Diwali 2023 : ಅಭ್ಯಂಗಸ್ನಾನ (ಮಂಗಲ ಸ್ನಾನ)

ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ. ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳ ತುಲನೆ ಯಲ್ಲಿ ಶೇ. ೬ ರಷ್ಟು ಹೆಚ್ಚು ಸಾತ್ತ್ವಿಕತೆಯು ಸಿಗುತ್ತದೆ.

ಉದ್ವರ್ತನಂ ಕಫಹರಂ ಮೇದಸಃ ಪ್ರವಿಲಾಯನಮ್‌ |
ಸ್ಥಿರೀಕರಣಮಂಗಾನಾಂ ತ್ವಕ್ಪ್ರಸಾದಕರಂ ಪರಮ್‌ ||
– ಅಷ್ಟಾಂಗಹೃದಯ, ಸೂತ್ರಸ್ಥಾನ, ಅಧ್ಯಾಯ ೨, ಶ್ಲೋಕ ೧೪

ಅರ್ಥ : ಶರೀರಕ್ಕೆ ಉಟಣೆಯನ್ನು ಹಚ್ಚಿಕೊಳ್ಳುವುದ ರಿಂದ ಕಫ ಮತ್ತು ಕೊಬ್ಬು ದೂರವಾಗಿ ಶರೀರವು ಸುದೃಢವಾಗುತ್ತದೆ ಮತ್ತು ಚರ್ಮವು ಸ್ವಚ್ಛವಾಗುತ್ತದೆ. ಸುವಾಸಿತ ಎಣ್ಣೆ ಮತ್ತು ಉಟಣೆಗಳನ್ನು (ಉಟಣೆ ಎಂದರೆ ಆಯುರ್ವೇದೀಯವಾದ ನೈಸರ್ಗಿಕ ಘಟಕಗಳಿಂದ ತಯಾರಿಸಿದ ಚೂರ್ಣ) ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿರುತ್ತದೆ ಮತ್ತು ಅವು ಸಾತ್ತ್ವಿಕವಾಗಿರುತ್ತವೆ. ಅವುಗಳ ಸುವಾಸನೆಯೂ ಸಾತ್ತ್ವಿಕವಾಗಿರುತ್ತದೆ. ಅವುಗಳಲ್ಲಿ ವಾಯುಮಂಡಲದಲ್ಲಿನ ಸಾತ್ತ್ವಿಕತೆ ಯನ್ನು ಮತ್ತು ದೇವತೆಗಳ ಲಹರಿಗಳನ್ನು ಗ್ರಹಿಸಿಕೊಳ್ಳುವ ಕ್ಷಮತೆ ಯಿರುತ್ತದೆ. ಸುವಾಸಿತ ಎಣ್ಣೆ ಅಥವಾ ಉಟಣೆಯನ್ನು ಹಚ್ಚಿ ಸ್ನಾನ ಮಾಡುವುದರಿಂದ ಶರೀರದಲ್ಲಿನ ರಜ-ತಮ ಲಹರಿಗಳು ಕಡಿಮೆ ಯಾಗುತ್ತವೆ. ಹಾಗೆಯೇ ಸ್ಥೂಲ ಮತ್ತು ಸೂಕ್ಷ್ಮದೇಹದ ಸುತ್ತಲೂ ಇರುವ ತ್ರಾಸದಾಯಕ ಶಕ್ತಿಯ ಆವರಣವು ನಾಶವಾಗಿ ಶರೀರವು ಶುದ್ಧ ಹಾಗೂ ಸಾತ್ತ್ವಿಕವಾಗಲು ಸಹಾಯವಾಗುತ್ತದೆ. ಅಭ್ಯಂಗಸ್ನಾನದಿಂದ ರಜ-ತಮ ಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣವುಹೆಚ್ಚಾಗುತ್ತದೆ; ಇದರ ಪರಿಣಾಮವು ನಿತ್ಯದ ಸ್ನಾನದಿಂದ ಮೂರು ಗಂಟೆ ಉಳಿದರೆ ಅಭ್ಯಂಗಸ್ನಾನದ ಪ್ರಭಾವವು ನಾಲ್ಕರಿಂದ ಐದು ಗಂಟೆ ಉಳಿಯುತ್ತದೆ.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)