ಸಂಸ್ಕೃತಿಯ ನಾಶದ ಸಂಚು !

ಆಗಸ್ಟ್ ೧೧ ರಂದು ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಲೋಕಸಭೆಯಲ್ಲಿ ಭಾರತೀಯ ದಂಡ ಸಂಹಿತೆ (‘ಐ.ಪಿ.ಸಿ.’) ಬದಲು ‘ಭಾರತೀಯ ನ್ಯಾಯ ಸಂಹಿತೆ’ ಮತ್ತು ‘ಭಾರತೀಯ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ’ (‘ಸಿ.ಆರ್.ಪಿ.ಸಿ.’) ಬದಲಾಗಿ ‘ಭಾರತೀಯ ನಾಗರಿಕ ಭದ್ರತಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಕಾಯಿದೆ’ (ಇಂಡಿಯನ್ ಎವಿಡೆನ್ಸ ಆಕ್ಟ) ಬದಲಾಗಿ ‘ಭಾರತೀಯ ಸಾಕ್ಷ್ಯ ಕಾಯಿದೆ’ ಈ ತಿದ್ದುಪಡಿಗಳನ್ನು ಮಾಡುವ ಮಸೂದೆಗಳನ್ನು ಮಂಡಿಸಿದರು. ಈ ಸುಧಾರಣೆ ಮಾಡುವಾಗ, ಈ ಕಾಯಿದೆಗಳಲ್ಲಿದ್ದ ಅನೇಕ ಕಾಲಬಾಹಿರವಾಗಿರುವ ಕಲಂಗಳನ್ನು ರದ್ದುಪಡಿಸಲಾಗಿದೆ. ಈ ಮೂರು ತಿದ್ದುಪಡಿ ಮಸೂದೆಗಳನ್ನು ಮುಂದಿನ ಕ್ರಮಕ್ಕಾಗಿ ಗೃಹ ಸಚಿವಾಲಯದ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ. ಭಾರತದಲ್ಲಿ ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ ಈ ಕಾನೂನುಗಳಲ್ಲಿ ವಾಸ್ತವದಲ್ಲಿ ಈ ಮೊದಲೇ ಸುಧಾರಣೆಯಾಗುವ ಆವಶ್ಯಕತೆಯಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಕಾನೂನುಗಳನ್ನು ತಿದ್ದುಪಡಿ ಮಾಡಲು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೆಲವು ಸಮಿತಿಗಳನ್ನು ಸಹ ರಚಿಸಲಾಗಿತ್ತು; ಆದರೆ ಈ ಕಾನೂನುಗಳನ್ನು ತಿದ್ದುಪಡಿ ಮಾಡಲು ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಕೇಂದ್ರ ಸರ್ಕಾರ ಮಂಡಿಸಿರುವ ಈ ತಿದ್ದುಪಡಿ ಮಸೂದೆಗಳು ಆ ನಿಟ್ಟಿನಲ್ಲಿ ಕೈಗೊಂಡ ಮಹತ್ವದ ಹೆಜ್ಜೆ ಎಂದೇ ಪರಿಗಣಿಸಬೇಕಾಗಿದೆ. ಈ ಹಿಂದೆಯೂ ಬ್ರಿಟಿಷರ ಕಾಲದ ಕಾನೂನುಗಳಲ್ಲಿ ಸುಧಾರಣೆ ಮಾಡಲು ಕೆಲವು ತಿದ್ದುಪಡಿ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಮತ್ತು ಅವು ಅಂಗೀಕಾರಗೊಂಡಿದ್ದವು. ಆದರೆ ಭಾರತದಲ್ಲಿ ಬ್ರಿಟಿಷರ ಕಾಲದ ಇನ್ನೂ ಹಲವು ಕಾನೂನುಗಳು ಅಸ್ತಿತ್ವದಲ್ಲಿವೆ. ಈ ತಿದ್ದುಪಡಿ ಮಸೂದೆಯನ್ನು ಮಂಡಿಸುವಾಗ ಗೃಹ ಸಚಿವ ಶಾ ಅವರು ‘ಇನ್ನು ಮುಂದೆ ಭಾರತೀಯ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಕಾನೂನಿಗೆ ತಿದ್ದುಪಡಿ ತರಲಾಗುವುದು ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಲಾಗುವುದು’ ಎಂದು ಮಹತ್ವದ ಹೇಳಿಕೆ ನೀಡಿದರು. ಇದರಿಂದ ಭವಿಷ್ಯದಲ್ಲಿ ಇನ್ನುಳಿದ ಬ್ರಿಟಿಷರ ಕಾಲದ ಕಾಯಿದೆಗಳಲ್ಲಿಯೂ ಸುಧಾರಣೆ ಮಾಡಲಾಗುವುದು’ ಎನ್ನುವ ಆಶಾಭಾವನೆಯಿದೆ. ಈ ದಿಶೆಯಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಹೆಜ್ಜೆ ಶ್ಲಾಘನೀಯವಾಗಿದೆ; ಆದರೆ ಇದನ್ನು ತ್ವರಿತವಾಗಿ ಕ್ರಮ ಜರುಗಿಸುವುದು ಆವಶ್ಯಕವಾಗಿದೆ.

ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲಿ ನ್ಯಾಯವ್ಯವಸ್ಥೆಯನ್ನು ಒಂದು ಮಹತ್ವದ ಆಧಾರಸ್ತಂಭವೆಂದು ನೋಡಲಾಗುತ್ತದೆ. ಆದರೆ ಸರಕಾರ ಮತ್ತು ಆಡಳಿತಗಳಿಂದ ನ್ಯಾಯ ದೊರಕದೇ ಇರುವ ಕಾರಣ ನಾಗರಿಕರು ಪ್ರಜಾಪ್ರಭುತ್ವದ ಈ ಆಧಾರಸ್ತಂಭದ ಕಡೆಗೆ ಹೋಗುತ್ತಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ನ್ಯಾಯಾಲಯಗಳಲ್ಲಿ ವರ್ಷಾನುವರ್ಷಗಳಿಂದ ಬಾಕಿ ಇರುವ ಪ್ರಕರಣಗಳು, ಹಳೆಯ ಬ್ರಿಟಿಷ್ ಕಾಲದ ಕಾನೂನುಗಳು ಮತ್ತು ವಿಶೇಷ ಹಾಗೂ ಮಹತ್ವದ್ದು ಎಂದರೆ ಸತ್ರ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದ ವರೆಗೆ ಬದಲಾವಣೆಗೊಳ್ಳುವ ತೀರ್ಪುಗಳು ಈ ಕಾರಣಗಳು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಿದೆ. ಈ ವಿಶ್ವಾಸಾರ್ಹತೆಯನ್ನು ಪುನಃ ನಿರ್ಮಿಸಬೇಕಾದರೆ, ಕಾನೂನು ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡದೇ ಬೇರೆ ಪರ್ಯಾಯವಿಲ್ಲ.

ವಿಫಲಗೊಂಡ ಕಾನೂನುಗಳು!

ಕಾನೂನಿನಿಂದ ಒಬ್ಬರಿಗೆ ನ್ಯಾಯ ಸಿಕ್ಕರೆ, ಮತ್ತೊಂದು ಮಗ್ಗುಲಿಗೆ, ಅದೇ ಕಾನೂನು ಅಪರಾಧಿಗಳಿಗೆ ರಕ್ಷಣೆಯನ್ನೂ ನೀಡುತ್ತದೆ. ಯಾವುದೇ ಸರ್ಕಾರಿ ಅಧಿಕಾರಿ ಭ್ರಷ್ಟಾಚಾರ ಎಸಗಿದರೆ, ಆರೋಪ ಸಾಬೀತಾಗುವವರೆಗೆ ಅವನಿಗೆ ಕಾನೂನಿನ ರಕ್ಷಣೆ ನೀಡಲಾಗುತ್ತದೆ. ಅಧಿಕಾರಿಯ ಮೇಲೆ ೬ ತಿಂಗಳವರೆಗೆ ಅಮಾನತುಗೊಳಿಸುವ ಕ್ರಮ ಕೈಕೊಳ್ಳಬಹುದು; ಆದರೆ ಅನೇಕ ಬಾರಿ ಲಂಚವನ್ನು ತೆಗೆದುಕೊಳ್ಳುವಾಗ, ಅದನ್ನು ಮೂರನೇ ವ್ಯಕ್ತಿಯಿಂದ ಸ್ವೀಕರಿಸಲಾಗುತ್ತದೆ. ಅಂತಹ ಪ್ರಕರಣದಲ್ಲಿ, ಈ ಅಧಿಕಾರಿಗಳ ವಿರುದ್ಧದ ಸಾಕ್ಷ್ಯವು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಇದರಿಂದ ಈ ಭ್ರಷ್ಟ ಅಧಿಕಾರಿಗಳು ಪುನಃ ಅದೇ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಾರೆ. ಇದರಲ್ಲಿ ಪರಿಸ್ಥಿತಿಗೆ ಪೂರಕವಾಗಿರುವ ಪುರಾವೆಗಳನ್ನು ಸಹ ಪರಿಗಣಿಸುವುದು ಆವಶ್ಯಕವಾಗಿದೆ. ಅದರಂತೆ, ಕಾನೂನಿನಲ್ಲಿ ಆವಶ್ಯಕವಿರುವ ಬದಲಾವಣೆಗಳನ್ನು ಮಾಡುವುದು ಅವಶ್ಯಕವಿದೆ. ಕಾನೂನಿನಲ್ಲಿರುವ ಇಂತಹ ಮತ್ತು ಇತರೆ ಕೆಲವು ಲೋಪದೋಷಗಳ ಕಾರಣದಿಂದ ದೇಶದಲ್ಲಿರುವ ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ದೊಡ್ಡ ವೈಫಲ್ಯಕ್ಕೆ ಕಾರಣವಾಗಿವೆ. ಅದರಿಂದಾಗಿ ಭ್ರಷ್ಟರಿಗೆ ಕಾನೂನಿನ ಭಯ ಇಲ್ಲದಂತಾಗಿದೆ. ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳ ನಡೆಸಿರುವ ದಾಳಿಗಳಲ್ಲಿ ಹೆಚ್ಚಿನ ಆರೋಪಿಗಳು ಸರ್ಕಾರಿ ಅಧಿಕಾರಿಗಳೇ ಆಗಿದ್ದಾರೆ ಮತ್ತು ಅದರಲ್ಲಿಯೂ ಪ್ರಥಮ ಶ್ರೇಣಿಯ (‘ಕ್ಲಾಸ್ ಒನ್’) ಅಧಿಕಾರಿಗಳು ಭಾಗಿಗಳಾಗಿರುವುದು ಗಮನಾರ್ಹವಾಗಿದೆ. ಇಂತಹವರ ಕೈಕೆಳಗೆ ನೂರಾರು ಸರಕಾರಿ ನೌಕರರು ಕೆಲಸ ಮಾಡುತ್ತಿರುತ್ತಾರೆ. ಅಧಿಕಾರಿಗಳು ಭ್ರಷ್ಟರಾಗಿದ್ದರಿಂದ ಇಡೀ ವ್ಯವಸ್ಥೆಯ ಮೇಲೆ ಅದರ ಪರಿಣಾಮವಾಗುತ್ತದೆ.
ಹೀಗಾಗಿ ಈಗ ಅಸ್ತಿತ್ವದಲ್ಲಿರುವ ಹಲವು ಕಾನೂನುಗಳಲ್ಲಿ ಬದಲಾವಣೆ ಮಾಡುವುದು ಆವಶ್ಯಕವಾಗಿದೆ. ಪ್ರಸ್ತುತ, ದೇಶಾದ್ಯಂತ ‘ಆನ್‌ಲೈನ್ ಗೇಮಿಂಗ್’ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಇದರಿಂದ ಕೆಲ ಯುವಕರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಬಯಲಾಗಿವೆ. ಇದರಲ್ಲಿ ಯುವ ಪೀಳಿಗೆಯು ತೊಡಗಿಸಿಕೊಂಡಿರುವ ರೀತಿಯನ್ನು ನೋಡಿದರೆ, ಭಾರತದ ಯುವ ಪೀಳಿಗೆಗೆ ಭವಿಷ್ಯದ ದೊಡ್ಡ ಅಪಾಯವಾಗಿದೆ. ಇದರ ವಿರುದ್ಧ ದೇಶಾದ್ಯಂತ ವಿರೋಧದ ವಾತಾವರಣ ಸೃಷ್ಟಿಯಾಗುತ್ತಿದೆ. ತಮಿಳುನಾಡಿನಲ್ಲಿ ಕೂಡ ‘ಆನ್‌ಲೈನ್ ಗೇಮಿಂಗ್’ ತಡೆಯಲು ಕಾನೂನನ್ನು ಜಾರಿಗೊಳಿಸಲಾಗಿದೆ; ಆದರೆ ಮೂಲತಃ, ಭಾರತದಲ್ಲಿ ಜೂಜಿನ ವಿರುದ್ಧ ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ, ‘ಆನ್‌ಲೈನ್ ಗೇಮಿಂಗ್’ಗೆ ‘ಕೌಶಲ್ಯ ಆಧಾರಿತ ಆಟ’ ಎಂಬ ಸ್ಥಾನಮಾನವನ್ನು ನೀಡಲಾಗಿದೆ. ಈ ಕಾರಣದಿಂದಾಗಿ, ಈಗಂತೂ ‘ಆನ್‌ಲೈನ್ ಗೇಮಿಂಗ್’ ವಿರುದ್ಧ ದಂಡನಾರ್ಹ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಆದುದರಿಂದ, ಈ ಕಾಯಿದೆಯಲ್ಲಿಯೂ ಬದಲಾವಣೆ ಮಾಡುವ ಅವಶ್ಯಕತೆಯಿದೆ. ಕಾನೂನಿನಲ್ಲಿ ಕಾಲಾನುಸಾರ ಬದಲಾವಣೆಗಳು ಆಗುವುದು ಅಗತ್ಯವಿರುವಂತೆ, ಸಂಸ್ಕೃತಿಗೆ ಅನುರೂಪವಾಗಿರುವುದು ಆವಶ್ಯಕವಿದೆ. ‘ಲಿವಿಂಗ್ ಇನ್ ರಿಲೇಶನ್ ಶಿಪ್’, ‘ಸಲಿಂಗಕಾಮ’ದಂತಹ ವಿಷಯಗಳನ್ನು ಬ್ರಿಟಿಷರ ಕಾಲದ ಕಾಯಿದೆಯನುಸಾರ ಮಾನ್ಯತೆ ನೀಡಲಾಗಿದೆ; ಏಕೆಂದರೆ ಯುರೋಪಿನಲ್ಲಿ ಈ ವಿಷಯಗಳನ್ನು ಅನೈತಿಕವೆಂದು ಪರಿಗಣಿಸಲಾಗುವುದಿಲ್ಲ. ಪಾಶ್ಚಿಮಾತ್ಯರು ಮಾಡಿರುವ ಇಂತಹ ಕಾನೂನುಗಳು ಭಾರತೀಯ ಸಂಸ್ಕೃತಿಯನ್ನು ಕೊಲ್ಲುತ್ತದೆ ಮತ್ತು ಇದರ ಲಾಭವನ್ನು ಪಡೆದುಕೊಂಡು, ಅಭಿವ್ಯಕ್ತಿ ಸ್ವಾತಂತ್ರ್ಯದ ಡಂಗುರ ಸಾರುತ್ತಾ ಪ್ರಗತಿಪರರು ಮತ್ತು ಸಾಮ್ಯವಾದಿ ವಿಚಾರಗಳ ಗುಂಪಿನವರು ಭಾರತೀಯ ಸಂಸ್ಕೃತಿಯನ್ನು ನಷ್ಟಗೊಳಿಸಲು ಈ ಕಾನೂನಿನ ಸಂರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ.

ಇದರಿಂದ ಬ್ರಿಟಿಶರ ಕಾಲದ ಕಾನೂನಿನ ಮಿತಿ ಕೇವಲ ನ್ಯಾಯ-ಅನ್ಯಾಯಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಬದಲಾಗಿ ಇದರ ಆಧಾರದಲ್ಲಿ ಸಾಮ್ಯವಾದಿಗಳು ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸುವ ಕಾರ್ಯ ಮಾಡಿದರು. ಆದುದರಿಂದ ಈ ಕಾನೂನಿನ ಲೋಪದೋಷಗಳನ್ನು ಗುರುತಿಸಿ, ದೇಶದಲ್ಲಿ ಭಾರತವಿರೋಧಿ ಶಕ್ತಿಗಳು ಪ್ರಬಲವಾಗಿವೆ. ಕಾನೂನು ತಿದ್ದುಪಡಿಯಿಂದ ಈ ದುರ್ಬಳಕೆ ನಿಲ್ಲಬಹುದು ಎಂದೇನಿಲ್ಲ, ಈ ದುರುಪಯೋಗಗಳಿಗೆ ಕಡಿವಾಣ ಹಾಕಿ, ನಿಜವಾದ ಅರ್ಥದಲ್ಲಿ ಸುರಾಜ್ಯವನ್ನು ತರಬೇಕಾಗಿದ್ದರೆ, ಕಾನೂನಿನಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲು ಕಾನೂನು ಜಾರಿಗೊಳಿಸುವವರು ಮತ್ತು ನ್ಯಾಯದಾನ ಮಾಡುವವರು ಧರ್ಮನಿಷ್ಠರಾಗಿರುವುದು ಆವಶ್ಯಕವಾಗಿದೆ. ಈ ಎರಡೂ ವಿಷಯಗಳು ಯಾವಾಗ ಸರಿಯಾಗುವುದೋ, ಆಗಲೇ ಸುರಾಜ್ಯ ಬರಲು ಸಮಯ ತಗಲುವುದಿಲ್ಲ . ಇದು ಖಂಡಿತ.

ಬ್ರಿಟಿಶ ಕಾಲದ ಕಾಯಿದೆಯಲ್ಲಿ ಸುಧಾರಣೆ ಮಾಡುವುದರೊಂದಿಗೆ ಕಾನೂನು ಜಾರಿಗೊಳಿಸುವವರು ಮತ್ತು ನ್ಯಾಯದಾನ ಮಾಡುವವರು ಧರ್ಮನಿಷ್ಠರಾಗಿರುವುದು ಆವಶ್ಯಕ