ವೃಂದಾವನದಲ್ಲಿ ಶ್ರೀಕೃಷ್ಣನು (ಶ್ರೀಬಾಂಕೆ ಬಿಹಾರಿ) ಮಾಡಿದ ಲೀಲೆ

೬ ಸೆಪ್ಟಂಬರ್‌ ೨೦೨೩ ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಇದೆ. ಆ ನಿಮಿತ್ತ…..

೧. ಅರ್ಚಕನು ಭಕ್ತಿಭಾವದಿಂದ ಪೂಜೆಯನ್ನು ಮಾಡುತ್ತಿರುವುದರಿಂದ ಅವನು ರಾತ್ರಿಯ ಸಮಯದಲ್ಲಿ ಇಟ್ಟಿದ ನೈವೇದ್ಯವನ್ನು ಶ್ರೀಬಾಂಕೆಬಿಹಾರಿಜಿಯವರು (ಶ್ರೀಕೃಷ್ಣನು) ಪ್ರತಿದಿನ ಸ್ವೀಕರಿಸುವುದು : ‘ಬಹಳ ಹಿಂದಿನ ಕಥೆಯಾಗಿದೆ. ವೃಂದಾವನದಲ್ಲಿ ಶ್ರೀ ಬಾಂಕೆಬಿಹಾರಿಯ (ಶ್ರೀಕೃಷ್ಣನ) ದೇವಸ್ಥಾನದ ಅರ್ಚಕನು ಪ್ರತಿದಿನ ಅತ್ಯಂತ ಭಕ್ತಿಭಾವದಿಂದ ಪೂಜೆಯನ್ನು ಮಾಡುತ್ತಿದ್ದನು. ಅವನು ಪ್ರತಿದಿನ ಕೃಷ್ಣನ ಆರತಿಯನ್ನು ಮಾಡಿ ನೈವೇದ್ಯವನ್ನು ತೋರಿಸಿ ಅವನ ಮಲಗುವ ವ್ಯವಸ್ಥೆಯನ್ನು ಮಾಡುತ್ತಿದ್ದನು. ಅವನು ಪ್ರತಿದಿನ ರಾತ್ರಿ ಕೃಷ್ಣನ ಮಂಚದ ಹತ್ತಿರ ನಿಯಮಿತವಾಗಿ ೪ ಲಾಡುಗಳನ್ನು ಇಡುತ್ತಿದ್ದನು. ಆ ಅರ್ಚಕನಲ್ಲಿ ‘ರಾತ್ರಿ ದೇವರಿಗೆ ಹಸಿವಾದರೆ ಅವನು ಎದ್ದು ಲಾಡನ್ನು ತಿನ್ನಬಹುದು’, ಎಂಬ ಭಾವವಿರುತ್ತಿತ್ತು. ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ತೆರೆದ ತಕ್ಷಣ ಅವನಿಗೆ ಮಂಚದ ಮೇಲೆ ಪ್ರಸಾದ ಹರಡಿದ್ದು ಕಾಣಿಸುತ್ತಿತ್ತು. ಆದ್ದರಿಂದ ಅವನು ಅದೇ ಭಾವದಿಂದ ಪ್ರತಿದಿನ ಭಕ್ತಿಭಾವದಿಂದ ಲಾಡನ್ನು ಇಡುತ್ತಿದ್ದನು.

೨. ಒಮ್ಮೆ ದೇವಸ್ಥಾನದಲ್ಲಿ ಅರ್ಚಕನು ಕೃಷ್ಣನಿಗೆ ಲಾಡುಗಳ ನೈವೇದ್ಯವನ್ನು ಇಡಲು ಮರೆಯುವುದು ಮತ್ತು ಬಾಲ ರೂಪದಲ್ಲಿನ ಶ್ರೀಕೃಷ್ಣನು ಯಾವ ಅಂಗಡಿಯಿಂದ ದೇವಸ್ಥಾನಕ್ಕೆ ಲಾಡುಗಳು ಬರುತ್ತಿದ್ದವೋ, ಅವನ ಬಳಿ ಹೋಗಿ ನಾಲ್ಕು ಲಾಡುಗಳನ್ನು ಬೇಡುವುದು : ಒಮ್ಮೆ ರಾತ್ರಿ ಅರ್ಚಕನು ಕೃಷ್ಣನ ಮಲಗುವ ಸಿದ್ಧತೆಯನ್ನು ಮಾಡಿದನು; ಆದರೆ ಅವನು ಕೃಷ್ಣನಿಗಾಗಿ ಲಾಡುಗಳನ್ನಿಡಲು ಮರೆತನು. ಅವನು ದೇವಸ್ಥಾನದ ಬಾಗಿಲನ್ನು ಮುಚ್ಚಿ ಮನೆಗೆ ಹೊರಟು ಹೋದನು. ರಾತ್ರಿ ಸುಮಾರು ೧-೨ ಗಂಟೆಗೆ ಯಾವ ಅಂಗಡಿಯಿಂದ ದೇವಸ್ಥಾನಕ್ಕೆ ಲಾಡು ಬರುತ್ತಿದ್ದವೋ, ಆ ಅಂಗಡಿಯು ತೆರೆದಿತ್ತು. ಅಂಗಡಿಯವನು ಅಂಗಡಿಯನ್ನು ಮುಚ್ಚುವಷ್ಟರಲ್ಲಿ ಒಂದು ಚಿಕ್ಕ ಹುಡುಗನು ಅಲ್ಲಿ ಬಂದನು ಮತ್ತು ”ಅಪ್ಪಾ, ನನಗೆ ಬೂಂದಿಯ ಲಾಡು ಬೇಕು” ಎಂದು ಅಂಗಡಿಯ ಮಾಲೀಕನಲ್ಲಿ ಕೇಳಿದನು. ಅಂಗಡಿಯವನು, ”ಮಗು, ಲಾಡುಗಳು ಮುಗಿದಿವೆ ಮತ್ತು ನಾನೂ ಈಗ ಅಂಗಡಿ ಯನ್ನು ಮುಚ್ಚಿ ಹೋಗುತ್ತಿದ್ದೇನೆ” ಎಂದು ಹೇಳಿದನು. ಆ ಸಮಯದಲ್ಲಿ ಆ ಚಿಕ್ಕ ಬಾಲಕನು, ”ಒಳಗೆ ಹೋಗಿ ನೋಡಿ. ನಾಲ್ಕು ಲಾಡುಗಳಿವೆ” ಎಂದು ಹೇಳಿದನು. ಮಗು ಹಠ ಮಾಡುತ್ತಿರುವುದರಿಂದ ಅಂಗಡಿಯವನು ಒಳಗೆ ಹೋದನು. ಆಗ ಅವನಿಗೆ ಅಲ್ಲಿ ೪ ಲಾಡುಗಳು ಕಾಣಿಸಿದವು; ಏಕೆಂದರೆ ಇಂದು ಅವನು ದೇವಸ್ಥಾನದಲ್ಲಿ ಲಾಡುಗಳನ್ನು ಕಳಿಸಿರಲೇ ಇಲ್ಲ.

೩. ಆ ಮಗುವು ಅಂಗಡಿಯವನಿಗೆ ಲಾಡುಗಳ ಬೆಲೆಯೆಂದು ಹಣದ ಬದಲು ತನ್ನ ಕೈ ಚಿನ್ನದ ಕಡಗ ಕೊಡುವುದು : ಅಂಗಡಿಯವನು, ”ನನಗೆ ಈ ಲಾಡುಗಳ ಹಣವನ್ನು ಕೊಡು” ಎಂದು ಹೇಳಿದನು. ಅದಕ್ಕೆ ಆ ಚಿಕ್ಕ ಬಾಲಕನು, ”ನನ್ನ ಬಳಿ ಹಣವಿಲ್ಲ” ಎಂದು ಹೇಳಿ ತಕ್ಷಣ ಅವನು ತನ್ನ ಕೈಯಲ್ಲಿನ ಚಿನ್ನದ ಕಡಗವನ್ನು ತೆಗೆದು ಅಂಗಡಿಯವನಿಗೆ ಕೊಟ್ಟನು. ಅದಕ್ಕೆ ಅಂಗಡಿಯವನು, ”ಮಗು ಹಣ ಇಲ್ಲದಿದ್ದರೆ ಇರಲಿ. ನಿನ್ನ ತಂದೆಗೆ ಹೇಳು. ನಾಳೆ ನಾನು ಅವರಿಂದ ಹಣವನ್ನು ತೆಗೆದುಕೊಳ್ಳುವೆನು” ಎಂದು ಹೇಳಿದನು. ಆದರೆ ಆ ಬಾಲಕನು ಅವನ ಮಾತು ಕೇಳದೇ ಕೈಯಲ್ಲಿನ ಚಿನ್ನದ ಕಡಗವನ್ನು ಅಂಗಡಿಯಲ್ಲಿ ಇಟ್ಟು ಹೋದನು. ಬೆಳಗ್ಗೆ ಅರ್ಚಕನು ದೇವಸ್ಥಾನದ ಬಾಗಿಲನ್ನು ತೆರೆದ ತಕ್ಷಣ ಅವನಿಗೆ ಶ್ರೀಕೃಷ್ಣನ ವಿಗ್ರಹದ ಕೈಯಲ್ಲಿ ಕಡಗ ಇಲ್ಲದಿರುವುದು ಗಮನಕ್ಕೆ ಬಂದಿತು. ಅವನಿಗೆ ‘ಕಳ್ಳನು ಕದ್ದನು’, ಎಂದು ಹೇಳುವುದಾದರೆ ‘ಕೇವಲ ಕಡಗವನ್ನೇ ಏಕೆ ಕದ್ದನು ?’, ಎಂಬ ಪ್ರಶ್ನೆ ಮೂಡಿತು. ಸ್ವಲ್ಪ ಸಮಯದ ನಂತರ ಈ ಸುದ್ದಿಯು ದೇವಸ್ಥಾನದಲ್ಲಿ ಮತ್ತು ಹೊರಗೆ ಎಲ್ಲೆಡೆ ಹರಡಿತು.

೪. ಭಕ್ತಿಯಲ್ಲಿ ಮಗ್ನನಾಗಿರುವ ಭಕ್ತನು ಯಾವುದಾದರೊಂದು ಸೇವೆಯನ್ನು ಮಾಡಲು ಮರೆತರೆ, ದೇವರು ಸ್ವತಃ ಆ ಸೇವೆಯನ್ನು ಮಾಡಿಸಿಕೊಳ್ಳುವನು : ಆ ಅಂಗಡಿಯವನಿಗೆ ಈ ಸುದ್ದಿಯು ತಿಳಿದಾಗ ಅವನಿಗೆ ರಾತ್ರಿಯ ಪ್ರಸಂಗದ ನೆನಪಾಯಿತು. ಅವನು ಅಂಗಡಿಗೆ ಹೋಗಿ ತನ್ನಲ್ಲಿದ್ದ ಕಡಗವನ್ನು ಹುಡುಕಿದನು. ಅವನು ಆ ಅರ್ಚಕನಿಗೆ ತೋರಿಸಿ ರಾತ್ರಿ ಘಟಿಸಿದುದನ್ನೆಲ್ಲ ವಿವರಿಸಿದನು. ಆ ಸಮಯದಲ್ಲಿ ಅರ್ಚಕನು ರಾತ್ರಿ ದೇವರಿಗಾಗಿ ಲಾಡುಗಳನ್ನಿಡಲು ಮರೆತಿರುವುದು ಗಮನಕ್ಕೆ ಬಂದಿತು ಮತ್ತು ‘ಆದುದರಿಂದ ಶ್ರೀಕೃಷ್ಣನು ಸ್ವತಃ ಲಾಡುಗಳನ್ನು ತೆಗೆದುಕೊಳ್ಳಲು ಬಂದಿದ್ದನು’, ಎಂಬುದು ಗಮನಕ್ಕೆ ಬಂದಿತು. ತಾತ್ಪರ್ಯ : ಭಕ್ತಿಯಲ್ಲಿ ಮಗ್ನನಾಗಿರುವ ಭಕ್ತನು ಯಾವುದಾದರೊಂದು ಸೇವೆಯನ್ನು ಮಾಡಲು ಮರೆತರೆ, ದೇವರು ಸ್ವತಃ ಆ ಸೇವೆಯನ್ನು ಪೂರ್ಣ ಮಾಡಿಸಿಕೊಳ್ಳುತ್ತಾನೆ.’

(ಆಧಾರ : ಅಜ್ಞಾತ)