ಆಹಾರವನ್ನು ಯಾವಾಗ ಮತ್ತು ಹೇಗೆ ತೆಗೆದುಕೊಳ್ಳಬೇಕು ?
ಕೆಲವೊಮ್ಮೆ ಆಹಾರವು ಶರೀರದಲ್ಲಿನ ದೋಷಗಳಿಂದ ಕಲುಷಿತವಾಗಿ ಅಗ್ನಿಯ ಮಾರ್ಗದಿಂದ ಸ್ವಲ್ಪ ಬದಿಗೆ ಹೋಗಿ ನಿಲ್ಲುತ್ತದೆ. ಇಂತಹ ಸಮಯದಲ್ಲಿ ಮೊದಲಿನ ಆಹಾರ ಜೀರ್ಣವಾಗದಿದ್ದರೂ ಪುನಃ ಹಸಿವಾಗುತ್ತದೆ. ಈ ಹಸಿವು ಸುಳ್ಳು ಹಸಿವಾಗಿರುತ್ತದೆ. ಇದಕ್ಕೆ ನಿಜವಾದ ಹಸಿವು ಎಂದು ತಿಳಿದು ತಿನ್ನುವ ಮನುಷ್ಯನಿಗೆ ಅಯೋಗ್ಯ ಸಮಯದಲ್ಲಿ ಸೇವಿಸಿದ ಆಹಾರ ವಿಷದಂತೆ ಮಾರಕವಾಗುತ್ತದೆ.
ಸುಳ್ಳು ಹಸಿವನ್ನು ಗುರುತಿಸುವ ಇನ್ನೊಂದು ಲಕ್ಷಣವೆಂದರೆ, ಸ್ವಲ್ಪ ಹಸಿವಾಗಿದೆ ಎಂದು ಅನಿಸಿದಾಗ ತಮ್ಮನ್ನು ಯಾವುದಾದರೊಂದು ಕೆಲಸದಲ್ಲಿ (ಉದಾ. ಕಸ ಗೂಡಿಸುವುದು, ನೆಲ (ಟೈಲ್ಸ) ಒರೆಸುವುದು, ಅಡುಗೆ ಮಾಡುವುದು) ತೊಡಗಿಸಿಕೊಂಡರೆ ಹಸಿವು ಕಡಿಮೆಯಾಗುತ್ತದೆ. ಸ್ವಲ್ಪ ಸಮಯದ ನಂತರ ಯಾವಾಗ ದೂಷಿತ ಅನ್ನ ಜೀರ್ಣವಾಗುತ್ತದೆಯೋ, ಆಗ ನಿಜವಾದ ಹಸಿವಾಗುತ್ತದೆ.
ಸುಳ್ಳು ಹಸುವಿಗೆ ನಿಜವಾದ ಹಸಿವು ಎಂದು ತಿಳಿದು ಊಟ ಮಾಡಿದರೆ ಶರೀರದಲ್ಲಿ ವಿಷಯುಕ್ತ ಪದಾರ್ಥಗಳು ಉತ್ಪನ್ನವಾಗುತ್ತವೆ. ಇವು ಕಾಲಾಂತರದಲ್ಲಿ ರೋಗಗಳನ್ನುಂಟು ಮಾಡುತ್ತವೆ ಅಥವಾ ಇರುವ ಕಾಯಿಲೆಗಳನ್ನು ಹೆಚ್ಚಿಸುತ್ತವೆ. ಆದ್ದರಿಂದ ಹಿಂದಿನ ದಿನದ ಆಹಾರ ಜೀರ್ಣವಾಗಿರುವ ಎಲ್ಲ ಲಕ್ಷಣಗಳು ಕಂಡುಬರದ ಹೊರತು ಬೆಳಗಿನ ಆಹಾರವನ್ನು ತೆಗೆದುಕೊಳ್ಳಬಾರದು. ‘ಆಹಾರ ಎಂದರೆ ಕೇವಲ ಗಟ್ಟಿ ಆಹಾರ ಮಾತ್ರವಲ್ಲ, ಚಹಾ, ಕಾಫಿ, ಹಾಲು, ಔಷಧ ಮುಂತಾದ ಹೊಟ್ಟೆಯಲ್ಲಿ ತೆಗೆದುಕೊಳ್ಳುವ ಎಲ್ಲ ಪದಾರ್ಥಗಳೆಂದರೆ, ಆಹಾರ. ಸುಳ್ಳು ಹಸಿವನ್ನು ಗುರುತಿಸಲು ಸ್ವಲ್ಪ ಬಿಸಿ ನೀರು ಕುಡಿಯಬೇಕು. ಇದರಿಂದ ಒಂದು ಬದಿಗೆ ನಿಂತಿರುವ ಆಹಾರವು ಪುನಃ ಅಗ್ನಿಯ ಮಾರ್ಗದಲ್ಲಿ ಬರುತ್ತದೆ ಮತ್ತು ಆಹಾರ ಜೀರ್ಣವಾದ ಲಕ್ಷಣಗಳು ಉಂಟಾಗುತ್ತವೆ. ಕೆಲವೊಂದು ಕಾರಣಗಳಿಂದ ಈ ಲಕ್ಷಣಗಳು ಉಂಟಾಗದಿದ್ದರೆ ಮತ್ತು ಹಸಿವಿನಿಂದ ತೊಂದರೆಗಳಾಗತೊಡಗಿದರೆ, ಉದಾ. ನಡುಕ ಬಂದಲ್ಲಿ, ತಲೆ ತಿರುಗುತ್ತಿದ್ದಲ್ಲಿ ಸುಲಭವಾಗಿ ಜೀರ್ಣವಾಗುವಂತಹ ಆಹಾರ (ಉದಾ. ರಾಜಗಿರಿ ಉಂಡೆ, ಅರಳು)ವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು.
ಹಿಂದಿನ ದಿನದ ಆಹಾರ ಜೀರ್ಣವಾಗಿರುವುದರ ಲಕ್ಷಣಗಳು
* ಬೆಳಗ್ಗೆ ಎದ್ದ ನಂತರ ಅಧೋವಾತ / ಅಪಾನವಾಯು ಮತ್ತು ಮಲ-ಮೂತ್ರ ವಿಸರ್ಜನೆ ಆಗುವುದು.
* ಎದೆಯಲ್ಲಿ ಜಡತ್ವ ಇಲ್ಲದಿರುವುದು.
* ಶರೀರದಲ್ಲಿನ ದೋಷಗಳು ಅವುಗಳ ಯೋಗ್ಯ ಮಾರ್ಗದಿಂದ ಹೊರಗೆ ಹೋಗುವುದು, ಉದಾ. ತೇಗು ಬರುವುದು, ವಾಯು ಅಧೋಮಾರ್ಗದಿಂದ ಹೊರಗೆ ಹೋಗುವುದು.
* ತೇಗು ಶುದ್ಧವಾಗಿರುವುದು, ಅದಕ್ಕೆ ಆಹಾರದ ಅಥವಾ ಕಮಟು ವಾಸನೆ ಬರದಿರುವುದು.
* ತುಂಬಾ ಹಸಿವಾಗುವುದು.
* ಕಣ್ಣು, ಮೂಗು, ಕಿವಿ ಮುಂತಾದ ಇಂದ್ರಿಯಗಳು ನಿರ್ಮಲವಾಗಿರುವುದು, ಉದಾ. ಬೆಳಗ್ಗೆ ಎದ್ದ ನಂತರ ಕಣ್ಣುಗಳಲ್ಲಿ ನಿದ್ರೆ ಇಲ್ಲದಿರುವುದು, ನಿದ್ರೆ ಪೂರ್ಣವಾಗಿರುವುದರ ಸಮಾಧಾನ ಇರುವುದು, ನಾಲಿಗೆ ಸ್ವಚ್ಛವಾಗಿರುವುದು.
* ಸಂಪೂರ್ಣ ಶರೀರ ಹಗುರ ಅನಿಸುವುದು.