ನವದೆಹಲಿ – ದೇಶಾದ್ಯಂತ ಏಪ್ರಿಲ್ 6 ರಂದು ಶ್ರೀರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದೇಶದ ವಿವಿಧ ಶ್ರೀರಾಮ ಮಂದಿರಗಳಲ್ಲಿ ಪೂಜೆಗಳನ್ನು ನೆರವೇರಿಸಲಾಯಿತು. ಅಯೋಧ್ಯೆಯಲ್ಲಿ ಲಕ್ಷಾಂತರ ಭಕ್ತರು ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. ಇಲ್ಲಿ ಮಧ್ಯಾಹ್ನ ಶ್ರೀರಾಮ ಜನ್ಮದ ಸಮಯದಲ್ಲಿ, ಅಂದರೆ 12 ಗಂಟೆಗೆ ಶ್ರೀ ರಾಮಲಲ್ಲಾನ ಹಣೆಯ ಮೇಲೆ ಸೂರ್ಯನ ಕಿರಣ ಬಿದ್ದಿತು. ವಾರಾಣಸಿಯಲ್ಲಿ ಮುಸ್ಲಿಂ ಮಹಿಳೆಯರು ಶ್ರೀರಾಮನವಮಿಯ ಸಮಯದಲ್ಲಿ ಮಹಾ ಆರತಿಯಲ್ಲಿ ಭಾಗವಹಿಸಿದರು. ನೂರಾರು ಸ್ಥಳಗಳಲ್ಲಿ ಶ್ರೀರಾಮನವಮಿಯ ನಿಮಿತ್ತ ಸಾಯಂಕಾಲ ಮೆರವಣಿಗೆಗಳನ್ನು ಸಹ ಆಯೋಜಿಸಲಾಗಿತ್ತು. ಭಾಗ್ಯನಗರ (ತೆಲಂಗಾಣ)ದ ಭಾಜಪ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ಶ್ರೀ ಟಿ. ರಾಜಾ ಸಿಂಗ ಅವರು ಭವ್ಯ ಮೆರವಣಿಗೆಯನ್ನು ಆಯೋಜಿಸಿದ್ದರು. ಇದರಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಬಂಗಾಳದಲ್ಲೂ ಅನೇಕ ಕಡೆ ಮೆರವಣಿಗೆಗಳನ್ನು ನಡೆಸಲಾಯಿತು. ಈ ಸಂಬಂಧ ತಡರಾತ್ರಿಯವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಗಳು ಬಂದಿರಲಿಲ್ಲ.