ಪ್ರತಿಯೊಂದು ಕ್ಷೇತ್ರದಲ್ಲೂ ಕಲಿಯುವ ಸ್ಥಿತಿಯಲ್ಲಿದ್ದರೆ ಮಾತ್ರ ಭೌತಿಕ ಮತ್ತು ಆಧ್ಯಾತ್ಮಿಕ ಪ್ರಗತಿ ಸಾಧ್ಯ!
ಬ್ರಿಟಿಷರು ಜಗತ್ತಿನಲ್ಲಿ ಯಾವೆಲ್ಲ ದೇಶಗಳನ್ನು ಆಳಿದರೋ, ಅಲ್ಲಿಗೆ ಅವರು ತಮ್ಮ ಸಂಸ್ಕೃತಿ, ಸಂಪ್ರದಾಯ, ಕ್ರೀಡೆಗಳು ಇತ್ಯಾದಿಗಳನ್ನು ಕೊಂಡೊಯ್ದರು. ಆದರೆ ಕೆಲವು ದೇಶಗಳು ಆಂಗ್ಲರ ಆಳ್ವಿಕೆ ಹೋದ ಬಳಿಕವೂ ಅವರ ಕೆಲವು ವಿಷಯಗಳನ್ನು ಒಪ್ಪಿಕೊಂಡರೆ, ಅನೇಕರು ಅದನ್ನು ಆಂಗ್ಲರ ಅಸ್ಮಿತೆಯೆಂದು ತಿರಸ್ಕರಿಸಿದರು. ಆಂಗ್ಲರು ಪ್ರಸಾರ ಮಾಡಿದ ಕ್ರೀಡೆಗಳಲ್ಲಿ, ಕ್ರಿಕೆಟ್ ಅನ್ನು ಒಪ್ಪಿಕೊಂಡಿರುವ ಬೆರಳೆಣಿಕೆಯಷ್ಟು ದೇಶಗಳಲ್ಲಿ ಭಾರತವೂ ಒಂದು. ಮೊದಲು ಆಂಗ್ಲರ ಆಡಳಿತವಿರುವ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಕೀನ್ಯಾ ಮುಂತಾದ ದೇಶಗಳಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಇತರ ದೇಶಗಳಲ್ಲಿಯೂ ಕ್ರಿಕೆಟ್ ಆಡಲಾಗುತ್ತಿದ್ದರೂ, ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅನುಮತಿ ದೊರಕಿಲ್ಲ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡಲು ಅರ್ಹತೆ ಪಡೆದಿಲ್ಲ. ಭಾರತೀಯರು ಯಾವ ದೇಶಗಳಿಗೆ ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ವಲಸೆ ಹೋದರೋ, ಅಲ್ಲಿಗೂ ಅವರು ಕ್ರಿಕೆಟ್ ಅನ್ನು ಕೊಂಡೊಯ್ದರು. ಕೆಲವು ದಶಕಗಳ ಹಿಂದೆ, ಭಾರತದಲ್ಲಿ ಕ್ರಿಕೆಟ್ ಆಟಗಾರರಿಗೆ ಉತ್ತಮ ಸಂಭಾವನೆ ಸಿಗುತ್ತಿರಲಿಲ್ಲ; ಆದರೆ 1983 ರಲ್ಲಿ ಭಾರತ ವಿಶ್ವಕಪ್ ಗೆದ್ದ ನಂತರ, ಭಾರತೀಯ ಕ್ರಿಕೆಟ್ ಆಟಗಾರರಿಗೆ ಸುಗ್ಗಿಯ ದಿನಗಳು ಬಂದವು ಮತ್ತು ಇಂದು ಜಗತ್ತಿನಲ್ಲಿ ಭಾರತೀಯ ಕ್ರಿಕೆಟ್ ನಿಯಾಮಕ ಮಂಡಳಿ ಅಂದರೆ ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್ ಆಟಗಾರರು ಇತರ ದೇಶಗಳ ಕ್ರಿಕೆಟ್ ಮಂಡಳಿಗಳು ಮತ್ತು ಆಟಗಾರರಿಗಿಂತ ಶ್ರೀಮಂತರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ‘ಇಂಡಿಯನ್ ಪ್ರೀಮಿಯರ್ ಲೀಗ್’ (ಐಪಿಎಲ್) ನಂತಹ ಸ್ಪರ್ಧೆಯಿಂದ ಕ್ರಿಕೆಟ್ ಆಟಗಾರರಿಗೆ ಬಹಳ ಹಣ ಸಿಗುತ್ತಿದೆ. ಜಾಹೀರಾತುಗಳಿಂದಲೂ ಆಟಗಾರರಿಗೆ ದೊಡ್ಡ ಮೊತ್ತದ ಹಣ ಸಿಗುತ್ತದೆ. ಯಾವುದೇ ಉದ್ಯೋಗ ಅಥವಾ ವ್ಯಾಪಾರದಿಂದ ಹಣ ಗಳಿಸುವುದು ತಪ್ಪಲ್ಲ; ಆದರೆ ಯಾವಾಗ ಈ ಹಣದ ಬಗ್ಗೆ ಅಹಂಕಾರ ಉಂಟಾಗುತ್ತದೆಯೋ, ಆಗ ಆ ವ್ಯಕ್ತಿ, ಸಮಾಜ ಮತ್ತು ಮುಂದೆ ದೇಶಕ್ಕೆ ಹಾನಿಕರವಾಗುತ್ತದೆ. ಹಣವಷ್ಟೇ ಅಲ್ಲ, ಯಾವುದೇ ವಿಷಯದ ಅಹಂಕಾರವೂ ಹಾನಿಕರವೇ ಆಗಿರುತ್ತದೆ. ಅಹಂ ನಷ್ಟವಾದ ಬಳಿಕವೇ ದೇವರು ಸಿಗುತ್ತಾನೆ. ಇದೇ ಅಹಂಕಾರದ ಕುರಿತಾಗಿಯೇ ಭಾರತದ ಹಿರಿಯ ಕ್ರಿಕೆಟ್ ಆಟಗಾರರಾಗಿರುವ ಕಪಿಲ್ ದೇವ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. `ಭಾರತೀಯ ಕ್ರಿಕೆಟ್ ಆಟಗಾರರಿಗೆ ಪ್ರಸ್ತುತ ದೊಡ್ಡ ಮೊತ್ತವು ಸಿಗುತ್ತಿರುವುದರಿಂದ, ಅವರ ಅಹಂಕಾರ ಹೆಚ್ಚಾಗಿದೆ. ಅದರ ಪರಿಣಾಮ ಅವರ ಆಟದ ಮೇಲೆ ಮತ್ತು ಪರೋಕ್ಷವಾಗಿ ದೇಶದ ಮೇಲೆ ಆಗುತ್ತಿದೆ. ಅವರಿಂದಾಗಿ ದೇಶವು ಯಾವುದೇ ಸ್ಪರ್ಧೆಯನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ’, ಎಂದು ಅವರು ಹೇಳಿದ್ದಾರೆ. ‘ಈ ಆಟಗಾರರು ಹಿರಿಯರ ಅನುಭವದ ಪ್ರಯೋಜನ ಪಡೆಯುತ್ತಿಲ್ಲ. ಅವರು ಈ ಹಿರಿಯರ ಬಳಿ ಹೋಗಿ ತಮ್ಮ ಆಟದಲ್ಲಿರುವ ನ್ಯೂನತೆಗಳನ್ನು ತಿಳಿದುಕೊಂಡು ಅವುಗಳನ್ನು ದೂರಗೊಳಿಸಲು ವಿಚಾರಿಸಿ ಚರ್ಚಿಸುವುದಿಲ್ಲ’ ಎಂದೂ ದೇವ್ ಹೇಳಿದ್ದಾರೆ. ಇದರಿಂದ ಒಬ್ಬ ವ್ಯಕ್ತಿಯು ಎಷ್ಟೇ ದೊಡ್ಡವನಾಗಿದ್ದರೂ, ಎಷ್ಟೇ ಯಶಸ್ಸು ಮತ್ತು ಖ್ಯಾತಿಯನ್ನು ಪಡೆದಿದ್ದರೂ, ಅವನು ಯಾವಾಗಲೂ ಕಲಿಯುವ ಸ್ಥಿತಿಯಲ್ಲಿರಬೇಕು ಎನ್ನುವುದು ಗಮನಕ್ಕೆ ಬರುತ್ತದೆ. ಈ ಸ್ಥಿತಿಯಲ್ಲಿರುವುದರಿಂದ ಅಹಂಕಾರಕ್ಕೆ ಆಸ್ಪದವಿರುವುದಿಲ್ಲ ಮತ್ತು ನಮ್ರತೆಯಲ್ಲಿ ಇದ್ದು ಹೆಚ್ಚಿನ ಪ್ರಗತಿಯನ್ನು ಸಾಧಿಸಬಹುದು ಎನ್ನುವುದು ಗಮನಕ್ಕೆ ಬರುತ್ತದೆ. ಭಾರತೀಯ ಜನರು ಕ್ರಿಕೆಟ್ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಕ್ರಿಕೆಟ್‌ಗಾಗಿ ದೇಶದ ಜನರು ಸಾಕಷ್ಟು ಸಮಯವನ್ನು ವ್ಯಯಿಸುತ್ತಾರೆ; ಆದರೆ ಭಾರತಕ್ಕಾಗಿ ಆಡುವ ಆಟಗಾರರಲ್ಲಿ ಕಪಿಲ್ ದೇವ್ ಹೇಳುವಂತಹ ಅಹಂಕಾರವಿದ್ದರೆ ಮತ್ತು ಅದರಿಂದ ದೇಶದ ಹಾನಿಯಾಗುತ್ತಿದ್ದರೆ, ಇಂತಹ ಆಟಗಾರರಿಗೆ ಅವರ ಸ್ಥಾನವನ್ನು ತೋರಿಸುವ ಪ್ರಯತ್ನವನ್ನು ಜನತೆಯು ನ್ಯಾಯೋಚಿತ ಮಾರ್ಗದಿಂದ ಮಾಡುವುದು ಆವಶ್ಯಕವಾಗಿದೆಯೆಂದು ಯಾರಿಗೂ ಅನಿಸಬಹುದು.
ಜೀವನ ನಡೆಸಲು ಹಣ ಬೇಕು!
ಭಾರತದಲ್ಲಿ ಕ್ರಿಕೆಟ ಆಟಗಾರರಿಗೆ ಸಿಗುವಷ್ಟು ಹಣ, ದೇಶದಲ್ಲಿರುವ ಬೇರೆ ಯಾವ ಕ್ರೀಡಾಪಟುಗಳಿಗೂ ಸಿಗುವುದಿಲ್ಲ. ಹಾಕಿ ಭಾರತದ ರಾಷ್ಟ್ರೀಯ ಆಟವಾಗಿದೆ. ಒಲಂಪಿಕ್ಸ್‌ನಲ್ಲಿ ಭಾರತವು 8 ಬಾರಿ ಚಿನ್ನದ ಪದಕ ಗೆದ್ದಿದೆ; ಆದರೆ ಹಾಕಿಯಿಂದ ಆಟಗಾರರಿಗೆ ಹೆಚ್ಚು ಹಣ ಸಿಗುತ್ತದೆ ಎಂದೇನಿಲ್ಲ. ಇತ್ತೀಚಿನ ದಿನಗಳಲ್ಲಿ ‘ಐಪಿಎಲ್’ ರೀತಿಯಲ್ಲಿ ಕಬಡ್ಡಿ ಆಟಗಳನ್ನು ಆಯೋಜಿಸಲಾಗುತ್ತಿರುವುದರಿಂದ ಈ ಆಟಗಾರರಿಗೂ ಅಲ್ಪ ಸ್ವಲ್ಪ ಹಣ ಸಿಗುತ್ತಿದೆ. ಕ್ರೀಡೆಯಿಂದ ಜೀವನ ನಡೆಸಲು ಸಾಧ್ಯವಿಲ್ಲ, ಜೀವನ ನಡೆಸಲು ಹಣ ಬೇಕಾಗುತ್ತದೆ. ಅನೇಕ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಕ್ರೀಡಾಪಟುಗಳಿಗೆ ಉದ್ಯೋಗ ನೀಡುತ್ತವೆ. ಈ ಸರಕಾರಿ ಸಂಸ್ಥೆಗಳಲ್ಲಿ ವಿವಿಧ ಕ್ರೀಡೆಗಳ ತಂಡಗಳೂ ಇರುತ್ತವೆ ಮತ್ತು ಅವರು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಕ್ರೀಡಾಪಟುಗಳಿಗೆ ಸರಕಾರದ ಮಟ್ಟದಲ್ಲಿ ಈ ರೀತಿ ನೆರವು ನೀಡಲಾಗುತ್ತದೆ. ಇದರಿಂದಾಗಿ ಅವರ ಜೀವನ ನಡೆಯುತ್ತದೆ. ಕೆಲವು ದಶಕಗಳ ಹಿಂದೆ, ಕ್ರೀಡಾಪಟುಗಳಿಗೆ ಕ್ರೀಡೆಗಳಿಂದ ಹಣ ಸಿಗುತ್ತಿರಲಿಲ್ಲ. ಅವರ ಜೀವನ ಕೊನೆಯವರೆಗೂ ಬಡತನದಲ್ಲಿಯೇ ಇರುತ್ತಿತ್ತು. ಈಗ ಇದರ ಪ್ರಮಾಣ ಕಡಿಮೆಯಾಗಿದೆ. ಹೀಗಿದ್ದರೂ, ಪ್ರತಿಯೊಬ್ಬ ಆಟಗಾರನು ತನ್ನ ಆಟವನ್ನು ಅತ್ಯುತ್ತಮವಾಗಿ ಆಡಿ ತನ್ನ ತಂಡವನ್ನು ಗೆಲ್ಲಿಸುವುದು, ದೇಶವನ್ನು ಪ್ರತಿನಿಧಿಸುವಾಗ ದೇಶವನ್ನು ಗೆಲ್ಲಿಸಲು ಪ್ರಯತ್ನಿಸುವುದು ಆತನ ಕರ್ತವ್ಯ ಆಗಿದೆ. ಇದರ ನಡುವೆ ಒಂದು ವೇಳೆ ಹಣದ ಅಹಂಕಾರದಿಂದ ಹಾನಿಯಾಗುತ್ತಿದ್ದರೆ, ಅಂತಹ ಆಟಗಾರರು ಹಿನ್ನಡೆಯನ್ನು ಅನುಭವಿಸಲೇ ಬೇಕಾಗುತ್ತದೆ. ಕಪಿಲ್ ದೇವ್ ಇದನ್ನೇ ಹೇಳಲು ಬಯಸುತ್ತಿದ್ದಾರೆ. ಸದ್ಯದ ಆಟಗಾರರಿಗೆ ಹಿರಿಯ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ ಅವರ ಮಾರ್ಗದರ್ಶನವನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಕೆಲವು ದಿನಗಳ ಹಿಂದೆ ಸ್ವತಃ ಗವಾಸ್ಕರ್ ಅವರೇ ‘ಹಿಂದಿನ ಆಟಗಾರರು ತಮ್ಮ ಆಟದಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಬರುತ್ತಿದ್ದರು; ಆದರೆ ಇಂದಿನ ಆಟಗಾರರು ಅವರ ಬಳಿಗೆ ಬರುವುದಿಲ್ಲ’ ಎಂದು ಹೇಳಿದ್ದರು.
ಸಾಧನೆಯ ಮಹತ್ವ!
ತತ್ವಜ್ಞಾನಿಗಳು ಹೇಳುತ್ತಿರುತ್ತಾರೆ, ‘ಜೀವನವೂ ಒಂದು ಆಟ. ಈ ಆಟದಲ್ಲಿ ಯಶಸ್ಸು ಕಾಣಬೇಕಾದರೆ ಅದನ್ನು ನಿರಾಳವಾಗಿ ಮತ್ತು ಯಾವುದೇ ಆಮಿಷಕ್ಕೆ ಸಿಲುಕದೆ ಆಡಬೇಕು. ‘ಜೀವನದಲ್ಲಿ ಯಾವುದೇ ಕರ್ಮವನ್ನು ಮಾಡುವಾಗ ಅದರ ಹಿಂದೆ ಸಾಧನೆಯ ಚಿಂತನೆ, ಶಕ್ತಿ, ತ್ಯಾಗ ಮತ್ತು ಸಮರ್ಪಣಾ ಮನೋಭಾವವಿದ್ದರೆ ಅಂತಹ ಕರ್ಮ ಯಾವತ್ತೂ ಯಶಸ್ವಿಯಾಗುತ್ತದೆ. ಇವೆಲ್ಲವೂ ಆಗಲು ಸಾಧನೆ ಮಾಡುವುದು ಆವಶ್ಯಕವಿದೆ. ಸಾಧನೆಯ ಸಂಸ್ಕಾರವಾಗಿದ್ದರೆ ಮತ್ತು ಸಾಧನಾನಿರತರಾಗಿದ್ದರೆ, ಕರ್ಮಯೋಗ್ಯವೇ ನಡೆಯುತ್ತದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸಿಗೆ ಶ್ರಮಿಸುವಾಗ ನೈತಿಕತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ವಿಫಲವಾದರೂ, ನೀವು ಅದನ್ನು ಸ್ವೀಕರಿಸಿ, ಅದರಿಂದ ಕಲಿತು ಮುಂದುವರಿಯಲು ಸಾಧ್ಯವಾಗುತ್ತದೆ. ಇಂದಿನ ಪೀಳಿಗೆಯಲ್ಲಿ ಇದರ ಕೊರತೆಯಿದೆ. 10 ಅಥವಾ 12 ನೇ ತರಗತಿಯಲ್ಲಿ ಅನುತ್ತೀರ್ಣರಾದರೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಈ ದೇಶದಲ್ಲಿ ಕಡಿಮೆಯೇನಿಲ್ಲ. ಈ ಸ್ಥಿತಿ ಸಾಧನೆಯು ಜೀವನದ ಒಂದು ಭಾಗವಾಗಿಲ್ಲದಿರುವುದನ್ನು ತೋರಿಸುತ್ತದೆ. ಜೀವನದ ಉದ್ದೇಶವೇ ತಿಳಿಯದಿರುವುದರಿಂದ ನಮಗೆ ಏನನ್ನು ಸಾಧಿಸಬೇಕಾಗಿದೆ? ಮತ್ತು ನಾವು ಈಗ ಏನು ಮಾಡುತ್ತಿದ್ದೇವೆ? ಎನ್ನುವುದೇ ತಿಳಿಯುವುದಿಲ್ಲ. ಅದನ್ನು ಸಾಧನೆಯಿಂದ ಗಮನಕ್ಕೆ ತೆಗೆದುಕೊಂಡು ನಾವು ಜೀವನದಲ್ಲಿ ಯಶಸ್ವಿಯಾಗಬಹುದು.