ಓರ್ವ ಸಾಧಕನನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಆಗ ಆ ರೋಗಿ ಸಾಧಕ ಮತ್ತು ಅವನ ಪತ್ನಿಯೊಂದಿಗೆ ಓರ್ವ ಸಾಧಕನು ಸಹಾಯಕ್ಕೆಂದು ಹೋದನು. ರೋಗಿ ಸಾಧಕನನ್ನು ರಾತ್ರಿ ಆಸ್ಪತ್ರೆಯಲ್ಲಿ ದಾಖಲಿಸಿದ ಬಳಿಕ ಸಹಾಯಕ್ಕೆ ಹೋಗಿದ್ದ ಸಾಧಕನು ರಾತ್ರಿಯಿಡೀ ರೋಗಿ ಸಾಧಕನ ಪತ್ನಿಯೊಂದಿಗೆ ಸಹಾಯಕ್ಕೆ ಅಲ್ಲಿಯೇ ಉಳಿದನು. ಮರುದಿನ ಬೆಳಿಗ್ಗೆ ಸಹಾಯಕ್ಕೆ ನಿಂತಿದ್ದ ಸಾಧಕನು ‘ಸೇವೆ ಇದೆ ಎಂದು ಹೇಳಿ ಆಶ್ರಮಕ್ಕೆ ಮರಳಿ ಬಂದನು; ಆದರೆ ತದನಂತರ ಸ್ವಲ್ಪ ಹೊತ್ತಿನಲ್ಲಿಯೇ ರೋಗಿ ಸಾಧಕನ ಸ್ಥಿತಿ ಬಹಳ ಗಂಭೀರವಾಗಿ ಅವನು ಕೊನೆಯುಸಿರೆಳೆದನು. ಆ ಸಮಯದಲ್ಲಿ ಮರಣ ಹೊಂದಿದ ಸಾಧಕನ ಪತ್ನಿಯು ಒಬ್ಬಳೇ ಇದ್ದಳು. ಅವಳಿಗೆ ಧೈರ್ಯ ನೀಡಲು ಯಾರೂ ಇರಲಿಲ್ಲ; ಆದರೆ ದೇವರ ಕೃಪೆಯಿಂದ ಸಾಧನೆಯ ಬಲದಿಂದ ಅವಳಿಗೆ ಆ ಪ್ರಸಂಗದಲ್ಲಿಯೂ ಸ್ಥಿರವಾಗಿರಲು ಸಾಧ್ಯವಾಯಿತು. ಈ ಪ್ರಸಂಗದಲ್ಲಿ ಸಹಾಯಕ್ಕೆ ಹೋಗಿದ್ದ ಸಾಧಕನು ‘ಸೇವೆ ಇದೆ ಎಂದು ಹೇಳಿ ಮರಳಿ ಆಶ್ರಮಕ್ಕೆ ಬಂದಿದ್ದು, ಅವನ ತಪ್ಪಾಗಿತ್ತು; ಏಕೆಂದರೆ ರೋಗಿ ಸಾಧಕನಿಗೆ ಯಾವಾಗ ಏನು ಸಹಾಯ ಬೇಕಾಗುತ್ತದೆಯೆಂದು ಹೇಳಲು ಆಗುವುದಿಲ್ಲ. ಆದುದರಿಂದ ಅವನು ಮತ್ತೊಬ್ಬ ಸಾಧಕನು ಸಹಾಯಕ್ಕೆ ಬರುವವರೆಗೆ ಆಸ್ಪತ್ರೆಯಲ್ಲಿಯೇ ನಿಲ್ಲುವುದು ಆವಶ್ಯಕವಾಗಿತ್ತು. ‘ಈ ರೀತಿ ಸಹಾಯ ಮಾಡುವುದು ಕೂಡ ಒಂದು ಮಹತ್ವದ ಸೇವೆಯೇ ಆಗಿದೆ, ಎನ್ನುವ ದೃಷ್ಟಿಕೋನವನ್ನು ಅವನು ಇಟ್ಟುಕೊಳ್ಳುವುದು ಆವಶ್ಯಕವಾಗಿತ್ತು.
‘ಯಾವ ಸಮಯದಲ್ಲಿ ಯಾವ ಸೇವೆಗೆ ಪ್ರಾಮುಖ್ಯತೆಯನ್ನು ಕೊಡಬೇಕು? ಎನ್ನುವುದನ್ನು ಸಾಧಕನು ತಾರತಮ್ಯದಿಂದ ನಿರ್ಧರಿಸಬೇಕು. ಈ ವಿಷಯದಲ್ಲಿ ತಿಳಿಯದಿದ್ದರೆ, ಉನ್ನತ ಸಾಧಕರಲ್ಲಿ ಕೇಳಿ ತಿಳಿದುಕೊಳ್ಳಬೇಕು. ಮೊದಲ ಪ್ರಾಮುಖ್ಯತೆಯಿರುವ ಸೇವೆಗೆ ಮಹತ್ವವನ್ನು ನೀಡದೇ, ಎರಡನೇ ಪ್ರಾಮುಖ್ಯತೆ ಯಿರುವ ಸೇವೆಯನ್ನು ಮಾಡಿದರೆ ಆ ಸಮಯವನ್ನು ವ್ಯರ್ಥಗೊಳಿಸಿದಂತೆಯೇ ಆಗುತ್ತದೆ ಮತ್ತು ಒಮ್ಮೆ ಸಮಯ ಹೊರಟುಹೋದರೆ ಮರಳಿ ಬರುವುದಿಲ್ಲ. ಆದುದರಿಂದ ಸಾಧಕರೇ, ಯೋಗ್ಯ ಸಮಯದಲ್ಲಿ ಯೋಗ್ಯ ಸೇವೆಯನ್ನು ಮಾಡುವುದು ಆವಶ್ಯಕವಿದೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೨೩.೪.೨೦೨೩)