ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ನ್ಯಾಯದೇವತೆ, ನಿನಗೆ ಪುನಃ ಪತ್ರ ಬರೆಯುತ್ತಿದ್ದೇನೆ. ಮೇಲಿಂದ ಮೇಲೆ ಬರೆಯುತ್ತಿದ್ದೇನೆ. ಇದನ್ನು ನೋಡಿ ನೀನು ಕೋಪಿಸಿಕೊಳ್ಳುವುದಿಲ್ಲವೆಂದು ನಾನು ಆಶಾಭಾವನೆ ಇಟ್ಟುಕೊಂಡರೂ, ಪತ್ರವನ್ನು ಓದಿ ನೀನು ಏನೂ ಮಾಡುವುದಿಲ್ಲವೆಂದು ಮಾತ್ರ ನನಗೆ ಅನಿಸದಂತೆ ನೋಡಿಕೊ. ಏಕೆಂದರೆ ವಿಷಯ ಅಷ್ಟು ಗಂಭೀರವಾಗಿದೆ ಹಾಗೆ ನೋಡಿದರೆ ಅದು ತಮಾಷೆಯೂ ಆಗಿದೆ ! ಇತಿಹಾಸದ ಪುನರಾವೃತ್ತಿಯಾಗುತ್ತದೆ ಮೊದಲು ಅದು ದುರಂತವಾಗಿರುತ್ತದೆ, ಬಳಿಕ ಅದು ತಮಾಷೆ ಆಗುತ್ತದೆ, ಎಂದು ಹಿಂದೊಮ್ಮೆ ಯಾರೋ ಹೇಳಿದ್ದರು.

ಈಗ ಅದು ದುರಂತದ ಕಡೆಗೆ ಹೋಗುತ್ತಿದೆಯೋ ಅಥವಾ ತಮಾಷೆಯ ಕಡೆಗೆ ಹೋಗುತ್ತಿದೆಯೋ ? ಎನ್ನುವುದು ನ್ಯಾಯದೇವತೆಯಾದ ನಿನಗೇ ಗೊತ್ತು ! ಮೇಲೆ ಏನು ನಡೆದಿದೆ ? ಇದನ್ನು ನಾನು ನಿನಗೆ ಹೇಳುತ್ತೇನೆ; ಏಕೆಂದರೆ ನಿನ್ನ ಕಣ್ಣುಗಳಿಗೆ ಪಟ್ಟಿಯಿದೆ. ಇದು ಚಿತ್ರದಲ್ಲಿ ಕಾಣಿಸುತ್ತದೆ; ಆದರೆ ನಿನಗೆ ಕೇಳಿಸುತ್ತಿದೆಯೋ ಇಲ್ಲವೋ ? ಎನ್ನುವುದು ನಮಗೆ ತಿಳಿಯುವುದಿಲ್ಲ.ಆದರೂ ನಾನು ನಿನಗೆ ಹೇಳುತ್ತೇನೆ, ನ್ಯಾಯದೇವತೆಯೇ, ‘ಸಂವಿಧಾನವೇ ಜನರ ೩ ಸೇವಕರನ್ನು ನಿರ್ಮಿಸಿದೆ ಎನ್ನುತ್ತಾರೆ. ಈ ಸೇವಕರೆಂದರೆ, ನ್ಯಾಯಾಂಗ, ಶಾಸಕಾಂಗ (ಸಂಸತ್ತು) ಮತ್ತು  ಕಾರ್ಯಾಂಗ !

ಕಾರ್ಯಾಂಗದ ‘ರಾಜವೈಭೋಗದ ಬಗ್ಗೆ ನಾವೇನು ಬರೆಯುವುದು; ಆದರೆ  ಇಂದಿನ ವಿಷಯವೆಂದರೆ ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ವಿವಾದ. ಹಾಗೆ ನೋಡಿದರೆ ಈ ವಿವಾದ ಬಹಳ ಪ್ರಾಚೀನವಾಗಿದೆ. ಶಾಸಕಾಂಗ ಅಂದರೆ ಸಂಸತ್ತು (ಜನರು ಚುನಾಯಿಸಿದ ಶಾಸಕರು) ಮತ್ತು ನ್ಯಾಯಾಂಗವೆಂದರೆ ನ್ಯಾಯಾಧೀಶರ ಮಂಡಳಿ. ಇವರಲ್ಲಿ ಮಹತ್ವದ್ದವರು ಯಾರು ? ಅಂತಿಮವಾಗಿ ಯಾರು ? ಎನ್ನುವುದೇ ವಾದವಾಗಿದೆ.

ಒಂದು ಕಾಲವಿತ್ತು. ನಮಗೆ ಆಗಷ್ಟೇ ಸ್ವಾತಂತ್ರ್ಯ ಸಿಕ್ಕಿತ್ತು. ‘ಸಂವಿಧಾನದಂತೆ ಎಲ್ಲ ವಿಷಯಗಳು ನಡೆಯುವವು. ನಾವು ಆದಷ್ಟು ಬೇಗನೆ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ರಾಜ್ಯವನ್ನು ತರೋಣ, ಎನ್ನುವ ಕನಸು ಎಲ್ಲರಿಗೂ ಬೀಳುತ್ತಿತ್ತು. ಕನಸಿನ ಸಿಹಿ ನಿದ್ದೆಯಲ್ಲಿ ಎಲ್ಲರೂ ಇದ್ದರು. ಆ ಕನಸಿನಿಂದಲೇ ಮೀಸಲಾತಿ ಬಂದಿತು, ಎಲ್ಲರಿಗೂ ಮೂಲಭೂತ ಅಧಿಕಾರ ಬಂದಿತು.

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಈ ಲೇಖನದಲ್ಲಿ ನ್ಯಾಯದೇವತೆ ಎಂದು ಯಾರ ಉಲ್ಲೇಖವಿದೆಯೋ, ಅದು ಹಿಂದೂ ಧರ್ಮದಲ್ಲಿರುವ ನ್ಯಾಯಕ್ಕೆ ಸಂಬಂಧಿಸಿರುವ ದೇವತೆಗಳ ಉದಾ, ಯಮನಿಗೆ ಸಂಬಂಧಿಸಿರದೇ ವಿದೇಶದಿಂದ ಆಮದು ಮಾಡಿಕೊಂಡಿರುವ ನ್ಯಾಯ ಸಂಕಲ್ಪನೆಯಲ್ಲಿ ಕುರುಡು, ಕೈಯಲ್ಲಿ ತಕ್ಕಡಿ ಮತ್ತು ಖಡ್ಗವನ್ನು ಹಿಡಿದುಕೊಂಡು ನಿಂತಿರುವ ಕಾಲ್ಪನಿಕ ದೇವತೆ ‘ಜಸ್ಟೀಸಿಯಾ (ಲೇಡಿ ಜಸ್ಟಿಸ) ಇವಳದ್ದಾಗಿದೆ, ಯಾರನ್ನೂ ಅವಮಾನಿಸುವುದು ಈ ಲೇಖನ ಉದ್ದೇಶವಲ್ಲ- ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

೧. ಅಧಿಕಾರಗಳ ವಿಭಜನೆ ಮತ್ತು ಸಂಸತ್ತು ನ್ಯಾಯಾಲಯದ ಅಧಿಕಾರಗಳ ಮೇಲೆ ಹೇರಿರುವ ಮಿತಿ ಸಂವಿಧಾನವು ಜನರಿಗೆ ಮೂಲಭೂತ ಅಧಿಕಾರವನ್ನು ವಿಭಜಿಸಿ ಕೊಟ್ಟ ನಂತರ ಮತ್ತು ಅದರ ಸಾಕಷ್ಟು ಪ್ರೌಢತ್ವವನ್ನು ಮೆರೆಸಿದ ಬಳಿಕ ನೆಹರೂ ಮುಂತಾದ ರಾಜಕಾರಣಿಗಳಿಗೆ, ‘ಅರೆ !

ಜಮೀನುದಾರರ ಭೂಮಿಯನ್ನು ಭೂಮಿಹೀನರಿಗೆ ಹಂಚುವುದು ಬಾಕಿ ಉಳಿಯಿತು ಎನ್ನುವುದು ಗಮನಕ್ಕೆ ಬಂದಿತು. ಸಮಾಜ ವಾದದ ಅಕ್ಕಿಯನ್ನು ಸಂವಿಧಾನದಲ್ಲಿ ಹಾಕಿ ಆಯಿತು, ಆದರೆ ಅದು ಇನ್ನೂ ಬೆಂದಿಲ್ಲ. ಈಗ ಅದನ್ನು ಜನರಿಗೆ ಹಂಚುವು ದಾದರೂ ಹೇಗೆ ? ಅದರಿಂದ ಮತಗಳನ್ನು ಗಳಿಸುವುದಾದರೂ ಹೇಗೆ ? ಏನು ಗಡಿಬಿಡಿಯಾಯಿತೆಂದರೆ, ಜಮೀನುದಾರನಿಗೆ ಇದ್ದ ಅಧಿಕಾರ, ಭೂಮಿ ಹೀನರಿಗೂ ದೊರಕಿತು. ಈಗ ಮಾಡುವುದು ಹೇಗೆ ? ಅಂತಹದರಲ್ಲಿ ಇಂತಹ ಸಮಾಜವಾದಿ ಧೋರಣೆಯ ಕಾನೂನುಗಳನ್ನು ನ್ಯಾಯಾಲಯವು ರದ್ದುಗೊಳಿಸಿತ್ತು. ಇದರಿಂದ ನಿದ್ದೆ ಹಾರಿತು. ಸಂವಿಧಾನವನ್ನು ಬದಲಾಯಿಸುವ ಮಾತುಕತೆಗಳು ಬಂದಿತು. ‘ಸಂವಿಧಾನವನ್ನು ನ್ಯಾಯವಾದಿಗಳು ಕದ್ದುಕೊಂಡು ಹೋದರು, ಇಂತಹ ಭಾಷಣಗಳು ಸಂಸತ್ತಿನಲ್ಲಿ ಆದವು.

ಸಂವಿಧಾನದ್ದೇ ಒಂದು ಭಾಗ ಅದರ ಎರಡನೇಯ ಭಾಗಕ್ಕೆ ಅಡ್ಡ ಬರುತ್ತಿತ್ತು. ಸಂವಿಧಾನದ  ಬಟ್ಟೆಯನ್ನು ಮೈಮೇಲೆ ಹಾಕಿಕೊಳ್ಳುವುದರಲ್ಲಿಯೇ ಮೊದಲ ಪ್ಯಾಚವರ್ಕ (ದುರಸ್ತಿ) ಬಂದಿತು. ಅದನ್ನು ಮೊದಲ ಬದಲಾವಣೆಯೆನ್ನುತ್ತಾರೆ. ಈ ಮೊದಲ ಬದಲಾವಣೆಯಲ್ಲಿ ಸಂವಿಧಾನದಲ್ಲಿ ಮುಂದಿನ ಕಲಂ ಸೇರಿಸಲಾಯಿತು. “ಕೆಲವು ವಿಷಯಗಳ ಮೇಲೆ ಕಾನೂನು ರೂಪಿಸಲ್ಪಟ್ಟಿದ್ದರೆ, ಅದು ಕಾನೂನು ಮತ್ತು ಕೆಲವು ಇಂತಹ ಕಾನೂನುಗಳು ಇವೆ, ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವೇ ಇಲ್ಲ. (ಪ್ರಾರಂಭದಲ್ಲಿ ಇಂತಹ ಕಾನೂನುಗಳ ಸಂಖ್ಯೆ ೧೩ ಇತ್ತು ಅದೀಗ ೨೫೦ ರ ಆಚೆಗಿದೆ) ನ್ಯಾಯದೇವತೆಯೇ, ನಿನಗೆ ನೆನಪಿರಬಹುದು, ಸ್ವಾತಂತ್ರ್ಯ, ಸಮತೆ ಮತ್ತು ಸಹೋದರತ್ವದ ಹರಟೆ ನಿನ್ನ ಕಿವಿಗೂ ಬಿದ್ದಿರಬಹುದು. ಸಂವಿಧಾನವು ನ್ಯಾಯಾಲಯಗಳಿಗೆ ನೀಡಿರುವ ಅಪಾರ ಅಧಿಕಾರಗಳ ಮೇಲೆ ಸಂಸತ್ತು ಹಾಕಿರುವ ಅದು ಮೊದಲ ಮಿತಿಯಾಗಿತ್ತು. ಇದು ನಿಜವಾಗಿಯೂ ದೊಡ್ಡ ಮತ್ತು ಸ್ವತಂತ್ರ ವಿಷಯವಾಗಿದೆ.

೨. ಸಂವಿಧಾನದಲ್ಲಿ ಎಷ್ಟು ಬದಲಾವಣೆ ಸಾಧ್ಯ? ಮತ್ತು ಸರ್ವೋಚ್ಚ ನ್ಯಾಯಾಲಯ ಮತ್ತು ಸಂಸತ್ತಿನ ನಡುವಿನ ಮುಸುಕಿನ ಗುದ್ದಾಟ ಪ್ರಾರಂಭ

ನ್ಯಾಯದೇವತೆಯೇ, ನಿನಗೆ ನೆನಪಿದೆಯೇ ? ಬಳಿಕ ಅಂದರೆ ೧೯೬೦ ರ ದಶಕದಲ್ಲಿ ಬಂದಂತಹ ತೀರ್ಪುಗಳಲ್ಲಿ ‘ಸಂವಿಧಾನವನ್ನು ಬದಲಾಯಿಸುವ ಅಧಿಕಾರ ಯಾರಿಗಿದೆ ? ಈ ಪ್ರಶ್ನೆಯ ಮೇಲೆ ಸರ್ವೋಚ್ಚ ನ್ಯಾಯಾಲಯವು ನಿರ್ವಿವಾದವಾಗಿ ‘ಸಂಸತ್ತಿಗೆ ಆ ಅಧಿಕಾರವಿದೆ ಎಂದು ಉತ್ತರಿಸಿತು. ಸಂವಿಧಾನವನ್ನು ಬದಲಾಯಿಸುವುದಿದ್ದರೆ, ಸಂಸತ್ತಿನ ಅನುಚ್ಛೇದ ೩೬೮ ಅನುಗುಣವಾಗಿ ಅದನ್ನು ಬದಲಾಯಿಸಬಹುದು; (ಸಜ್ಜನ ಸಿಂಗ ವಿರುದ್ಧ ರಾಜಸ್ಥಾನ ರಾಜ್ಯ) ಆದರೆ ! ನ್ಯಾಯದೇವತೆ ಇಲ್ಲೊಂದು ‘ಆದರೆ ಬಂದಿತು ಮತ್ತು ಒಂದು ವಿಷಯ ನ್ಯಾಯಮೂರ್ತಿಗಳ ಗಮನಕ್ಕೆ ಬರತೊಡಗಿತು, ಅದೆಂದರೆ, ಸಂಸತ್ತಿಗೆ ಅಸೀಮ ಅಧಿಕಾರ ನೀಡಿದರೆ, ದೇಶದಲ್ಲಿ ಏನಾದರೂ ತಪ್ಪು ನಡೆಯಬಹುದು ಎಂದೆನಿಸಿತು. ಆದ್ದರಿಂದ ೧೯೬೭ ರಲ್ಲಿ ಗೋಲಕನಾಥ (ನಾಥ ಎಂದಾಗಿದ್ದರೂ ಆತ ಕ್ರೈಸ್ತನಾಗಿದ್ದನು) ಮತ್ತು ಬಳಿಕ ೧೯೭೩ ರಲ್ಲಿ ‘ಕೇಶವಾನಂದ ಭಾರತಿ ವಿರುದ್ಧ ಕೇರಳ ರಾಜ್ಯ ಇದು ಭಾರತದ ಇತಿಹಾಸದಲ್ಲಿ ಹೆಸರುವಾಸಿಯಾದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು “ಸಂಸತ್ತು ಸಾರ್ವ ಭೌಮವಾಗಿದ್ದರೂ, ಸಂವಿಧಾನದ ‘ಮೂಲಭೂತ ರೂಪ ಅಂದರೆ ಅವರು ಆಂಗ್ಲಭಾಷೆಯಲ್ಲಿ ‘ಬೇಸಿಕ ಸ್ಟ್ರಕ್ಚರ ಈ ಶಬ್ದವನ್ನು ಉಪಯೋಗಿಸಿದರು, ಅದನ್ನು ಸಂಸತ್ತು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು. ಇದು ಇಂದಿಗೂ ಅದೇ ರೀತಿಯಿದೆ.

ಗೋಲಕನಾಥ ಪ್ರಕರಣದಲ್ಲಿ (೧೯೬೭) ತೀರ್ಪು ಬಂದಿತು; ಆದ್ದರಿಂದ ಎಲ್ಲರೂ ಏನು ಹೇಳುತ್ತಾರೆಂದರೆ, ಇಂದಿರಾ ಗಾಂಧಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಯಾರು ಗೋಲಕನಾಥ ಪ್ರಕರಣವನ್ನು ಬದಲಾಯಿಸಬಹುದು ಮತ್ತು ‘ಸಂಸತ್ತು ಸಂವಿಧಾನದಲ್ಲಿ ಬೇಕಾಗುವಂತಹ ಬದಲಾವಣೆಯನ್ನು ತರಬಹುದು ಎನ್ನುವಂತಹ ತೀರ್ಪು ನೀಡುವಂತಹ ನ್ಯಾಯ ಮೂರ್ತಿಗಳನ್ನು ನಿಯುಕ್ತಿಗೊಳಿಸಲು ಪ್ರಯತ್ನಿಸಿದರು. ಆದರೆ ಕೇಶವಾನಂದ ಭಾರತಿ (೧೯೭೩) ಪ್ರಕರಣದಲ್ಲಿ ಇಂದಿರಾ ಗಾಂಧಿಯವರಿಗೆ ಅಥವಾ ಕಾಂಗ್ರೆಸ್ಸಿಗೆ ಅಂದರೆ ಆಗಿನ ಸಂಸತ್ತಿಗೆ ಅದು ಸಾಧ್ಯವಾಗಲಿಲ್ಲ. ಇಂದಿರಾ ಗಾಂಧಿಯವರು ಈ ತೀರ್ಪಿನ ಬಗ್ಗೆ ಸೇಡು ತೀರಿಸಿಕೊಳ್ಳಲು ಈ ತೀರ್ಪು ನೀಡಿದ ಸರ್ವೊಚ್ಚ ನ್ಯಾಯಾಲಯದ ೩ ಹಿರಿಯ ನ್ಯಾಯಮೂರ್ತಿಗಳನ್ನು ಬದಿಗೆ ಸರಿಸಿ, ಕಿರಿಯ ನ್ಯಾಯಮೂರ್ತಿಯನ್ನು ‘ಮುಖ್ಯ ನ್ಯಾಯ ಮೂರ್ತಿಯಾಗಿ ನಿಯುಕ್ತಿ ಮಾಡಿದರು. ಇದರ ಪ್ರತಿಕ್ರಿಯೆಯಾಗಿ ಆ ಮೂವರೂ ರಾಜೀನಾಮೆ ನೀಡಿದರು. ಆಗ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಆಂದೋಲನ ನಡೆಯಿತು. ಆದರೆ ಹೊಟ್ಟೆಪಾಡಿನ ಸಮಸ್ಯೆಯಲ್ಲಿ ಜನರು ಪುನಃ ಅದನ್ನು ಮರೆತರು. ವೇದನೆ ಕರಗಿ ಹೋಯಿತು, ಭಾವನೆಗಳು ಕಾಗದಕ್ಕೆ ಸೀಮಿತವಾಯಿತು. ಅಲ್ಲಿಂದಲೇ ನ್ಯಾಯಾಲಯ ಮತ್ತು ಕಾರ್ಯಾಂಗದ ನಡುವೆ ಪರೋಕ್ಷವಾಗಿ ಮುಸುಕಿನ ಗುದ್ದಾಟವು ಪ್ರಾರಂಭವಾಯಿತು.

೩. ಸಂವಿಧಾನದಲ್ಲಿ ಬದಲಾವಣೆ; ಇದೊಂದು ಬಿಡಿಸಲಾಗದ ಪ್ರಶ್ನೆಗಳ ಮಾಲಿಕೆ ?

ನ್ಯಾಯದೇವತೆಯೇ ಆ ಹೋರಾಟ ಇಂದಿಗೂ ಮುಂದುವರಿದಿದೆ. ಈಗ ದುರ್ದೈವದಿಂದ ತಮಾಷೆಯೆಂದರೆ, ಇದರಲ್ಲಿ ಯಾವುದು ಸತ್ಯ ? ಎನ್ನುವುದು ಜನಸಾಮಾನ್ಯರಿಗೆ ತಿಳಿಯುವುದಿಲ್ಲ. ಕಾನೂನು ಮತ್ತು ಜಗತ್ತಿನ ಸಮಾಜವಾದಿ ಪ್ರಜಾಪ್ರಭುತ್ವದ ಒಳ್ಳೆಯತನದ ಮೇಲೆ ವಿಶ್ವಾಸವಿರುವ ಸಾಮಾನ್ಯ ಮನುಷ್ಯನು ನನ್ನಂತಹ ನ್ಯಾಯವಾದಿಗೆ ಪ್ರಶ್ನಿಸುತ್ತಾನೆ; ಆದರೆ ನನಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ; ಏಕೆಂದರೆ ಉತ್ತರ ಸರಳವಾಗಿಲ್ಲ. ಈ ಪ್ರಶ್ನೆಗಳ ಕೆಲವು ಉದಾಹರಣೆಗಳನ್ನು ನ್ಯಾಯದೇವತೆ ನಾನಿಲ್ಲಿ ನೀಡುತ್ತೇನೆ.

ಅ. ಒಂದು ವೇಳೆ ಸಂವಿಧಾನ ಬದಲಾವಣೆಗೆ ಅವಕಾಶ ನೀಡಿದರೆ, ಅದಕ್ಕೆ ಸರ್ವೋಚ್ಚ ನ್ಯಾಯಾಲಯ ಬೇರೆ ಅರ್ಥವನ್ನು ಏಕೆ ಕಲ್ಪಿಸುತ್ತದೆ ?

ಆ. ಸರ್ವೋಚ್ಚ ನ್ಯಾಯಾಲಯ ಬದಲಾವಣೆ ಮಾಡಬಹುದು ಮತ್ತು ಬೇಕಾದಂತೆ ಬದಲಾವಣೆ ಮಾಡಬಹುದು ಎಂದು ಮೊದಲು ಹೇಳುತ್ತದೆ. ಬಳಿಕ ನ್ಯಾಯಾಲಯ ‘ಬೇಕಾದಂತೆ ಬದಲಾವಣೆ ಮಾಡಲು  ಬರುವುದಿಲ್ಲ, ‘ಮೂಲರೂಪ (ಬೇಸಿಕ ಸ್ಟ್ರಕ್ಚರ) ಬದಲಾಯಿಸಲು ಸಾಧ್ಯವಿಲ್ಲ, ಎಂದು ಹೇಳುತ್ತದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಇಂತಹ ಪರಸ್ಪರ ವಿರೋಧಿ ಹೇಳಿಕೆ ಹೇಗೆ ನೀಡುತ್ತಾರೆ ? ಇರಲಿ, ಅವರು ಈ ರೀತಿ  ಹೇಳುತ್ತಾರೆಂದು ಅವರಿಗೆ ನೀನು ಶಿಕ್ಷೆ ನೀಡುವು ದಿಲ್ಲವೇ ? ನೌಕರ ವರ್ಗದವರು ಅಥವಾ ಸರಕಾರ ತಪ್ಪು ನಿರ್ಣಯ ತೆಗೆದುಕೊಂಡರೆ, ಅವರ ಮೇಲೆ ಚಾಟಿ ಬೀಸಲಾಗುತ್ತದೆ. ಕಡಿಮೆಪಕ್ಷ ನಾಟಕವಾದರೂ ನಡೆಯುತ್ತದೆ. ನ್ಯಾಯಮೂರ್ತಿ ಗಳ ಬಗ್ಗೆ ನೀನೇಕೆ ಏನೂ ಮಾಡಲ್ಲ ?

ಇ. ಸಂವಿಧಾನದ ಮೂಲರೂಪವನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೆ, ಆ ಮೂಲ ರೂಪ ಯಾವುದು ? ಅಂದರೆ ಅದರ ಗೋಡೆ ಮತ್ತು ಮೇಲ್ಛಾವಣಿ ಯಾವುದು ? ಛಾವಣಿ ಎಂತಹದು ?  ಇದನ್ನು ಯಾರು ನಿರ್ಧರಿಸುವರು ? ಎಂದು ಕೇಳಿದಾಗ, ಸರ್ವೋಚ್ಚ ನ್ಯಾಯಾಲಯವು “ಅದನ್ನು ಆಯಾ ಸಮಯಕ್ಕೆ ನಿರ್ಧರಿಸುತ್ತೇವೆ ಎಂದು ಹೇಳುತ್ತದೆ; ಜನಸಾಮಾನ್ಯರಿಗೆ ಇದು ಅಪೇಕ್ಷಿತವಿದೆಯೇ ? ಅಂದರೆ ಸಂವಿಧಾನವನ್ನು ಜನರು ಬರೆದಿದ್ದು, ಅದರ ‘ಮೂಲರೂಪ ಏನು ? ಎನ್ನುವುದನ್ನು ನ್ಯಾಯಮೂರ್ತಿಗಳು ಹೇಗೆ ನಿರ್ಧರಿಸುತ್ತಾರೆ ?

ಈ. ಸರ್ವೋಚ್ಚ ನ್ಯಾಯಾಲಯದಿಂದ ಈ ಬದಲಾವಣೆ ರಾಜಕೀಯ ಕಾರಣಗಳಿಂದ ಆಗುತ್ತಿದ್ದರೆ, ಇಂತಹ ರಾಜಕೀಯ ಕಾರಣಗಳು ಇಂದು ಅಸ್ತಿತ್ವದಲ್ಲಿವೆಯೇ ? ಆಗಿನ ಸಂದರ್ಭ ಬೇರೆಯಾಗಿತ್ತು ಎಂದು ಯಾರು ಪರಿಶೀಲಿಸುತ್ತಾರೆ ? ನ್ಯಾಯಮೂರ್ತಿಗಳು ರಾಜಕಾರಣವನ್ನು ಹೇಗೆ ನೋಡುವುದು ? ಇದು ಸಂವಿಧಾನದಲ್ಲಿದೆಯೋ ಕಾನೂನಿನಲ್ಲಿದೆಯೋ ? ಎಲ್ಲಿದೆ ? ಉ. ಇದರಲ್ಲಿ ಈ ರೀತಿಯ ಒಂದು ವಾದವೂ ಇದೆ, ಭಾರತದ ಸಂವಿಧಾನವನ್ನು ಡಾ. ಬಾಬಾಸಾಹೇಬ ಆಂಬೇಡಕರರು ಬರೆದಿದ್ದಾರೆ, ‘ಆಂಬೇಡರರು ಮಹಾನ್ ನ್ಯಾಯತಜ್ಞರಾಗಿದ್ದರು, ಎಂದು ರಾಜಕಾರಣಿಗಳು, ನ್ಯಾಯಮೂರ್ತಿಗಳು ಎಲ್ಲರೂ ಹೇಳುತ್ತಾರೆ; ಹೀಗಿರುವಾಗ ಅವರು ಈ ಮೂಲರೂಪದ ಭಾಗ ವನ್ನು ಸಂವಿಧಾನದಲ್ಲಿ ಬರೆದಿಲ್ಲ ? ಸಂವಿಧಾನದಲ್ಲಿಯೇ ಮೂಲರೂಪ ಬರೆದಿದ್ದರೆ, ಎಲ್ಲರಿಗೂ ಸುಲಭವಾಗುತ್ತಿತ್ತು ಅಲ್ಲವೇ ?

ಉ. ಒಂದು ವೇಳೆ ಅವರು ಬರೆದಿಲ್ಲದಿದ್ದರೆ, ಅದರ ಆವಶ್ಯಕತೆ ಯಿಲ್ಲವೆಂದು ಬರೆದಿರಲಿಕ್ಕಿಲ್ಲ. ಹೀಗಿರುವಾಗ ಆಂಬೇಡರರ ಮನಸ್ಸನ್ನು ಬದಿಗಿರಿಸಿ ಸರ್ವೋಚ್ಚ ನ್ಯಾಯಾಲಯ ಏಕೆ ಇದನ್ನು ಪತ್ತೆ ಹಚ್ಚಿತು ? ಮತ್ತು ಇತರರು ಏಕೆ ಇದನ್ನು ಒಪ್ಪಿಕೊಂಡರು ?

ಎ. ಅಂಬೇಡಕರವಾದಿ ಮುಖಂಡರು ಇದಕ್ಕೆ ಏಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ? ಸತ್ಯ ಹೇಳಬೇಕೆಂದರೆ ಆಂಬೇಡಕರರು ಮಾಡಿರುವ ವಿಷಯಗಳಲ್ಲಿ ಬದಲಾವಣೆಗಳನ್ನು ಸ್ವೀಕರಿಸಲೇ ಬಾರದಾಗಿತ್ತು. ಹೀಗಿರುವಾಗ ಈ ವಿಷಯದಲ್ಲಿ ಅವರು ಏಕೆ ಸುಮ್ಮನಿದ್ದಾರೆ ? ಆಂಬೇಡಕರ, ನೆಹರೂ ದೊಡ್ಡವರೋ ಅಥವಾ ನಂತರದ ಕೆಲವು ನ್ಯಾಯಮೂರ್ತಿಗಳೋ ?

ಏ. ಎಲ್ಲಕ್ಕಿಂತ ಕೊನೆಯ ಮತ್ತು ಮಹತ್ವದ ಪ್ರಶ್ನೆ ಸಂವಿಧಾನ ಇಷ್ಟು ಚೆನ್ನಾಗಿತ್ತು, ಜಗತ್ತಿನ ಎಲ್ಲ ಸಂವಿಧಾನಗಳಲ್ಲಿರುವ ಒಳ್ಳೆಯ ಭಾಗವನ್ನೇ ಅದರಲ್ಲಿ ತೆಗೆದುಕೊಳ್ಳಲಾಗಿತ್ತು. ಹೀಗಿರುವಾಗ ಅದರಲ್ಲೇಕೆ ಬದಲಾವಣೆ ಮಾಡಬೇಕಾಗುತ್ತಿದೆ ? ಭಗವದ್ಗೀತೆಯಲ್ಲಂತೂ ಏನೂ ಬದಲಾವಣೆಯಾಗಿಲ್ಲ, ಹೀಗಿರುವಾಗ ಇದರಲ್ಲಿ ಏಕೆ ?

– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು (೨೬.೧.೨೦೨೩)