|

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸುತ್ತಿರುವ ‘ಬಲೂಚ್ ಲಿಬರೇಶನ್ ಆರ್ಮಿ’ ಸಂಘಟನೆಯು ‘ಜಾಫರ್ ಎಕ್ಸ್‌ಪ್ರೆಸ್’ ಪ್ರಯಾಣಿಕ ರೈಲನ್ನು ಅಪಹರಿಸಿದೆ. ಇದರಲ್ಲಿರುವ 120 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿದೆ. ಈ ರೈಲಿನಲ್ಲಿದ್ದ ಪಾಕಿಸ್ತಾನ ಸೇನೆಯ 6 ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ರೈಲಿನಲ್ಲಿ ಒಟ್ಟು 470 ಪ್ರಯಾಣಿಕರಿದ್ದಾರೆ. ಜಾಫರ್ ಎಕ್ಸ್‌ಪ್ರೆಸ್ ಕ್ವೆಟ್ಟಾ ಮತ್ತು ಪೇಶಾವರ ನಡುವೆ ಸಂಚರಿಸುತ್ತದೆ.
ಬಲೂಚ್ ಲಿಬರೇಶನ್ ಆರ್ಮಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ನಮ್ಮ ಸೈನಿಕರು ಮಶ್ಕಾಫ್, ದಾದರ್ ಮತ್ತು ಬೋಲಾನ್‌ನಲ್ಲಿ ಈ ಕಾರ್ಯಾಚರಣೆಯನ್ನು ಯೋಜಿಸಿದ್ದಾರೆ. ರೈಲ್ವೆ ಹಳಿಗಳನ್ನು ಸ್ಫೋಟಿಸಲಾಗಿದೆ, ಇದರಿಂದ ಜಾಫರ್ ಎಕ್ಸ್‌ಪ್ರೆಸ್ ನಿಂತಿದೆ. ಇದರ ನಂತರ, ನಮ್ಮ ಸೈನಿಕರು ಈ ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿದ್ದಾರೆ. ನಮ್ಮ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಪ್ರಯತ್ನಿಸಿದರೆ, ನಾವು ಎಲ್ಲಾ ಒತ್ತೆಯಾಳುಗಳನ್ನು ಕೊಲ್ಲುತ್ತೇವೆ. ಈ ಹತ್ಯಾಕಾಂಡದ ಜವಾಬ್ದಾರಿ ಪಾಕಿಸ್ತಾನ ಸೇನೆಯದ್ದಾಗಿರುತ್ತದೆ” ಎಂದು ಹೇಳಲಾಗಿದೆ.