ಭಾರತೀಯ ಸಂಸ್ಕೃತಿಯಲ್ಲಿ ಪುಷ್ಪಪೂಜೆ ಮತ್ತು ಅದ್ಭುತ ಅಲಂಕಾರ !

’ಓರ್ವ ವ್ಯಕ್ತಿಯು ಜಪಾನೀಯರ ಹೂವಿನ ಅಲಂಕಾರದ ಬಗ್ಗೆ ಪ್ರಶಂಶಿಸುತ್ತಾ ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿಯವರ ಬಳಿ ’ನಮ್ಮ ಭಾರತವು ಈ ವಿಷಯದಲ್ಲಿ ಯಾಕೆ ಹಿಂದುಳಿದಿದೆ ಅಥವಾ ಅಜ್ಞಾನಿಯಾಗಿದೆ ?’, ಎಂದು ಪ್ರಶ್ನಿಸಿದರು. ಈ ಕುರಿತು ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿ ಯವರು ನೀಡಿದ ಪರಿಪೂರ್ಣ ಮತ್ತು ಖಂಡತುಂಡ ಉತ್ತರದ ಮಾಹಿತಿಯನ್ನು ಮುಂದೆ ಕೊಡುತ್ತಿದ್ದೇವೆ.

೧. ಪುಷ್ಪಕಲೆಯು ಭಾರತೀಯ ಸಂಸ್ಕೃತಿಯ ೬೪ ಕಲೆಗಳಲ್ಲಿ ಒಂದು

”ಭಾರತವು ಅಧ್ಯಾತ್ಮವಾದಿಯಾಗಿದೆ ಎಂದು ಹೇಳುತ್ತೀರಿ. ಆದ್ದರಿಂದ ಇಲ್ಲಿ ಹಳ್ಳಿಗಾಡು ಮತ್ತು ಸೌಂದರ್ಯವೇ ಇಲ್ಲವಂತೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೂವುಗಳ ಬಗ್ಗೆ ನಿಜವಾಗಲೂ ಏನು ಬರೆಯಲಾಗಿದೆ ? ೬೪ ಕಲೆ ಗಳಿವೆಯಲ್ಲ ! ಅದರಲ್ಲಿನ ಒಂದು ಕಲೆಯೆಂದರೆ ಹೂವಿನ ಮಾಲೆಯನ್ನು ಪೋಣಿಸುವುದು. ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಪುರಾಣ ಇವೆಲ್ಲವುಗಳಲ್ಲಿ ಪುಷ್ಪಸ್ತರಣ, ಪುಷ್ಪಶಯ್ಯ, ಪುಷ್ಪಪ್ರಸಾಧನ, ಪುಷ್ಪಾಲಂಕಾರ ಇವುಗಳ ಉಲ್ಲೇಖವಿದೆ. ’ಶಯ್ಯಸ್ತರಣ’ ಮತ್ತು ’ಸಂಯೋಗ ಪುಷ್ಪಾದಿಗ್ರಂಥನ’ ಇವುಗಳ ವರ್ಣನೆಯು ಭರತನ ’ನಾಟ್ಯಶಾಸ್ತ್ರ’ದಲ್ಲಿದೆ. ಹಾಗೆಯೇ ಕೌಟಿಲ್ಯನ ಅರ್ಥಶಾಸ್ತ್ರ, ವಾತ್ಸ್ಯಾಯನದ ’ಕಾಮಸೂತ್ರ’ ಮತ್ತು ಭಾಗವತದಲ್ಲಿಯೂ ಇದೆ. ಹಳೆಯ ಧರ್ಮಗ್ರಂಥದಲ್ಲಿ ಹೂವುಗಳನ್ನು ಕಟ್ಟುವ ಬಗ್ಗೆ ವರ್ಣಿಸಲಾಗಿದೆ, ಅಂದರೆ ಹೂವು, ಎಲೆಗಳು, ಸಣ್ಣ ಕೊಂಬೆಗಳು, ಹಣ್ಣುಗಳು ಮುಂತಾದ ಹೂವು ಮತ್ತು ಎಲೆಗಳಿಂದ ಪೋಣಿಸಿದ ಆಕರ್ಷಕವಾದ ರಚನೆ, ಗ್ರೀಷ್ಮದಲ್ಲಿನ ಕೋಮಲ ಶಿರೀಷಪುಷ್ಪ, ಶರದ ಋತುವಿನಲ್ಲಿನ ನಿಲೋತ್ಪಲ, ಚಂದನವೃಕ್ಷ, ಅಶೋಕ ಪಲ್ಲವ, ಎಲೆಹೂವುಗಳ ತೋರಣಗಳು, ಹೂವುಗಳ ಹಂದರ, ಋತುಕಾಲೋದ್ಭವ ಹೂವುಗಳ ವರ್ಣನೆಯು ನಮ್ಮ ಎಲ್ಲ ಧಾರ್ಮಿಕ ಸಾಹಿತ್ಯಗಳಲ್ಲಿ ಎಷ್ಟೊಂದಿವೆ ಅಲ್ಲವೇ ? ಮಾವಿನ ಎಲೆಯ ತೋರಣಗಳು, ಅದರಲ್ಲಿ ಪೋಣಿಸಿದ ಸುಂದರ ಚೆಂಡುಹೂವುಗಳಿಲ್ಲದೇ ಯಾವುದೇ ಧಾರ್ಮಿಕ ಕಾರ್ಯ ನೆರವೇರುತ್ತದೆಯೇ ?

ಗುರುದೇವ ಡಾ. ಕಾಟೆಸ್ವಾಮೀಜಿ

೨. ದೇವರ ಪುಷ್ಪಾಲಂಕಾರದಲ್ಲಿನ ಕೆಲವು ನಿಯಮಗಳು

ಭಕ್ತರ ಮತ್ತು ಹೂವುಗಳ ನಡುವೆ ಉತ್ತಮವಾದ ಮಧುರ ಸಂಬಂಧವಿದೆ. ಭಕ್ತನು ವಿಲಕ್ಷಣ ಸಂವೇದನಾಶೀಲ ನಾಗಿರುತ್ತಾನೆ. ಹೂವಿನಲ್ಲಿ ಅವನು ದೇವರನ್ನು ಕಾಣುತ್ತಾನೆ. ಅದರಲ್ಲಿ ಅತ್ಯಂತ ಸೌಮ್ಯವಾದಂತಹ ಅವನ ಭಾವವಿರು ತ್ತದೆ. ದೇವರ ಪುಷ್ಪಾಲಂಕಾರದಲ್ಲಿ ಭಕ್ತನಿಗೆ ಮಾತ್ರ ಪ್ರವೇಶವಿರುತ್ತದೆ; ಏಕೆಂದರೆ ಅದಕ್ಕಾಗಿ ಕೆಲವು ನಿಯಮ ಗಳನ್ನು ಪಾಲಿಸಬೇಕಾಗುತ್ತದೆ. ಕೆಲವು ವಿಷಯಗಳನ್ನು ಕಲಿಯಬೇಕಾಗುತ್ತದೆ, ಕೆಲವು ತಂತ್ರಗಳನ್ನು ಕಾಪಾಡ ಬೇಕಾಗುತ್ತದೆ.

ಭಕ್ತಿಯ ತಂತ್ರ ಮತ್ತು ಅದರ ಕೆಲವು ನಿಯಮಗಳು ಮುಂದಿನಂತಿವೆ –

ಅ. ಸ್ನಾನ ಮಾಡದೇ ಹೂವುಗಳನ್ನು ಸ್ಪರ್ಶಿಸಬಾರದು.

ಆ. ಹೂವುಗಳನ್ನು ತರುವಾಗ ಹಗುರವಾಗಿ ಮತ್ತು ಗಿಡಕ್ಕೆ ನೋವಾಗದಂತೆ ಕೀಳಬೇಕು !

ಇ. ಉಗುರುಗಳಿಂದ ಹೂವುಗಳನ್ನು ಕೀಳಬಾರದು.

ಈ. ಬಾಡಿದ ಹೂವು ಮತ್ತು ಕೆಳಗೆ (ಭೂಮಿಯ ಮೇಲೆ) ಬಿದ್ದಿರುವ ಹೂವುಗಳು ಪೂಜೆಗೆ ಯೋಗ್ಯವಲ್ಲ.

ಉ. ಹೂವುಗಳನ್ನು ಸಂಗ್ರಹಿಸಿದ ನಂತರ ಅಲಂಕಾರವನ್ನು ಮಾಡುವ ಭಕ್ತರು ಸ್ನಾನ ಮಾಡಿ ಬರುತ್ತಾರೆ.

ಊ. ಹೂವುಗಳನ್ನು ಅಲಂಕರಿಸುವಾಗ ಯಾರೂ ಮೈ ತುರಿಸು ವುದು, ಕಣ್ಣು ಮತ್ತು ಮೂಗು ಒರೆಸುವುದು ಮಾಡಬಾರದು.

ಎ. ಮಾಲೆಯ ದಾರವನ್ನು ಬಾಯಿಯಲ್ಲಿಟ್ಟು ಹಲ್ಲಿನಿಂದ ಕತ್ತರಿಸಬಾರದು.

ಐ. ಸೂಜಿಯಲ್ಲಿ ದಾರವನ್ನು ಪೋಣಿಸುವಾಗ ಬಾಯಿಯಲ್ಲಿ  ಡಿಯಬಾರದು, ಈ ರೀತಿ ಅಸಹ್ಯವಾಗಿ ನಡೆದುಕೊಳ್ಳಬಾರದು; ಏಕೆಂದರೆ ಅದು ದೇವರಿಗಾಗಿ ಮಾಡುತ್ತಿರುವ ಅಲಂಕಾರವಾಗಿದೆ.

೩. ದೇವತೆಗಳಿಗೆ ಇಷ್ಟವಾಗುವ ಹೂವುಗಳು ಮತ್ತು ಅವುಗಳಿಂದ ಮಾಡುವ ಲಕ್ಷಾರ್ಚನೆ

ಪ್ರತಿಯೊಂದು ದೇವರಿಗೆ ಅರ್ಪಿಸುವ ಹೂವುಗಳು ಬೇರೆ ಬೇರೆ ಇರುತ್ತವೆ. ಲಕ್ಷ್ಮೀ-ವಿಷ್ಣು, ರಾಧಾ-ಕೃಷ್ಣ, ರಾಮ-ಸೀತಾ ಇವರಿಗೆ ಮಲ್ಲಿಗೆ, ಜಾಜಿಮಲ್ಲಿಗೆ, ಸೂಜಿಮಲ್ಲಿಗೆ, ಕಾಕಡಮಲ್ಲಿಗೆ, ಸುಗಂಧರಾಜ ಹೂವು ಇಂತಹ ಹೂವುಗಳು ಪ್ರಿಯವಾಗಿವೆ. ಗುಲಾಬಿ ಹೂವು ಇದು ದೇಶಿ ಹೂವು ಅಲ್ಲ. ಅದನ್ನು ವಿದೇಶದಿಂದ ತರಲಾಗಿದೆ. ಗಣಪತಿ ಮತ್ತು ದೇವಿ ಇವರಿಗೆ ಕೆಂಪು ಬಣ್ಣ ಪ್ರಿಯವಾಗಿದೆ. ಶಿವನಿಗೆ ಬಿಳಿಬಣ್ಣ ಪ್ರಿಯವಾಗಿದೆ. ಹೂವುಗಳಿಂದ ಲಕ್ಷಾರ್ಚನೆ ಮಾಡುವುದು ಸಹ ಭಾರತೀಯ ಪರಂಪರೆಯಾಗಿದೆ. ಗಣಪತಿಗೆ ಗರಿಕೆಗಳಿಂದ, ವಿಷ್ಣುವಿಗೆ ತುಳಸಿಯಿಂದ ಮತ್ತು ಶಿವನಿಗೆ ಬಿಲ್ವಪತ್ರದಿಂದ ಲಕ್ಷಾರ್ಚನೆ ಮಾಡುತ್ತಾರೆ. ದೇವತೆಗಳ ಸಹಸ್ರನಾಮಾವಳಿಯ ಪಠಣದಲ್ಲಿಯೂ ಆಯಾ ದೇವತೆಗಳ ಪ್ರಿಯವಾದ ಹೂವುಗಳಿಂದ ಸಹಸ್ರಾರ್ಚನೆಯಾಗುತ್ತದೆ. ಭಕ್ತರು ಹೂವು ತಂದ ನಂತರ ಅವುಗಳನ್ನು ನಿಧಾನವಾಗಿ ನೀರಿನಿಂದ ತೊಳೆಯುತ್ತಾರೆ. ಹೂವಿನ ಬುಟ್ಟಿಯಲ್ಲಿ ನೀರು ಸೋಸಲು ಇಡುತ್ತಾರೆ ನಂತರ ಮೃದು ರೇಷ್ಮೆಯ ವಸ್ತ್ರದಿಂದ ಒರೆಸುತ್ತಾರೆ.

೪. ವಿವಿಧ ದೇವಸ್ಥಾನಗಳಲ್ಲಿ ಆಚರಿಸಲಾಗುವ ಹೂವುಗಳ ವಿವಿಧ ಉತ್ಸವಗಳು

ಅ. ಶ್ರಾವಣಮಾಸದಲ್ಲಿ ಬಿದಿರಿನ ದೊಡ್ಡದೊಡ್ಡ ಬುಟ್ಟಿಗಳ ಮೇಲೆ ಹೂವುಗಳಿಂದ ರಂಗೋಲಿಯನ್ನು ಬಿಡಿಸುತ್ತಾರೆ. ಅದಕ್ಕೆ ಬಾರಾಡಿ ಗೌರ ಎಂದು ಕರೆಯುತ್ತಾರೆ ! ಶಂಕರನ ದೇವಸ್ಥಾನದಲ್ಲಿ ಈ ಗೌರವನ್ನು ಸ್ಥಾಪಿಸುತ್ತಾರೆ.

ಆ. ಕೃಷ್ಣ ಜನ್ಮಾಷ್ಟಮಿಯ ನಂತರ ಅನೇಕ ಸ್ಥಳಗಳಲ್ಲಿ ಬಾಲಕೃಷ್ಣನ ’ಪಲ್ಲಕ್ಕಿ (ತೂಗೂಯ್ಯಾಲೆ) ಉತ್ಸವ’ (ಡೊಲೋತ್ಸವ) ಪ್ರಾರಂಭವಾಗುತ್ತದೆ. ಭಗವಂತನನ್ನು ತೊಟ್ಟಿಲಲ್ಲಿರಿಸಿ ತೂಗುತ್ತಾರೆ; ಆದರೆ ಕನ್ಹಯ್ಯಾನ ಸುತ್ತಲೂ ಹೂವುಗಳು, ಎಲೆಗಳು ಮತ್ತು ಹಣ್ಣುಗಳಿಂದ ಅದೆಷ್ಟು ಅಲಂಕರಿಸಿದರೂ ಕಡಿಮೆಯೇ ಎನಿಸುತ್ತದೆ ! ಕೆಲವೊಮ್ಮೆ ಕೇವಲ ಎಳತಾದ ಎಲೆಗಳಿಂದ ಮಾಡಿದ ಅಚ್ಚಹಸಿರು ಅಲಂಕಾರ, ಕೆಲವೊಮ್ಮೆ ಬಣ್ಣಬಣ್ಣದ ನಾಜೂಕು ಮತ್ತು ದೊಡ್ಡದೊಡ್ಡ ಹೂವುಗಳಿಂದ ಮಾಡಿದ ಅಲಂಕಾರ, ಕೆಲವೊಮ್ಮೆ ಕೇವಲ ಹಣ್ಣುಗಳಿಂದ ಮಾಡಿದ ಅಲಂಕಾರ (ಲಿಂಬೆಹಣ್ಣಿನಿಂದ ಹಿಡಿದು ಕಲ್ಲಂಗಡಿ ಹಣ್ಣಿನವರೆಗೂ), ಕೆಲವೊಮ್ಮೆ ತರಕಾರಿಗಳಿಂದ ಮಾಡಿದ ಅಲಂಕಾರ ! ಈ ರೀತಿಯ ಉತ್ಸವಗಳು ಒಂದು ವಾರದ ವರೆಗೆ ನಡೆಯುತ್ತದೆ ಮತ್ತು ಬಾಲಕೃಷ್ಣನು ಅಲಂಕರಿಸಿದ ತೊಟ್ಟಿಲಿನ (ಉಯ್ಯಾಲೆಯ) ಮಧ್ಯಭಾಗದಲ್ಲಿ ಆಸೀನನಾಗಿ ಅಲಂಕಾರದ ದೈವಿ ಕಳೆಯನ್ನು ಹೆಚ್ಚಿಸುತ್ತಿರುತ್ತಾನೆ. ವೃಂದಾವನದಲ್ಲಿ ಪಲ್ಲಕ್ಕಿ ಉತ್ಸವದ ಸಮಯದಲ್ಲಿ ಅಕ್ಕಪಕ್ಕದ ಊರಿನಿಂದ ಟ್ರಕ್‌ ತುಂಬಾ ಹೂವುಗಳನ್ನು ತರುತ್ತಾರೆ. ಸಂಪೂರ್ಣ ದೇವಸ್ಥಾನವು ಹೂವುಗಳಿಂದಅಲಂಕೃತವಾಗುತ್ತದೆ ಮತ್ತು ಮುರಳಿ ಮನೋಹರನೂ ತನ್ನ ವಿವಿಧ ರೂಪಗಳಲ್ಲಿ ಹೂವುಗಳಿಂದ ಶೃಂಗರಿಸಲ್ಪಡುತ್ತಾನೆ.

ಇ. ದಕ್ಷಿಣದಲ್ಲಿರುವ ಶಿವ ಮಂದಿರದಲ್ಲಿ ಚಾತುರ್ಮಾಸದ ಅವಧಿಯಲ್ಲಿ ಪ್ರತಿದಿನ ಹೊಸ ಎಲೆಹೂವುಗಳಿಂದ ಮನ ಸೆಳೆಯುವ ಅಲಂಕಾರವಿರುತ್ತದೆ. ಶಿವರಾತ್ರಿಯಲ್ಲಿ ಶಿವನ ಸುತ್ತಲೂ ಬಾಳೆಕಾಯಿಗಳ ಕಂಬದ ದೀಪಮಾಲೆಗಳಿರುತ್ತವೆ. ಬಾಳೆಕಾಯಿಯ ಕಂಬವನ್ನು ಸುಲಿದು ಅದರ ಒಳಗಿನ ಬಿಳಿಶುಭ್ರವಾದ ತಿರುಳಿಗೆ ದೀಪಮಾಲೆಯ ಆಕಾರವನ್ನು ಕೊಡುತ್ತಾರೆ. ಅಮೃತಶಿಲೆಯಂತೆ ಕಾಣುವ ಶಿವನ ಮಂಟಪದ ಸುತ್ತಲೂ ಈ ಶುಭ್ರ ದೀಪಮಾಲೆಗಳಿಂದ ಕರ್ಪೂರಗೌರ-ಶಿವಮೂರ್ತಿಯ ಅದ್ಭುತ ದರ್ಶನವಾಗುತ್ತದೆ. ಶಿವಲಿಂಗದ ಸುತ್ತಲೂ ಬಿಲ್ವಪತ್ರ್ರೆ, ಧತ್ತೂರಿ, ಕಣಗಲೆ, ಅನಂತ ಇಂತಹ ಬಣ್ಣಬಣ್ಣದ ಹೂವುಗಳ ಮಾಲೆಯನ್ನು ಹಾಕುತ್ತಾರೆ. ಹೂವು ಗಳ ರಾಶಿಯಿಂದ ಆ ಶಿವನನ್ನು ಅಲಂಕರಿಸುತ್ತಾರೆ. ಎಲ್ಲಿ ಇಂತಹ ಭಕ್ತರ ಭಗವಂತನ ಮನಸ್ಸಿನ ಅಪೂರ್ವ ಅದ್ಭುತ ರಸಮಯ ಲೀಲೆ ಮತ್ತು ಎಲ್ಲಿ ಆ ಜಪಾನಿಯರ ನಿರ್ಜೀವ ಪುಷ್ಪರಚನೆ ! (ಆಧಾರ : ಮಾಸಿಕ ’ಘನಗರ್ಜಿತ’, ಸೆಪ್ಟೆಂಬರ್‌ ೨೦೨೩)