ಖಲಿಸ್ತಾನಿ ಬೆಂಬಲಿಗರ ಮೇಲೆ ಕೆನಡಾದ ಭಾರತೀಯ ವಂಶಸ್ಥ ಸಂಸದ ಚಂದ್ರ ಆರ್ಯರಿಂದ ಟೀಕೆ

ಖಲಿಸ್ತಾನಿಗಳು ಯಾವಾಗ ಕಚ್ಚುತ್ತಾರೆ ಎಂದು ತಿಳಿದಿಲ್ಲ !

ಒಟ್ಟಾವಾ (ಕೆನಡಾ) – ಕೆನಡಾದಲ್ಲಿ ಜುಲೈ 8 ರಂದು ಖಲಿಸ್ತಾನಿ ಬೆಂಬಲಿಗರು `ಕಿಲ್ ಇಂಡಿಯಾ’ ಹೆಸರಿನ ಮೆರವಣಿಗೆಯನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕೆಲವು ದಿನಗಳ ಹಿಂದೆ ಅವರಿಂದ ಒಂದು ಭಿತ್ತಿಪತ್ರ ಪ್ರಸಾರವಾಗಿತ್ತು. ಅದರಲ್ಲಿ ಭಾರತೀಯ ರಾಯಭಾರಿಗಳು ಖಲಿಸ್ತಾನಿ ಭಯೋತ್ಪಾದಕರ ಕೊಲೆಗಾರರಾಗಿದ್ದಾರೆಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆನಡಾದ ಭಾರತೀಯ ವಂಶಸ್ಥ ಸಂಸದ ಚಂದ್ರ ಆರ್ಯ ಇವರು ಖಲಿಸ್ತಾನಿ ಬೆಂಬಲಿಗರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಅವರು, `ನಮ್ಮ ಅಂಗಳದಲ್ಲಿ ಹಾವು ಇದ್ದು, ಅದು ಹೆಡೆ ಬಿಚ್ಚಿದೆ. ಅದೀಗ ಯಾವಾಗ ಕಚ್ಚುವುದೋ ಗೊತ್ತಿಲ್ಲ.’ ಎಂದು ಹೇಳಿದ್ದಾರೆ. ಆರ್ಯ ಇವರು ಮೂಲತಃ ಕರ್ನಾಟಕದವರಾಗಿದ್ದು, ಅವರು ಕೆನಡಾದ `ಲಿಬರಲ್ ಪಾರ್ಟಿ’ಯ ಸಂಸದರಾಗಿದ್ದಾರೆ. ಆರ್ಯ ಈ ಸಂದರ್ಭದಲ್ಲಿ ಒಂದು ಟ್ವೀಟ್ ಮಾಡಿದ್ದು, ಅದರಲ್ಲಿ ಅವರು ಖಲಿಸ್ತಾನ ಬೆಂಬಲಿಗರು ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದ್ದಾರೆ. ಇದರಿಂದ ಕೆನಡಾದ ಜನರ ಅಧಿಕಾರ ಮತ್ತು ಸ್ವಾತಂತ್ರ್ಯಹರಣವಾಗುತ್ತಿದೆ. ಖಲಿಸ್ತಾನಿ ಬೆಂಬಲಿಗರ ಕೃತ್ಯಗಳು ನಾಚಿಕೆಪಡುವಂತಹದ್ದಾಗಿದೆ. ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಬೆಂಬಲಿಸುತ್ತಾ, ಆ ದಿನವನ್ನು ಸಂಭ್ರಮದಿಂದ ಆಚರಿಸಿದರು. ಇದನ್ನು ಯಾವೊಬ್ಬ ಜನಪ್ರತಿನಿಧಿಯೂ ವಿರೋಧಿಸಲಿಲ್ಲ. ಇದರಿಂದ ಅವರ ಭಯ ದೂರವಾಗಿದ್ದು, ಅವರು ಈಗ ಭಾರತೀಯ ರಾಯಭಾರಿಗಳ ಮೇಲೆ ದಾಳಿ ನಡೆಸಲು ಆರಂಭಿಸಿದ್ದಾರೆ. ಎಂದು ಹೇಳಿದ್ದಾರೆ.