ಪಾಕಿಸ್ತಾನ ಸೈನ್ಯ ಒಂದು ಗುಂಡು ಹಾರಿಸಿದರೆ ನಾವು 10 ಸೈನಿಕರನ್ನು ಕೊಲ್ಲುತ್ತೇವೆ! – ಅಪಹರಣಕಾರರಿಂದ ಎಚ್ಚರಿಕೆ

  • ಜಾಫರ್ ಎಕ್ಸ್ಪ್ರೆಸ್ ಇನ್ನೂ ಬಿಡುಗಡೆಯಾಗಿಲ್ಲ!

  • 214 ಒತ್ತೆಯಾಳುಗಳು ಇನ್ನೂ ಸೇನೆಯ ವಶದಲ್ಲಿ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯವನ್ನು ಪಾಕಿಸ್ತಾನದಿಂದ ಸ್ವತಂತ್ರಗೊಳಿಸಲು ಸಶಸ್ತ್ರ ಹೋರಾಟ ನಡೆಸುತ್ತಿರುವ ‘ಬಲೂಚಿಸ್ತಾನ್ ಲಿಬರೇಶನ್ ಆರ್ಮಿ’ ಸಂಘಟನೆಯು 9 ಬೋಗಿಗಳ ಜಾಫರ್ ಎಕ್ಸ್ಪ್ರೆಸ್ ಅನ್ನು ಅಪಹರಿಸಿ ಹಲವು ಗಂಟೆಗಳಾದರೂ ಪಾಕಿಸ್ತಾನ ಸೇನೆಯು ರೈಲು ಮತ್ತು ರೈಲಿನಲ್ಲಿರುವ ಪ್ರಯಾಣಿಕರನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಪಾಕಿಸ್ತಾನ ಸೇನೆಯಿಂದ ರೈಲನ್ನು ಬಿಡುಗಡೆಗೊಳಿಸಲು ಕಾರ್ಯಾಚರಣೆ ನಡೆಯುತ್ತಿದೆ. ಸೇನೆಯು ಈವರೆಗೆ 160 ಜನರನ್ನು ರಕ್ಷಿಸಲಾಗಿದ್ದು, ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ 16 ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಇದೇ ವೇಳೆ ಪಾಕಿಸ್ತಾನದ 30 ಸೈನಿಕರೂ ಸಾವನ್ನಪ್ಪಿದ್ದಾರೆ. ಈ ರೈಲಿನಲ್ಲಿ 450 ಜನರನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಈ ಹಿಂದೆ ಹೇಳಲಾಗಿತ್ತು; ಆದರೆ ಸದ್ಯದ ಮಾಹಿತಿಯ ಪ್ರಕಾರ 214 ಜನರು ಒತ್ತೆಯಾಳುಗಳಾಗಿದ್ದಾರೆ. ಪಾಕಿಸ್ತಾನ ಸೇನೆ ತಮ್ಮ ಮೇಲೆ ಒಂದೇ ಒಂದು ಗುಂಡು ಹಾರಿಸಿದರೂ ಪಾಕಿಸ್ತಾನದ 10 ಸೈನಿಕರನ್ನು ಕೊಲ್ಲುವುದಾಗಿ ‘ಬಲೂಚಿಸ್ತಾನ್ ಲಿಬರೇಶನ್ ಆರ್ಮಿ’ ಸಂಘಟನೆಯ ಸದಸ್ಯರು ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನಿ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಕ್ವೆಟಾದಿಂದ ಪೇಶಾವರಕ್ಕೆ ಹೋಗುವ ಜಾಫರ್ ಎಕ್ಸ್ಪ್ರೆಸ್‌ನಲ್ಲಿ 400 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಈ ರೈಲು ಬಲೂಚಿಸ್ತಾನದ ಬೋಲಾನ್‌ನಲ್ಲಿ ಸುರಂಗವನ್ನು ಪ್ರವೇಶಿಸಿದಾಗ ಬಲೂಚ್ ಬಂಡುಕೋರರು ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡರು. ನಂತರ ರೈಲಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 180 ಜನರನ್ನು ಬಿಡುಗಡೆ ಮಾಡಿದರು.

‘ರೇಡಿಯೋ ಪಾಕಿಸ್ತಾನ’ ವರದಿಯ ಪ್ರಕಾರ, ಪಾಕಿಸ್ತಾನಿ ಭದ್ರತಾ ಪಡೆಗಳು 104 ಒತ್ತೆಯಾಳುಗಳನ್ನು ರಕ್ಷಿಸಿವೆ. ರಕ್ಷಿಸಲ್ಪಟ್ಟವರಲ್ಲಿ 58 ಪುರುಷರು, 31 ಮಹಿಳೆಯರು ಮತ್ತು 15 ಮಕ್ಕಳು ಸೇರಿದ್ದಾರೆ.

ಪಾಕಿಸ್ತಾನ ಸೇನೆಗೆ ಕಾರ್ಯಾಚರಣೆ ಕಷ್ಟ!

ರೈಲನ್ನು ನಿಲ್ಲಿಸಿರುವ ಪ್ರದೇಶವು ಒಂದು ದುರ್ಗಮ ಪರ್ವತ ಕಣಿವೆಯಾಗಿದ್ದು, ಅಲ್ಲಿ ಮೊಬೈಲ್ ಸಂಪರ್ಕ ಮತ್ತು ಸಂಪನ್ಮೂಲಗಳು ತಲುಪುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನಿ ಸೇನೆಗೆ ಕಾರ್ಯಾಚರಣೆ ನಡೆಸುವುದು ಕಷ್ಟಕರವಾಗುತ್ತಿದೆ.

ಪಾಕಿಸ್ತಾನ ಸೇನೆಯ ಹೇಳಿಕೆಯನ್ನು ಬಲೂಚ್ ಲಿಬರೇಶನ್ ಆರ್ಮಿ ನಿರಾಕರಣೆ

ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಪಾಕಿಸ್ತಾನಿ ಸೇನೆಯ ಹೇಳಿಕೆಯನ್ನು ಬಲೂಚ್ ಲಿಬರೇಶನ್ ಆರ್ಮಿ ನಿರಾಕರಿಸಿದೆ. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಂಘಟನೆ ತಿಳಿಸಿದೆ. ಪ್ರಸ್ತುತ ತನ್ನ ನಿಯಂತ್ರಣದಲ್ಲಿ 214 ಪ್ರಯಾಣಿಕರಿದ್ದು, ಅವರಲ್ಲಿ ಹೆಚ್ಚಿನವರು ಪಾಕ್ ಭದ್ರತಾ ಪಡೆಗಳ ಸೈನಿಕರು ಎಂದು ಸಂಘಟನೆ ತಿಳಿಸಿದೆ. ಪಾಕಿಸ್ತಾನಿ ಸೇನೆ ದಾಳಿ ನಡೆಸಿದ್ದರೂ ‘ನಾವೆಲ್ಲರೂ ಸುರಕ್ಷಿತವಾಗಿದ್ದೇವೆ’ ಎಂದು ಸಂಘಟನೆ ಹೇಳಿಕೊಂಡಿದೆ.
ಪಾಕಿಸ್ತಾನಿ ಸೇನೆಯ ದಾಳಿ ಬೇಜವಾಬ್ದಾರಿಯುತ ಕೃತ್ಯವಾಗಿದೆ. ಪಾಕಿಸ್ತಾನ ಸೇನೆ ಒತ್ತೆಯಾಳುಗಳ ಬಗ್ಗೆ ಚರ್ಚಿಸಲು ಸಿದ್ಧವಿಲ್ಲ ಎಂದು ಎಂಬುದನ್ನು ಇದು ತೋರಿಸುತ್ತದೆ ಎಂದು ಸಂಘಟನೆ ಹೇಳಿದೆ.

ಪ್ರತಿ ಗಂಟೆಗೆ 5 ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ

ಒತ್ತೆಯಾಳುಗಳ ಬದಲಿಗೆ ಬಲೂಚಿಸ್ತಾನದ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಬಲೂಚ್ ಲಿಬರೇಶನ್ ಆರ್ಮಿಯು ಒತ್ತಾಯಿಸಿದೆ. ಇದಕ್ಕಾಗಿ 48 ಗಂಟೆಗಳ ಕಾಲಾವಕಾಶ ನೀಡಿದೆ. ಬೇಡಿಕೆ ಈಡೇರದಿದ್ದರೆ ಗಡುವು ಮುಗಿದ ನಂತರ ಪ್ರತಿ ಗಂಟೆಗೆ 5 ಒತ್ತೆಯಾಳುಗಳನ್ನು ಹತ್ಯೆ ಮಾಡಲಾಗುವುದು ಮತ್ತು ಈ ಚಕ್ರ ಕೊನೆಯವರೆಗೂ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದೆ, ಎಂದು ಸಂಘಟನೆ ಹೇಳಿದೆ.

‘ಸಿಪಿಇಸಿ’ ಯನ್ನು ಮುಚ್ಚಲು ಆಗ್ರಹ

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (ಸಿಪಿಇಸಿ, ಅಂದರೆ ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿ) ಯೋಜನೆಯನ್ನು ಒತ್ತೆಯಾಳುಗಳ ಬಿಡುಗಡೆಯ ಬದಲಿಗೆ ಪಾಕಿಸ್ತಾನ ಮುಚ್ಚಬೇಕೆಂದು ಬಲೂಚ್ ಲಿಬರೇಶನ್ ಆರ್ಮಿ ಒತ್ತಾಯಿಸಿದೆ.

ಸ್ವತಂತ್ರ ಬಲೂಚಿಸ್ತಾನದ ರಚನೆಯ ಸಮಯ ಬಂದಿದೆ! – ಮೇಜರ್ ಜನರಲ್ (ನಿವೃತ್ತ) ಜಿ.ಡಿ. ಬಕ್ಷಿ

ಮೇಜರ್ ಜನರಲ್ (ನಿವೃತ್ತ) ಜಿ.ಡಿ. ಬಕ್ಷಿ ಅವರು ಬಲೂಚಿಸ್ತಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಬಲೂಚಿಸ್ತಾನವು ಪಾಕಿಸ್ತಾನದ ನಿಯಂತ್ರಣಕ್ಕೆ ಮೀರಿದ್ದು ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಲೂಚಿಸ್ತಾನದಲ್ಲಿ ರೈಲು ಅಪಹರಣದ ಘಟನೆ ತುಂಬಾ ಮಹತ್ವದ್ದಾಗಿದೆ. ಒಂದು ರೈಲಿನಲ್ಲಿ 450 ರಿಂದ 500 ಪ್ರಯಾಣಿಕರು ಇರುತ್ತಾರೆ. ಈ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿದೆ. ಇಂತಹ ಯಾವುದೇ ಘಟನೆಯಲ್ಲಿ ಒತ್ತೆಯಾಳುಗಳನ್ನು ರಕ್ಷಿಸಲು ಕೈಗೊಳ್ಳುವ ಕ್ರಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಕಾರ್ಯಾಚರಣೆಯಲ್ಲಿ ಒಂದು ತಪ್ಪು ಮಾಡಿದರೂ ಇಡೀ ದೇಶ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಕಾರ್ಯಾಚರಣೆಯ ಸಮಯದಲ್ಲಿ ದೊಡ್ಡ ಪ್ರಮಾಣದ ಸಾವುನೋವುಗಳ ಭಯವಿದೆ. ಯಾವುದೇ ಸಾವುನೋವುಗಳಿಲ್ಲದೇ ಈ ಕಾರ್ಯಾಚರಣೆ ನಡೆಸಲು ಪಾಕಿಸ್ತಾನ ಸೇನೆಗೆ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಒತ್ತೆಯಾಳುಗಳನ್ನು ರಕ್ಷಿಸುವಾಗ ಸೇನೆ ಅಥವಾ ಕಮಾಂಡೋಗಳು ಕೈಗೊಳ್ಳುವ ಕಾರ್ಯಾಚರಣೆಗಳಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್.ಎಸ್.ಜಿ ನ್ಯಾಶನಲ ಸೆಕ್ಯುರಿಟಿ ಗಾರ್ಡ) ಅತ್ಯುತ್ತಮವಾಗಿದೆ. ಎನ್.ಎಸ್.ಜಿ. ಇಂತಹ ಕಾರ್ಯಾಚರಣೆಗಳನ್ನು ನಿಖರವಾಗಿ ಪೂರ್ಣಗೊಳಿಸಿದೆ; ಆದರೆ ಪಾಕಿಸ್ತಾನಿ ಸೇನೆ ಬಹಳಷ್ಟು ಬಾರಿ ಕೇವಲ ತೋರಕೆಯಲ್ಲಿಯೇ ನಿರತವಾಗಿರುತ್ತದೆ, ಎಂದು ಹೇಳಿದರು.