ಫಿಲಿಪ್ಪೀನ್ಸ್ ನ ವಿದೇಶಾಂಗ ಸಚಿವರಿಂದ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಭೇಟಿ !

ಫಿಲಿಪೈನ್ಸ್ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿ !

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಫಿಲಿಪ್ಪೀನ್ಸ್ ವಿದೇಶಾಂಗ ಕಾರ್ಯದರ್ಶಿ ಎನ್ರಿಕ್ ಮನಾಲೊ

ನವದೆಹಲಿ – ಭಾರತದ ಪ್ರವಾಸದಲ್ಲಿರುವ ಫಿಲಿಪ್ಪೀನ್ಸ್ ವಿದೇಶಾಂಗ ಸಚಿವ ಎನ್ರಿಕ್ ಮನಾಲೊ ಅವರು ಜೂನ್ 29 ರಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದರು. ಫಿಲಿಪ್ಪೀನ್ಸ್ ಭಾರತದಿಂದ ‘ಬ್ರಹ್ಮೋಸ್’ ಕ್ಷಿಪಣಿಗಳನ್ನು ಖರೀದಿಸಲಿದೆ. ಈ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಭಾರತಕ್ಕೆ ಬರುವ ಮೊದಲು ಎನ್ರಿಕ್ ಅವರು ಸಂದರ್ಶನವೊಂದರಲ್ಲಿ, ಭಾರತ ಮತ್ತು ಫಿಲಿಪೈನ್ಸ್‌ಗೆ ಚೀನಾ ದೊಡ್ಡ ಸವಾಲು ಎಂದು ಹೇಳಿದ್ದರು; ಏಕೆಂದರೆ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಜೂನ್ 28 ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎನ್ರಿಕ್ ಮನಾಲೊ ಅವರು, ನಮಗೆ ಭಾರತದೊಂದಿಗೆ ದೃಢವಾದ ರಕ್ಷಣಾ ಸಂಬಂಧ ಬೇಕಿದೆ. ಚೀನಾ ನಮ್ಮ ಕಡಲ ಪ್ರದೇಶವನ್ನು ಅತಿಕ್ರಮಿಸುತ್ತಿದೆ ಮತ್ತು ಅದರ ಕ್ರಮ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿವೆ. ಈ ಬಗ್ಗೆ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಪ್ರಪಂಚದ ಪ್ರತಿಯೊಂದು ಸಮುದ್ರ ಪ್ರದೇಶವು ಯಾರಿಗಾದರೂ ಮುಕ್ತವಾಗಿರಬೇಕು ಎಂದು ನಾವು ನಂಬುತ್ತೇವೆ. ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರ ಮಾತ್ರವೇ ಏಕೆ ? ಇಲ್ಲಿ ವ್ಯಾಪಾರ ನಡೆಯುತ್ತದೆ ಮತ್ತು ಯಾವುದೇ ದೇಶವು ಅದರ ಮೇಲೆ ಅಧಿಕಾರವನ್ನು ಹೊಂದಿರುವುದಿಲ್ಲ ಎಂದು ಹೇಳಿದರು.

ಭಾರತಕ್ಕೆ ಫಿಲಿಪ್ಪೀನ್ಸ್ ನ ಸ್ಥಾನ ಮಹತ್ವದ್ದು !

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಚಟುವಟಿಕೆಗಳಿಂದ ತೊಂದರೆ ಅನುಭವಿಸುತ್ತಿರುವ ದೇಶಗಳಲ್ಲಿ ತೈವಾನ್, ಫಿಲಿಪೈನ್ಸ್, ವಿಯೆಟ್ನಾಂ, ಮಲೇಷ್ಯಾ ಮತ್ತು ಬ್ರೂನೈ ಸೇರಿವೆ. ‘ಭಾರತ ಮತ್ತು ಅಮೇರಿಕಾ ಈ ಸಣ್ಣ ದೇಶಗಳನ್ನು ಬೆಂಬಲಿಸಬೇಕು ಮತ್ತು ಚೀನಾದ ಹಸ್ತಕ್ಷೇಪವನ್ನು ಕೊನೆಗೊಳಿಸಬೇಕು’, ಇದಕ್ಕಾಗಿ ಫಿಲಿಪೈನ್ಸ್ ಪ್ರಯತ್ನಿಸುತ್ತಿದೆ. ಫಿಲಿಪೈನ್ಸ್‌ನ ಭೌಗೋಳಿಕ ಕಾರ್ಯತಂತ್ರದ ಸ್ಥಳವು ಭಾರತಕ್ಕೆ ಮುಖ್ಯವಾಗಿದೆ. ಇದು ದಕ್ಷಿಣ ಚೀನಾ ಸಮುದ್ರ ಪ್ರದೇಶದ ಪ್ರಮುಖ ದೇಶವಾಗಿದೆ. ಭಾರತದೊಂದಿಗೆ ಅವರ ಸೇನೆಯೂ ಸಹ ಹಲವಾರು ಬಾರಿ ಜಂಟಿ ಸಮರಾಭ್ಯಾಸ ನಡೆಸಿವೆ.