ರೋಗನಿರೋಧಕಶಕ್ತಿ – ನಮ್ಮ ಶರೀರದ ಗುರಾಣಿ !

ರೋಗಗಳೊಂದಿಗೆ ಹೋರಾಡುವ ನಮ್ಮ ಶರೀರದ ಕ್ಷಮತೆ, ಎಂದರೆ ರೋಗನಿರೋಧಕಶಕ್ತಿ ! ಇದರ ಬಗ್ಗೆ ಕೊರೊನಾ ಮಹಾಮಾರಿಯ ಸಮಯದಲ್ಲಿ ಎಲ್ಲರಲ್ಲಿಯೂ ಜಾಗೃತಿ ಮೂಡಿತು; ಏಕೆಂದರೆ ರೋಗನಿರೋಧಕಶಕ್ತಿ ಚೆನ್ನಾಗಿರುವ ವ್ಯಕ್ತಿಗೆ ಕೊರೋನಾ ವಿಷಾಣುಗಳಿಂದ ಹೆಚ್ಚು ತೊಂದರೆಯಾಗಲಿಲ್ಲ. ಬಹಳಷ್ಟು ಜನರು ಸೋಂಕಿತರ ಸಂಪರ್ಕಕ್ಕೆ ಬಂದೇ ಬರುತ್ತಾರೆ; ಆದರೆ ಆ ವ್ಯಕ್ತಿಗಳಲ್ಲಿರುವ ರೋಗನಿರೋಧಕ ಕ್ಷಮತೆಯಿಂದಾಗಿ, ಪ್ರತಿ ಬಾರಿ ಆ ವ್ಯಕ್ತಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದೇನಿಲ್ಲ ! ಅದು ಅವರಲ್ಲಿರುವ ರೋಗನಿರೋಧಕಶಕ್ತಿಯಿಂದ ಸಾಧ್ಯವಾಗುತ್ತದೆ.ಇತ್ತೀಚೆಗೆ ಕೊರೊನಾ ಸಾಂಕ್ರಾಮಿಕ ರೋಗ ಬಂದು ಹೋಯಿತು ಅಥವಾ ಇನ್ನು ಮುಂದೆ ಯಾವ್ಯಾವ ಹೊಸ ಹೊಸ ವಿಷಾಣುಗಳು ಬರಬಹುದು ಎಂಬುದು ನಮಗೆ ತಿಳಿದಿಲ್ಲ; ನಮ್ಮ ಶರೀರದ ರೋಗನಿರೋಧಕಶಕ್ತಿಯನ್ನು ಹೆಚ್ಚಿಸುವುದು ನಮ್ಮ ಕೈಯಲ್ಲಿದೆ. ನಾವು ಅದರ ಬಗೆಗಿನ ಮಾಹಿತಿಯನ್ನು ಇಂದಿನ ಲೇಖನದಿಂದ ತಿಳಿದುಕೊಳ್ಳುವವರಿದ್ದೇವೆ.

೧. ವಾಖ್ಯೆ

ವ್ಯಾಧಿಕ್ಷಮತ್ವಂ ನಾಮ ವ್ಯಾಧಿಬಲವಿರೋಧಿಹಿತ್ವಂ
ವ್ಯಾಧಿಯುತ್ಪಾದಪ್ರತಿಬಂಧಕತ್ವಮಿತಿ | – ಚಕ್ರಪಾಣಿ

ಅರ್ಥ: ‘ವ್ಯಾಧಿಕ್ಷಮತ್ವ’ ಅಂದರೆ ರೋಗದ ಹೆಚ್ಚಳವನ್ನು ತಡೆಯುವ ಮತ್ತು ರೋಗದ ಪುನರಾವೃತ್ತಿಯನ್ನು ತಡೆಯುವ ಶರೀರದ, ಸಕ್ಷಮವಾದ ಪ್ರತಿಕಾರಶಕ್ತಿ.

ಈ ವಾಖ್ಯೆಗನುಸಾರ ರೋಗನಿರೋಧಕಶಕ್ತಿ, ಅಂದರೆ ರೋಗ ನಿರ್ಮಾಣವಾಗುವುದನ್ನು ತಡೆಗಟ್ಟುವುದು, ಹಾಗೆಯೇ ರೋಗ ನಮ್ಮ ಶರೀರದಲ್ಲಿ ಹೆಚ್ಚು ಬಲಗೊಳ್ಳಲು ಬಿಡದೇ ಇರುವುದು; ಆದರೆ ಎಲ್ಲರ ಶರೀರದಲ್ಲಿಯೂ ರೋಗನಿರೋಧಕಶಕ್ತಿ ಚೆನ್ನಾಗಿರುತ್ತದೆ ಎಂದೇನಿಲ್ಲ.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

೨. ಯಾರ ರೋಗನಿರೋಧಕಶಕ್ತಿ ಕಡಿಮೆಯಿರುತ್ತದೆ ?

ಆಯುರ್ವೇದಕ್ಕನುಸಾರ ಯಾವ ವ್ಯಕ್ತಿಗಳಲ್ಲಿ ರೋಗ ನಿರೋಧಕಶಕ್ತಿ ಕಡಿಮೆ ಇರುತ್ತದೆ ಎಂಬುದನ್ನು ನೋಡೋಣ.

ಅ. ಅತಿಸ್ಥೂಲಕಾಯದ ವ್ಯಕ್ತಿ

ಆ. ಅತಿಕೃಶ ವ್ಯಕ್ತಿ, ಅಂದರೆ ತುಂಬಾ ತೆಳ್ಳಗಿನ ವ್ಯಕ್ತಿ.

ಇ. ವೃದ್ಧರು ಮತ್ತು ಚಿಕ್ಕಮಕ್ಕಳು (ಏಕೆಂದರೆ ವಯಸ್ಕ ವ್ಯಕ್ತಿಗಳು ಮತ್ತು ಚಿಕ್ಕ ಮಕ್ಕಳಲ್ಲಿ ಶರೀರದ ಬಲ ಕಡಿಮೆ ಇರುತ್ತದೆ, ಹಾಗಾಗಿ ರೋಗನಿರೋಧಕಶಕ್ತಿ ಕಡಿಮೆ ಇರುತ್ತದೆ.)

ಈ. ವ್ಯಕ್ತಿಯಲ್ಲಿ ರಸ, ರಕ್ತ, ಮಾಂಸ, ಅಸ್ಥಿ ಈ ಧಾತುಗಳು ಸರಿಯಾದ ಪ್ರಮಾಣದಲ್ಲಿ ಇಲ್ಲದಿರುವುದು ಅಥವಾ ದುರ್ಬಲವಾಗಿರುವುದು.

ಉ. ತಮ್ಮ ಪ್ರಕೃತಿಗೆ ಸೂಕ್ತವಲ್ಲದ ಅಯೋಗ್ಯ ಆಹಾರವನ್ನು ಸೇವಿಸುವುದು.

ಊ. ಮಾನಸಿಕವಾಗಿ ದುರ್ಬಲರಾಗಿರುವುದು.

ಇದರಿಂದ ನಮ್ಮ ಗಮನಕ್ಕೆ ಬರುವುದೇನೆಂದರೆ, ನಮ್ಮ ಶರೀರ ಮಾತ್ರವಲ್ಲ, ನಮ್ಮ ಮನಸ್ಸು ಕೂಡ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯಾವ ವ್ಯಕ್ತಿಯ ಶಾರೀರಿಕ ಬಲ ಚೆನ್ನಾಗಿರುತ್ತದೆಯೋ, ಆ ವ್ಯಕ್ತಿಯ ರೋಗನಿರೋಧಕಶಕ್ತಿ ಚೆನ್ನಾಗಿರುತ್ತದೆ. ಯಾವ ವ್ಯಕ್ತಿಯಲ್ಲಿ ಮಾಂಸ ಧಾತುವಿನ ಪ್ರಮಾಣ ಯೋಗ್ಯ ಇರುತ್ತದೆಯೋ, ಯಾರ ಎಲ್ಲಾ ಇಂದ್ರಿಯಗಳು ಸುದೃಢ ವಾಗಿರುತ್ತವೆಯೋ, ಯಾವ ವ್ಯಕ್ತಿ ಹಸಿವು, ಬಾಯಾರಿಕೆ, ಉಷ್ಣತೆ, ಥಂಡಿ, ಶ್ರಮ ಇತ್ಯಾದಿಗಳನ್ನು ಸಹಜವಾಗಿ ಸಹಿಸಿಕೊಳ್ಳಬಲ್ಲನೋ; ಯಾವ ವ್ಯಕ್ತಿಯ ಜಠರಾಗ್ನಿ ಉತ್ತಮ ವಾಗಿರುತ್ತದೆಯೋ, ಅಂದರೆ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತಿದ್ದರೆ, ಅಂತಹ ವ್ಯಕ್ತಿಯ ರೋಗನಿರೋಧಕಶಕ್ತಿ ಉತ್ತಮವಾಗಿರುತ್ತದೆ.

೩. ರೋಗನಿರೋಧಕಶಕ್ತಿಯನ್ನು ಹೇಗೆ ಹೆಚ್ಚಿಸಬೇಕು ?

ರೋಗನಿರೋಧಕಶಕ್ತಿಯನ್ನು ಹೆಚ್ಚಿಸಲು ಯಾವ ವಿಷಯಗಳು ಮಹತ್ವದ್ದಾಗಿವೆ, ಅವುಗಳನ್ನು ತಿಳಿದುಕೊಳ್ಳೋಣ.

ಅ. ಉತ್ತಮ ಶಾರೀರಿಕ ಬಲದೊಂದಿಗೆ ಮಾನಸಿಕ ಬಲವೂ ಆವಶ್ಯಕವಾಗಿದೆ. ವ್ಯಕ್ತಿ ಮಾನಸಿಕವಾಗಿ ದುರ್ಬಲನಾಗಿದ್ದರೆ, ರೋಗವು ಬೇಗನೆ ಗುಣವಾಗುವುದಿಲ್ಲ. ಯಾರು ಮಾನಸಿಕ ವಾಗಿ ಸಕ್ಷಮರಾಗಿರುತ್ತಾರೆಯೋ, ಅವರಿಗೆ ಯಾವುದೇ ರೋಗ ಬಂದರೂ ಅವರು ಸಕಾರಾತ್ಮಕವಾಗಿದ್ದು, ಅವರಿಗೆ ಸಹಜವಾಗಿ ರೋಗದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ. ಚಂಚಲ ಮನಸ್ಸನ್ನು ನಿಯಂತ್ರಿಸಿದರೆ, ಅಂದರೆ ಮನಸ್ಸಿನ ಸಾತ್ವಿಕತೆಯನ್ನು ಹೆಚ್ಚಿಸಿದರೆ, ರೋಗನಿರೋಧಕಶಕ್ತಿ ಚೆನ್ನಾಗಿರುತ್ತದೆ. ಆಧ್ಯಾತ್ಮಿಕ ಮಾರ್ಗದಲ್ಲಿರುವ ಅಥವಾ ಸಾಧನೆ ಮಾಡುವ ವ್ಯಕ್ತಿ ಮಾನಸಿಕವಾಗಿ ಸುದೃಢನಾಗುತ್ತ ಹೋಗುತ್ತಾನೆ; ಆದ್ದರಿಂದಲೇ ಮನಸ್ಸಿನ ಶಕ್ತಿಯನ್ನು ಹೆಚ್ಚಿಸಲು ಸಾಧನೆ ಮತ್ತು ಧ್ಯಾನ ಮಾಡುವುದು ಅತ್ಯುತ್ತಮ ಉಪಾಯವಾಗಿದೆ.

ಆ. ರೋಗನಿರೋಧಕಶಕ್ತಿ ಉತ್ತಮವಾಗಿರಲು ‘ಓಜಸ್ಸು’ ಈ ಘಟಕ ಮಹತ್ವದ್ದಾಗಿರುತ್ತದೆ. ನಮ್ಮ ಶರೀರದಲ್ಲಿರುವ ಯಾವ ೭ ಧಾತುಗಳನ್ನು (ರಸ, ರಕ್ತ, ಮಾಂಸ, ಮೇದ (ಕೊಬ್ಬು), ಮೂಳೆಗಳು, ಮಜ್ಜ್ಜಾ ಮತ್ತು ಶುಕ್ರ ಇವು ೭ ಧಾತುಗಳು) ನಾವು ನೋಡಿದ್ದೇವೆಯೋ, ಅವು ಸಿದ್ಧಗೊಂಡ ಬಳಿಕ ಅಂತಿಮವಾಗಿ ಸಾರಭಾಗದಿಂದ ಸಿದ್ಧಗೊಳ್ಳುವ ಕೊನೆಯ ಘಟಕವೆಂದರೆ ಓಜಸ್ಸು. ಆಹಾರದಿಂದ ಎಲ್ಲಾ ಧಾತುಗಳು ಉತ್ತರೋತ್ತರ ಸಿದ್ಧವಾಗುತ್ತಿರುತ್ತವೆ ಮತ್ತು ಆ ಎಲ್ಲ ಧಾತುಗಳು ಉತ್ತಮ ರೀತಿಯಲ್ಲಿ ಸಿದ್ಧವಾದರೆ ಬಳಿಕ ಸಿದ್ಧವಾಗುವ ಓಜಸ್ಸು ಕೂಡ ಉತ್ತಮವಾಗಿ ಸಿದ್ಧವಾಗುತ್ತದೆ. ಇಂತಹ ಓಜಸ್ವಿ ವ್ಯಕ್ತಿಗಳಲ್ಲಿ ರೋಗನಿರೋಧಕಶಕ್ತಿ ಉತ್ತಮವಾಗಿರುತ್ತದೆ. ಭಯ, ಕೋಪ, ಚಿಂತೆಯಂತಹ ಮಾನಸಿಕ ಸ್ಥಿತಿಗಳು ನಮ್ಮ ಶರೀರದಲ್ಲಿನ ಓಜಸ್ಸಿನ ಘಟಕವನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ವ್ಯಕ್ತಿಯ ರೋಗನಿರೋಧಕಕ್ಷಮತೆ ಕಡಿಮೆಯಾಗುತ್ತದೆ.

ಇ. ನಮ್ಮ ಜಠರಾಗ್ನಿಯು ಕೂಡ ರೋಗನಿರೋಧಕ ಕ್ಷಮತೆ ಯನ್ನು ಸಿದ್ಧಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಹರ್ಷಿ ವಾಗ್ಭಟ ಅವರು ಎಲ್ಲಾ ರೋಗಗಳು ಜಠರಾಗ್ನಿ ದುರ್ಬಲವಾಗಿರುವುದರಿಂದಲೇ ಉದ್ಭವಿಸುತ್ತವೆ ಎಂದು ಹೇಳಿದ್ದಾರೆ. ಆದುದರಿಂದ ನಮಗೆ ಜೀರ್ಣಕ್ರಿಯೆಯ ಯಾವುದಾದರು ತೊಂದರೆಗಳು ಇದ್ದರೆ, ಉದಾ. ಹಸಿವು
ಮಂದವಾಗಿರುವುದು, ತಿಂದ ಆಹಾರ ಜೀರ್ಣವಾಗದಿರುವುದು, ಹೊಟ್ಟೆಯುಬ್ಬರ, ಹೊಟ್ಟೆ ನೋವು ಮುಂತಾದ ಎಲ್ಲ ದೂರುಗಳ ಮೇಲೆ ಸಮಯವಿರುವಾಗಲೇ ಚಿಕಿತ್ಸೆಯ ಮೂಲಕ ನಮ್ಮ
ಜೀರ್ಣಕ್ರಿಯೆಯನ್ನು ಉತ್ತಮವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಸಾಮಾನ್ಯವಾಗಿ ನಮ್ಮಿಂದ ಈ ರೋಗಲಕ್ಷಣ ಗಳು ನಿರ್ಲಕ್ಷಿಸಲ್ಪಡುತ್ತವೆ ಮತ್ತು ವಿವಿಧ ರೋಗಗಳು ಉತ್ಪನ್ನವಾದ ಬಳಿಕ ವೈದ್ಯರ ಬಳಿಗೆ ಧಾವಿಸುತ್ತೇವೆ. ಅದಕ್ಕಿಂತ ಸಮಯವಿರುವಾಗಲೇ ಉಪಾಯಯೋಜನೆ ಮಾಡಿದರೆ ಮುಂದಾಗುವ ಆರೋಗ್ಯದ ಹೆಚ್ಚಿನ ಹಾನಿಯನ್ನು ತಪ್ಪಿಸಬಹುದು.

ಇ ೧. ನಾವು ಸಮತೋಲನದ ಆಹಾರವನ್ನು ಹೇಗೆ ಸೇವಿಸಬೇಕು ? ಪ್ರಕೃತಿಗನುಸಾರ ಯಾವ ಆಹಾರವನ್ನು ಸೇವಿಸಬೇಕು ? ಈ ವಿಷಯದ ಮಾಹಿತಿಯನ್ನು ಮೊದಲಿನ ಲೇಖನಗಳಲ್ಲಿ ಪಡೆದುಕೊಳ್ಳಲಾಗಿದೆ. ಅದೇ ರೀತಿ ನಮ್ಮ ಆಹಾರದಲ್ಲಿ ಸುಧಾರಣೆಯನ್ನು ಮಾಡಿಕೊಂಡರೆ, ನಮ್ಮ ಜಠರಾಗ್ನಿಯನ್ನು ಚೆನ್ನಾಗಿ ಇಡಲು ಸಾಧ್ಯವಾಗುತ್ತದೆ.

ಈ. ನಿಯಮಿತವಾಗಿ ವ್ಯಾಯಾಮ ಮಾಡಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮನಸ್ಸು ಪ್ರಸನ್ನವಾಗಿರುತ್ತದೆ. ವ್ಯಾಯಾಮದಿಂದ ಶರೀರದಲ್ಲಿ ಉತ್ಸಾಹ ಮೂಡುತ್ತದೆ. ಆ ಮೂಲಕ ಮನಸ್ಸು ಸಕಾರಾತ್ಮಕವಾಗುತ್ತದೆ. ಇವೆಲ್ಲವೂ ರೋಗ ನಿರೋಧಕಶಕ್ತಿಯನ್ನು ನಿರ್ಮಿಸುತ್ತವೆ. ಶರೀರದ ಶಕ್ತಿ ಹೆಚ್ಚಾದರೆ ರೋಗನಿರೋಧಕಶಕ್ತಿಯು ತಾನಾಗಿಯೇ ಹೆಚ್ಚಾಗುತ್ತದೆ.

ಉ. ರೋಗನಿರೋಧಕಶಕ್ತಿಯನ್ನು ಹೆಚ್ಚಿಸಲು ನೆಲ್ಲಿಕಾಯಿ, ಒಣದ್ರಾಕ್ಷಿ, ಪಪ್ಪಾಯಿ, ದಾಳಿಂಬೆ, ಖರ್ಜೂರ, ಬಾದಾಮ ಮತ್ತು ಅಕ್ರೋಡಗಳನ್ನು ಆಹಾರದಲ್ಲಿ ಸೇರಿಸಬೇಕು. ಆದರೆ ಅವುಗಳ ಅತಿರೇಕವನ್ನು ಮಾತ್ರ ಮಾಡಬಾರದು.

ಊ. ರೋಗನಿರೋಧಕಶಕ್ತಿಯನ್ನು ಹೆಚ್ಚಿಸುವ ಕೆಲವು ಔಷಧಿ ಗಳು, ಉದಾ. ಅಶ್ವಗಂಧ, ಅಮೃತಬಳ್ಳಿ, ಅರಿಶಿನ, ತುಳಸಿ, ಶುಂಠಿ, ನೆಲ್ಲಿಕಾಯಿ, ಅಳಲೆಕಾಯಿ, ಹಿಪ್ಪಲಿ ಇವು ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಆದರೂ ಯಾವ ಔಷಧಿಯನ್ನು ಯಾವ ಪ್ರಮಾಣದಲ್ಲಿ ಮತ್ತು ಎಷ್ಟು ದಿನಗಳ ವರೆಗೆ ತೆಗೆದುಕೊಳ್ಳಬೇಕು ? ಎಂಬ ವೈದ್ಯಕೀಯ ಸಲಹೆಯ ಆವಶ್ಯಕತೆ ಇದೆ.

ಊ. ರೋಗನಿರೋಧಕಶಕ್ತಿ ಒಂದು ದಿನದಲ್ಲಿ ನಿರ್ಮಾಣ ವಾಗುವುದಿಲ್ಲ. ಅದಕ್ಕಾಗಿ ನಾವು ಪ್ರತಿದಿನ ಪ್ರಯತ್ನಿಸುವುದು ಆವಶ್ಯಕವಾಗಿದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ, ‘ನಿರ್ದಿಷ್ಟ ಕಷಾಯಗಳನ್ನು ಸೇವಿಸಿದರೆ ರೋಗನಿರೋಧಕಶಕ್ತಿ ಹೆಚ್ಚಾಗುತ್ತದೆ’ ಎಂದು ತಿಳಿದ ನಂತರ, ಬಹಳಷ್ಟು ಜನರು ಅತಿಉಷ್ಣತೆಯ ಕಷಾಯಗಳನ್ನು ಅದೂ ಏಪ್ರಿಲ್-ಮೇ ತಿಂಗಳುಗಳಲ್ಲಿ ಸೇವಿಸಿದರು. ಇದರಿಂದ ರೋಗನಿರೋಧಕ ಶಕ್ತಿ ವೃದ್ಧಿಸುವ ಬದಲು ಉಷ್ಣತೆ, ಮೂಲವ್ಯಾಧಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಹೊಸ ಸಮಸ್ಯೆಗಳು ಉದ್ಭವಿಸಿದವು. ಅಂತಹ ಪ್ರಯೋಗಗಳನ್ನು ಮಾಡುವ ಮೊದಲು ನಮ್ಮ ಆರೋಗ್ಯಕ್ಕೆ ಇದು ಅಗತ್ಯವಿದೆಯೇ ? ಎಂದು ವೈದ್ಯರ ಸಲಹೆ ಪಡೆಯಬೇಕು. ಇಂದಿನ ಲೇಖನದಲ್ಲಿ, ನಮ್ಮ ರೋಗನಿರೋಧಕಶಕ್ತಿಯು, ಸಮತೋಲನ ಆಹಾರ, ಅದರಿಂದಾಗುವ ಸರಿಯಾದ ಜೀರ್ಣಕ್ರಿಯೆ, ಮನಸ್ಸಿನ ಸಕಾರಾತ್ಮಕತೆ, ನಿಯಮಿತ ವ್ಯಾಯಾಮ ಇತ್ಯಾದಿ ಘಟಕಗಳನ್ನು ಅವಲಂಬಿಸಿರುತ್ತದೆ ಎಂಬುದು ಗಮನಕ್ಕೆ ಬರುತ್ತದೆ. ಹಾಗಾಗಿ ರೋಗನಿರೋಧಕ ಶಕ್ತಿ ನಿರ್ಮಾಣವಾಗಲು ವಿವಿಧ ಸಾಮಾಜಿಕ ಮಾಧ್ಯಮಗಳ ಉಪಾಯಗಳಿಗೆ ಬಲಿಯಾಗಿ ನಿಮ್ಮ ಶರೀರದ ಮೇಲೆ ಪ್ರಯೋಗ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. – ವೈದ್ಯೆ (ಸೌ.) ಮುಕ್ತಾ ಲೋಟಲಿಕರ, ಪುಣೆ (೯.೧೦.೨೦೨೩)