ಭಾರತದಲ್ಲಿ ‘ಪ್ರಾಚೀನ ಕಾಲದಿಂದಲೂ ರತ್ನಗಳ ಉಪಯೋಗವಾಗುತ್ತದೆ. ಪ್ರಾಚೀನ ಋಷಿಗಳು, ಜ್ಯೋತಿಷಿಗಳು, ವೈದ್ಯಾಚಾರ್ಯರು ಮೊದಲಾದವರು ತಮ್ಮ ಗ್ರಂಥಗಳಲ್ಲಿ ‘ರತ್ನಗಳ ಗುಣಧರ್ಮ ಹಾಗೂ ಉಪಯೋಗಗಳ ಬಗ್ಗೆ ಬರೆದಿದ್ದಾರೆ. ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹದೋಷಗಳ ನಿವಾರಣೆಗಾಗಿ ರತ್ನಗಳನ್ನು ಉಪಯೋಗಿಸಲಾಗುತ್ತದೆ. ರತ್ನಗಳನ್ನು ಧರಿಸುವುದರ ಹಿಂದಿನ ಉದ್ದೇಶ ಹಾಗೂ ಅವುಗಳ ಉಪಯೋಗವನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.
೧. ರತ್ನಗಳ ವಿಧಗಳು
ರತ್ನಗಳಲ್ಲಿ ಖನಿಜ, ಜೈವಿಕ ಇತ್ಯಾದಿ ವಿಧಗಳಿವೆ. ಜೈವಿಕ ರತ್ನಗಳು ಕೀಟಗಳಿಂದ ಅಥವಾ ಜೀವಜಂತುಗಳಿಂದ ತಯಾರಾಗುತ್ತವೆ. ಉದಾ. ಮುತ್ತು ಹಾಗೂ ಹವಳ. ಖನಿಜ ರತ್ನಗಳು ಭೂಗರ್ಭದಲ್ಲಿ ರಾಸಾಯನಿಕ ಕ್ರಿಯೆಯಿಂದ ನೂರಾರು ವರ್ಷಗಳ ನಂತರ ಸಿದ್ಧವಾಗುತ್ತವೆ, ಉದಾ. ಮಾಣಿಕ್ಯ, ಪಚ್ಚೆ, ನೀಲ ಇತ್ಯಾದಿ. ಅವುಗಳ ಕೆತ್ತನೆ ಮಾಡಿ ಶುದ್ಧ ಮಾಡಲಾಗುತ್ತದೆ.
೨. ರತ್ನಗಳನ್ನು ಧರಿಸುವುದರ ಹಿಂದಿನ ಉದ್ದೇಶ
ರತ್ನಗಳು ನೈಸರ್ಗಿಕ ದಿವ್ಯ ಪದಾರ್ಥಗಳಾಗಿವೆ. ರತ್ನಗಳ ಗುಣಧರ್ಮಗಳಿಗನುಸಾರ ಅವುಗಳಿಂದ ಸೂಕ್ಷ್ಮ ಊರ್ಜೆ ವಾತಾವರಣದಲ್ಲಿ ಪಸರಿಸುತ್ತದೆ. ಹಾಗೆಯೇ ಗ್ರಹಗಳಿಂದ ಬರುವ ಸೂಕ್ಷ್ಮ ಊರ್ಜೆಯನ್ನು ರತ್ನಗಳು ಆಕರ್ಷಿಸುತ್ತವೆ. ಆದ್ದರಿಂದ ರತ್ನವನ್ನು ಧರಿಸುವ ವ್ಯಕ್ತಿಯ ಶರೀರ ಹಾಗೂ ಮನಸ್ಸಿನ ಮೇಲೆ ರತ್ನಗಳಲ್ಲಿನ ಸೂಕ್ಷ್ಮ ಊರ್ಜೆಯ ಪರಿಣಾಮವಾಗುತ್ತದೆ. ರತ್ನಗಳು ಘನ ಪದಾರ್ಥ ಗಳಾಗಿರುವುದರಿಂದ ಅವುಗಳಲ್ಲಿ ಸೂಕ್ಷ್ಮ ಊರ್ಜೆ ಹೆಚ್ಚು ಸಮಯದ ವರೆಗೆ ಉಳಿಯುತ್ತದೆ.
೩. ರತ್ನಗಳು ಮತ್ತು ಗ್ರಹ ಇವುಗಳ ಸಂಬಂಧ
ಪ್ರತಿಯೊಂದು ರತ್ನಕ್ಕೆ ವಿಶಿಷ್ಟ ಬಣ್ಣವಿರುತ್ತದೆ. ಆಧಿದೈವಿಕ ವಿಜ್ಞಾನಕ್ಕನುಸಾರ ಪ್ರತಿಯೊಂದು ಬಣ್ಣದಲ್ಲಿ ಸತ್ತ್ವ ರಜ ಹಾಗೂ ತಮ ಈ ಗುಣಗಳು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಉದಾ. ಕಪ್ಪು ಬಣ್ಣದಲ್ಲಿ ತಮೋಗುಣ, ಕೆಂಪು ಬಣ್ಣದಲ್ಲಿ ರಜೋಗುಣ ಹಾಗೂ ಹಳದಿ ಬಣ್ಣದಲ್ಲಿ ಸತ್ತ್ವಗುಣ ಹೆಚ್ಚು ಪ್ರಮಾಣದಲ್ಲಿರುತ್ತದೆ. ರತ್ನ ಮತ್ತು ಗ್ರಹ ಇವುಗಳ ಬಣ್ಣದ-ಸಮಾನತೆಯಿಂದ ಅವುಗಳಲ್ಲಿನ ಸಂಬಂಧವನ್ನು ನಿರ್ಧರಿಸಲಾಗಿದೆ. ಉದಾ. ‘ಮಾಣಿಕ್ಯ’ ಈ ಕೆಂಪು ಬಣ್ಣದ ರತ್ನವು ರವಿಗೆ ಸಂಬಂಧಿಸಿದೆ. ‘ಪುಷ್ಕರಾಜ’ ಈ ಹಳದಿ ಬಣ್ಣದ ರತ್ನವು ಗುರುಗ್ರಹಕ್ಕೆ ಸಂಬಂಧಿಸಿದೆ.
೪. ಜ್ಯೋತಿಷ್ಯಶಾಸ್ತ್ರದಲ್ಲಿ ರತ್ನಗಳ ಉಪಯೋಗ
ವ್ಯಕ್ತಿಯ ಜಾತಕದಲ್ಲಿ ಯಾವ ಗ್ರಹವು ಬಲಹೀನ ಅಥವಾ ಮಲಿನವಾಗಿರುತ್ತದೆಯೋ, ಆ ಗ್ರಹಕ್ಕೆ ಸಂಬಂಧಿಸಿದ ರತ್ನವನ್ನು ಧರಿಸಲಾಗುತ್ತದೆ ಅಥವಾ ಶರೀರದಲ್ಲಿ ಯಾವ ಊರ್ಜೆಯನ್ನು ಹೆಚ್ಚಿಸುವ ಅವಶ್ಯಕತೆಯಿರುತ್ತದೆಯೊ, ಆ ಊರ್ಜೆಗೆ ಸಂಬಂಧಿಸಿದ ರತ್ನವನ್ನು ಧರಿಸುವುದು ಲಾಭದಾಯಕವಾಗಿರುತ್ತದೆ. ಉದಾ. ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಕಡಿಮೆಯಿದ್ದರೆ ಅವನು ರವಿಯ ಮಾಣಿಕ್ಯ ರತ್ನವನ್ನು ಧರಿಸುವುದು ಲಾಭದಾಯಕವಾಗಿದೆ. ರತ್ನವನ್ನು ಉಂಗುರದಲ್ಲಿ ಅಳವಡಿಸಿ ಧರಿಸುವುದು ಉತ್ತಮ. ಮುಂದಿನ ಕೋಷ್ಟಕದಲ್ಲಿ ‘ರತ್ನಗಳಿಗೆ ಸಂಬಂಧಿಸಿದ ಗ್ರಹ, ರತ್ನಗಳ ಉಪಯೋಗ ಹಾಗೂ ಯಾವ ಬೆರಳಿನಲ್ಲಿ ಯಾವ ರತ್ನ ಧರಿಸಬೇಕು’, ಎಂದು ನೀಡಲಾಗಿದೆ.
೫. ರತ್ನಗಳನ್ನು ಧರಿಸುವುದರ ಕುರಿತು ಕೆಲವು ಅಂಶಗಳು
ಅ. ಸ್ತ್ರೀಯರು ಎಡ ಕೈಯಲ್ಲಿ ಮತ್ತು ಪುರುಷರು ಬಲ ಕೈಯಲ್ಲಿ ರತ್ನಗಳನ್ನು ಧರಿಸಬೇಕು. ಯೋಗಶಾಸ್ತ್ರಕ್ಕನುಸಾರ ಎಡ ಕೈಯ ಚಂದ್ರ ನಾಡಿಗೆ ಮತ್ತು ಬಲ ಕೈಯ ಸೂರ್ಯನಾಡಿಗೆ ಸಂಬಂಧಿಸಿದೆ.
ಆ. ರತ್ನವನ್ನು ಧರಿಸುವ ಮೊದಲು ಅದರ ಮೇಲೆ ಮಂತ್ರ ಪೂರ್ವಕ ಅಭಿಷೇಕ ಮಾಡುತ್ತಾರೆ. ಅದರಿಂದ ರತ್ನದ ಮೇಲೆ ಚೈತನ್ಯದ ಸಂಸ್ಕಾರವಾಗುತ್ತದೆ.
ಇ. ರತ್ನ ಯಾವ ಗ್ರಹಕ್ಕೆ ಸಂಬಂಧಿಸಿದೆಯೊ, ಆ ಗ್ರಹದ ವಾರದಂದು ಸೂರ್ಯೋದಯದ ನಂತರ ರತ್ನವನ್ನು ಧರಿಸಬೇಕು.
ಈ. ರತ್ನ ಭಂಗವಾದರೆ ಅದನ್ನು ಉಪಯೋಗಿಸಬಾರದು.
೬. ಕೃತಕ ರತ್ನಗಳನ್ನು ಯಾಕೆ ಧರಿಸಬಾರದು !
ಸದ್ಯ ಕೃತಕ (synthetic) ರತ್ನಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ನೈಸರ್ಗಿಕ ಹಾಗೂ ಕೃತಕ ರತ್ನಗಳು ಒಂದೇ ರೀತಿ ಕಾಣಿಸುತ್ತವೆ; ಆದರೆ ಕೃತಕ ರತ್ನಗಳು ತುಲನೆಯಲ್ಲಿ ಟೊಳ್ಳಾಗಿರುತ್ತವೆ, ಆದ್ದರಿಂದ ಅವುಗಳ ಮೇಲೆ ಕೆತ್ತನೆ ಕಡಿಮೆ ಇರುತ್ತದೆ. ಕೃತಕ ರತ್ನಗಳ ಬೆಲೆ ಕಡಿಮೆಯಿರುತ್ತದೆ; ಆದರೆ ನೈಸರ್ಗಿಕ ರತ್ನಗಳಲ್ಲಿರುವ ದೈವೀ ಊರ್ಜೆಯು ಕೃತಕ ರತ್ನಗಳಲ್ಲಿರುವುದಿಲ್ಲ. ಆದ್ದರಿಂದ ಗ್ರಹದೋಷಗಳ ಹಾಗೂ ವ್ಯಾಧಿಗಳ ನಿವಾರಣೆಗಾಗಿ ನೈಸರ್ಗಿಕ ರತ್ನಗಳನ್ನು ಉಪಯೋಗಿಸುವುದು ಲಾಭದಾಯಕವಾಗಿದೆ.
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೧೨.೨೦೨೨)