ವೈಶಾಖ ಶುಕ್ಲ ತೃತೀಯಾ ೨೨.೪.೨೦೨೩ ರಂದು ಇರುವ ‘ಪರಶುರಾಮ ಜಯಂತಿಯ ನಿಮಿತ್ತ…
ವೈಶಾಖ ಶುಕ್ಲ ಪಕ್ಷ ತೃತೀಯಾ ದಿನದಂದು ಮಹಾಪರಾಕ್ರಮಿ ವೀರ ಪರಶುರಾಮ ಜನಿಸಿದನು. ದಶಾವತಾರದಲ್ಲಿ ಇದು ೬ ನೇ ಅವತಾರವಾಗಿದೆ. ಪರಶುರಾಮನು ಭೃಗುಕುಲ ಋಷಿ ಜಮದಗ್ನಿ ಮತ್ತು ದೇವಿ ರೇಣುಕಾ ಇವರ ಪುತ್ರ.
ಪರಶುರಾಮನ ಅದ್ವಿತೀಯ ಪರಾಕ್ರಮದಿಂದ ಅವನ ಹೆಸರು ಜಗದ್ವಿಖ್ಯಾತವಾಗಿದೆ. ಅವನು ಅತ್ಯಂತ ತೇಜಸ್ವಿಯಾಗಿದ್ದು, ಧನುರ್ವಿದ್ಯೆ ಬಗ್ಗೆ ಅಪಾರ ಭಕ್ತಿ ಹೊಂದಿದ್ದನು. ಶಂಕರನ ಕೃಪೆಯಿಂದ ಅವನಿಗೆ ಎಂದಿಗೂ ಮೊಂಡಾಗದ ‘ಪರಶು ಲಭಿಸಿತ್ತು. ವರ್ತಿಕಾವತ್ ದೇಶದ ರಾಜ ‘ಚಿತ್ರರಥನನ್ನು ನೋಡಿ ದೇವಿ ರೇಣುಕೆಯ ಮನಸ್ಸು ವಿಚಲಿತಗೊಂಡಿದೆ ಎಂದು ಋಷಿ ಜಮದಗ್ನಿಗೆ ಸಂಶಯ ಮೂಡಿತು. ಆಗ ಅವಳನ್ನು ವಧಿಸಲು ಅವನು ತನ್ನ ನಾಲ್ಕು ಮಕ್ಕಳಿಗೆ ಹೇಳಿದನು. ಅವರಲ್ಲಿ ಪರಶುರಾಮನು ತನ್ನ ತಾಯಿಯನ್ನು ವಧಿಸಿದನು. ನಂತರ ತಂದೆಯ ಕೃಪೆ ಸಂಪಾದಿಸಿ ರೇಣುಕೆಯನ್ನು ಮೊದಲಿನಂತೆ ಜೀವಂತಗೊಳಿಸಿದನು. ನರ್ಮದೆಯ ಉತ್ತರತೀರದಲ್ಲಿ ‘ಕಾರ್ತವೀರ್ಯ ಅಂದರೆ ‘ಸಹಸ್ರಾರ್ಜುನ ಹೆಸರಿನ ಪರಾಕ್ರಮಿ ಪುರುಷ ದಿಗ್ವಿಜಯ ಮಾಡುತ್ತ ಹೊರಟಿದ್ದನು. ಅವನು ಬ್ರಹ್ಮನಿಷ್ಠ ವಸಿಷ್ಠ ಋಷಿಗಳ ಆಶ್ರಮವನ್ನು ಬೆಂಕಿಗಾಹುತಿ ಮಾಡಿದಾಗ ವಸಿಷ್ಠರು ‘ನಿನ್ನ ಸಾವಿರಾರು ಬಾಹುಗಳನ್ನು ಪರಶುರಾಮನು ನಾಶಗೊಳಿಸುವನು, ಎಂದು ಕಾರ್ತವೀರ್ಯನಿಗೆ ಶಪಿಸಿದರು ಮತ್ತು ಈ ಶಾಪವು ಬೇಗನೆ ಸತ್ಯವಾಯಿತು. ಸಹಸ್ರಾರ್ಜುನನು ಜಮದಗ್ನಿ ಋಷಿಯ ಆಶ್ರಮದಲ್ಲಿದ್ದ ಕಾಮಧೇನುವನ್ನು ಕದ್ದೊಯ್ದನು. ಇಷ್ಟೇ ಅಲ್ಲ, ಮುಂದೆ ಅವನು ಪರಶುರಾಮನು ಇಲ್ಲದಿರುವಾಗ ವೃದ್ಧ ಜಮದಗ್ನಿ ಋಷಿಯ ಮೇಲೆ ೨೧ ಸಲ ಹಲ್ಲೆ ನಡೆಸಿ ವಧಿಸಿದನು.
ಪರಶುರಾಮನ ಕ್ರೋಧದ ಎಲ್ಲೆ ಮೀರಿತು. ಅವನು ‘೬೪ ಕ್ಷತ್ರೀಯ ರಾಜವಂಶ ಸಮೇತ ನಾಶಗೊಳಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದನು. ಅವನು ಮನಸ್ಸಿನಲ್ಲಿ ಸೇಡು ಮತ್ತು ಕೈಯಲ್ಲಿ ಪರಶುವನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಬಿದ್ದನು.
ಅವನು ಕಾರ್ತವೀರ್ಯನ ಸೈನ್ಯವನ್ನು ಧೂಳಿಪಟ ಮಾಡಿದನು. ಪರಶುರಾಮನು ತನ್ನ ಕೊಡಲಿಯಿಂದ ಅವನ ಸಾವಿರಾರು ಬಾಹುಗಳನ್ನು ತುಂಡರಿಸಿದನು ಮತ್ತು ಅವನ ಮಕ್ಕಳನ್ನು ಸಹ ಸೋಲಿಸಿದನು. ತದನಂತರ ಪರಶುರಾಮನು ೨೧ ಸಲ ಕ್ಷತ್ರೀಯರನ್ನು ಸೋಲಿಸಿ, ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಿದನು. ‘ಬ್ರಹ್ಮವಿದ್ವತ್ ಬ್ರಾಹ್ಮಣರಿಗೆ ಯಾವಾಗ ಆಪತ್ಕಾಲ ಎದುರಾಗುವುದೋ, ಆಗ ನಾನು ಶಸ್ತ್ರವನ್ನು ಹಿಡಿಯುತ್ತೇನೆ ಎಂದು ಅವನು ಸಂಕಲ್ಪ ಮಾಡಿದ್ದನು. ಎಲ್ಲ ಭೂಮಿಯನ್ನು ವಶ ಪಡಿಸಿಕೊಂಡರೂ, ಅವನಿಗೆ ರಾಜ್ಯಭಾರ ಮಾಡುವ ಆಸಕ್ತಿಯಿರಲಿಲ್ಲ. ಅವನು ಒಂದು ದೊಡ್ಡ ಯಜ್ಞವನ್ನು ಮಾಡಿ, ಎಲ್ಲ ಸಂಪತ್ತನ್ನು ಬ್ರಾಹ್ಮಣರಿಗೆ ದಾನ ಮಾಡಿ ‘ತಪಸ್ವಿಯಂತೆ ಮಹೇಂದ್ರ ಪರ್ವತದ ಮೇಲೆ ಆಶ್ರಮವನ್ನು ಸ್ಥಾಪಿಸಿ ಅಲ್ಲಿ ವಾಸ ಮಾಡಿದನು.
ಆಧಾರ : ‘ದಿನವಿಶೇಷ (ಭಾರತೀಯ ಇತಿಹಾಸದ ತಿಥಿ ವಾರ ದರ್ಶನ)
(ಲೇಖಕ : ಪ್ರಹ್ಲಾದ ನರಹರ ಜೋಶಿ, ಪುಣೆ (ಪ್ರಥಮ ಆವೃತ್ತಿ : ೧೯೫೦)