ ಮಾಡಿ ರಾಜ್ಯಾಡಳಿತ ನಡೆಸುವುದು’, ಎಂಬುದಾಗಿದೆ. ಇಲ್ಲಿ ರಾಜಧರ್ಮದ ಅರ್ಥ ಆಡಳಿತದವರ ಕರ್ತವ್ಯಗಳು. ಪ್ರಜೆಗಳ ಹಿತದಲ್ಲಿಯೇ ರಾಜನ ಹಿತಸಂಬಂಧವಿದೆ. ರಾಜನಿಗೆ ಸ್ವಹಿತದ ವಿಚಾರ ಮಾಡಿ ರಾಜ್ಯಾಡಳಿತ ನಡೆಸುವ ಅವಕಾಶ ನೀಡಿರಲಿಲ್ಲ.
ಈ. ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯು ಸಾಮಾಜಿಕ ನಿಯಮಗಳನ್ನು ಪಾಲಿಸಲೇ ಬೇಕಾಗುತ್ತಿತ್ತು.
ಉ. ರಾಜನು ದೇಶದ ಮಾಲಕನಲ್ಲ, ಅವನು ದೇಶದ ‘ಜನರ ಸೇವಕನೆಂದು ಗುರುತಿಸಲ್ಪಡುತ್ತಿದ್ದನು,
ಊ. ಭಾರತೀಯ ಸಮಾಜದ ಯಾವುದೇ ವ್ಯಕ್ತಿಯನ್ನು ಇತರ ಯಾವುದೇ ವ್ಯಕ್ತಿಗಿಂತ ಶ್ರೇಷ್ಠನೆಂದು ತಿಳಿಯುತ್ತ್ತಿರಲಿಲ್ಲ. ಇದರ ಅರ್ಥ ದೇಶದ ಪ್ರತಿಯೊಬ್ಬ ನಾಗರಿಕನೂ ಸಮಾನನಾಗಿದ್ದನು. ಅವನಲ್ಲಿ ಯಾವುದೇ ಭೇದಭಾವ ಮಾಡುತ್ತಿರಲಿಲ್ಲ.
ಎ. ಭಾರತೀಯ ಸಮಾಜವ್ಯವಸ್ಥೆ ಅನೇಕತ್ವವಾದ, ಸಹಿಷ್ಣುತೆ, ಅನುಕಂಪ ಮತ್ತು ಸಮಾನತೆಯ ಶ್ರೇಷ್ಠ ತತ್ತ್ವಗಳನ್ನಾಧರಿಸಿತ್ತು.
ಐ. ಜನಕಲ್ಯಾಣಕ್ಕೆ ಪ್ರಾಧಾನ್ಯ ನೀಡುವ ಆಡಳಿತದವರಿದ್ದರು ಮತ್ತು ಭಾರತದ ಪ್ರಜಾಪ್ರಭುತ್ವವು ಸೇವಾಪ್ರಧಾನವಾಗಿತ್ತು.
ಓ. ಭಾರತದಲ್ಲಿನ ಜನರಿಗೆ ಆಡಳಿತದವರನ್ನು ಆರಿಸುವ ಮತ್ತು ಬದಲಾಯಿಸುವ ಅಧಿಕಾರವಿತ್ತು.
ಔ. ಜನಕಲ್ಯಾಣದ ಉದ್ದೇಶವನ್ನು ಮುಂದಿರಿಸಿ ವ್ಯಾಪಾರಿಗಳ ಸಂಘ ಮತ್ತು ಆಡಳಿತ ವ್ಯವಸ್ಥೆಯ ಸುಂದರ ಹೊಂದಾಣಿಕೆಯೇ ಭಾರತೀಯ ಪ್ರಜಾಪ್ರಭುತ್ವದ ವೈಶಿಷ್ಟ್ಯವಾಗಿದೆ.
ಅಂ. ಸಮಾನತೆಯು ಭಾರತೀಯ ಪ್ರಜಾಪ್ರಭುತ್ವದ ಆತ್ಮ ವಾಗಿದೆ. ಇದೇ ಭಾರತೀಯ ಸಮಾಜದ ಆಧ್ಯಾತ್ಮಿಕ ಮತ್ತು ಸಾಮಾಜಿಕ ವೈಶಿಷ್ಟ್ಯವಾಗಿದೆ.

ಒಂದೇ ಸತ್ಯವನ್ನು ಜ್ಞಾನಿಗಳು ವಿವಿಧ ರೀತಿಯಲ್ಲಿ ಹೇಳುತ್ತಾರೆ. ಇಂತಹ ಜನ್ಮದತ್ತ ತಿಳುವಳಿಕೆಯಿರುವ ಮಾನವೀ ಸಮಾಜ ಬೌದ್ಧಿಕ, ವೈಚಾರಿಕ ಮತ್ತು ಮಾನಸಿಕ ದೃಷ್ಟಿಯಲ್ಲಿ ಅತ್ಯಂತ ಪರಿಪಕ್ವವಾಗಿತ್ತು. ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ, ಸಂಸ್ಕೃತಿ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಭಾಗವಹಿಸಿ ಅಧಿಕಾಧಿಕ ಮಾನವ ಸಮಾಜದ ಹಿತ ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿತ್ತು.

೬. ದೇಶದ ಸದ್ಯದ ಸ್ಥಿತಿ ಮತ್ತು ಪ್ರಜ್ಞಾವಂತ ನಾಗರಿಕರ ಕರ್ತವ್ಯಗಳು !

ಭಾರತದ ಉಜ್ವಲ ಪರಂಪರೆಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿ ಪ್ರಜ್ಞಾವಂತ, ವಿದ್ಯಾವಂತ ಮತ್ತು ಸುಸಂಸ್ಕೃತ ನಾಗರಿಕನಾಗಬೇಕು, ಎಂಬುದಕ್ಕೆ ಆದ್ಯತೆ ನೀಡುವ ರಾಜ್ಯವ್ಯವಸ್ಥೆಯು ಅಸ್ತಿತ್ವದಲ್ಲಿತ್ತು. ಇಂದು ನಾಗರಿಕರಿಗೆ ವಿದ್ಯಾವಂತ, ಸುಸಂಸ್ಕೃತ ಮತ್ತು ಹಾಗೆ ಮಾಡಲು ಪ್ರಯತ್ನಿಸುವ ಜನಪ್ರತಿನಿಧಿಗಳು ಕಾಣಿಸುವುದಿಲ್ಲ. ಭಾರತದಲ್ಲಿನ ಜನರು ಶೇ. ೧೦೦ ರಷ್ಟು ಸುಶಿಕ್ಷಿತರಾಗಿದ್ದಾರೆ; ಎಂದು ತೋರಿಸಲು ನಮ್ಮ ಪ್ರಜಾಪ್ರಭುತ್ವದಲ್ಲಿನ ಇಂದಿನ ಧುರೀಣರು ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ನಮ್ಮ ಮತದಾರರು ಎಷ್ಟು ಅರ್ಧಶಿಕ್ಷಿತ ಅಥವಾ ಅಶಿಕ್ಷಿತ (ಅನಕ್ಷರಸ್ಥ) ಇದ್ದಷ್ಟು ಅಧಿಕಾರ ತಮ್ಮ ಕೈಯಲ್ಲಿಟ್ಟುಕೊಳ್ಳಲು ಅನುಕೂಲವಾಗಬಹುದು, ಎಂಬ ರಾಷ್ಟ್ರಘಾತಕ ಸಿದ್ಧಾಂತ ಇಂದು ರೂಢಿಯಲ್ಲಿದೆ. ಅಸತ್ಯ, ಭ್ರಷ್ಟಾಚಾರ, ಒಳಸಂಚುಗಳು, ಅಪಪ್ರಚಾರ, ಸಮಾಜವನ್ನು ಒಡೆಯುವುದು ಇಂತಹ ಸಮಾಜ ಮತ್ತು ರಾಷ್ಟ್ರ ಘಾತಕ ವಿಷಯಗಳು ಹೆಚ್ಚಾಗಿವೆ. ಅದೇ ರೀತಿ ಮಿತಿಮೀರಿರುವ ಅಧಿಕಾರ ಲಾಲಸೆಯನ್ನು ನಾಶಮಾಡುವ ಶುದ್ಧ ಉದ್ದೇಶದಿಂದ ಪ್ರಧಾನಮಂತ್ರಿ ಮೋದಿಯವರು ಈ ಪುಸ್ತಕವನ್ನು ಲೋಕಾರ್ಪಣೆ ಮಾಡಿ ದೇಶದ ನಾಗರಿಕರನ್ನು ಪ್ರಾಮಾಣಿಕತೆಯಿಂದ ರಾಷ್ಟ್ರೀಯ ಕಾರ್ಯದಲ್ಲಿ ಭಾಗವಹಿಸಲು ಉತ್ತೇಜಿಸಲು ಪ್ರಯತ್ನಿಸಿದ್ದಾರೆ. ಅದೇ ರೀತಿ ಈ ಪುಸ್ತಕದ ಮೂಲಕ ‘ಪ್ರಜಾಪ್ರಭುತ್ವದಲ್ಲಿ ಸುಶಿಕ್ಷಿತ, ಸುಸಂಸ್ಕೃತ, ಸತ್ಯ, ನ್ಯಾಯ-ನೀತಿಯ ಅಭಿಮಾನವಿರುವ ಪ್ರಜ್ಞಾವಂತ ನಾಗರಿಕರೇ ಅಧಿಕಾರದಲ್ಲಿರುತ್ತಾರೆ, ಎಂಬುದನ್ನು ಜನರ ಮನಸ್ಸಿನಲ್ಲಿ ಬಿಂಬಿಸಲು ಪ್ರಧಾನಮಂತ್ರಿಯವರಿಂದ ಪ್ರಾಮಾಣಿಕ ಪ್ರಯತ್ನವಾಗಿದೆ.

೭. ದೇಶದಲ್ಲಿನ ಪ್ರಜಾಪ್ರಭುತ್ವ ರಾಜ್ಯಪದ್ಧತಿಯ ಉಜ್ವಲ ಪರಂಪರೆ ಶಾಶ್ವತವಾಗಿ ಉಳಿಯಲು…

ಮಂತ್ರಿ, ಸರಕಾರಿ ಅಧಿಕಾರಿಗಳು ಇವರೆಲ್ಲರೂ ರಾಷ್ಟ್ರದ ಸೇವಕರಾಗಿದ್ದಾರೆ. ಆ ರಾಷ್ಟ್ರದ ನಾಗರಿಕರೇ ರಾಷ್ಟ್ರದ ನಿಜವಾದ ಅಧಿಕಾರಿಗಳಾಗಿರುತ್ತಾರೆ. ನಾಗರಿಕರ ಕೈಯಲ್ಲಿ ರಾಜಕೀಯ ಅಧಿಕಾರವಿರುತ್ತದೆ. ಇವರೆಲ್ಲರ ಮೇಲೆ ನಾಗರಿಕರ ವರ್ಚಸ್ಸು ಇರಬೇಕು, ಹೀಗಿದ್ದರೆ ಮಾತ್ರ ದೇಶದಲ್ಲಿನ ಪ್ರಜಾಪ್ರಭುತ್ವ ಉಳಿಯಬಹುದು. ‘ಮಂತ್ರಿ ಮತ್ತು ಸರಕಾರಿ ಅಧಿಕಾರಿಗಳಿಗೆ ಅಧಿಕಾರವನ್ನು ‘ಸೇವಕನೆಂದು ನೀಡಲಾಗಿದೆ, ಇದನ್ನು ಅವರು ಮರೆಯಬಾರದು. ಇದರ ಜೊತೆಗೆ ದೇಶದ ಪ್ರಜಾಪ್ರಭುತ್ವ ರಾಜ್ಯಪದ್ಧತಿಯ ಉಜ್ವಲ ಪರಂಪರೆಯನ್ನು ಸುರಕ್ಷಿತವಾಗಿಡಬೇಕು, ಇಂತಹ ಪ್ರಾಮಾಣಿಕ ಮತ್ತು ಸ್ವಚ್ಛ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಪುಸ್ತಕದ ಲೋಕಾರ್ಪಣೆಯನ್ನು ಮಾಡಲಾಗಿದೆ. ಜಗತ್ತಿನ ರಾಜಕೀಯ ವ್ಯಾಸಪೀಠದ ಮೇಲೆ ಈ ಪುಸ್ತಕವನ್ನು ಮಂಡಿಸಿ ಪ್ರಧಾನಮಂತ್ರಿಗಳು ನಮ್ಮ ದೇಶದ ಶ್ರೇಷ್ಠತೆಯನ್ನು ಸಿದ್ಧಪಡಿಸಿದ್ದಾರೆ. ಅದೇ ರೀತಿ ‘ಪ್ರಜಾಪ್ರಭುತ್ವವನ್ನು ಪಾಶ್ಚಾತ್ಯ ರಾಜಕೀಯ ಚಿಂತಕರು ಜಗತ್ತಿಗೆ ನೀಡಿದ ದೇಣಿಗೆಯಲ್ಲ, ಆ ರಾಜ್ಯಪದ್ಧತಿಯನ್ನು ಅಸ್ತಿತ್ವದಲ್ಲಿ ತಂದ ಜಗತ್ತಿನ ಮೊದಲ ದೇಶವೆಂದರೆ ಭಾರತ ದೇಶ. ಭಾರತಭೂಮಿಯೇ ಪ್ರಜಾಪ್ರಭುತ್ವದ ಜನನಿಯಾಗಿದೆ, ಎಂಬುದನ್ನು ಪ್ರಧಾನಮಂತ್ರಿಗಳು ಜಗತ್ತಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತದ ನಾಗರಿಕರಾಗಿರುವ ನಮಗೆಲ್ಲರಿಗೂ ಅದರ ನಿಜವಾದ ಅಭಿಮಾನ ಆಗಬೇಕು.

– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಿಲಿ. (೧೭.೯.೨೦೨೩)