ನೇಪಾಳದಲ್ಲಿ ಪುನಃ ರಾಜಶಾಹಿಯನ್ನು ಸ್ಥಾಪಿಸಿ ಹಿಂದೂ ರಾಷ್ಟ್ರವನ್ನು ಘೋಷಿಸುವ ಬೇಡಿಕೆಯಲ್ಲಿ ಏರಿಕೆ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಛಾಯಾಚಿತ್ರವಿರುವ ಫಲಕಗಳ ಪ್ರದರ್ಶನ

ಕಾಠಮಾಂಡು (ನೇಪಾಳ) – ನೇಪಾಳದಲ್ಲಿ ಪುನಃ ರಾಜಶಾಹಿಯನ್ನು ತಂದು ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಬೇಡಿಕೆಯು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕಾಠಮಾಂಡುವಿನಲ್ಲಿ ಹಿಂದಿನ ರಾಜ ಜ್ಞಾನೇಂದ್ರ ಶಹಾರವರ ಸಮರ್ಥಕರು ನೇಪಾಳದಲ್ಲಿ ಪುನಃ ರಾಜಶಾಹಿಯನ್ನು ಪುನರ್ಸ್ಥಾಪಿಸಲು ಹಾಗೂ ಹಿಂದೂ ಧರ್ಮವನ್ನು ಪುನಃ ರಾಜ್ಯದ ಧರ್ಮವನ್ನಾಗಿಸಲು ಮನವಿ ಮಾಡಿದ್ದಾರೆ. ಜ್ಞಾನೇಂದ್ರ ಶಹಾ ರವರು ಪಶ್ಚಿಮ ನೇಪಾಳದ ಪ್ರವಾಸದಿಂದ ಹಿಂತಿರುಗುವಾಗ ಮಾರ್ಚ್ 9 ರಂದು ಕಾಠಮಾಂಡುವಿನಲ್ಲಿರುವ ತ್ರಿಭುವನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 10 ಸಾವಿರ ಜನರು ಸೇರಿದ್ದರು. ಈ ಸಮಯದಲ್ಲಿ ಗುಂಪು `ರಾಜರಿಗಾಗಿ ಅರಮನೆಯನ್ನು ತೆರವುಗೊಳಿಸಿ’, `ರಾಜರೇ ಮರಳಿ ಬನ್ನಿ, ದೇಶವನ್ನು ಉಳಿಸಿ’ ಎಂಬ ಘೋಷಣೆಗಳನ್ನು ಕೂಗಿದರು. `ನಮಗೆ ಏನು ಬೇಕು – ರಾಜಶಾಹಿ ಹಾಗೂ ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸಿ’ ಎಂಬ ಘೋಷಣೆಯನ್ನೂ ಕೂಗಲಾಯಿತು. ಈ ಸಮಯದಲ್ಲಿ ಜನರ ಕೈಗಳಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರವರ ಛಾಯಾಚಿತ್ರವಿರುವ ಫಲಕಗಳಿದ್ದವು. ಇದನ್ನು ವಿರೋಧ ಪಕ್ಷಗಳು ಟೀಕಿಸಿವೆ. ಇನ್ನೊಂದೆಡೆ ರಾಜಶಾಹಿಯನ್ನು ಪುನಃ ತರುವ ಬೇಡಿಕೆಯ ವಿಷಯದಲ್ಲಿ ಜ್ಞಾನೇಂದ್ರ ಶಹಾ ರವರಿಂದ ಇಲ್ಲಿಯ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

1. 2006 ರಲ್ಲಿ ಅಪಾರ ಪ್ರತಿಭಟನೆಗಳಿಂದಾಗಿ ಜ್ಞಾನೇಂದ್ರರಿಗೆ ಅಧಿಕಾರವನ್ನು ಕೈಬಿಡಬೇಕಾಯಿತು. 2 ವರ್ಷಗಳ ನಂತರ ಸಂಸತ್ತು ರಾಜಶಾಹಿಯನ್ನು ರದ್ದುಗೊಳಿಸಿತ್ತು. ರಾಜಶಾಹಿಯು ಕೊನೆಗೊಂಡಾಗಿನಿಂದ ನೇಪಾಳದಲ್ಲಿ 13 ಸರಕಾರಗಳು ಸ್ಥಾಪನೆಯಾದವು. ಕಳೆದ ಕೆಲವು ವರ್ಷಗಳಲ್ಲಿ ನೇಪಾಳದ ಅರ್ಥವ್ಯವಸ್ಥೆಯು ಕುಸಿದಿದೆ. ಇದರ ಸಂದರ್ಭವನ್ನು ನೀಡುತ್ತ ಜ್ಞಾನೇಂದ್ರ ಶಹಾರವರ ಸ್ವಾಗತಕ್ಕಾಗಿ ಬಂದಿದ್ದ ಜನರು ದೇಶದ ಉಳಿವಿಗಾಗಿ ತಮಗೆ ಬದಲಾವಣೆ ಬೇಕು, ಎಂದು ಹೇಳಿದರು.

2. ಜ್ಞಾನೇಂದ್ರ ಶಹಾರವರ ಸ್ವಾಗತಕ್ಕಾಗಿ ಬಂದಿದ್ದ 50 ವರ್ಷದ ಕುಲರಾಜ ಶ್ರೇಷ್ಠರವರು 2006 ರಲ್ಲಿ ರಾಜಶಾಹಿಯನ್ನು ನಿಷೇಧಿಸಿದ್ದರು. ಈಗ ಅವರು ರಾಜಶಾಹಿಯನ್ನು ಬೆಂಬಲಿಸುತ್ತಿದ್ದಾರೆ. ಶ್ರೇಷ್ಠರವರು ಮಾತನಾಡುತ್ತ, ದೇಶದಲ್ಲಿನ ಎಲ್ಲಕ್ಕಿಂತ ಕೆಟ್ಟ ಸಂಗತಿ ಅಂದರೆ ಪ್ರಚಂಡ ಭ್ರಷ್ಟಾಚಾರ. ಅಧಿಕಾರದಲ್ಲಿರುವ ಎಲ್ಲ ನೇತಾರರು ದೇಶಕ್ಕಾಗಿ ಏನೂ ಮಾಡುತ್ತಿಲ್ಲ. ರಾಜಶಾಹಿಯನ್ನು ಕಿತ್ತೊಗೆಯುವ ಪ್ರತಿಭಟನೆಗಳಲ್ಲಿ ನಾನೂ ಸಹಭಾಗಿಯಾಗಿದ್ದೆನು. ನನಗೆ ಪರಿಸ್ಥಿತಿಯು ಸುಧಾರಿಸುವುದು ಎಂಬ ಆಸೆಯಿತ್ತು, ಆದರೆ ಹಾಗೆ ಆಗಲಿಲ್ಲ. ರಾಜಶಾಹಿಯು ಉರುಳಿದ ನಂತರ ರಾಷ್ಟ್ರವು ಇನ್ನೂ ಕೆಳಗೆ ಜಾರಿದೆ; ಆದುದರಿಂದ ನಾನು ನನ್ನ ವಿಚಾರವನ್ನು ಬದಲಾಯಿಸಿದ್ದೇನೆ, ಎಂದು ಹೇಳಿದರು.