5 ನಿಮಿಷಗಳಲ್ಲಿ 22 ಮೀಟರ್ ಎತ್ತರಕ್ಕೆ ಏರಿಸಲಾಗುವ ಸೇತುವೆ
ರಾಮೇಶ್ವರಂ (ತಮಿಳುನಾಡು) – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಲ್ಲಿ ಏಷ್ಯಾದ ಮೊದಲ ‘ವರ್ಟಿಕಲ್ ಲಿಫ್ಟ್ ಸ್ಪ್ಯಾನ್’ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದರು. ಸಮುದ್ರದ ಮೇಲಿರುವ ಈ ಸೇತುವೆಗೆ ‘ಪಂಬನ್ ಸೇತುವೆ’ ಎಂದು ಹೆಸರಿಸಲಾಗಿದೆ. ಈ ಸೇತುವೆಯು 2.08 ಕಿ.ಮೀ. ಉದ್ದವಿದೆ. ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 2019 ರಲ್ಲಿ ಇದರ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಈ ಸೇತುವೆಯು ರಾಮೇಶ್ವರಂ (ಪಂಬನ್ ದ್ವೀಪ)ದಿಂದ ಮಂಡಪಂಗೆ ಸಂಪರ್ಕ ಕಲ್ಪಿಸುತ್ತದೆ. ಸ್ಟೇನ್ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟ ಈ ಸೇತುವೆಗೆ ಪಾಲಿಸೈಲೋಕ್ಸೇನ್ ಲೇಪನ ಹಾಕಲಾಗಿದೆ, ಇದು ತುಕ್ಕು ಮತ್ತು ಸಮುದ್ರದ ಉಪ್ಪುನೀರಿನಿಂದ ರಕ್ಷಿಸುತ್ತದೆ. ಹಳೆಯ ಸೇತುವೆಯು 2022 ರಲ್ಲಿ ತುಕ್ಕು ಹಿಡಿದ ಕಾರಣ ಮುಚ್ಚಲ್ಪಟ್ಟಿತ್ತು. ಬಳಿಕ ರಾಮೇಶ್ವರಂ ಮತ್ತು ಮಂಡಪಂ ನಡುವಿನ ರೈಲು ಸಂಪರ್ಕ ಕಡಿತಗೊಂಡಿತು.
‘ವರ್ಟಿಕಲ್ ಲಿಫ್ಟ್ ಸ್ಪ್ಯಾನ್’ ಸೇತುವೆ ಹೇಗೆ ಕಾರ್ಯನಿರ್ವಹಿಸುತ್ತದೆ ?
ದೊಡ್ಡ ಹಡಗುಗಳು ಇಲ್ಲಿಂದ ಹಾದುಹೋಗಬೇಕಾದಾಗ, ‘ವರ್ಟಿಕಲ್ ಲಿಫ್ಟ್ ಸ್ಪ್ಯಾನ್’ ಸೇತುವೆಯ ಮಧ್ಯಭಾಗವನ್ನು ಮೇಲಕ್ಕೆ ಎತ್ತಲಾಗುತ್ತದೆ. ಈ ಪ್ರಕ್ರಿಯೆಯು ಎಲೆಕ್ಟ್ರೋ-ಮೆಕಾನಿಕಲ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಸೇತುವೆಯ ಮಧ್ಯಭಾಗವು ಕೇವಲ 5 ನಿಮಿಷಗಳಲ್ಲಿ 22 ಮೀಟರ್ ಎತ್ತರಕ್ಕೆ ಏರುತ್ತದೆ. ಇದಕ್ಕಾಗಿ ಕೇವಲ ಒಬ್ಬ ವ್ಯಕ್ತಿಯ ಅಗತ್ಯವಿರುತ್ತದೆ. ಹಳೆಯ ಸೇತುವೆಯನ್ನು ಕಾರ್ಮಿಕರಿಂದ ತೆರೆಯಲಾಗುತ್ತಿತ್ತು ಮತ್ತು ಅದಕ್ಕಾಗಿ 14 ಜನರ ಅಗತ್ಯವಿತ್ತು.