ಭಯೋತ್ಪಾದಕ ಪನ್ನು ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ!

ನವ ದೆಹಲಿ : ಅಮೆರಿಕಾದ ಪೌರತ್ವ ಪಡೆದ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಸಿಂಗ್ ಪನ್ನು ಹತ್ಯೆಗೆ ಸರಕಾರಿ ಅಧಿಕಾರಿಗಳ ಜೊತೆ ಸೇರಿ ಸಂಚು ರೂಪಿಸಿದ ಆರೋಪ ಹೊತ್ತಿರುವ ನಿಖಿಲ್ ಗುಪ್ತಾ ಅವರು ತಮ್ಮ ಕುಟುಂಬದ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ‘ಅಮೆರಿಕದಿಂದ ನಡೆಯುತ್ತಿರುವ ಹಸ್ತಾಂತರ ಪ್ರಕ್ರಿಯೆಯಲ್ಲಿ ಭಾರತ ಸರಕಾರ ಮಧ್ಯಪ್ರವೇಶಿಸಬೇಕು’, ಎಂದು ಒತ್ತಾಯಿಸಲಾಗಿದೆ. ನಿಖಿಲ್ ಗುಪ್ತಾ ಅವರನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ ಮತ್ತು ಅವರ ಜೀವಕ್ಕೆ ಅಪಾಯವಿದೆ’ ಎಂದು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಪ್ರಸ್ತುತ ಚೆಕ್ ರಿಪಬ್ಲಿಕ್ ಜೈಲಿನಲ್ಲಿದ್ದು, ಅಮೇರಿಕಾಗೆ ಹಸ್ತಾಂತರಿಸುವ ಮನವಿಯನ್ನು ತಾತ್ಕಾಲಿಕವಾಗಿ ಅಂಗೀಕರಿಸಲಾಗಿದೆ. ‘ನಿಖಿಲ್ ಗುಪ್ತಾ ಅವರು ಪನ್ನುವನ್ನು ಕೊಲ್ಲಲು ಅಪರಾಧಿ ಹಿನ್ನಲೆಯ ವ್ಯಕ್ತಿಯ ಸಹಾಯವನ್ನು ಕೋರಿದ್ದರು; “ಆದರೆ ಅವರು ಜಾರಿ ನಿರ್ದೇಶನಾಲಯದ ಗೂಢಚಾರರಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಅಮೇರಿಕಾದ ಸರಕಾರಿ ವಕೀಲರು ಹೇಳಿದರು.

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ಸಚಿವಾಲಯ, “ನಾವು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ; ಏಕೆಂದರೆ ಅವು ನಮ್ಮ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುತ್ತವೆ. ಈ ಪ್ರಕರಣದಲ್ಲಿ ಸರಕಾರ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ನೇಮಿಸಿ ತನಿಖೆ ಆರಂಭಿಸಿದೆ.” ಎಂದು ಹೇಳಿದೆ.