ನಮ್ಮ ಪ್ರಕೃತಿಯನ್ನು (ವಾತ, ಪಿತ್ತ ಮತ್ತು ಕಫ) ಹೇಗೆ ಗುರುತಿಸಬೇಕು ?

ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತಾನೆ ಎಂದು ನಾವು ಹೇಳುತ್ತಿರುತ್ತೇವೆ. ಒಬ್ಬ ವ್ಯಕ್ತಿಯು ಇನ್ನೊಬ್ಬನಂತೆ ಇರುವುದಿಲ್ಲ. ಪ್ರತಿಯೊಬ್ಬರ ಇಷ್ಟಾನಿಷ್ಟಗಳು ಬೇರೆಬೇರೆಯಾಗಿರುತ್ತವೆ, ಈ ಪ್ರತ್ಯೇಕತೆಗಳೇನಿವೆಯೋ ಅವುಗಳೆಂದರೆ ನಮ್ಮ ದೇಹದ ಸ್ವಭಾವ ಧರ್ಮ. ಪ್ರಕೃತಿಯ ಅನೇಕ ವರ್ಗೀಕರಣವಿರ ಬಹುದು, ಉದಾ,

೧. ಶರೀರದಲ್ಲಿನ ದೋಷಗಳಿಗನುಸಾರ ಅವರ ಪ್ರಕೃತಿ

೨. ಶರೀರದಲ್ಲಿರುವ ಪಂಚಮಹಾಭೂತಗಳಿಗನುಸಾರ ಪ್ರಕೃತಿ

೩. ಸತ್ತ್ವ, ರಜ, ಮತ್ತು ತಮ ಈ ಗುಣಗಳಿಗನುಸಾರ ಪ್ರಕೃತಿ ಹೀಗೆ ಅನೇಕ ವರ್ಗೀಕರಣವಿರಬಹುದು. ಇಂದು ನಾವು ಕೇವಲ ದೋಷಗಳಿಗನುಸಾರ ಪ್ರಕೃತಿಯ ವಿಧಗಳು ಹೇಗಿರುತ್ತವೆ ? ಎಂದು ನೋಡಲಿದ್ದೇವೆ.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

೧. ನಮ್ಮ ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವುದರ ಹಿಂದಿನ ಕಾರಣ

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ನಮ್ಮ ಪ್ರಕೃತಿಯ ಬಗ್ಗೆ ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ನಮ್ಮ ಪ್ರಕೃತಿಯನ್ನು ತಿಳಿದುಕೊಳ್ಳುವುದು ಎಂದರೆ ಆರೋಗ್ಯದ ಗುರುಕೀಲಿ ಕೈ ದೊರಕಿದಂತಿದೆ; ಏಕೆಂದರೆ ನಮಗೆ ನಮ್ಮ ಪ್ರಕೃತಿಗನುಸಾರ ಯಾವ ಆಹಾರ ಸೇವಿಸಬೇಕು ? ಯಾವುದನ್ನು ಸೇವಿಸಬಾರದು ? ಯಾವ ಕಾಯಿಲೆ ಬರುವ ಸಾಧ್ಯತೆ ಇದೆ ? ಕಾಯಿಲೆ ಬರದಂತೆ ಹೇಗೆ ಕಾಳಜಿ ವಹಿಸಬಹುದು ? ಇಂತಹ ಎಲ್ಲ ವಿಷಯಗಳ ಮಾರ್ಗದರ್ಶನ ನಮಗೆ ದೊರಕಬಹುದು. ಹಾಗೆಯೇ ಯಾವುದಾದರೊಂದು ಕಾಯಿಲೆಯಾದರೆ, ಅದನ್ನು ಗುಣಪಡಿಸಲು ಪ್ರಕೃತಿಯ ಅಭ್ಯಾಸ ಬಹಳ ಮಹತ್ವದ್ದಾಗಿದೆ. ಉದಾ. ಪಿತ್ತ ಪ್ರಕೃತಿಯ ವ್ಯಕ್ತಿಗೆ ಔಷಧಿಯನ್ನು ನೀಡುವಾಗ ಅದು ಬಹಳ ಉಷ್ಣವಾಗಿರಬಾರದು; ಏಕೆಂದರೆ ಅವನಿಗೆ ಅದರ ಲಾಭವಾಗುವ ಬದಲು ಹೆಚ್ಚು ತೊಂದರೆಯೇ ಆಗುತ್ತದೆ. ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು; ಆದರೆ ಕಾಯಿಲೆಯನ್ನು ಗುಣಮುಖ ಮಾಡುವುದು, ಇದು ಸಂಪೂರ್ಣವಾಗಿ ವೈದ್ಯರ ಕೈಯಲ್ಲಿದೆ. ಹೀಗಿದ್ದರೂ ನಮಗೆ ಕಾಯಿಲೆ ಬರಬಾರದು ಎಂಬುದಕ್ಕಾಗಿ ಪ್ರಕೃತಿಯನ್ನು ತಿಳಿದುಕೊಳ್ಳಬೇಕು.

೨. ವ್ಯಕ್ತಿಯ ಪ್ರಕೃತಿಯು ಹೇಗೆ ತಯಾರಾಗುತ್ತದೆ ?

ಈಗ ನಾವು ಪ್ರಕೃತಿಯು ಹೇಗೆ ತಯಾರಾಗುತ್ತದೆ ? ಎಂಬುದನ್ನು ತಿಳಿದುಕೊಳ್ಳೋಣ. ಯಾವಾಗ ತಾಯಿಯ ಗರ್ಭಾಶಯ ದಲ್ಲಿ ಜೀವವು ರೂಪುಗೊಳ್ಳುತ್ತಿರುವಾಗ ಯಾವ ದೋಷವು ಪ್ರಬಲ (dominant) ಇರುತ್ತದೆಯೋ, ಅದಕ್ಕನುಸಾರ ಆ ವ್ಯಕ್ತಿಯ ಪ್ರಕೃತಿ ನಿರ್ಧರಿತವಾಗುತ್ತದೆ. ಹೊಸ ಜೀವದ ಪ್ರಕೃತಿಯು ಕೆಳಗೆ ಕೊಡಲಾದ ಅಂಶಗಳನ್ನು ಅವಲಂಬಿಸಿರುತ್ತದೆ –

೨ ಅ. ತಾಯಿ ಅಥವಾ ತಂದೆಯ ಬೀಜಗಳಲ್ಲಿ ನಿಖರವಾಗಿ ಯಾವ ದೋಷ ಹೆಚ್ಚಿರುತ್ತದೆ ?

೨ ಆ. ಗರ್ಭಧಾರಣೆಯ ಸಮಯದಲ್ಲಿ ತಾಯಿಯು ಯಾವ ರೀತಿಯ ಆಹಾರವನ್ನು ಸೇವಿಸಿದ್ದಳು ? ಅಥವಾ ದಿನಚರಿ ಯನ್ನು ಯಾವ ರೀತಿ ಪಾಲಿಸಿದ್ದಳು ?

೨ ಇ. ಗರ್ಭಾಶಯದ ಸ್ಥಿತಿ

೨ ಈ. ಗರ್ಭಧಾರಣೆಯು ಯಾವ ಕಾಲದಲ್ಲಿ ಆಯಿತು, ಅಂದರೆ ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ? ಪ್ರಕೃತಿಯನ್ನು ನಿರ್ಧರಿಸುವಲ್ಲಿ ಇವೆಲ್ಲ ವಿಷಯಗಳು ಕಾರಣವಾಗಿರುತ್ತದೆ

ಯಾವಾಗ ಜೀವವು ರೂಪುಗೊಳ್ಳುತ್ತದೆಯೋ, ಆಗ ಪ್ರತಿಯೊಂದು ಜೀವಕ್ಕೆ ಎರಡು ಕಾಲು, ಎರಡು ಕೈಗಳು ಹೀಗೆ ಎಲ್ಲ ಅವಯವಗಳು ತಯಾರಾಗುತ್ತವೆ. ಪ್ರತಿಯೊಂದು ವ್ಯಕ್ತಿಯಲ್ಲಿ ಜೀರ್ಣಕ್ರಿಯೆ, ಉಸಿರಾಟ, ರಕ್ತಸಂಚಾರ ಇವೆಲ್ಲವೂ ನಡೆದೇ ಇರುತ್ತದೆ. ಹಾಗಾದರೆ ಪ್ರಕೃತಿಯ ವ್ಯತ್ಯಾಸ ಎಲ್ಲಿ ಕಂಡು ಬರುತ್ತದೆ ಎಂದರೆ, ಕೆಲವರಲ್ಲಿ ಆಹಾರ ಜೀರ್ಣಕ್ರಿಯೆಯು ತ್ವರಿತವಾಗಿ ಅಥವಾ ತಡವಾಗಿ ಆಗುತ್ತದೆ; ಕೆಲವರು ಕಾಣಲು ತೆಳ್ಳಗೆ ಮತ್ತು ಕೆಲವರು ಗುಂಡುಗುಂಡಗೆ ಇರುತ್ತಾರೆ; ಕೆಲವರ ಕೂದಲುಗಳು ನೇರ ಮತ್ತು ಕೆಲವರದ್ದು ಗುಂಗುರು ಕೂದಲುಗಳು, ಇಂತಹ ವ್ಯತ್ಯಾಸಗಳು ನಮಗೆ ಪ್ರತ್ಯೇಕವಾಗಿ ಕಂಡುಬರುತ್ತವೆ. ಈ ವೈಶಿಷ್ಟ್ಯಪೂರ್ಣ ವ್ಯತ್ಯಾಸವೆಂದರೆ ಆ ವ್ಯಕ್ತಿಯ ಪ್ರಕೃತಿಯಾಗಿರುತ್ತದೆ.

ಈಗ ಎಲ್ಲಕ್ಕಿಂತ ಮಹತ್ವದ ಅಂಶವೆಂದರೆ ನಮ್ಮ ಪ್ರಕೃತಿ ಬದಲಾಗುತ್ತಿರುತ್ತದೆಯೇ ? ಇದರ ಉತ್ತರ ಹೀಗಿದೆ, ಪ್ರಕೃತಿ ಎಂದಿಗೂ ಬದಲಾಗುವುದಿಲ್ಲ. ಜನ್ಮದಿಂದಲೇ ಯಾರಾದರೊಬ್ಬ ವ್ಯಕ್ತಿಯು ವಾತ ಪ್ರಕೃತಿಯವನಾಗಿದ್ದರೆ, ಸಾಯುವವರೆಗೆ ಆ ವ್ಯಕ್ತಿಯ ಪ್ರಕೃತಿ ವಾತದ್ದೇ ಇರುತ್ತದೆ. ಅವನದು ಎಂದಿಗೂ ಪಿತ್ತ ಅಥವಾ ಕಫ ಪ್ರಕೃತಿಯಾಗುವುದಿಲ್ಲ; ಆದರೆ ಇಂತಹ ವ್ಯಕ್ತಿಯಲ್ಲಿ ಕಫ ಅಥವಾ ಪಿತ್ತ ದೋಷ ಹೆಚ್ಚಾಗಬಹುದು.

೩. ದೋಷಗಳಿಗನುಸಾರ ಪ್ರಕೃತಿಯ ವರ್ಗೀಕರಣ

ಈಗ ದೋಷಗಳಿಗನುಸಾರ ಪ್ರಕೃತಿಯ ವರ್ಗೀಕರಣ ಹೇಗಿರುತ್ತದೆ ? ಎಂಬುದನ್ನು ತಿಳಿದುಕೊಳ್ಳೋಣ.

೩ ಅ. ಒಂದು ದೋಷ ಪ್ರಕೃತಿ : ವಾತ, ಪಿತ್ತ ಮತ್ತು ಕಫ ಪ್ರಕೃತಿ (ಒಂದು ದೋಷದ ಲಕ್ಷಣಗಳಿರುವುದು).

೩ ಆ. ಎರಡು ದೋಷಾತ್ಮಕ ಪ್ರಕೃತಿ : ವಾತ-ಪಿತ್ತ ಪ್ರಕೃತಿ, ಪಿತ್ತ-ಕಫ ಪ್ರಕೃತಿ, ಕಫ-ವಾತ ಪ್ರಕೃತಿ (ಎರಡು ದೋಷಗಳ ಲಕ್ಷಣಗಳಿರುವುದು).

೩. ಇ. ಮೂರು ದೋಷಾತ್ಮಕ ಪ್ರಕೃತಿ : ವಾತ-ಪಿತ್ತ-ಕಫ ಪ್ರಕೃತಿ (ಮೂರೂ ದೋಷಗಳ ಲಕ್ಷಣಗಳಿರುವುದು )

ಒಂದು ದೋಷ ಪ್ರಕೃತಿಗಳ ಪ್ರಕಾರಗಳಲ್ಲಿ ವಾತ ಪ್ರಕೃತಿ ಇದು ಕನಿಷ್ಠ (ಕೆಳ ಮಟ್ಟದ್ದು) ಪ್ರಕೃತಿ ಮತ್ತು ಪಿತ್ತ ಪ್ರಕೃತಿಯು ಮಧ್ಯಮ ಮತ್ತು ಕಫ ಪ್ರಕೃತಿಯು ಶ್ರೇಷ್ಠವಾಗಿರುತ್ತದೆ. ಎರಡು ದೋಷಾತ್ಮಕ ಪ್ರಕೃತಿಯಲ್ಲಿ ಪಿತ್ತ – ಕಫವನ್ನು ಶ್ರೇಷ್ಠವೆಂದು, ಕಫ – ವಾತವನ್ನು ಮಧ್ಯಮ ಮತ್ತು ವಾತ – ಪಿತ್ತ ಪ್ರಕೃತಿಯನ್ನು ಕನಿಷ್ಠ ಎಂದು ತಿಳಿಯಲಾಗುತ್ತದೆ. ಇಲ್ಲಿ ಕನಿಷ್ಠ ಪ್ರಕೃತಿ ಎಂದರೆ ಈ ಪ್ರಕೃತಿಯ ವ್ಯಕ್ತಿಗಳಿಗೆ ಬಹಳ ಆರೋಗ್ಯದ ಸಮಸ್ಯೆ ಇರುತ್ತವೆ ಮತ್ತು ಅವರಿಗಾದ ಕಾಯಿಲೆ ಗುಣಮುಖವಾಗಲು ಸಮಯ ತೆಗೆದುಕೊಳ್ಳುತ್ತದೆ; ಆದರೆ ಪ್ರಕೃತಿಯನ್ನು ಗುರುತಿಸಿ ನಿಯಮದಿಂದ ಆಚರಣೆ ಮಾಡಿದರೆ ಕನಿಷ್ಠ ಪ್ರಕೃತಿಯಾಗಿದ್ದರೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

೪. ನಮ್ಮ ಪ್ರಕೃತಿಯು ಅನಾನುಕೂಲದ್ದಲ್ಲ !

ಜನ್ಮದಿಂದಲೇ ಯಾವ ದೋಷವು ಪ್ರಬಲವಾಗಿರುತ್ತದೆಯೋ ಅದೇ ನಮ್ಮ ಪ್ರಕೃತಿಯಾಗಿರುತ್ತದೆ. ಆ ಪ್ರಬಲ ದೋಷದಿಂದ ನಮಗೆ ಯಾವತ್ತೂ ತೊಂದರೆ ಆಗುತ್ತಿರುವುದಿಲ್ಲ; ಆದರೆ ನಾವು ತಪ್ಪು ಆಹಾರ ವಿಹಾರ ಮಾಡಿದರೆ ಮತ್ತು ದೋಷಗಳ ಪ್ರಮಾಣವು ಹದಗೆಟ್ಟರೆ ಮಾತ್ರ ಆರೋಗ್ಯದಲ್ಲಿ ಅಡೆತಡೆ ಉಂಟಾಗುತ್ತದೆ. ಉದಾ. ಯಾರಾದರೊಬ್ಬ ವಾತ ಪ್ರಕೃತಿಯ ಮನುಷ್ಯನು ಒಂದು ವೇಳೆ ಸ್ವಲ್ಪ ವಾತ ಹೆಚ್ಚಾಗುವ ಪದಾರ್ಥವನ್ನು ತಿಂದರೆ, ಅವನ ಶರೀರದಲ್ಲಿನ ವಾತವು ತಕ್ಷಣ ಹೆಚ್ಚಾಗುತ್ತದೆ. ತದ್ವಿರುದ್ಧ ಕಫ ಪ್ರಕೃತಿಯ ವ್ಯಕ್ತಿಯು ವಾತದಿಂದ ಕೂಡಿದ ಪದಾರ್ಥವನ್ನು ತಿಂದರೆ ಅವನಿಗೆ ಅಷ್ಟು ಬೇಗನೆ ವಾತವು ಬಾಧಿಸುವುದಿಲ್ಲ. ಐಸ್‌ಕ್ರೀಮ್ ತಿಂದಾಗ ಕೆಲವರಿಗೆ ತಕ್ಷಣ ಕಫದ ತೊಂದರೆಯಾಗುತ್ತದೆ ಮತ್ತು ಕೆಲವರಿಗೆ ತೊಂದರೆ ಯಾಗುವುದಿಲ್ಲ, ಇದು ಅವರ ಪ್ರಕೃತಿಯಿಂದಾಗಿ ಆಗುತ್ತದೆ !

೫. ಶರೀರದಲ್ಲಿ ದೋಷಗಳಿಗನುಸಾರ ಕಂಡು ಬರುವ ಲಕ್ಷಣಗಳು

ಈಗ ಯಾವ ದೋಷದ ಪ್ರಕಾರ ನಮ್ಮ ದೇಹದಲ್ಲಿ ಯಾವ ಲಕ್ಷಣಗಳಿವೆ ಎಂದು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

೫ ಅ. ವಾತ ಪ್ರಕೃತಿ

೧. ದೇಹದಾರ್ಢ್ಯತೆ : ವಾತ ಪ್ರಕೃತಿಯ ವ್ಯಕ್ತಿಯ ದೇಹದಾರ್ಢ್ಯವು ಕೃಶ ಮತ್ತು ತೂಕ ಕಡಿಮೆ ಇರುತ್ತದೆ.

೨. ಚರ್ಮ : ಚರ್ಮವು ಒರಟಾಗಿರುತ್ತದೆ ಮತ್ತು ನಿಸ್ತೇಜ ವಾಗಿರುತ್ತದೆ. ಈ ಪ್ರಕೃತಿಯ ವ್ಯಕ್ತಿಗಳ ಪಾದಗಳು ಯಾವಾಗಲೂ ಸೀಳಿರುತ್ತವೆ.

೩. ಕೂದಲು : ಗುಂಗುರು, ಒಣ, ಭುರ್ರೇಂದು ಹಾರುತ್ತವೆ. ಕೂದಲುಗಳ ತುದಿಗಳು ಯಾವಾಗಲೂ ಇಬ್ಭಾಗವಾಗಿರುತ್ತವೆ.

೪. ಹಲ್ಲುಗಳು : ಸೊಟ್ಟಡೊಂಕು ಮತ್ತು ಬೇಗನೆ ಹುಳು ಹಿಡಿಯುವಂತಹ ಹಲ್ಲುಗಳಿರುತ್ತವೆ.

೫. ಮೂಳೆಗಳು : ಸಂದುಗಳ ಚಲನವಲನ ಮಾಡುವಾಗ ಕಟ ಕಟ ಎಂಬ ಧ್ವನಿ ಬರುತ್ತದೆ.

೬. ಸ್ವಭಾವ : ವಾತಪ್ರಕೃತಿಯ ವ್ಯಕ್ತಿಗಳು ಮಾತುಗಾರರಾಗಿರುತ್ತಾರೆ. ಅವರಿಗೆ ನಿದ್ದೆ ಕಡಿಮೆ ಬರುತ್ತದೆ ಮತ್ತು ತಕ್ಷಣ ಎಚ್ಚರಾಗುತ್ತಾರೆ. ನಿದ್ದೆಯಲ್ಲಿ ಯಾವಾಗಲೂ ಕನಸುಗಳು ಬೀಳುತ್ತವೆ. ಈ ವ್ಯಕ್ತಿಗಳುಚಂಚಲಸ್ವಭಾವದರಾಗಿರುತ್ತಾರೆ. ಒಂದು ಸ್ಥಳದಲ್ಲಿ ಸ್ಥಿರವಾಗಿ ಕುಳಿತಿರಲು ಸಾಧ್ಯವಾಗುವುದಿಲ್ಲ. ಈ ವ್ಯಕ್ತಿಗಳಿಗೆ ಪದೇಪದೇ ಮಲಬದ್ಧತೆಯ ತೊಂದರೆ ಆಗುತ್ತಿರುತ್ತದೆ. ಬೆವರು ಬರುವ ಪ್ರಮಾಣ ಕಡಿಮೆಯಿರುತ್ತದೆ. ಈ ವ್ಯಕ್ತಿಗಳ ಗ್ರಹಣಶಕ್ತಿ ಉತ್ತಮವಾಗಿರುತ್ತದೆ; ಆದರೆ ಅದು ದೀರ್ಘಕಾಲ ಉಳಿಯುವುದಿಲ್ಲ. ಈ ವ್ಯಕ್ತಿಗಳ ಪ್ರತಿಕಾರಕ್ಷಮತೆ ಕಡಿಮೆ ಇರುತ್ತದೆ.

೫ ಆ. ಪಿತ್ತ ಪ್ರಕೃತಿ

೧. ದೇಹದಾರ್ಢ್ಯತೆ : ಈ ವ್ಯಕ್ತಿಗಳು ಮಧ್ಯಮ ಎತ್ತರವನ್ನು ಹೊಂದಿರುತ್ತಾರೆ ಮತ್ತು ಬಹಳ ದಪ್ಪ ಅಥವಾ ತೆಳ್ಳಗೂ ಇರುವುದಿಲ್ಲ.

೨. ಚರ್ಮ : ಈ ಪ್ರಕೃತಿಯ ವ್ಯಕ್ತಿಗಳು ಗೌರವ(ಬೆಳ್ಳಗೆ) ವರ್ಣ ವನ್ನು ಹೊಂದಿರುತ್ತಾರೆ. ಚರ್ಮ ಮತ್ತು ಮುಖದ ಮೇಲೆ ಬಹಳ ಮಚ್ಚೆಗಳು(ಕಪ್ಪು ಚುಕ್ಕಿಗಳು) ಇರುತ್ತವೆ.

೩. ಕೂದಲು : ಕೂದಲು ತೆಳ್ಳಗೆ ಮತ್ತು ಕಂದು ಬಣ್ಣದ್ದಾಗಿರುತ್ತವೆ. ಈ ವ್ಯಕ್ತಿಗಳ ಕೂದಲುಗಳು ಬೇಗನೆ ಬೆಳ್ಳಗಾಗುತ್ತವೆ ಮತ್ತು ಬೇಗನೆ ಉದುರುತ್ತವೆ.

೪. ಹಲ್ಲುಗಳು : ಹಲ್ಲುಗಳು ಸ್ವಲ್ಪ ಕಂದು ಬಣ್ಣದ್ದಾಗಿರುತ್ತವೆ.

೫. ಇತರ : ಈ ಪ್ರಕೃತಿಯ ವ್ಯಕ್ತಿಗಳಿಗೆ ಬಹಳ ಬೆವರು ಬರುತ್ತದೆ ಮತ್ತು ಹಸಿವೂ ಬಹಳ ಆಗುತ್ತದೆ. ಪಿತ್ತ ಪ್ರಕೃತಿಯ ವ್ಯಕ್ತಿಗೆ ಹಸಿವು ಸಹನೆಯಾಗುವುದಿಲ್ಲ. ಹಸಿವಾದಾಗ ತಿನ್ನದಿದ್ದರೆ ತಲೆ ನೋಯುತ್ತದೆ, ತಲೆತಿರುಗುತ್ತದೆ. ಪಿತ್ತ ಪ್ರಕೃತಿಯ ವ್ಯಕ್ತಿಗಳಿಗೆ ಶೀತಲ ವಾತಾವರಣದಲ್ಲಿರಲು ಇಷ್ಟವಾಗುತ್ತದೆ. ಇವರಿಗೆ ಮಲಬದ್ಧತೆಯ ತೊಂದರೆಯಾಗುವುದಿಲ್ಲ. ಪಿತ್ತ ಪ್ರಕೃತಿಯ ವ್ಯಕ್ತಿ ಗಳು ಧೈರ್ಯವುಳ್ಳವರು ಮತ್ತು ನೇತೃತ್ವ ವಹಿಸುವವರಾಗಿರುತ್ತಾರೆ. ಪಿತ್ತ ಪ್ರಕೃತಿಯ ವ್ಯಕ್ತಿಗಳು ಮುಂಗೋಪಿಯಾಗಿರುತ್ತಾರೆ.

೫ ಇ. ಕಫ ಪ್ರಕೃತಿ

೧. ದೇಹದಾರ್ಢ್ಯತೆ : ಈ ಪ್ರಕೃತಿಯ ವ್ಯಕ್ತಿಗಳ ಮೈಕಟ್ಟು ಸದೃಢವಾಗಿರುತ್ತದೆ. ಈ ವ್ಯಕ್ತಿಯು ಎತ್ತರ ಮತ್ತು ದಷ್ಟಪುಷ್ಟನಾಗಿರುತ್ತಾನೆ.

೨. ಚರ್ಮ : ಅತ್ಯಂತ ನುಣುಪು ಮತ್ತು ಸುಂದರವಾಗಿರುತ್ತದೆ. ಚರ್ಮದ ಮೇಲೆ ಮಚ್ಚೆ ಅಥವಾ ಕಲೆ ಇರುವುದಿಲ್ಲ. ಈ ಜನರ ಚರ್ಮ ಬೇಗನೆ ಸುಕ್ಕುಗಟ್ಟುವುದಿಲ್ಲ.

೩. ಕೂದಲುಗಳು : ಕಪ್ಪು ಮತ್ತು ದಟ್ಟ ಇರುತ್ತವೆ. ಕೂದಲುಗಳು ಮೃದು ಮತ್ತು ಹೊಳಪುಳ್ಳದ್ದಾಗಿರುತ್ತವೆ.

೪. ಹಲ್ಲುಗಳು : ದೊಡ್ಡ, ನೇರ ಮತ್ತು ಹಲ್ಲುಗಳಲ್ಲಿ ಅಂತರ ಇರುವುದಿಲ್ಲ.

೫. ಮೂಳೆಗಳು : ಈ ವ್ಯಕ್ತಿಗಳ ಸಂದುಗಳು ಬಲಶಾಲಿಯಾಗಿರುತ್ತವೆ. ಚಲನವಲನದ ಸಮಯದಲ್ಲಿ ಸಂದುಗಳಲ್ಲಿ ಶಬ್ದವಾಗುವುದಿಲ್ಲ.

೬. ಸ್ವಭಾವ : ಈ ವ್ಯಕ್ತಿಗಳು ಹಸಿವನ್ನು ಸಹಿಸಿಕೊಳ್ಳುತ್ತಾರೆ. ಈ ಜನರಿಗೆ ನಿಯಮಿತವಾಗಿ ಮಲವಿಸರ್ಜನೆ ಆಗುತ್ತದೆ. ಈ ಜನರಿಗೆ ಗಾಢ ನಿದ್ದೆ ಬರುತ್ತದೆ, ಹಾಗೆಯೇ ಈ ಜನರು ಸ್ವಭಾವದಿಂದ ಶಾಂತ ಮತ್ತು ಸ್ಥಿರವಾಗಿರುತ್ತಾರೆ. ಮಾನಸಿಕ ಕಾಯಿಲೆ ಇರುವುದಿಲ್ಲ. ಈ ವ್ಯಕ್ತಿಗಳ ಕೃತಿ ನಿಧಾನ; ಆದರೆ ವ್ಯವಸ್ಥಿತವಾಗಿ ಆಗುತ್ತಿರುತ್ತದೆ. ಕಫ ಪ್ರಕೃತಿಯ ಜನರು ಮಿತಭಾಷಿಯಾಗಿರುತ್ತಾರೆ.

೬. ನಮ್ಮ ಪ್ರಕೃತಿಯನ್ನು ಹೇಗೆ ಗುರುತಿಸಬೇಕು ?

ನಮ್ಮ ಶರೀರ, ಅವಯವ, ಸ್ವಭಾವ ಇವುಗಳ ಪಟ್ಟಿಯನ್ನು ತಯಾರಿಸಬೇಕು ಮತ್ತು ಅದು ಹೇಗಿದೆ, ಅಂದರೆ ವಾತ ಪ್ರಕೃತಿಯೋ, ಪಿತ್ತ ಪ್ರಕೃತಿಯೋ ಅಥವಾ ಕಫದ ಪ್ರಕೃತಿಯೋ ? ಇವುಗಳಿಗನುಸಾರ ಇದೆಯೇ, ಎಂಬುದರ ಅಭ್ಯಾಸ ಮಾಡಬೇಕು. ಯಾವ ದೋಷಕ್ಕೆ ಹೆಚ್ಚು ಅಂಕಗಳು ಸಿಗುತ್ತವೆಯೋ ಅದು ನಮ್ಮ ಪ್ರಕೃತಿಯಾಗುತ್ತದೆ. ನಮಗೆ ಆದಷ್ಟು ಎರಡು ದೋಷಾತ್ಮಕ ಪ್ರಕೃತಿಗಳು ಎಲ್ಲೆಡೆ ಕಾಣಿಸುತ್ತವೆ. ಯಾವ ದೋಷ ಗಳ ಲಕ್ಷಣಗಳು ಅತ್ಯಧಿಕವಾಗಿದೆಯೋ, ಆ ದೋಷಕ್ಕೆ ಮೊದಲ ಕ್ರಮಾಂಕ ನೀಡಬೇಕು. ಅನಂತರ ಇತರ ಎರಡು ದೋಷಗಳ ಪೈಕಿ ಯಾವ ದೋಷಗಳ ಲಕ್ಷಣಗಳು ಹೆಚ್ಚಿವೆಯೋ ಅದಕ್ಕೆ ಎರಡನೇ ಕ್ರಮಾಂಕವನ್ನು ನೀಡಬೇಕು. ಉದಾಹರಣೆಗೆ ಯಾರಾದರೊಬ್ಬ ವ್ಯಕ್ತಿಯ ಶರೀರದಲ್ಲಿ ವಾತದ ಲಕ್ಷಣಗಳು ಹೆಚ್ಚು ಮತ್ತು ಅನಂತರ ಪಿತ್ತದ ಲಕ್ಷಣಗಳು ಹೆಚ್ಚಿದ್ದರೆ ಅವನ ಪ್ರಕೃತಿ ವಾತ – ಪಿತ್ತ ಪ್ರಕೃತಿಯಾಗಿರುತ್ತದೆ. ಒಂದು ವೇಳೆ ವ್ಯಕ್ತಿಯಲ್ಲಿ ಮೊದಲ ಕ್ರಮಾಂಕದಲ್ಲಿ ಪಿತ್ತದ ಲಕ್ಷಣಗಳಿದ್ದರೆ ಮತ್ತು ನಂತರ ವಾತದ್ದಾಗಿದ್ದರೆ ಆ ವ್ಯಕ್ತಿಯ ಪ್ರಕೃತಿ ಪಿತ್ತ-ವಾತ ಹೀಗಿರುತ್ತದೆ.

ಈ ರೀತಿ ಪ್ರತಿಯೊಬ್ಬರು ತಮ್ಮ ಪ್ರಕೃತಿಯನ್ನು ಗುರುತಿಸಲು ಪ್ರಯತ್ನಿಸಬೇಕು ಮತ್ತು ಅದಕ್ಕನುಸಾರ ತಮ್ಮ ಆಹಾರ-ಪಾನೀಯದ ಅಭ್ಯಾಸವನ್ನಿಟ್ಟುಕೊಂಡರೆ ನಾವು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ನಮಗೆ ನಮ್ಮ ಪ್ರಕೃತಿಯನ್ನು ಗುರುತಿಸಲು ಅಡಚಣೆ ಬರುತ್ತಿದ್ದರೆ, ಸಮೀಪದ ವೈದ್ಯರಲ್ಲಿ ತಮ್ಮ ಪ್ರಕೃತಿಯ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅದಕ್ಕನುಸಾರ ಆಚರಣೆ ಮಾಡಬೇಕು. ನಮ್ಮ ಆರೋಗ್ಯವು ನಮ್ಮ ಕೈಯಲ್ಲಿಯೇ ಇದೆ ಮತ್ತು ಅದನ್ನು ಕಾಪಾಡಲು ಗಾಂಭೀರ್ಯದಿಂದ ಪ್ರಯತ್ನಿಸುವುದು ಆವಶ್ಯಕವಾಗಿದೆ.

– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ