ಅಷ್ಟಸಾತ್ತ್ವಿಕ ಭಾವಗಳು ಏಕೆ ಜಾಗೃತವಾಗುವುದಿಲ್ಲ ?

ಪೂ. ಅನಂತ ಆಠವಲೆ

ಕೆಲವು ಜನರಿಗೆ ‘ನಾವು ಪೂಜೆ, ನಾಮಜಪ ಇತ್ಯಾದಿಗಳನ್ನು ಅನೇಕ ವರ್ಷಗಳಿಂದ ಮಾಡುತ್ತಿದ್ದೇವೆ, ಆದರೂ ನಮ್ಮ ಅಷ್ಟಸಾತ್ತ್ವಿಕ ಭಾವಗಳ ಪೈಕಿ ಯಾವುದೇ ಭಾವವು ಏಕೆ ಜಾಗೃತವಾಗುವುದಿಲ್ಲ ? ಎಂಬ ಪ್ರಶ್ನೆ ಇರುತ್ತದೆ.

ಅಷ್ಟಸಾತ್ತ್ವಿಕ ಭಾವ – ಸ್ವೇದಃ ಸ್ತಂಭೋಽಥ ರೋಮಾಞ್ಚಃ ಸ್ವರಭಙ್ಗೋಽಥ ವೇಪಥುಃ |
ವೈವರ್ಣಮಶ್ರುಪ್ರಲಯ ಇತ್ಯಷ್ಟೌ ಸಾತ್ವಿಕಾ ಮತಾಃ || ಭರತಃ ||

ಅರ್ಥ – ಸ್ವೆದ (ಬೆವರು), ಸ್ತಂಭ (ಜಡತ್ವ), ರೋಮಾಂಚ, ಸ್ವರಭಂಗ, ಕಂಪನ, ವೈವರ್ಣ್ಯ (ಮುಖ ಬಿಳುಚಿಕೊಳ್ಳುವುದು), ಕಣ್ಣೀರು ಮತ್ತು ಮೂರ್ಛೆ ಇವುಗಳನ್ನು ಅಷ್ಟಸಾತ್ತ್ವಿಕ ಭಾವಗಳೆಂದು ತಿಳಿಯಲಾಗುತ್ತದೆ.

ಈಗ ಅಷ್ಟಸಾತ್ತ್ವಿಕ ಭಾವಗಳು ಏಕೆ ಜಾಗೃತವಾಗುವುದಿಲ್ಲ, ಎಂಬುದನ್ನು ನೋಡೋಣ.

ಭಕ್ತರಿಗೆ ಈಶ್ವರಪ್ರಾಪ್ತಿಯಂತೂ ಬೇಕಾಗಿರುತ್ತದೆ, ಆದರೆ ಅವರು ಜಗತ್ತಿನಲ್ಲಿನ ಸುಖಗಳನ್ನು ಮಾತ್ರ ಬಿಡಲು ತಯಾರಿರುವುದಿಲ್ಲ. ಇದೂ ಬೇಕು ಮತ್ತು ಅದೂ ಬೇಕು, ಹೀಗೆ ಆಗಲಾರದು. ಏಕೆ ಆಗಲಾರದು ? ಏಕೆಂದರೆ ಎಲ್ಲಿಯ ವರೆಗೆ ಸಂಸಾರ-ವ್ಯವಹಾರಗಳಲ್ಲಿನ ಸುಖಗಳು ಬೇಕೆಂದು ಅನಿಸುತ್ತದೆಯೋ, ಅಲ್ಲಿಯವರೆಗೆ ಮನಸ್ಸು ಈಶ್ವರನಲ್ಲಿ ಸಂಪೂರ್ಣ ಏಕರೂಪವಾಗಲಾರದು. ಕೇವಲ ಈಶ್ವರಪ್ರಾಪ್ತಿ ಆಗಲೇಬೇಕು ಎಂಬ ತವಕ (ತುಡಿತ) ಇಲ್ಲದಿ ದ್ದರೆ, ಸಂಸಾರದಲ್ಲಿನ ಸುಖಗಳು ಬೇಕಾಗಿದ್ದರೆ, ಮನಸ್ಸು ಎಲ್ಲಿ ಸಾತ್ತ್ವಿಕವಾಗಿದೆ ? ಹಾಗಾದರೆ ಅಷ್ಟಸಾತ್ತ್ವಿಕ ಭಾವಗಳು ಹೇಗೆ ಜಾಗೃತವಾಗಬಹುದು ? ಭಕ್ತಿಯ ತೀವ್ರತೆಯ ಕೊರತೆಯಿಂದಾಗಿ ಹೀಗಾಗುತ್ತದೆ.

ಈಶ್ವರನಿಲ್ಲದೇ ಭಕ್ತನು ದುಃಖಿಯಾಗತೊಡಗಿದರೆ, ಚಡಪಡಿಸತೊಡಗಿದರೆ, ಬೇರೆ ಏನೂ ಹೊಳೆಯದಂತಾದರೆ ಅಷ್ಟಸಾತ್ತ್ವಿಕ ಭಾವಗಳ ಲಕ್ಷಣಗಳು ಪ್ರಕಟವಾಗಬಹುದು. ಕೆಲವು ಉನ್ನತ ಭಕ್ತರಿಗೆ ಕೇವಲ ಭಗವಂತನ ಸ್ಮರಣೆಯಿಂದಲೇ ಭಾವಜಾಗೃತವಾಗುತ್ತದೆ.

ಈ ವಿಷಯದ ಇನ್ನು ಕೆಲವು ಗಮನಿಸಬೇಕಾದ ಅಂಶಗಳಿವೆ.

೧. ಸಾಧನೆಯ ಅನೇಕ ಮಾರ್ಗಗಳ ಪೈಕಿ ಕೇವಲ ಭಕ್ತಿ ಮಾರ್ಗದಿಂದ ಸಾಧನೆಯನ್ನು ಮಾಡುವವರ ಅಷ್ಟಸಾತ್ತ್ವಿಕ ಭಾವಗಳು ಜಾಗೃತವಾಗಬಹುದು, ಏಕೆಂದರೆ ಕೇವಲ ಭಕ್ತಿ ಮಾರ್ಗದಲ್ಲಿಯೇ ಮನಸ್ಸಿನ ಭಾವನೆಗಳಿಗೆ ಮಹತ್ವವಿದೆ.ಇತರ ಸಾಧನೆಯ ಮಾರ್ಗಗಳು ಮನಸ್ಸಿನ ಭಾವನೆಗಳನ್ನು ಆಧರಿಸಿಲ್ಲ.

೨. ಹೆಚ್ಚಾಗಿ ಭಕ್ತಿಯ ಜೊತೆಗೆ ಆತ್ಮಜ್ಞಾನವೂ ಇರುವವರ ಭಾವಜಾಗೃತಿ ಆಗುವುದಿಲ್ಲ.

೩. ಎಲ್ಲಿಯವರೆಗೆ ಈಶ್ವರನ ಬಗ್ಗೆ ಭಾವವಿದೆಯೋ, ಎಲ್ಲಿಯವರೆಗೆ ಈಶ್ವರನನ್ನು ತನಗಿಂತ ಬೇರೆ ಎಂದು ತಿಳಿಯುತ್ತಾನೆಯೋ, ಅಲ್ಲಿಯವರೆಗೆ ಭಕ್ತನು ದ್ವೈತದಲ್ಲಿರುತ್ತಾನೆ. ಅವನು ಈಶ್ವರನೊಂದಿಗೆ ಏಕರೂಪವಾಗಲಾರನು.

೪. ಅಷ್ಟಸಾತ್ತ್ವಿಕ ಭಾವಗಳು ಜಾಗೃತವಾಗದಿರುವುದು, ಜಾಗೃತ ವಾಗುವುದು ಮತ್ತು ಭಾವ ಶಾಂತವಾಗುವುದು, ಈ ಮೂರು ಸ್ಥಿತಿಗಳ ಪೈಕಿ ಭಾವಜಾಗೃತವಾಗುವುದು ಇದು ಮಧ್ಯದ ಅವಸ್ಥೆ ಆಗಿದೆ; ಇದು ಸಾಧಕ ಅವಸ್ಥೆ ಆಗಿದೆ, ಸಿದ್ಧಾವಸ್ಥೆ ಅಲ್ಲ. ಸಾಧನೆ ಪರಿಪಕ್ವವಾದ ನಂತರ ಕಣ್ಣೀರು, ರೋಮಾಂಚ, ಸ್ವರಭಂಗ ಇತ್ಯಾದಿ ವಿಕಾರರಹಿತನಾಗಿ ಭಕ್ತ ಶಾಂತನಾಗುತ್ತಾನೆ.

– ಅನಂತ ಆಠವಲೆ – ೬.೪.೨೦೨೩