ಹಿಂದುತ್ವವು ಎಂದಿಗೂ ಅಸತ್ಯದ ಪಕ್ಷ ವಹಿಸುವುದಿಲ್ಲ, ಅದು ನಮ್ಮ ಆಪ್ತ ಸಂಬಂಧಿಕರದ್ದೇ ಆಗಿರಬಹುದು ಅಥವಾ ಇತರರದ್ದಾಗಿರಬಹುದು ! ಎಲ್ಲ ರೀತಿಯ ಪ್ರಯತ್ನ ಮತ್ತು ಭಗವಾನ ಶ್ರೀಕೃಷ್ಣನ ಮಧ್ಯಸ್ಥಿಕೆ ವಿಫಲವಾದಾಗ ಕೌರವ – ಪಾಂಡವರಲ್ಲಿ ಯುದ್ಧ ನಿಶ್ಚಯವಾಯಿತು. ಯುದ್ಧಕ್ಕೂ ಮೊದಲು ಧೃತರಾಷ್ಟ್ರ ಮತ್ತು ಗಾಂಧಾರಿಯ ಹಿರಿಯ ಪುತ್ರ ದುರ್ಯೋಧನನು ವಿಜಯದ ಆಶೀರ್ವಾದ ಪಡೆಯಲು ತಾಯಿ-ತಂದೆಯರಿಗೆ ನಮಸ್ಕಾರ ಮಾಡಿದನು. ಅವನನ್ನು ಆಶೀರ್ವದಿಸÀÄವಾಗ ಗಾಂಧಾರಿಯು, ”ಯತೋ ಧರ್ಮಸ್ತತೋ ಜಯಃ |’’ ಎಂದÀಳು. ತನ್ನ ಸ್ವಂತ ಪುತ್ರನಾಗಿದ್ದರೂ ಪುತ್ರಪ್ರೇಮದಿಂದ ಕುರುಡಳಾಗಿ ಮಾತೆ ಗಾಂಧಾರಿಯು ದುರ್ಯೋಧನನಿಗೆ ವಿಜಯದ ಆಶೀರ್ವಾದ ನೀಡಲಿಲ್ಲ, ಆದರೆ ‘ಅವಳು ಎಲ್ಲಿ ಧರ್ಮ, ಅಂದರೆ ಸತ್ಯವಿದೆಯೋ’, ಆ ಪಕ್ಷಕ್ಕೇ ಜಯವಾಗಲಿ’, ಎಂದು ಆಶೀರ್ವದಿಸಿದಳು. ಗಾಂಧಾರಿಗೆ ಪಾಂಡವರ ಪಕ್ಷವೇ ಸತ್ಯದ ಪಕ್ಷ ವಾಗಿದೆ. ಆದುದರಿಂದ ಯುದ್ಧದಲ್ಲಿ ಅವರ ವಿಜಯವೇ ಆಗಲಿದೆ ಎಂಬುದು ಅವಳಿಗೆ ತಿಳಿದಿತ್ತು. ‘ತನ್ನ ಪುತ್ರನ ಪಕ್ಷ ಅಧರ್ಮದ್ದಾಗಿರುವುದರಿಂದ ಧರ್ಮದ ಪಕ್ಷದಲ್ಲಿರುವ ಪಾಂಡವರ ವಿಜಯವೇ ಆಗಬೇಕು’, ಎಂಬ ಪ್ರಾಮಾಣಿಕ ಆಶಯ ವ್ಯಕ್ತ ಪಡಿಸುವ ನಿಷ್ಪಕ್ಷಪಾತವೇ ಹಿಂದುತ್ವ ! ‘ತಮಗಿಂತ ಭಿನ್ನ ವಿಚಾರ ಗಳನ್ನು ಮಂಡಿಸುವವರನ್ನು ಒತ್ತಾಯಪೂರ್ವಕ ಅಥವಾ ಆಮಿಷ ತೋರಿಸಿ ತಮ್ಮ ವಿಚಾರಗಳನ್ನು ಒಪ್ಪಿಕೊಳ್ಳಲು ಒತ್ತಾಯಿಸಿ, ಒಪ್ಪದಿ ದ್ದರೆ ಅವರ ಹತ್ಯೆ ಮಾಡಿರಿ, ಅವರ ಧರ್ಮ ಮತ್ತು ಜ್ಞಾನದ ಗ್ರಂಥಗಳನ್ನು ಸುಟ್ಟುಹಾಕಿ’, ಹಿಂದುತ್ವವು ಎಂದಿಗೂ ಇದನ್ನು ಕಲಿಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವು ಹಿಂದುತ್ವದ ಪ್ರಾಣವಾಗಿದೆ.
೧. ಹಿಂದುತ್ವವು ಚಾರ್ವಾಕರನ್ನೂ ಸ್ವೀಕರಿಸಿತು !
ಹಿಂದೂಗಳಲ್ಲಿ ಚಾರ್ವಾಕ ಎಂಬ ಹೆಸರಿನ ಓರ್ವ ವಿಚಾರವಂತನಾಗಿ ಹೋದನು. ಅವನು ನಾಸ್ತಿಕನಾಗಿದ್ದನು. ಹಾಗಾಗಿ ಹಿಂದೂ ಧರ್ಮದ ತತ್ತ್ವಗಳಾದ ಈಶ್ವರ ಮತ್ತು ಪುನರ್ಜನ್ಮ ಇತ್ಯಾದಿ ನಂಬುತ್ತಿರಲಿಲ್ಲ. ‘ತಿನ್ನಿರಿ, ಕುಡಿಯಿರಿ ಮತ್ತು ಮೋಜು ಮಾಡಿರಿ’, ಅವನು ಇಂತಹ ಸಂಕಲ್ಪನೆಯ ಸಮರ್ಥಕನಾಗಿದ್ದನು. ಆದುದರಿಂದ ಅವನು – ‘ಯಾವತ್ ಜೀವೆತ ಸುಖಂ ಜೀವೆತ, ಋಣಂ ಕೃತ್ವಾ ಘೃತಂ ಪಿಬೇತ್ | ಭಸ್ಮೀಭೂತಸ್ಯ ದೇಹಃ ಕುತಃ ಪುನರಾಗಮನಮ್ |’
ಅರ್ಥ : ‘ಎಷ್ಟು ಆಯುಷ್ಯವಿದೆಯೋ, ಅಷ್ಟು ದಿನ ಸುಖದಿಂದ ಬದುಕಿರಿ, ಸಾಲವನ್ನು ಮಾಡಿ ತುಪ್ಪವನ್ನು ತಿನ್ನಿರಿ; ಏಕೆಂದರೆ ಮೃತ್ಯುವಿನ ನಂತರ ಈ ದೇಹ ಬೂದಿಯಾದ ಮೇಲೆ ಎಲ್ಲಿಯ ಸ್ವರ್ಗ ಮತ್ತು ಎಲ್ಲಿಯ ಪುನರ್ಜನ್ಮ ?’ ಎಂದು ಹೇಳುತ್ತಿದ್ದನು. ಆದರೂ ವಿಚಾರಗಳಿಂದ ವ್ಯಾಪಕವಾಗಿರುವ ಹಿಂದುತ್ವವು ನಾಸ್ತಿಕನಾಗಿದ್ದ ಚಾರ್ವಾಕನಿಗೂ ಋಷಿಯ ದರ್ಜೆ ನೀಡಿತು. ಇಂತಹ ವಿಭಿನ್ನ ವಿಚಾರಪ್ರವಾಹಗಳನ್ನು ಉದಾರವಾಗಿ ತನ್ನಲ್ಲಿ ಸೇರಿಸಿಕೊಳ್ಳುವುದು ಅಂದರೆ ಹಿಂದುತ್ವ !
೨. ‘ಸಾಕ್ಷಾತ್ ಗೀತಾಜ್ಞಾನ ನೀಡಿಯೂ ಶ್ರೀಕೃಷ್ಣನು ಅರ್ಜುನನಿಗೆ ‘ನಿನಗೆ ಬೇಕಾದ ಹಾಗೆ ಮಾಡು’, ಎಂದು ಹೇಳುವುದು’, ಇದು ಹಿಂದುತ್ವ !
‘ಮನುಷ್ಯನು ತನ್ನ ಜೀವನದಲ್ಲಿ ಹೇಗೆ ಬದುಕಬೇಕು ?’, ಎಂಬ ನಿಗೂಢ ಜ್ಞಾನವನ್ನು ನೀಡುವ ಜಗತ್ತಿನ ಒಂದು ಸರ್ವ ಶ್ರೇಷ್ಠ ಗ್ರಂಥವೆಂದರೆ ಭಗವಾನ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಭಗವದ್ಗೀತೆ ! ಒಟ್ಟು ೧೮ ಅಧ್ಯಾಯಗಳ ಮೂಲಕ ಅರ್ಜುನನಿಗೆ ಜೀವನದ ಪರಮಗುಹ್ಯ ಜ್ಞಾನವನ್ನು ನೀಡಿದ ನಂತರವೂ ಕೊನೆಗೆ ಭಗವಾನ ಶ್ರೀಕೃಷ್ಣನು, ”ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ |
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು |” (ಅಧ್ಯಾಯ ೧೮, ಶ್ಲೋಕ-೬೩, ಗೀತಾ) ಅರ್ಥ : ‘ಈ ರೀತಿ ಗೋಪನೀಯಕ್ಕಿಂತಲೂ ಅತಿಗೋಪನೀಯ ಜ್ಞಾನವನ್ನು ನಾನು ನಿನಗೆ ನೀಡಿದ್ದೇನೆ. ಈಗ ನೀನು ಈ ಸಂಪೂರ್ಣ ರಹಸ್ಯಮಯ ಜ್ಞಾನದ ಬಗ್ಗೆ ಚೆನ್ನಾಗಿ ವಿಚಾರ ಮಾಡಿ ನಂತರ ನಿನಗೆ ಇಷ್ಟವಾಗುವ ಹಾಗೇ ಮಾಡು’, ಎನ್ನುತ್ತಾನೆ. ಇಷ್ಟು ಪರಮಗುಹ್ಯ ಜ್ಞಾನವನ್ನು ಹೇಳಿಯೂ ಭಗವಾನ ಶ್ರೀಕೃಷ್ಣನು ‘ನಾನು ಹೇಳುತ್ತೇನೆ, ಅದೇ ರೀತಿ ವಿಚಾರ ಮತ್ತು ಆಚರಣೆ ಮಾಡು’, ಎಂದು ಒತ್ತಡ ತರುವುದಿಲ್ಲ, ಅದರ ಬದಲು ಅವನಿಗೆ ಅವನ ಇಚ್ಛೆಯಂತೆ ವಿಚಾರ ಮತ್ತು ಆಚರಣೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತಾನೆ. ಈ ರೀತಿ ಪ್ರತಿಯೊಬ್ಬರಿಗೆ ಅವರ ಇಚ್ಛೆಗನುಸಾರ ವಿಚಾರ ಮತ್ತು ಆಚಾರದ ಸ್ವಾತಂತ್ರ್ಯವನ್ನು ನೀಡುವುದೆಂದರೆ ಹಿಂದುತ್ವ.
೩. ಜೀವನದ ಎಲ್ಲ ಅಂಗಗಳನ್ನು ವ್ಯಾಪಿಸಿರುವ ಎಲ್ಲ ವಂಶಪರಂಪರೆಗಳ ಬಗ್ಗೆ ಅಭಿಮಾನ ಪಡುವ ವಿಶಾಲ ಹಿಂದುತ್ವ !
ಹಿಂದುತ್ವಕ್ಕಾಗಿ ‘ಹಿಂದುನೆಸ್’ (ಊಇಟಿಜಉಟಿಎಸ್ಸ್) ಎಂಬ ಒಂದು ಪರ್ಯಾಯ ಶಬ್ದವನ್ನು ಕೆಲವು ಜನರು ಬಳಸುತ್ತಾರೆ. ಹಿಂದುತ್ವವು ಆಕಾಶದಂತೆ ವಿಶಾಲವಾಗಿದೆ. ಈ ಆಕಾಶದಲ್ಲಿ ನಾವು ಹೇಗೆ ಮುಂದೆ ಮುಂದೆ ಹೋಗುತ್ತೇವೆಯೋ, ಹಾಗೆ ನಮಗೆ ಹಿಂದುತ್ವದ ಹೊಸಹೊಸ, ತೇಜಸ್ವಿ ಮತ್ತು ಪವಿತ್ರ ಮಜಲುಗಳ ದರ್ಶನವಾಗುತ್ತಾ ಹೋಗುತ್ತದೆ. ‘ಹಿಂದುತ್ವ’ ಈ ಶಬ್ದದಲ್ಲಿ ಹಿಂದೂಗಳ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಭಾಷಿಕ, ಸಾಮಾಜಿಕ, ರಾಜಕೀಯ, ವೈಜ್ಞಾನಿಕ ಇತ್ಯಾದಿ ಅನೇಕ ಅಂಗಗಳ ಸಮಾವೇಶವಿದೆ. ನಮ್ಮ ಗೌರವಶಾಲಿ ವಂಶಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತ, ಭವಿಷ್ಯವನ್ನು ಅಧ್ಯಯನ ಮಾಡುತ್ತಾ, ಕಾಲಕ್ಕನುಸಾರ ನಮ್ಮಲ್ಲಿ ಯೋಗ್ಯ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಯಾವಾಗಲೂ ನಿತ್ಯನೂತನವಾಗಿರುವ ಸನಾತನ ಧರ್ಮದ ಬಗ್ಗೆ ಅಭಿಮಾನ (ಹೆಮ್ಮೆ) ಪಡುವುದು, ಅಂದರೆ ಹಿಂದುತ್ವ ! ನಮ್ಮ ದೇವಿದೇವತೆಗಳು, ಋಷಿಮುನಿಗಳು, ಸಾಧು-ಸಂತರು, ಪರಾಕ್ರಮಿ ಮತ್ತು ಶ್ರೇಷ್ಠ ಪುರುಷರು, ಇವರೆಲ್ಲರೂ ಪ್ರಸ್ಥಾಪಿಸಿದ ಆದರ್ಶಗಳ, ಅವರು ನಿರ್ಮಿಸಿದ ಸಾಹಿತ್ಯ, ಸಂಗೀತ, ೧೪ ವಿದ್ಯೆ, ೬೪ ಕಲೆ, ವಿವಿಧ ಹಬ್ಬ-ಉತ್ಸವಗಳ, ಮಾನವನ ಕೇವಲ ಕಲ್ಯಾಣಕ್ಕಾಗಿಯೇ ಅವರು ಕಂಡುಹಿಡಿದ ವಿವಿಧ ವೈಜ್ಞಾನಿಕ ಸಂಶೋಧನೆಗಳ, ಗೋವು, ಗೋಪಿ (ಸ್ತ್ರೀಯರು), ಗಂಗಾ, ಗಾಯತ್ರಿ ಮತ್ತು ಗೀತೆ ಇವುಗಳನ್ನು ಮಾತೆ ಎಂದು ತಿಳಿದು ಈ ಎಲ್ಲರ ಬಗ್ಗೆ ಮನಸ್ಸಿನಲ್ಲಿ ಗೌರವ ಮತ್ತು ಅಭಿಮಾನವನ್ನು ಇಟ್ಟುಕೊಳ್ಳುವುದು ಮತ್ತು ಈ ಎಲ್ಲವುಗಳ ರಕ್ಷಣೆಗಾಗಿ ಯಾವಾಗಲೂ ಕಟಿ ಬದ್ಧರಾಗಿರುವುದೆಂದರೆ ಹಿಂದುತ್ವ; ಆದರೆ ಪ್ರಸಂಗ ಬಂದರೆ ಧರ್ಮದಲ್ಲಿನ ಕೆಟ್ಟ ರೂಢಿಗಳು, ನಡೆನುಡಿ, ಅಂಧಶ್ರದ್ಧೆಯನ್ನು ನಿರಾಕರಿಸುವುದೂ ಹಿಂದುತ್ವವೇ !
೪. ವ್ಯಷ್ಟಿ, ಸಮಷ್ಟಿ ಮತ್ತು ಸೃಷ್ಟಿಯ ಉತ್ಕರ್ಷವನ್ನು ಸಾಧಿಸಿ ಪರಮೇಷ್ಟಿ (ಮೋಕ್ಷ) ಯನ್ನು ಸಾಧಿಸುವುದೂ ಹಿಂದುತ್ವವೇ !
ಮಾನವೀ ಜೀವನವನ್ನು ಸಾರ್ಥಕಗೊಳಿಸಬೇಕೆಂದು ೪ ಆಶ್ರಮ (ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ) ಮತ್ತು ೪ ಪುರುಷಾರ್ಥ (ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ) ಇಂತಹ ವ್ಯವಸ್ಥೆಯನ್ನು ನಿರ್ಮಿಸುವ ಜೀವನಶಾಸ್ತ್ರವೆಂದರೆ ಹಿಂದುತ್ವ. ತನ್ನೊಂದಿಗೆ (ವ್ಯಷ್ಟಿ), ಸಮಾಜ (ಸಮಷ್ಟಿ) ಮತ್ತು ನಿಸರ್ಗ (ಸೃಷ್ಟಿ) ಇವುಗಳ ಕಲ್ಯಾಣ ಮತ್ತು ಉತ್ಕರ್ಷವನ್ನು ಸಾಧಿಸಿ ಕೊನೆಗೆ ಮೋಕ್ಷ ವನ್ನು (ಪರಮೇಷ್ಟಿಯನ್ನು) ಪ್ರಾಪ್ತಮಾಡಿಕೊಡುವ ಜೀವನ ಪದ್ಧತಿ ಅಂದರೆ ಹಿಂದುತ್ವ. ಅಸುರರ ಅಂದರೆ, ದುಷ್ಟರ ನಾಶಕ್ಕಾಗಿ ದೇವತೆಗಳಿಗೆ ತಮ್ಮ ಮೂಳೆಗಳಿಂದ ‘ವಜ್ರ’ ಎಂಬ ಹೆಸರಿನ ನಿಷ್ಫಲಗೊಳ್ಳದ ಶಸ್ತ್ರವನ್ನು ತಯಾರಿಸಲು ಸಾಧ್ಯವಾಗಬೇಕೆಂದು; ಮಹರ್ಷಿ ದಧಿಚಿ ಇವರು ಮೃತ್ಯು ವನ್ನು ಸ್ವೀಕರಿಸಿದರು. ದೇವತೆಗಳ, ಅಂದರೆ ಸಜ್ಜನರ ರಕ್ಷಣೆ ಗಾಗಿ ಇಂತಹ ಸರ್ವೋಚ್ಚ ತ್ಯಾಗ ಮಾಡುವುದೆಂದರೆ ಹಿಂದುತ್ವ. ತನ್ನ ರಾಜ್ಯಾಭಿಷೇಕದ ಮಂಗಲ ಘಳಿಗೆ ಸಮೀಪ ಬಂದಿರು ವಾಗಲೂ ಒಮ್ಮೆಲೆ ತನ್ನ ತಂದೆ ಮಲತಾಯಿಗೆ ನೀಡಿದ ವಚನಪಾಲನೆಗಾಗಿ ಕ್ಷಣಾರ್ಧದಲ್ಲಿ ಎಲ್ಲ ಅಧಿಕಾರ ಮತ್ತು ಸುಖಸೌಲಭ್ಯಗಳ ಮೋಹವನ್ನು ತ್ಯಜಿಸಿ ಪ್ರಭು ಶ್ರೀರಾಮಚಂದ್ರನು ವಲ್ಕಲವನ್ನುಟ್ಟು ೧೪ ವರ್ಷಗಳ ಕಾಲ ಆನಂದದಿಂದ ವನವಾಸಕ್ಕೆ ನಗುತ್ತಾ ತೆರಳುವುದು, ಇದು ಹಿಂದುತ್ವ. ಅದೇ ಕ್ಷಣ ಶ್ರೀರಾಮನೊಂದಿಗೆ ಜಾನಕಿ ಮತ್ತು ಲಕ್ಷ್ಮಣ ಇವರು ಪತ್ನಿ ಮತ್ತು ಸಹೋದರ ಧರ್ಮವನ್ನು ನಿಭಾಯಿಸುವ ನಿರ್ಣಯ ತೆಗೆದುಕೊಳ್ಳುವುದೆಂದರೆ ಹಿಂದುತ್ವ. ಶ್ರೀರಾಮನು ವನವಾಸಕ್ಕೆ ಹೋದ ನಂತರ ಭರತನು ಶ್ರೀರಾಮನ ಪಾದುಕೆಗಳನ್ನು ಅಯೋಧ್ಯೆಯ ಸಿಂಹಾಸನದ ಮೇಲಿಟ್ಟು, ರಾಜಧಾನಿಯ ಹೊರಗೆ ೧೪ ವರ್ಷಗಳ ಕಾಲ ವ್ರತಸ್ಥನಾಗಿದ್ದು ಶ್ರೀರಾಮನ ಹೆಸರಿನಿಂದ ರಾಜ್ಯಾಡಳಿತವನ್ನು ನಿರ್ವಹಿಸುವುದು, ಇದು ಹಿಂದುತ್ವ. – ಶ್ರೀ. ಶಂಕರ ಗೊ. ಪಾಂಡೆ
ಮಹಾಬಲಿ ರಾವಣನನ್ನು ವಧಿಸಿದ ನಂತರ ಅವನ ಸುವರ್ಣ ಲಂಕೆಯ ಮೋಹಕ್ಕೆ ಬಲಿಯಾಗದೇ ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ |’ (ಅರ್ಥ : ತಾಯಿ ಮತ್ತು ಮಾತೃಭೂಮಿ ಇವರ ಸ್ಥಾನ ಸ್ವರ್ಗ ಕ್ಕಿಂತಲೂ ಮಿಗಿಲಾಗಿದೆ.) ಆದ್ದರಿಂದ ಲಂಕೆಯ ಸಿಂಹಾಸನದ ಮೇಲೆ ವಿಭೀಷಣನ ರಾಜ್ಯಾಭಿಷೇಕವನ್ನು ಮಾಡುವುದು, ಇದು ಹಿಂದುತ್ವ. ರಾವಣನನ್ನು ವಧಿಸಿದ ನಂತರ ‘ಮರಣಾಂತಾನಿ ವೈರಾಣಿ’ ಅಂದರೆ ‘ಶತ್ರು ಆಗಿದ್ದರೂ ಅವನ ಮರಣದ ನಂತರ ವೈರತ್ವವು ಕೊನೆಗೊಳ್ಳುತ್ತದೆ’, ಈ ಉದಾತ್ತ ನ್ಯಾಯದ ಪಾಲನೆಯನ್ನು ಮಾಡಿ ರಾವಣನ ಅಂತ್ಯವಿಧಿಯನ್ನು ಶ್ರೀರಾಮನು ಸನ್ಮಾನಪೂರ್ವಕವಾಗಿ ಮಾಡುವುದು, ಇದು ಹಿಂದುತ್ವ. ಅನ್ಯಾಯಿ ವಾಲಿಯನ್ನು ವಧಿಸಿದ ನಂತರ ಕಿಷ್ಕಿಂಧೆಯ ರಾಜಸಿಂಹಾಸನದ ಮೇಲೆ ಸುಗ್ರೀವನನ್ನು ಮತ್ತು ಯುವರಾಜನೆಂದು ವಾಲಿಪುತ್ರ ಅಂಗದನ ರಾಜ್ಯಾಭಿಷೇಕ ಮಾಡುವುದು ಅಂದರೆ ಹಿಂದುತ್ವ !
೫. ಬಲವಂತದಿಂದ ರಾಜ್ಯವನ್ನು ಕಬಳಿಸುವುದಲ್ಲ, ‘ಕೃಣ್ವಂತೋ ವಿಶ್ವಮಾರ್ಯಮ್’ ಮಾಡುವ ಹಿಂದುತ್ವ !
ಯಾವುದೇ ದೇಶದ ಮೇಲೆ ಬಲಪೂರ್ವಕ ಆಕ್ರಮಣ ಮಾಡಿ ಅಲ್ಲಿನ ಜನರನ್ನು ಗುಲಾಮರನ್ನಾಗಿಸುವುದು, ಖಡ್ಗದ ಬಲದ ಮೇಲೆ ಮತಾಂತರಿಸುವುದು, ಅವರ ಶ್ರದ್ಧಾಸ್ಥಾನಗಳನ್ನು ಧ್ವಂಸ ಮಾಡುವುದು ಇಂತಹ ಅಮಾನವೀಯ ಮತ್ತು ಅನಾಗರಿಕದ ಬಗ್ಗೆ ಹಿಂದುತ್ವವು ಎಂದಿಗೂ ಕಲ್ಪನೆಯನ್ನೇ ಮಾಡಿರಲಿಲ್ಲ ಮತ್ತು ಇಂದಿಗೂ ಮಾಡುವುದಿಲ್ಲ; ಆದುದರಿಂದಲೇ ನೂರಾರು ದೇಶಗಳಲ್ಲಿ ಇಂದಿಗೂ ಹಿಂದು ಸಂಸ್ಕೃತಿಯ ಮತ್ತು ಸಭ್ಯತೆಯ ಹೆಜ್ಜೆಗಳ ಗುರುತುಗಳು ಸಾವಿರಾರು ಸಂಖ್ಯೆಗಳಲ್ಲಿ ಕಂಡು ಬರುತ್ತವೆ. ಹಿಂದೂಗಳು ತಮ್ಮ ಧರ್ಮ ಮತ್ತು ಸಂಸ್ಕೃತಿಯ ಪ್ರಚಾರ ಮತ್ತು ಪ್ರಸಾರವನ್ನು ಎಂದಿಗೂ ಶಸ್ತ್ರ ಅಥವಾ ಆಮಿಷಗಳ ಬಲದ ಮೇಲೆ ಮಾಡಿಲ್ಲ. ‘ಕೃಣ್ವಂತೋ ವಿಶ್ವಮಾರ್ಯಮ್’ ಅಂದರೆ ‘ಇಡೀ ಜಗತ್ತನ್ನು ಆರ್ಯರನ್ನಾಗಿ ಮಾಡುವುದು, ಅಂದರೆ ಸಭ್ಯ, ಸುಸಂಸ್ಕೃತ ಮತ್ತು ಉನ್ನತರನ್ನಾಗಿ ಮಾಡುವುದು’, ಇದುವೇ ಅನಾದಿ ಕಾಲದಿಂದ ಹಿಂದೂಗಳ ಧ್ಯೇಯವಾಗಿತ್ತು ಮತ್ತು ಇಂದಿಗೂ ಇದೇ ಧ್ಯೇಯವಿದೆ.
ಹಿಂದೂಗಳು ಎಂದಿಗೂ ಇತರರ ರಾಜ್ಯದ ಆಸೆಯನ್ನು ಇಟ್ಟುಕೊಂಡಿಲ್ಲ. ಭಗವಾನ ಶ್ರೀಕೃಷ್ಣನು ಮಥುರೆಯ ರಾಜ ಮತ್ತು ತನ್ನ ಸ್ವಂತ ಸೋದರಮಾವನಾಗಿದ್ದ ಕಂಸನನ್ನು ವಧಿಸಿದ್ದನು; ಏಕೆಂದರೆ ಕಂಸನು ಅತ್ಯಾಚಾರಿಯಾಗಿದ್ದನು. ಅವನು ತನ್ನ ತಂದೆಯನ್ನು ಸೆರೆಮನೆಯಲ್ಲಿ ನೂಕಿ ರಾಜ್ಯವನ್ನು ವಶಪಡಿಸಿಕೊಂಡಿದ್ದನು. ತನ್ನ ಸ್ವಂತ ಸಹೋದರಿಯ ೬ ಪುತ್ರರನ್ನು ಜನಿಸಿದ ತಕ್ಷಣ ಕಲ್ಲಿನ ಮೇಲೆ ಅಪ್ಪಳಿಸಿ ಕೊಂದು ಹಾಕಿದ್ದನು. ಇಂತಹ ದುಷ್ಟ ಕಂಸನನ್ನು ವಧಿಸಿ ಮಥುರೆಯ ರಾಜಸಿಂಹಾಸನದ ಮೇಲೆ ತಾನು ಕುಳಿತುಕೊಳ್ಳದೇ ಕಂಸನ ತಂದೆ ಮಹಾರಾಜ ಉಗ್ರಸೇನರನ್ನು ಕುಳ್ಳಿರಿಸಿದನು. ಮಗಧದ ಕ್ರೂರ ರಾಜ ಕಂಸನ ಮಾವನಾದ ಜರಾಸಂಧನನ್ನು ವಧಿಸಿ ಅವನ ಪುತ್ರ ಸಹದೇವನನ್ನು ಮಗಧದ ರಾಜನನ್ನಾಗಿ ಮಾಡಿದನು. ಇದು ಹಿಂದುತ್ವ. ಪ್ರಾಗ್‌ಜ್ಯೋತಿಷಪುರದ ನರಾಧಮಿ ರಾಜ ನರಕಾಸುರ ನನ್ನು ವಧಿಸಿ ಅವನ ಪುತ್ರ ಭಗದತ್ತನ ಕೈಗೆ ರಾಜ್ಯಾಡಳಿತವನ್ನು ಒಪ್ಪಿಸಿದನು. ಪ್ರಾಚೀನ ಕಾಲದಿಂದಲೂ ‘ಇತರರ ಭೂ ಭಾಗದ ಮೋಹವನ್ನು ಇಟ್ಟುಕೊಳ್ಳದಿರುವುದು’ ಇದು ಹಿಂದುತ್ವದ ಒಂದು ಅವಿಚ್ಚಿನ್ನ ಲಕ್ಷಣವಾಗಿದೆ. ಭಾರತದ ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರು ತಮ್ಮ ಒಂದು ಕವಿತೆಯಲ್ಲಿ ಹಿಂದುತ್ವದ ಬಗೆಗಿನ ಮೇಲಿನ ಲಕ್ಷಣ ಗಳ ಪ್ರಕಟೀಕರಣವನ್ನು ಬಹಳ ಪ್ರಭಾವಪೂರ್ಣ ರೀತಿಯಲ್ಲಿ ಮತ್ತು ಒಳ್ಳೆಯ ರೀತಿಯಿಂದ ಮಾಡಿದ್ದಾರೆ. ತಮ್ಮ ಕವಿತೆಯಲ್ಲಿ ವಾಜಪೇಯಿಯವರು ಮುಂದಿನಂತೆ ಹೇಳುತ್ತಾರೆ’
ರಾಮ ಔರ ಗೋಪಾಲ ಕೆ ನಾಮಪರ ಮೈನೆ ಕಬ್ ಅತ್ಯಾಚಾರ ಕಿಯಾ |
ಅಖಿಲ ವಿಶ್ವ ಕೊ ಹಿಂದು ಕರನೆ ಮೈನೆ ಕಬ್ ನರಸಂಹಾರ ಕಿಯಾ |
ಕೋಯಿ ಬತಲಾವೆ ಮುಝಸೆ ಕಾಬುಲ್ ಮೇ ಜಾಕರ ಮೈನೆ ಕಿತನಿ ಮಸ್ಜಿದೆಂ ತೊಡಿ |
ಭೂಭಾಗ ನಹಿಂ ಶತಕೋಟಿ ಹೃದಯ ಜಿತನೆ ಕಾ ಮೇರಾ ನಿಶ್ಚಯ |
ಹಿಂದು ತನ-ಮನ ಹಿಂದು ಜೀವನ ರಗ ರಗ ಹಿಂದು ಮೇರಾ ಪರಿಚಯ ||’
ಅರ್ಥ : ‘ರಾಮ ಮತ್ತು ಗೋಪಾಲನ ಹೆಸರಿನಲ್ಲಿ ನಾನ್ಯಾವಾಗ ದೌರ್ಜನ್ಯ ಎಸಗಿದೆ ?
ಇಡೀ ಜಗತ್ತನ್ನು ಹಿಂದು ಮಾಡಲು ನಾನ್ಯಾವಾಗ ನರಸಂಹಾರ ಮಾಡಿದೆ ?
ನಾನು ಕಾಬುಲ್‌ಗೆ ಹೋಗಿ ಎಷ್ಟು ಮಸೀದಿಗಳನ್ನು ಒಡೆದೆ ?
ಭೂಮಿಯಲ್ಲ ಶತಕೋಟಿ ಹೃದಯಗಳನ್ನು ಗೆಲ್ಲುವ ನನ್ನ ನಿಶ್ಚಯ |
ಹಿಂದೂ ತನು-ಮನ ಹಿಂದೂ ಜೀವನ, ಕಣ ಕಣದಲ್ಲಿ ಹಿಂದೂವೇ ನನ್ನ ಪರಿಚಯ ||’
ಈ ಕವಿತೆಯ ವಾಸ್ತವಿಕತೆಯನ್ನು ಯಾರು ನಿರಾಕರಿಸಬಹುದು ?
೬. ಸ್ತ್ರೀಯರನ್ನು ಸನ್ಮಾನಿಸುವ ಹಿಂದುತ್ವ !
ಸ್ತ್ರೀಯರನ್ನು ಸನ್ಮಾನಿಸುವುದೆಂದರೆ ಹಿಂದುತ್ವ. ಸ್ತ್ರೀಯ ರನ್ನು ಲೂಟಿಯ ಸಂಪತ್ತು ಎಂದು ತಿಳಿದುಕೊಂಡು ಅವರ ಮೇಲೆ ಬಲಾತ್ಕಾರ (ಅತ್ಯಾಚಾರ) ಮಾಡುವುದು, ಅವರನ್ನು ಜನಾನಖಾನೆಯಲ್ಲಿ ಕೂಡಿಹಾಕುವುದು, ಅವರನ್ನು ಗುಲಾಮರೆಂದು ಮಾರಾಟ ಮಾಡುವುದು, ಇದು ಹಿಂದುತ್ವದ ಕಲ್ಪನೆಯಲ್ಲಿ ಎಂದಿಗೂ ಇರಲಿಲ್ಲ ಮತ್ತು ಅದು ತಿಳಿದಾಗಲೂ ಹಿಂದುತ್ವವು ಅದನ್ನು ಸ್ವೀಕರಿಸಲಿಲ್ಲ ಮತ್ತು ಇಂದಿಗೂ ಮಾಡುವುದಿಲ್ಲ. ನರಕಾಸುರನ ಸೆರೆಮನೆಯಿಂದ ೧೬ ಸಾವಿರ ಸ್ತ್ರೀಯರನ್ನು ಬಿಡುಗಡೆ ಮಾಡಿ ಶ್ರೀಕೃಷ್ಣನು ಅವರನ್ನು ತನ್ನ ಪತ್ನಿಯರೆಂದು ಸ್ವೀಕರಿಸಿ ಗೌರವಿಸಿದನು. ಕಲ್ಯಾಣದ ಪ್ರಾಂತಾಧಿಕಾರಿಯನ್ನು (ಸುಭೇದಾರ) ಸೋಲಿಸಿದ ನಂತರ ಛತ್ರಪತಿ ಶಿವಾಜಿ ಮಹಾರಾಜರ ಓರ್ವ ಸರದಾರನಾದ ಆಬಾಜಿ ಸೊನದೇವನು ಸುಭೇದಾರರ ಯುವ ಮತ್ತು ಸುಂದರ ಸೊಸೆಯನ್ನು ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಸಭೆಯಲ್ಲಿ ಉಡುಗೊರೆಯೆಂದು ಹಾಜರ ಪಡಿಸಿದನು. ಆಬಾಜಿಗೆ, ‘ಈ ಉಡುಗೊರೆಯನ್ನು ನೋಡಿ ರಾಜ ಪ್ರಸನ್ನಗೊಂಡು, ನನಗೆ ಹೇರಳ ಬಹುಮಾನ ನೀಡುವರು’, ಎಂದು ಅನಿಸಿತು. ಆದರೆ ಅಲ್ಲಿ ವಿರುದ್ಧವೇ ಆಯಿತು. ಮಹಾರಾಜರು ಅವನಿಗೆ ಚೆನ್ನಾಗಿ ಛೀಮಾರಿ ಹಾಕಿದರು. ‘ಇನ್ನು ಮುಂದೆ ಯಾವುದೇ ನಮ್ಮ ಅಥವಾ ಪರಕೀಯ ಸ್ತ್ರೀಯ ಅವಮಾನವಾಗಬಾರದು. ಅವಳ ಕೂದಲು ಸಹ ಕೊಂಕಾಗಬಾರದು’, ಎಂಬ ಕಟ್ಟೆಚ್ಚೆರಿಕೆ ಯನ್ನು ಮಹಾರಾಜರು ತಮ್ಮ ಎಲ್ಲ ಸೈನ್ಯ ಮತ್ತು ಸೈನಿಕರಿಗೆ ನೀಡಿದರು. ಪ್ರಾಂತಾಧಿಕಾರಿಯ ಸೊಸೆಗೆ ಖಣ ಮತ್ತು ಶ್ರೀಫಲದಿಂದ ಉಡಿ ತುಂಬಿ ಅವಳನ್ನು ಗೌರವದಿಂದ ಅವಳ ಪತಿಯ ಬಳಿಗೆ ಕಳುಹಿಸಿಕೊಟ್ಟರು. ಹಿಂದೂ ಪುರುಷರು ಯಾವಾಗಲೂ ಸ್ತ್ರೀಯರಿಗೆ ತಮಗೆ ಸರಿಸಾಟಿ ಮತ್ತು ಅನೇಕ ಬಾರಿ ತಮಗಿಂತಲೂ ಮೇಲಿನ ಸ್ಥಾನವನ್ನು ನೀಡಿದ್ದಾರೆ. ಪ್ರಾಚೀನ ಕಾಲದಿಂದಲೂ ಈ ದೇಶದಲ್ಲಿ ಸ್ತ್ರೀಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅವರ ಸಾಮರ್ಥ್ಯಕ್ಕೆ ಮತ್ತು ಪ್ರತಿಭೆಯನ್ನು ಬುರಖಾದ ಬಂಧನದಲ್ಲಿ ಬಂಧಿಸುವ ಕಲ್ಪನೆ ಸಹ ಎಂದಿಗೂ ಹಿಂದೂಗಳ ಮನಸ್ಸನ್ನು ಸ್ಪರ್ಶಿಸಿಲ್ಲ. ಶಕ್ತಿ ಇಲ್ಲದಿದ್ದರೆ ಪುರುಷರ ಅಸ್ತಿತ್ವ ಮಾತ್ರವಲ್ಲ, ದೇವತೆಗಳ ಅಸ್ತಿತ್ವವನ್ನೂ ಸಹ ಹಿಂದೂ ಧರ್ಮದಲ್ಲಿ ಅಪೂರ್ಣವೆಂದು ನಂಬಲಾಗಿದೆ. ಶ್ರೀವಿಷ್ಣು ಎಂದ ಕೂಡಲೇ ಲಕ್ಷ್ಮೀ, ಶ್ರೀಕೃಷ್ಣ ಎಂದ ಕೂಡಲೇ ರುಕ್ಮಿಣಿ, ಶ್ರೀರಾಮ ಎಂದ ಕೂಡಲೇ ಸೀತೆ, ಶಿವ ಎಂದ ಕೂಡಲೇ ಪಾರ್ವತಿ ಇವರ ಚಿತ್ರಗಳು ಕಣ್ಣೆದುರು ಬರುತ್ತವೆ. ಪ್ರಾಚೀನ ಕಾಲದಲ್ಲಿ ಗಾರ್ಗಿ, ಮೈತ್ರೇಯಿ, ಲೋಪಾಮುದ್ರಾ, ಅನಸೂಯಾ, ಅರುಂಧತಿ ಈ ವಿದ್ವತ್ ಸ್ತ್ರೀಯರು ತಮ್ಮ ವಿದ್ವತ್‌ಗಾಗಿ ಪ್ರಖ್ಯಾತರಾಗಿದ್ದರು. ಅಹಲ್ಯಾ, ದ್ರೌಪದಿ, ಸೀತೆ, ತಾರಾ ಮತ್ತು ಮಂಡೋದರಿ ಈ ಪಂಚಕನ್ಯೆಯರನ್ನು ಪ್ರಾತಃಕಾಲ ಸ್ಮರಿಸುವುದು ಪುಣ್ಯಕರವೆಂದು ತಿಳಿಯಲಾಗುತ್ತದೆ. ಮಾತೆ ಜಿಜಾಬಾಯಿ, ಪುಣ್ಯಶ್ಲೋಕ ಅಹಿಲ್ಯಾಬಾಯಿ, ರಾಣಿ ಲಕ್ಷ್ಮೀಬಾಯಿ, ರಾಣಿ ಚೆನ್ನಮ್ಮಾ, ರಾಣಿ ದುರ್ಗಾವತಿ ಇಂತಹ ಎಷ್ಟೋ ಶೂರವೀರ ಸ್ತ್ರೀಯರ ಹೆಸರುಗಳು ಹಿಂದೂಗಳ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿವೆ. ಈಗಲೂ ಅನೇಕ ಹಿಂದೂ ಸ್ತ್ರೀಯರು ತಮ್ಮ ಸಾಮರ್ಥ್ಯದಿಂದ ದೇಶವಿದೇಶಗಳಲ್ಲಿ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಈ ರೀತಿ ಸ್ತ್ರೀಯರಿಗೆ ಸನ್ಮಾನ ಮತ್ತು ಸಮಾನ ಅವಕಾಶ ನೀಡುವುದೆಂದರೆ ಹಿಂದುತ್ವ ! – ಶ್ರೀ. ಶಂಕರ ಗೊ. ಪಾಂಡೆ, ಪುಸದ, ಯವತಮಾಳ.