ಭಾರತೀಯರೇ, ಕ್ರಾಂತಿಕಾರರ ತ್ಯಾಗದ ಮೌಲ್ಯವನ್ನು ತಿಳಿಯಿರಿ !

ಆಗಸ್ಟ್ ೧೫ ರಂದು ಇರುವ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ !

ಕ್ರಾಂತಿಕಾರಿ ಬಟುಕೇಶ್ವರ ದತ್ತ ಇವರೊಂದಿಗೆ ಅವರ ಪತ್ನಿ ಮತ್ತು ಮಗಳು

ಬಟುಕೇಶ್ವರ ದತ್ತ ಇವರು ೧೯೨೯ ರಲ್ಲಿ ತಮ್ಮ ಸಹಚರ ಭಗತಸಿಂಹ ಇವರೊಂದಿಗೆ ಆಂಗ್ಲರ ‘ಸೆಂಟ್ರಲ್ ಲೆಜಿಸ್ಲೆಟಿವ್ ಎಸೆಂಬ್ಲಿ’ಯಲ್ಲಿ (ಸಂಸತ್ತಿನಲ್ಲಿ) ಬಾಂಬ್ ಎಸೆದು ‘ಇನ್-ಕಿಲಾಬ್ ಜಿಂದಾಬಾದ್’ ಎಂಬ ಘೋಷಣೆಯನ್ನು ನೀಡಿದ್ದರು. ಆದುದರಿಂದ ಬಟುಕೇಶ್ವರ ದತ್ತ ಇವರಿಗೆ ಆಜೀವನ ಕರಿನೀರಿನ (ಕಾಲಾ ಪಾನಿ) ಶಿಕ್ಷೆಯನ್ನು ಸ್ವೀಕರಿಸಬೇಕಾಯಿತು. ಭಾರತದ ಸ್ವಾತಂತ್ರ್ಯದಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿಭಾಯಿಸಿದವರಲ್ಲಿ ಬಟುಕೇಶ್ವರ ದತ್ತರು ಒಬ್ಬರಾಗಿದ್ದರು.

೧. ಸ್ವಾತಂತ್ರ್ಯ ನಂತರದ ದುರ್ಲಕ್ಷಿತ ಜೀವನ

ಸ್ವಾತಂತ್ರ್ಯದ ನಂತರ ಮತ್ತು ಸೆರೆಮನೆಯಿಂದ ಬಿಡುಗಡೆ ಯಾದ ನಂತರ ಬಟುಕೇಶ್ವರ ದತ್ತರು ಪಾಟಣಾ (ಬಿಹಾರ)ದಲ್ಲಿ ಇರತೊಡಗಿದರು. ಪಾಟಣಾದಲ್ಲಿ ವೈಯಕ್ತಿಕ ಬಸ್ ನಡೆಸುವ ದೃಷ್ಟಿಯಿಂದ ಅನುಮತಿ ಪಡೆಯಲು ಪಾಟಣಾದ ಆಯುಕ್ತರನ್ನು ಭೇಟಿಯಾದಾಗ ಅವರು ದತ್ತರಿಗೆ ಅವರು ‘ಬಟುಕೇಶ್ವರ ದತ್ತ’ರೇ ಆಗಿದ್ದಾರೆಂಬ ಬಗ್ಗೆ ಪುರಾವೆಯನ್ನು ಕೇಳಿದರು. ಸ್ವಾತಂತ್ರ್ಯದ ನಂತರ ಸರಕಾರದ ದುರ್ಲಕ್ಷದಿಂದಾಗಿ ಅವರಿಗೆ ಬಡತನದ ಜೀವನವನ್ನು ನಡೆಸಬೇಕಾಯಿತು. ಯಾವ ವ್ಯಕ್ತಿಯ ಐತಿಹಾಸಿಕ ಕಾರ್ಯಸಾಧನೆಯ ಪ್ರಸಂಗ ಮಕ್ಕಳ ಬಾಯಲ್ಲಿ ಇರಬೇಕಿತ್ತೋ, ಅವರಿಗೆ ಓರ್ವ ಸಾಧಾರಣ ‘ಪ್ರವಾಸಿ ಮಾರ್ಗದರ್ಶಕ’ (ಟುರಿಸ್ಟ್ ಗೈಡ್)ರಾಗಿ ಜೀವನವನ್ನು ನಡೆಸಬೇಕಾಯಿತು.

೨. ದತ್ತರು ಅನಾರೋಗ್ಯದಲ್ಲಿರುವಾಗ ಅವರೊಂದಿಗಿನ ವರ್ತನೆ

ಬಟುಕೇಶ್ವರ ದತ್ತ ಇವರ ಪತ್ನಿ ಶಾಲೆಯಲ್ಲಿ ನೌಕರಿ ಮಾಡುತ್ತಿದ್ದರು, ಅವರಿಂದಾಗಿ ಅವರ ಮನೆ ನಡೆಯುತ್ತಿತ್ತು. ಜೀವನದ ಅಂತ್ಯ ಸಮಯದಲ್ಲಿ ೧೯೬೪ ರಲ್ಲಿ ದತ್ತರು ಇದ್ದಕ್ಕಿದ್ದಂತೆಯೇ ಅನಾರೋಗ್ಯಪೀಡಿತರಾದುದರಿಂದ ಅವರನ್ನು ಗಂಭೀರ ಸ್ಥಿತಿಯಲ್ಲಿ ಪಾಟಣಾದ ಸರಕಾರಿ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು; ಆದರೆ ಅಲ್ಲಿ ಅವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿರಲಿಲ್ಲ. ಈ ಬಗ್ಗೆ ಅವರ ಒಬ್ಬ ಮಿತ್ರ ಚಮನಲಾಲ ಆಝಾದ ಇವರು ಒಂದು ಲೇಖನದಲ್ಲಿ, ‘ಬಟುಕೇಶ್ವರ ದತ್ತರಂತಹ ಕ್ರಾಂತಿಕಾರರು ಭಾರತದಲ್ಲಿ ಹುಟ್ಟಬೇಕಾಗಿತ್ತೇ ? ಪರಮಾತ್ಮನು ಇಷ್ಟು ಮಹಾನ ಶೂರವೀರರಿಗೆ ನಮ್ಮ ದೇಶದಲ್ಲಿ ಜನ್ಮ ನೀಡಿ ತಪ್ಪು ಮಾಡಿದ್ದಾನೆ’, ಎಂದು ಬರೆದಿದ್ದರು.

ಚಮನಲಾಲ ಇವರ ಕಟುವಾದ ಮತ್ತು ಕಹಿ ಸತ್ಯವನ್ನು ಬಹಿರಂಗಪಡಿಸುವ ಆ ಲೇಖನವನ್ನು ಓದಿ ಪಂಜಾಬ ಸರಕಾರವು ತನ್ನ ಸ್ವಂತ ಖರ್ಚಿನಲ್ಲಿ ದತ್ತರಿಗೆ ಚಿಕಿತ್ಸೆ ನೀಡುವ ಬಗ್ಗೆ ಪ್ರಸ್ತಾಪಿಸಿ ದಾಗ, ಬಿಹಾರ ಸರಕಾರವು ತಕ್ಷಣ ಕಾಳಜಿ ವಹಿಸಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅವರ ಚಿಕಿತ್ಸೆಯನ್ನು ಆರಂಭಿಸಿತು. ದತ್ತರ ಪ್ರಕೃತಿ ಗಂಭೀರವಾಗುತ್ತಾ ಹೋದಂತೆ, ೨೨.೧೧.೧೯೬೪ ರಂದು ಅವರನ್ನು ದೆಹಲಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಅರ್ಬುದರೋಗವಿದೆ ಎಂದು ಪತ್ತೆಯಾಯಿತು.

೩. ಭಗತಸಿಂಹ ಇವರ ಸಮಾಧಿಯ ಪಕ್ಕದಲ್ಲಿಯೇ ತಮ್ಮ ಅಂತ್ಯಸಂಸ್ಕಾರ ಮಾಡಬೇಕೆಂದು ವ್ಯಕ್ತಪಡಿಸಿದ ಇಚ್ಛೆ

ಆ ಸಮಯದಲ್ಲಿ ಪಂಜಾಬ್‌ನ ಮುಖ್ಯಮಂತ್ರಿ ರಾಮಕಿಶನ್ ಇವರು ದತ್ತರನ್ನು ಭೇಟಿಯಾಗಲು ಹೋಗಿದ್ದರು ಮತ್ತು ಅವರು, “ನಾನು ನಿಮಗೇನಾದರೂ ಕೊಡಲು ಇಚ್ಛಿಸುತ್ತೇನೆ. ನಿಮಗೇನೇ ಇಚ್ಛೆ ಇದ್ದರೂ, ಅದನ್ನು ತಿಳಿಸಿ”, ಎಂದು ಹೇಳಿದರು. ಅದಕ್ಕೆ ಕಣ್ಣುಗಳಲ್ಲಿ ನೀರು ತುಂಬಿಕೊಂಡ ದತ್ತರು, “ನನಗೇನೂ ಬೇಡ. ನನ್ನ ಅಂತ್ಯಸಂಸ್ಕಾರವು ನನ್ನ ಮಿತ್ರ ಭಗತಸಿಂಹ ಇವರ ಸಮಾಧಿಯ ಪಕ್ಕದಲ್ಲಿಯೇ ಆಗಬೇಕು, ಇದೇ ನನ್ನ ಕೊನೆಯ ಇಚ್ಛೆಯಾಗಿದೆ”, ಎಂದು ಹೇಳಿದರು.

೨೦ ಜುಲೈ ೧೯೬೫ ರ ರಾತ್ರಿ ೧ ಗಂಟೆ ೫೦ ನಿಮಿಷಕ್ಕೆ ದತ್ತರ ನಿಧನವಾಯಿತು. ಅವರ ಇಚ್ಛೆಗನುಸಾರ ‘ಭಾರತ-ಪಾಕ್ ಗಡಿಯ ಬಳಿಗೆ ಹುಸೈನಿವಾಲಾದಲ್ಲಿ ಭಗತಸಿಂಹ ಇವರ ಸಮಾಧಿಯ ಬಳಿ ಭಗತಸಿಂಹ, ರಾಜಗುರು ಮತ್ತು ಸುಖದೇವ ಇವರ ಸಮಾಧಿಯ ಬಳಿ ಅವರ ಅಂತ್ಯಸಂಸ್ಕಾರವನ್ನು ಮಾಡಲಾಯಿತು.

೪. ಸ್ವಾತಂತ್ರ್ಯದ ನಂತರ ಕ್ರಾಂತಿಕಾರರು ಅತಂತ್ರರಾಗಿ ಬದುಕಬೇಕಾಯಿತು, ಇದಕ್ಕೆ ಯಾರು ಹೊಣೆ ?

ಮೇಲಿನ ಪ್ರಸಂಗ ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಿರ ಬೇಕು ಮತ್ತು ನಾವು ಚಿಂತನೆ ಮಾಡಬೇಕಾದ ವಿಷಯವೆಂದರೆ, ಇಂತಹ ಅನೇಕ ಯುವಕರು ತಮ್ಮ ತಾರುಣ್ಯ, ಸುಖಸೌಲಭ್ಯ, ಕುಟುಂಬ ಇವುಗಳನ್ನು ತ್ಯಜಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನ ನೀಡಿದರು. ಅವರಲ್ಲಿನ ಕೆಲವು ಜನರಿಗೆ ಮಾತ್ರ ಅದೃಷ್ಟದಿಂದ ಸ್ವಾತಂತ್ರ್ಯವನ್ನು ನೋಡಲು ಸಿಕ್ಕಿತು. ಅಲ್ಲಿಯೂ ಅವರು ಕಷ್ಟವನ್ನು ಭೋಗಿಸಬೇಕಾಯಿತು, ಇದಕ್ಕೆ ಯಾರು ಹೊಣೆ ? ಅವರನ್ನು ನಾವು ಇಂದು ‘ಅಜ್ಞಾತ’ರು ಎಂದು ಹೇಳುತ್ತೇವೆ; ಆದರೆ ವಾರ್ತಾಪತ್ರಿಕೆಗಳ ಪುಟಗಳು ‘ಅವರು ಅಜ್ಞಾತರಲ್ಲ’, ಎಂಬುದರ ಸಾಕ್ಷಿಯನ್ನು ನೀಡುತ್ತವೆ. ಆ ಕಾಲದಲ್ಲಿ ಆಕಾಶವಾಣಿಯಲ್ಲಿ ಅವರ ಕಾರ್ಯಸಾಧನೆಯ ಸುದ್ದಿಗಳನ್ನು ಬಿತ್ತರಿಸಲಾಗುತ್ತಿತ್ತು. ನಗರಗಳಲ್ಲಿ ಅವರ ಭಿತ್ತಿಪತ್ರ ಗಳನ್ನು ಅಂಟಿಸಲಾಗುತ್ತಿತ್ತು. ಅವರ ಬಗ್ಗೆ ಗುಪ್ತ ಮಾಹಿತಿ ನೀಡುವವರಿಗೆ ದೊಡ್ಡ ಮೊತ್ತದ ಆಮಿಷವನ್ನು ತೋರಿಸಿ ಕಾರ್ಯಾಚರಣೆಯನ್ನು ಮಾಡಲಾಗುತ್ತಿತ್ತು, ಹೀಗಿರುವಾಗ ಅವರು ಅಜ್ಞಾತರಾಗಲು ಹೇಗೆ ಸಾಧ್ಯ ? ಭಗತಸಿಂಹ ಇವರ ಜೊತೆಗೆ ಬಾಂಬ್ ಎಸೆದ ಬಟುಕೇಶ್ವರ ದತ್ತ ಇವರಿಗೆ ಕರಿ ನೀರಿನ (ಕಾಲಾ ಪಾನಿ) ಶಿಕ್ಷೆ ಅಂದರೆ ಮೃತ್ಯುದಂಡಕ್ಕಿಂತಲೂ ಹೆಚ್ಚು ದುಃಖದಾಯಕ ಶಿಕ್ಷೆಯನ್ನು ವಿಧಿಸಲಾಗಿತ್ತು.

(ಆಧಾರ : ಶ್ರೀ. ಕುಮಾರ ಎಸ್. ಇವರ ಫೇಸಬುಕ್ ಪುಟಗಳಿಂದ)