ಹೋಮಿಯೋಪಥಿ ‘ಉಪಚಾರ’ದ ಬಗ್ಗೆ ಮಾರ್ಗದರ್ಶಕ ಅಂಶಗಳು ಮತ್ತು ಇತರ ಪಥಿಗನುಸಾರ (ಪದ್ಧತಿಗನುಸಾರ) ಉಪಚಾರ ನಡೆಯುತ್ತಿದ್ದರೆ, ಏನು ಮಾಡಬೇಕು ?
ಇಂದಿನ ಒತ್ತಡಮಯ ಜೀವನದಲ್ಲಿ ಯಾರಿಗಾದರೂ ಮತ್ತು ಯಾವಾಗಲಾದರು ಯಾವುದೇ ಸೋಂಕಿನ ಕಾಯಿಲೆ ಅಥವಾ ಇತರ ಯಾವುದಾದರು ಕಾಯಿಲೆಯನ್ನು ಎದುರಿಸ ಬೇಕಾಗಬಹುದು. ಇಂತಹ ಪ್ರಸಂಗದಲ್ಲಿ ತಕ್ಷಣ ತಜ್ಞ ವೈದ್ಯಕೀಯ ಸಲಹೆ ಸಿಗಬಹುದು ಎಂದು ಹೇಳಲು ಆಗುವುದಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಕರಿಕೆ, ಭೇದಿ, ಮಲಬದ್ಧತೆ, ಅಮ್ಲಪಿತ್ತ (ಎಸಿಡಿಟಿ) ಇತ್ಯಾದಿ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಬರಬೇಕೆಂದು ಹೋಮಿಯೋಪಥಿ ಚಿಕಿತ್ಸಾಪದ್ಧತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಇದು ಸಾಮಾನ್ಯ ಜನರಿಗೆ ಬಹಳ ಉಪಯೋಗವಾಗಬಹುದು. ಈ ಉಪಾಯಪದ್ಧತಿಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ? ಹೋಮಿಯೋಪಥಿ ಔಷಧ ಗಳನ್ನು ಹೇಗೆ ತಯಾರಿಸಬೇಕು ? ಅವುಗಳನ್ನು ಹೇಗೆ ಜೋಪಾನ ಮಾಡಬೇಕು ? ಇತ್ಯಾದಿ ಅನೇಕ ವಿಷಯಗಳ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮ ಮುಂದಿಡುತ್ತಿದ್ದೇವೆ ೨೫/೦೨ ರ ಸಂಚಿಕೆಯಲ್ಲಿ ಪ್ರಕಾಶಿತವಾದ ಲೇಖನದಲ್ಲಿ ನಾವು ‘ನಮ್ಮ ಕಾಯಿಲೆಗೆ ಯಾವ ಯೋಗ್ಯ ಔಷಧವನ್ನು ಹುಡುಕಬೇಕು, ಕೆಲವು ಕಾಯಿಲೆಗಳ ವಿಷಯದಲ್ಲಿ ಆರಂಭದಲ್ಲಿ ಲಕ್ಷಣಗಳ ತೀವ್ರತೆ ಕಡಿಮೆ ಮಾಡುವ ಔಷಧಗಳನ್ನು ತೆಗೆದುಕೊಳ್ಳ ಬೇಕಾಗುವುದು, ಔಷಧಗಳನ್ನು ಸಿದ್ಧಪಡಿಸುವ ಪದ್ಧತಿ ಮತ್ತು ಔಷಧದ ಪರಿಣಾಮವನ್ನು ಹೇಗೆ ಗುರುತಿಸುವುದು ? ಈ ವಿಷಯದ ಮಾಹಿತಿಯನ್ನು ಓದಿದೆವು.
ಇಂದು ನಾವು ಲೇಖನದ ಮುಂದಿನ ಭಾಗವನ್ನು ನೋಡೋಣ (ಭಾಗ ೫)
೫. ಹೋಮಿಯೋಪಥಿ ‘ಸ್ವಉಪಚಾರ’ದ ವಿಷಯದಲ್ಲಿ ಮಾರ್ಗದರ್ಶಕ ಅಂಶಗಳು
೫ ಆ ೧೨. ಔಷಧಗಳನ್ನು ಎಷ್ಟು ದಿನ ತೆಗೆದುಕೊಳ್ಳಬೇಕು ? : ಹೋಮಿಯೋಪಥಿಯಲ್ಲಿ ‘ಇಷ್ಟೊಂದು ದಿನ ಔಷಧ ತೆಗೆದು ಕೊಳ್ಳಬೇಕು’, ಎಂಬ ನಿಯಮವಿಲ್ಲ. ಔಷಧ ಪ್ರಾರಂಭಿಸಿದ ನಂತರ ೧-೨ ದಿನಗಳಲ್ಲಿ ಆರಾಮವೆನಿಸಿದರೆ ಅಥವಾ ಯಾವ ‘ಡೋಸ್’ನ (dose) ನಂತರ ಆರಾಮವೆನಿಸುತ್ತದೆಯೋ, ಆಗ ಆ ಔಷಧವನ್ನು ನಿಲ್ಲಿಸಬೇಕು. ಉದಾ. ಜ್ವರ ಇಳಿಯಿತು ಅಥವಾ ಭೇದಿ ನಿಂತಿತೆಂದರೆ, ಔಷಧವನ್ನು ನಿಲ್ಲಿಸಬೇಕು. ಕಾಯಿಲೆ ಹೊಸದಿದೆಯೋ ಅಥವಾ ತುಂಬಾ ಹಳೆಯದೋ ಇದರ ಮೇಲಿನಿಂದಲೂ ಔಷಧವನ್ನು ಎಷ್ಟು ದಿನ ತೆಗೆದುಕೊಳ್ಳ ಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಉದಾ. ಜ್ವರಕ್ಕೆ ಆರಂಭಿಸಿದ ಔಷಧದ ಪರಿಣಾಮ ಕೂಡಲೇ ಕಾಣಿಸುತ್ತದೆ. ಆದ್ದರಿಂದ ಜ್ವರ ಇಳಿದ ನಂತರ ಔಷಧವನ್ನು ನಿಲ್ಲಿಸಬೇಕು. ತದ್ವಿರುದ್ಧ ಸಂಧಿವಾತ, ಉಬ್ಬಸ, ಬೆನ್ನುನೋವಿನಂತಹ ಹಳೆಯ ಕಾಯಿಲೆಗಳು ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ನಾವು ನಮ್ಮ ಕಾಯಿಲೆಗೆ ಯೋಗ್ಯ ಔಷಧವನ್ನು ಕಂಡು ಹಿಡಿಯುವುದರಲ್ಲಿ ಯಶಸ್ವಿಯಾದರೆ, ಕಾಯಿಲೆ ಸಂಪೂರ್ಣ ಗುಣವಾಗುತ್ತದೆ. ಹಳೆಯ ಕಾಯಿಲೆ ಪುನಃ ಉಲ್ಬಣಿಸಿದರೆ ನಾವು ಇನ್ನೊಮ್ಮೆ ಯೋಗ್ಯ ಔಷಧವನ್ನು ಕಂಡು ಹಿಡಿದು ಅದನ್ನು ಸೇವಿಸಬೇಕು ಮತ್ತು ಅನಂತರ ಕಾಯಿಲೆ ಶೇ. ೫೦ ರಷ್ಟು ಕಡಿಮೆಯಾಯಿತೆಂದರೆ ಔಷಧವನ್ನು ನಿಲ್ಲಿಸಬೇಕು. ಒಂದು ವೇಳೆ ಸ್ವಲ್ಪ ಸಮಯದ ನಂತರ ಪುನಃ ತೊಂದರೆಯಾದರೆ ಹಿಂದಿನ ಆ ಔಷಧವನ್ನೇ ಪುನಃ ಆರಂಭಿಸಬೇಕು.
೫ ಆ ೧೩. ಔಷಧವನ್ನು ಬದಲಾಯಿಸುವ ವಿಚಾರವನ್ನು ಯಾವಾಗ ಮಾಡಬೇಕು ? : ಔಷಧ ಆರಂಭಿಸಿದ ನಂತರ ಏನಾದರೂ ಸಕಾರಾತ್ಮಕ ಬದಲಾವಣೆ ಆಗುವುದು ಅಪೇಕ್ಷಿತವಾಗಿದೆ. ಕಡಿಮೆ ಕಾಲಾವಧಿಗಾಗಿ ಬರುವ ಕಾಯಿಲೆಗಳು, ಉದಾ. ಜ್ವರ, ಭೇದಿ, ಇವುಗಳಲ್ಲಿ ಔಷಧ ಆರಂಭಿಸಿ ೧ ದಿನ ಕಳೆದರೂ ಸ್ವಲ್ಪವೂ ಕಡಿಮೆಯಾಗದಿದ್ದರೆ, ಈ ಔಷಧ ಜ್ವರದ ಮೇಲೆ ಪರಿಣಾಮ ಬೀರುವುದಿಲ್ಲ’, ಎಂದು ನಿರ್ಧರಿಸಬೇಕು. ಅನಂತರ ‘ಅಂಶ ಕ್ರ. ೫ ಆ ೧ ಮತ್ತು ೫ ಆ ೩’ (ಅನುಕ್ರಮವಾಗಿ ೨೫/೦೧ ಮತ್ತು ೨೫/೦೨ ನೇ ಸಂಚಿಕೆಯ ಕನ್ನಡ ‘ಸನಾತನ ಪ್ರಭಾತ’ದಲ್ಲಿ ಈ ಅಂಶಗಳನ್ನು ಪ್ರಕಟಿಸಲಾಗಿದೆ.) ಇವುಗಳಲ್ಲಿ ಹೇಳಿದಂತೆ ಎಲ್ಲ ಪ್ರಕ್ರಿಯೆಗಳನ್ನು ಪುನಃ ಮಾಡಿ ತಮ್ಮ ಕಾಯಿಲೆಯನ್ನು ಗುಣಪಡಿಸುವ ಔಷಧವನ್ನು ಕಂಡುಹಿಡಿಯಬೇಕು.
ತದ್ವಿರುದ್ಧ ಅನೇಕ ತಿಂಗಳುಗಳಿಂದ ಅಥವಾ ವರ್ಷಗಳಿಂದ ಇರುವ ಉಬ್ಬಸ (ಅಸ್ತಮಾ), ಸಂಧಿವಾತ (ಜಾಯಿಂಟ ಪೇನ್), ಸೊಂಟನೋವು, ಬೆನ್ನುನೋವು ಇತ್ಯಾದಿ ಹಳೆಯ ಕಾಯಿಲೆಗಳ ವಿಷಯದಲ್ಲಿ ಔಷಧವನ್ನು ತಕ್ಷಣ ಬದಲಾಯಿಸುವ ಹಾಗಿಲ್ಲ. ಇಂತಹ ಕಾಯಿಲೆಗಳಲ್ಲಿ ನಾವು ಯೋಗ್ಯ ಔಷಧಗಳನ್ನು ಕಂಡುಹಿಡಿದ ನಂತರ ಅದರಲ್ಲಿ ಪ್ರತಿಯೊಂದರಿಂದ ೪ ಮಾತ್ರೆಗಳನ್ನು ದಿನಕ್ಕೆರಡು ಸಲ (ಬೆಳಿಗ್ಗೆ ಮತ್ತು ಸಾಯಂಕಾಲ) ೧೫ ದಿನಗಳವರೆಗೆ ಸೇವಿಸಬೇಕು. ಅನಂತರ ತಮ್ಮ ಕಾಯಿಲೆಯ ನಿರೀಕ್ಷಣೆಯನ್ನು ಮಾಡಬೇಕು. ಕಾಯಿಲೆಯ ಲಕ್ಷಣಗಳು ಕಡಿಮೆಯಾಗಿದ್ದರೆ, ಇನ್ನಷ್ಟು ಸಮಯ ಕಾಯಬಹುದು. ಒಂದು ವೇಳೆ ತೊಂದರೆ ಪುನಃ ಉದ್ಭವಿಸದಿದ್ದರೆ, ಪುನಃ ಔಷಧ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಆದರೆ ತೊಂದರೆ ಪುನಃ ಆರಂಭವಾಯಿತು ಅಥವಾ ಕಡಿಮೆಯಾಗಿದೆ, ಆದರೆ ಪೂರ್ಣ ಗುಣವಾಗಿಲ್ಲ, ಇಂತಹ ಸಮಯದಲ್ಲಿ ಪುನಃ ೧೫ ದಿನ ಔಷಧವನ್ನು ಸೇವಿಸಿ ಪುನಃ ಮೊದಲಿನಂತೆಯೆ ನಿರೀಕ್ಷಣೆಯನ್ನು ಮಾಡಬೇಕು. ಒಟ್ಟು ಒಂದು ತಿಂಗಳು ಔಷಧ ತೆಗೆದುಕೊಂಡ ನಂತರವೂ ಆರಾಮವೆನಿಸದಿದ್ದರೆ, ಮತ್ತೆ ಮೇಲೆ ಹೇಳಿದಂತೆ ಔಷಧವನ್ನು ಕಂಡು ಹಿಡಿಯಬೇಕು; ಸಾಧ್ಯವಿದ್ದರೆ, ಹೋಮಿಯೋಪಥಿ ವೈದ್ಯರ ಸಲಹೆಯನ್ನು ಪಡೆಯಬೇಕು. ಹಳೆಯ ಕಾಯಿಲೆಗಳು ಗುಣವಾಗಲು ಬಹಳಷ್ಟು ಸಮಯ ಬೇಕಾಗುತ್ತದೆ; ಆದರೆ ಹೋಮಿಯೋಪಥಿ ಔಷಧದಿಂದ ಕಾಯಿಲೆಯ ತೀವ್ರತೆ ಕಡಿಮೆಯಾಗುತ್ತದೆ ಮತ್ತು ಮರುಕಳಿಸುವ ಅವಧಿಯ ಅಂತರ ಹೆಚ್ಚುತ್ತಾ ಹೋಗುತ್ತದೆ.
೫ ಆ ೧೪. ಕಾಯಿಲೆ ಗುಣವಾದ ನಂತರ ಬಾಕಿ ಉಳಿದ ಔಷಧವನ್ನು ಏನು ಮಾಡಬೇಕು ? : ಕಾಯಿಲೆ ಗುಣವಾಗಿದೆ, ಆದರೆ ಆ ಕಾಯಿಲೆಗೆ ಸಿದ್ಧಪಡಿಸಿದ ಔಷಧ ಬಾಕಿ ಇದ್ದರೆ, ಅದನ್ನು ಒಂದು ಪ್ಲಾಸ್ಟಿಕ್‌ನ ಲಕೋಟೆಯಲ್ಲಿ (ಚೀಲದಲ್ಲಿ) ಔಷಧದ ಹೆಸರಿನ ಪಟ್ಟಿ ಹಚ್ಚಿ ಆ ಬಾಟ್ಲಿಯನ್ನು ಇಡಬೇಕು. ಅನಂತರ ೬ ತಿಂಗಳು ಅಥವಾ ಒಂದು ವರ್ಷದ ನಂತರವೂ ಅಗತ್ಯ ಬಿದ್ದರೆ ಅದನ್ನು ನಾವು ಉಪಯೋಗಿಸಬಹುದು.
೫ ಆ ೧೫. ಹೋಮಿಯೋಪಥಿ ಔಷಧವನ್ನು ತಪ್ಪಿ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಏನು ಮಾಡಬೇಕು ? : ಒಂದು ವೇಳೆ ಸಣ್ಣ ಮಕ್ಕಳು ತಪ್ಪಿ ಹೋಮಿಯೋಪಥಿ ಔಷಧದ ಬಾಟ್ಲಿಯಲ್ಲಿನ ಎಲ್ಲ ಮಾತ್ರೆಗಳನ್ನು ತಿಂದರೂ, ಚಿಂತೆ ಮಾಡುವ ಅವಶ್ಯತೆಯಿಲ್ಲ. ನಾವು ಅವರಿಗೆ ಕಾಫಿ ಕುಡಿಸಿದರೆ ಔಷಧದ ಪರಿಣಾಮ ಹೋಗು ತ್ತದೆ. ಇದರ ಕಾರಣವೆಂದರೆ, ಹೋಮಿಯೋಪಥಿ ಔಷಧಕ್ಕೆ ಕಾಫಿ ‘ಹಾರಕ (antidote) ಪರಿಣಾಮ’ ನೀಡುವುದಾಗಿದೆ.
೫ ಆ ೧೬. ನಮ್ಮ ಲಕ್ಷಣಗಳನ್ನು ಹೋಲುವ ಹೋಮಿಯೋಪಥಿ ಔಷಧ ಸಿಗದೇ ಇದ್ದರೆ, ಏನು ಮಾಡಬೇಕು ? : ಒಂದು ವೇಳೆ ನಮ್ಮ ಕಾಯಿಲೆಯ ಲಕ್ಷಣಗಳನ್ನು ಹೋಲುವ ಔಷಧ ಸಿಗದೇ ಇದ್ದರೆ, ನಾವು ‘ಬಾರಾಕ್ಷಾರ (ಬಾಯೋಕೆಮಿಕ್) ಔಷಧ’ವನ್ನು ತೆಗೆದುಕೊಳ್ಳಬಹುದು. ಪ್ರತಿಯೊಂದು ಕಾಯಿಲೆಗೆ ಯಾವ ‘ಬಾರಾಕ್ಷಾರ ಔಷಧವನ್ನು’ ತೆಗೆದುಕೊಳ್ಳಬೇಕೆಂಬುದನ್ನು ಹೆಚ್ಚಿನ ಎಲ್ಲ ಕಾಯಿಲೆಗಳ ಪ್ರಕರಣದ ಕೊನೆಯಲ್ಲಿ ಕೊಡಲಾಗಿದೆ. ಕೆಲವು ಕಾಯಿಲೆಗಳಲ್ಲಿ, ಉದಾ. ‘ಮೈಮೇಲಿನ ಚರ್ಮ ಬೆಂದುಹೋಗುವುದು (ಸೀದು ಹೋಗುವುದು)’ ಇದರಲ್ಲಿ ನಾವು ಬೆಂದ ಚರ್ಮದ ಮೇಲೆ ಯಾವ ಹೋಮಿಯೋಪಥಿ ಔಷಧವನ್ನು (ಕ್ಯಾಂಥರಿಸ್ ವೆಸಿಕಾಟೋರಿಯಾ (Cantharis Vasicatoria) ಹಚ್ಚಬೇಕು, ಎಂಬುದನ್ನು ಕೊಟ್ಟಿರುವುದರಿಂದ ಆ ಪ್ರಕರಣದಲ್ಲಿ ಬಾರಾಕ್ಷಾರ ಔಷಧಗಳ ವಿಷಯವನ್ನು ಕೊಟ್ಟಿಲ್ಲ. ಬಾರಾಕ್ಷಾರ ಔಷಧಗಳ ವಿಷಯದ ವಿಸ್ತಾರವಾದ ಮಾಹಿತಿಯನ್ನು ಮುಂದೆ ಕೊಡಲಾಗುವುದು.
೬. ಬೇರೆ ಪಥಿಗಳ (ಪದ್ಧತಿಯ) ಔಷಧೋಪಚಾರ ನಡೆಯುತ್ತಿದ್ದರೆ ಏನು ಮಾಡಬೇಕು ?
ಹೋಮಿಯೋಪಥಿ ಔಷಧಗಳು ಊರ್ಜೆಯ ಸ್ತರದಲ್ಲಿ ಕಾರ್ಯವನ್ನು ಮಾಡುತ್ತವೆ. ಹೋಮಿಯೋಪಥಿ ಔಷಧಗಳ ಸಕ್ಕರೆಯ ಚಿಕ್ಕ ಚಿಕ್ಕ ಗುಳಿಗೆಗಳು ಕೇವಲ ಮೂಲ ಔಷಧದ ವಾಹಕವಾಗಿವೆ. ಆ ಗುಳಿಗೆಗಳೆಂದರೆ ಔಷಧವಲ್ಲ. ಆದುದರಿಂದಲೆ ಹೋಮಿಯೋಪಥಿಯ ಎಲ್ಲ ಔಷಧಗಳು ಒಂದೇ ರೀತಿ ಕಾಣಿಸುತ್ತವೆ. ಹೋಮಿಯೋಪಥಿ ಉಪಚಾರಪದ್ಧತಿ ನಿರ್ಮೂಲನ ತತ್ತ್ವವನ್ನು ಆಧರಿಸಿದೆ. ವ್ಯಕ್ತಿಯ ಅಸ್ತಿತ್ವದಲ್ಲಿ ಅಸಂತುಲನ ಮೂಡಿಸುವ ಶರೀರ ಮತ್ತು ಮನಸ್ಸಿನ (ನಕಾರಾತ್ಮಕ ವಿಚಾರ ಮತ್ತು ಭಾವನಾ ರೂಪಿ) ವಿಷಜನ್ಯ (toxic) ಘಟಕಗಳನ್ನು ನಿರ್ಮೂಲನ ಮಾಡಿ ಪುನಃ ಸಮತೋಲನವನ್ನು ಮಾಡುವುದು. ಆದುದರಿಂದ ಹೋಮಿಯೋಪಥಿ ಔಷಧಗಳು ಇತರ ಪಥಿಗಳ (ಉದಾ. ಅಲೋಪಥಿ, ನ್ಯಾಚರೋಪಥಿ ಇತ್ಯಾದಿ) ಔಷಧಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅದೇ ರೀತಿ ಇತರ ಔಷಧಗಳು ಹೋಮಿಯೋಪಥಿ ಔಷಧಗಳ ಕಾರ್ಯಕ್ಕೆ ಅಡ್ಡಿಪಡಿಸುವುದಿಲ್ಲ. ಆದ್ದರಿಂದ ಬೇರೆ ಪಥಿಯ ಔಷಧೋಪಚಾರ ನಡೆಯುತ್ತಿದ್ದರೂ ನಾವು ಹೋಮಿಯೋಪಥಿ ಉಪಚಾರವನ್ನು ಮಾಡಬಹುದು. ಹೋಮಿಯೋಪಥಿ ಉಪಚಾರ ಆರಂಭಿಸಿದಾಗ ಇತರ ಪಥಿಯ ಉಪಚಾರವನ್ನು ತಮ್ಮ ಮನಸ್ಸಿನಂತೆ ನಿಲ್ಲಿಸಬಾರದು. ಇತರ ಪಥಿಯ ಔಷಧ ಗಳನ್ನು ಕಡಿಮೆ ಮಾಡಲಿಕ್ಕಿದ್ದರೆ ಅಥವಾ ನಿಲ್ಲಿಸಲಿಕ್ಕಿದ್ದರೆ ಆಯಾ ಪಥಿಯ ತಜ್ಞರ ಸಲಹೆ ಪಡದೇ ಹಾಗೆ ಮಾಡಬೇಕು.
೭. ಮನೆಯಲ್ಲಿಡುವಂತಹ ಹೋಮಿಯೋಪಥಿ ಔಷಧಗಳು
೭ ಅ. ಮನೆಯಲ್ಲಿನ ಉಪಯೋಗಕ್ಕೆ ಹೋಮಿಯೋಪಥಿ ಔಷಧಗಳನ್ನು ಸಂಗ್ರಹಿಸಿಡುವ ಆವಶ್ಯಕತೆ ಏಕಿದೆ ? : ಕಡಿಮೆ ಕಾಲಾವಧಿಯ ಕಾಯಿಲೆಗಳು (acute illness) ಮತ್ತು ಗಾಯಗಳು ಯಾವುದೇ ಪೂರ್ವಸೂಚನೆ ಇಲ್ಲದೆ ಅನಿರೀಕ್ಷಿತವಾಗಿ ಉಂಟಾಗುತ್ತವೆ. ಆಗ ಆವಶ್ಯಕವಿರುವ ಔಷಧಗಳನ್ನು ಖರೀದಿಸುವುದು ಸಾಧ್ಯವಿಲ್ಲ ಅಥವಾ ಕಠಿಣವಾಗಿರುತ್ತದೆ. ಈ ದೃಷ್ಟಿಯಿಂದ ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸುವ ಔಷಧಗಳು ನಮ್ಮ ಸಂಗ್ರಹದಲ್ಲಿರುವುದು ಆವಶ್ಯಕವಾಗಿದೆ. ದೂರದ ಪ್ರವಾಸಕ್ಕೆ ಹೋಗುವಾಗ ಈ ಔಷಧಗಳನ್ನು ನಾವು ನಮ್ಮ ಜೊತೆಗೆ ತೆಗೆದುಕೊಂಡು ಹೋಗಬಹುದು. ಅಲೋಪಥಿಯಲ್ಲಿ ಯಾವುದಾದರೊಂದು ಕಾಯಿಲೆಗೆ ಸಾಮಾನ್ಯವಾಗಿ ಒಂದು ಅಥವಾ ೨-೩ ಸಾಮಾಯಿಕ ಔಷಧಗಳಿರುತ್ತವೆ. ಏಕೆಂದರೆ ಔಷಧಗಳನ್ನು ಕಾಯಿಲೆಗಳಿಗ ನುಸಾರ ಕೊಡಲಾಗುತ್ತದೆ. ಅದೇ ಔಷಧಗಳನ್ನು ಆ ರೀತಿಯ ಕಾಯಿಲೆಯ ಅನೇಕ ರೋಗಿಗಳಿಗೆ ನೀಡಲಾಗುತ್ತದೆ. ಹೋಮಿಯೋಪಥಿಯಲ್ಲಿ ಹಾಗಿರುವುದಿಲ್ಲ. ಈ ಚಿಕಿತ್ಸಾ ಪದ್ಧತಿಯಲ್ಲಿ ‘ರೋಗಿಯಲ್ಲಿ ಕಾಣಿಸುವ ಕಾಯಿಲೆಯ ಲಕ್ಷಣಗಳು ಆರೋಗ್ಯಶಾಲಿ ವ್ಯಕ್ತಿಗೆ ಯಾವ ಔಷಧವನ್ನು ನೀಡಿದಾಗ ಅದೇ ಲಕ್ಷಣಗಳು ನಿರ್ಮಾಣವಾಗುತ್ತವೆಯೋ’ ಆ ಔಷಧವನ್ನು ನೀಡಲಾಗುತ್ತದೆ. ಆದ್ದರಿಂದ ಒಂದೇ ಕಾಯಿಲೆ ಇರುವ ವಿವಿಧ ರೋಗಿಗಳಿಗೆ ಬೇರೆ ಬೇರೆ ಔಷಧಗಳಿರುತ್ತವೆ. ನಮ್ಮ ಸಂಗ್ರಹದಲ್ಲಿ ಎಷ್ಟು ಹೆಚ್ಚು ಔಷಧಗಳಿರುತ್ತವೆಯೊ, ಅಷ್ಟು ಹೆಚ್ಚು ಕಾಯಿಲೆಗಳಿಗೆ ನಾವು ಮನೆಯಲ್ಲಿಯೇ ಉಪಚಾರ ಮಾಡಿಕೊಳ್ಳಬಹುದು.
‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ !’ ಎಂಬ ಮುಂಬರುವ ಗ್ರಂಥದಿಂದ ಆಯ್ದ ಭಾಗಗಳನ್ನು ಪ್ರತಿ ವಾರ ಲೇಖನದ ರೂಪದಲ್ಲಿ ಪ್ರಸಿದ್ಧಪಡಿಸ ಲಾಗುವುದು. ಸ್ವಉಪಚಾರ ಮಾಡುವ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣ ದಾರರು ಈ ಲೇಖನವನ್ನು ಜೋಪಾನ ಮಾಡಿಟ್ಟುಕೊಳ್ಳಬೇಕು. |
ಸಂಕಲನಕಾರರು : ಹೋಮಿಯೋಪಥಿ ವೈದ್ಯರು ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. ಸೌ. ಸಂಗೀತಾ