
ಕರ್ಣಾವತಿ (ಗುಜರಾತ್) – ಕಳೆದ ವರ್ಷ ಪ್ರಾಣಪ್ರತಿಷ್ಠೆಯವರೆಗೆ ಅಯೋಧ್ಯೆಯ ಶ್ರೀರಾಮ ಮಂದಿರದ ನೆಲ ಮಹಡಿಯ ನಿರ್ಮಾಣ ಪೂರ್ಣಗೊಂಡಿತ್ತು. ಇದರ ನಂತರ, ಒಂದೂವರೆ ವರ್ಷಗಳಲ್ಲಿ, ಮಂದಿರದ ಎರಡನೇ ಮತ್ತು ಮೂರನೇ ಮಹಡಿಗಳು, ಗುಮ್ಮಟ ಮತ್ತು ಶಿಖರದ 80 ಪ್ರತಿಶತಕ್ಕಿಂತ ಹೆಚ್ಚು ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ಮುಂದಿನ ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಜೂನ್ ವೇಳೆಗೆ ಸಂಪೂರ್ಣ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ. ಈ ಮಹಡಿಗಳಲ್ಲಿ ಭಗವಾನ ಶಿವ, ಶ್ರೀ ಗಣೇಶ ಮುಂತಾದ ದೇವಸ್ಥಾನಗಳು ಸಹ ಇರುತ್ತವೆ ಎಂದು ಮಂದಿರದ ವಾಸ್ತುಶಿಲ್ಪಿ ಚಂದ್ರಕಾಂತ ಸೋಮಪುರ ತಿಳಿಸಿದ್ದಾರೆ.
ಸೋಮಪುರ ಅವರು ಹೇಳುವಂತೆ, ಎರಡನೇ ಮಹಡಿಯಲ್ಲಿ ರಾಮ ದರ್ಬಾರ್ ನಿರ್ಮಿಸಲಾಗಿದೆ. ಅಲ್ಲಿ ಭಗವಾನ ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಂತನ ವಿಗ್ರಹಗಳನ್ನು ಸ್ಥಾಪಿಸಲಾಗುವುದು. ಈ ವಿಗ್ರಹಗಳನ್ನು ಜೈಪುರದಲ್ಲಿ ತಯಾರಿಸಲಾಗುತ್ತಿದೆ. ಅವುಗಳನ್ನು ಬಿಳಿ ಕಲ್ಲಿನಿಂದ ಮಾಡಲಾಗಿದೆ. ಅವುಗಳು ತುಂಬಾ ಜೀವಂತವಾಗಿ ಕಾಣುತ್ತಿವೆ ಅಂದರೆ ಭಕ್ತರು ಸಾಕ್ಷಾತ್ ಪ್ರಭು ಶ್ರೀರಾಮನ ದರ್ಬಾರ್‌ಗೆ ಬಂದಂತೆ ಭಾಸವಾಗುತ್ತದೆ. ರಾಮ ದರ್ಬಾರ್‌ನಲ್ಲಿ ಪ್ರತಿ ವಿಗ್ರಹದ ಎತ್ತರವನ್ನು 5 ಅಡಿಗಳವರೆಗೆ ಇರಿಸಲಾಗಿದೆ.
450 ಸ್ತಂಭಗಳು ಮತ್ತು ಪ್ರತಿಯೊಂದರಲ್ಲೂ 16 ವಿಗ್ರಹಗಳು!
ರಾಮ ದರ್ಬಾರ್‌ನಲ್ಲಿ ಬನ್ಸಿಪಹಡಪುರದ ಕಲ್ಲನ್ನು ಬಳಸಲಾಗಿದೆ. ನೆಲಹಾಸುಗಳಿಗೆ ಮಕ್ರಾನದ ಅಮೃತಶಿಲೆಯನ್ನು ಬಳಸಲಾಗಿದೆ. ಪ್ರತಿ ಸ್ತಂಭದ ಮೇಲೆ ಸುಮಾರು 16 ವಿಗ್ರಹಗಳನ್ನು ಕೆತ್ತಲಾಗಿದೆ ಮತ್ತು ಅಂತಹ ಒಟ್ಟು 450 ಸ್ತಂಭಗಳಿವೆ. ಅವುಗಳ ಮೇಲೆ ದಿಕ್ಪಾಲಕರ ವಿಗ್ರಹಗಳನ್ನು ಕೆತ್ತಲಾಗಿದೆ.
ರಾಮ ದರ್ಬಾರ್‌ಗೆ ಹೋಗಲು ಮೆಟ್ಟಿಲುಗಳು ಮತ್ತು ಲಿಫ್ಟ್!
ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮಲಲ್ಲಾನ ದರ್ಶನದ ನಂತರ, ಭಕ್ತರು ಎರಡನೇ ಮಹಡಿಯಲ್ಲಿರುವ ರಾಮ ದರ್ಬಾರ್‌ಗೆ ದರ್ಶನ ಪಡೆಯಲು ಹೋಗಬಹುದು. ಇದಕ್ಕಾಗಿ, 14 ರಿಂದ 16 ಅಡಿ ಅಗಲದ ಮೆಟ್ಟಿಲುಗಳಿವೆ. ಅಂಗವಿಕಲ ಭಕ್ತರಿಗಾಗಿ ಹಿಂಭಾಗದಲ್ಲಿ ಲಿಫ್ಟ್ ಕೂಡ ಇದೆ. ಮಂದಿರದ ಮೂರನೇ ಮಹಡಿಯಲ್ಲಿ ಯಾವುದೇ ವಿಗ್ರಹಗಳನ್ನು ಸ್ಥಾಪಿಸಿಲ್ಲ. ಈ ಮಹಡಿ ಗುಜರಾತದ ವೇರಾವಲದ ಸೋಮನಾಥ ಮಂದಿರದಂತಿದೆ.