ಕೊಹಿನೂರ್ ವಜ್ರದ ಇತಿಹಾಸ

ಕ್ವೀನ್ ಎಲಿಝಬೆತ್ ಧರಿಸುತ್ತಿದ್ದ ಕಿರೀಟ. ಅದರಲ್ಲಿ ಅಳವಡಿಸಲಾದ ಕೊಹಿನೂರ ವಜ್ರ

ಬ್ರಿಟನ್‌ನ ಭಾರತೀಯ ಮೂಲದ ಪ್ರಧಾನಮಂತ್ರಿ ಋಷಿ ಸುನಕ್ ಇವರು ೨೪ ಅಕ್ಟೋಬರ ೨೦೨೨ ರಂದು ಅಧಿಕಾರವನ್ನು ಸ್ವೀಕರಿಸಿದರು. ಅನಂತರ ಭಾರತದಲ್ಲಿನ ರಾಷ್ಟ್ರ ಪ್ರೇಮಿ ನಾಗರಿಕರಿಂದ ಆಂಗ್ಲರು ಭಾರತದಿಂದ ಲೂಟಿ ಮಾಡಿ ಕೊಂಡೊಯ್ದ ‘ಕೊಹಿನೂರ್’ ವಜ್ರವನ್ನು ಭಾರತಕ್ಕೆ ಹಿಂತಿರುಗಿಸ ಬೇಕು ಎಂಬ ಬೇಡಿಕೆ ನಿರಂತರವಾಗಿ ಕೇಳಿಬರುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಫ್ರೆಂಚ್ ಪತ್ರಕರ್ತ ಫ್ರಾನ್ಸುಆ ಗೋತಿಯೆ ಇವರು ಸಂಕ್ಷಿಪ್ತದಲ್ಲಿ ವಿವರಿಸಿದ ‘ಕೊಹಿನೂರ್ ವಜ್ರ’ದ ಇತಿಹಾಸವನ್ನು ಇಲ್ಲಿ ಕೊಡುತ್ತಿದ್ದೇವೆ. 

ಫ್ರಾನ್ಸುವಾ ಗೋತಿಯೆ

೧. ‘ಕೊಹಿನೂರ್’ ವಜ್ರವನ್ನು ವಿದೇಶಿ ಆಕ್ರಮಣಕಾರರು ಲೂಟಿಗೈಯುವುದು

ಕೃಷ್ಣಾ ನದಿಯ ದಕ್ಷಿಣ ದಡದಲ್ಲಿನ ಮೊದಲಿನ ಗೋಲ್ಕೊಂಡಾದ ಕಾಕತಿಯಾ ಆಡಳಿತದ (ರಾಜರ) ಕಾಲದಲ್ಲಿ ಕೊಳ್ಳೂರು ಗ್ರಾಮದಲ್ಲಿದ್ದ ಗಣಿಯಲ್ಲಿ ‘ಕೊಹಿನೂರ್’ ವಜ್ರವನ್ನು ತಯಾರಿಸಲಾಗಿತ್ತು. ೧೨ ರಿಂದ ೧೪ ನೇ ಶತಮಾನದ ಕಾಲಾವಧಿ ಯಲ್ಲಿ ಕಾಕತಿಯಾ ರಾಜಮನೆತನದವರು ಇಂದಿನ ತೆಲಂಗಾಣಾ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಒಡಿಶಾ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ರಾಜ್ಯವಾಳುತ್ತಿದ್ದರು ಮತ್ತು ಓರುಗಲ್ಲು (ವಾರಂಗಲ್) ಇದು ಅವರ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ೧೮೬ ಕ್ಯಾರೇಟ್‌ನ ಕೊಹಿನೂರ್ ವಜ್ರವನ್ನು ಅಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಅಳವಡಿಸಲಾಗಿತ್ತು. ಅನಂತರ ೧೨೯೦ ರಲ್ಲಿ ದೆಹಲಿ ಸಾಮ್ರಾಜ್ಯದ ಸಂಸ್ಥಾಪಕ ಅಲ್ಲಾವುದ್ದೀನ ಖಿಲ್ಜಿಯು ಆ ಸಮಯದಲ್ಲಿ ಶ್ರೀಮಂತ ದಖ್ಖನ ಪ್ರದೇಶದಲ್ಲಿ ಲೂಟಿ ಮಾಡುವಾಗ ಅವನು ಆ ಕೊಹಿನೂರ್ ವಜ್ರವನ್ನು ವಶಪಡಿಸಿಕೊಂಡನು.

ಬ್ರಿಟಿಷ ಇತಿಹಾಸಕಾರ ಬಾಂಬೇರ ಗ್ಯಾಸ್‌ಕಾಗ್ನ ‘ದ ಗ್ರೇಟ್ ಮುಘಲ್ಸ್’ ಎಂಬ ಪುಸ್ತಕದಲ್ಲಿ ಮುಂದಿನಂತೆ ಹೇಳಿದ್ದಾನೆ, “೧೫೨೬ ರಲ್ಲಿ ಹುಮಾಯೂನ ಈ ಮೊಗಲ ರಾಜನು ಆ ವಜ್ರವನ್ನು ತನ್ನ ತಂದೆ ಬಾಬರನಿಗೆ ಉಡುಗೊರೆ ಎಂದು ಕೊಟ್ಟನು.” ಗ್ಯಸ್‌ಕಾಗ್ನ’ನು ನೀಡಿದ ಮಾಹಿತಿಗನುಸಾರ ‘ಈ ಉಡುಗೊರೆಯಿಂದ ಪ್ರಭಾವಿತನಾಗದ ಬಾಬರ ಈ ರತ್ನದ ಬೆಲೆಯನ್ನು ನಿರ್ಧರಿಸಿದನು. ಅವನ ಅಭಿಪ್ರಾಯಕ್ಕನುಸಾರ, ಇದರ ಬೆಲೆ ‘ಎರಡುವರೆ ದಿನ ಸಂಪೂರ್ಣ ಜಗತ್ತಿಗೆ ಆಹಾರ ನೀಡಲು ಸಾಕಾಗುವಷ್ಟು ಇತ್ತು.’ ಇದು ಅವನಿಗೆ ಕ್ಷುಲ್ಲಕ ವಿಷಯವಾಗಿರುವುದರಿಂದ ಅವನು ಆ ವಜ್ರವನ್ನು ತನ್ನ ಮಗನಿಗೆ ಹಿಂತಿರುಗಿಸಿದನು. ಅನಂತರ ಕೆಲವು ವರ್ಷಗಳ ನಂತರ ಹುಮಾಯೂನನು ಈ ವಜ್ರವನ್ನು ತನಗೆ ಆಶ್ರಯ ನೀಡಿದ ಪರ್ಶಿಯಾದ ಶಹಾ ತಹಮಾಸ್ಪನಿಗೆ ಕೊಟ್ಟನು. ಆಗ ಅಫ್ಗಾನಿಸ್ತಾನದಲ್ಲಿ ಹುಮಾಯೂನನ ಕಡುವೈರಿಯಾದ ಶೇರ್ ಶಹಾ ಸುರೀ ಇವನು ಹುಮಾಯೂನನ ಸೈನ್ಯವನ್ನು ಸೋಲಿಸಿ ಅವನನ್ನು ಭಾರತದಿಂದ ಗಡಿಪಾರು ಮಾಡಿದ್ದನು. ಒಂದರ ಹಿಂದೆ ಒಂದರಂತೆ ಒಡೆತನ ಬದಲಾಗುತ್ತಾ ಹೋದ ಕಾರಣ ಮತ್ತು ಅದರಿಂದ ರಕ್ತಪಾತವಾಗಿ ಕೊನೆಗೆ ಈ ವಜ್ರ ೧೭ ನೇ ಶತಮಾನದ ಮೊಗಲ ಸಮ್ರಾಟ ಶಹಾಜಹಾನನ ಖಜಾನೆಗೆ ಸೇರಿತು. ಶಹಾಜಹಾನನು ೧೬೩೫ ರಲ್ಲಿ ಈ ವಜ್ರವನ್ನು ತನಗಾಗಿ ತಯಾರಿಸಿದ ಮಯೂರ ಸಿಂಹಾಸನದಲ್ಲಿ ಅಳವಡಿಸಿದನು.

೨. ಕೊಹಿನೂರ್ ವಜ್ರವು ಪರ್ಶಿಯಾ ಮತ್ತು ಅಫ್ಗಾನಿಸ್ತಾನದ ಆಕ್ರಮಣಕಾರರ ಬಳಿ ಹೋಗುವುದು

ಕೆಲವು ದಶಕಗಳ ನಂತರ ಮಾಣಿಕ್ಯ, ಪಚ್ಚೆ ಮತ್ತು ವಜ್ರಸಜ್ಜಿತ ಶಹಾಜಹಾನನ ಸುಪ್ರಸಿದ್ಧ ಚಿನ್ನದ ಸಿಂಹಾಸನವನ್ನು ಪಾರ್ಶಿಯಾದಲ್ಲಿನ ಲೋಭಿ ರಾಜ ನಾದಿರ ಶಾಹ ವರ್ಷ ೧೭೩೮ ದೆಹಲಿ ಸಮೀಪದ ಕರ್ನಾಲ ಭಾಗದಲ್ಲಿ ನಡೆದ ಯುದ್ಧದಲ್ಲಿ ಮೊಗಲ ಬಾದಶಾಹ ಮಹಮ್ಮದ ಶಹಾನನ್ನು ಸೋಲಿಸಿ ಪರ್ಶಿಯಾಕ್ಕೆ ತೆಗೆದುಕೊಂಡು ಹೋದನು. ಅನಂತರ ನಾದೀರ ಶಹಾನ ಮೊಮ್ಮಗ ಶಹಾರೂಖ ಶಹಾ ೧೮ ನೇ ಶತಮಾನದಲ್ಲಿ ಅಫ್ಗಾನಿ ಸಾಮ್ರಾಜ್ಯದ ಸಂಸ್ಥಾಪಕ ಅಹಮದ ಶಹಾ ದುರ್ರಾಣಿಗೆ ಉಡುಗೊರೆಯೆಂದು ಕೊಟ್ಟನು ಮತ್ತು ಆ ವಜ್ರವು ಅನೇಕ ವರ್ಷಗಳ ವರೆಗೆ ಕಾಬೂಲ್‌ನಲ್ಲಿ ಉಳಿಯಿತು. ಆದರೆ ಅನಂತರ ಈ ಅಶಾಂತ ಪ್ರದೇಶದಲ್ಲಿ ಬ್ರಿಟಿಷರು ಪ್ರವೇಶ ಮಾಡಿದರು. ವರ್ಚಸ್ಸುವಾದಿ ಬ್ರಿಟಿಷರು ಮತ್ತು ಇನ್ನೋರ್ವ ವಿಸ್ತಾರವಾದಿ ರಷ್ಯನ್ ಝಾರ (ರಾಜ) ಇವರು ಕಾರಸ್ತಾನದಿಂದ ಅಫ್ಗಾನಿಸ್ತಾನವನ್ನು ವಶಪಡಿಸಿ ಕೊಳ್ಳುವ ಸಂಚು ಮಾಡಿದರು. ಈ ಸಂಚಿನ ಪರಿಣಾಮವಾಗಿ ದುರ್ರಾಣಿಯ ಮೊಮ್ಮಗ ಅಫ್ಗಾನದ ರಾಜ ಶಹಾ ಶೂಜಾ ಇವನು ಬ್ರಿಟಿಷರೊಂದಿಗೆ ಕೂಡಿಕೊಂಡನು ಮತ್ತು ಆ ಸಮಯದಲ್ಲಿ ಈ ಸಾಮರ್ಥ್ಯಶಾಲಿ ಬಹುಮೂಲ್ಯ ವಜ್ರವನ್ನು ಸಾರಾಯಿಯ ಪೀಪಾಯಿಯೊಳಗೆ ಇಟ್ಟಿದ್ದನು ಎಂದು ಹೇಳಲಾಗುತ್ತದೆ.

೩. ಇಂಗ್ಲೆಂಡ್‌ನ ರಾಣಿ ಎಲಿಝಾಬೆತ್ ಇವಳ ಕಿರೀಟದಲ್ಲಿ ಕೊಹಿನೂರ್ ವಜ್ರವನ್ನು ಅಳವಡಿಸುವುದು

ಆ ಸಮಯದಲ್ಲಿ ಕಾಬೂಲ್‌ನಲ್ಲಿ ಮೌಂಟ್ ಸ್ಟುಅರ್ಟ್ ಎಲಫಿಸ್ಟನ್ ಈ ಬ್ರಿಟಿಷ ಅಧಿಕಾರಿ ಇದ್ದನು. ಅನಂತರ ಎಲಫಿಸ್ಟನ್ ಮುಂಬಯಿಯ ರಾಜ್ಯಪಾಲನಾದನು. ಜೂನ್ ೧೮೦೯ ರಲ್ಲಿ ಶೂಜಾನನ್ನು ಅವನ ವಾರಸುದಾರ ಮಹಮೂದ ಶಹಾ ಇವನು ಅಧಿಕಾರದಿಂದ ಕೆಳಗಿಳಿಸಿದನು. ಅನಂತರ ಶೂಜಾ ಲಾಹೋರ ದಲ್ಲಿನ ಸಿಕ್ಖ ಆಡಳಿತದ ಮಹಾರಾಜ ರಣಜಿತ ಸಿಂಹನ ಆಶ್ರಯಕ್ಕೆ ಹೋದನು. ಆಶ್ರಯ ನೀಡಿದ್ದಕ್ಕಾಗಿ ಶೂಜಾ ಇವನು ಅವರಿಗೆ ‘ಕೊಹಿನೂರ್’ ವಜ್ರವನ್ನು ಕೊಟ್ಟನು. ೧೮೪೯ ರಲ್ಲಿ ಮಹಾರಾಜ ರಣಜಿತ ಸಿಂಹರ ಮೃತ್ಯುವಿನ ನಂತರ ಪಂಜಾಬ ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡರು. ಅನಂತರ ‘ಕೊಹಿನೂರ್’ ವಜ್ರವನ್ನು ಬ್ರಿಟಿಷ ಆಯುಕ್ತ ಸರ್ ಜಾನ್ ಲಾರೆನ್ಸ್ ಇವರಿಗೆ ಕೊಡಲಾಯಿತು. ಈ ವಜ್ರ ಅವರ ಕೋಟಿನ (ಸದರಾದ) ಜೇಬಿನಲ್ಲಿ ೬ ತಿಂಗಳು ಇತ್ತು. ಅನಂತರ ೧೯೩೭ ರಲ್ಲಿ ಈ ವಜ್ರವನ್ನು ಇಂಗ್ಲೆಂಡ್‌ನ ರಾಣಿ ಎಲಿಝಾಬೆತ್ ಇವಳ ಪತಿ ೬ ನೇ ಜಾರ್ಜ ಇವನ ರಾಜ್ಯಾಭಿಷೇಕದ ಸಂದರ್ಭದಲ್ಲಿ ರಾಣಿಯ ಕಿರೀಟದಲ್ಲಿ ಅಳವಡಿಸಲಾಯಿತು. ೨೦೦೨ ರಲ್ಲಿ ರಾಣಿಯ ದೇಹಾಂತ್ಯದ ನಂತರ ಅವಳ ಅಂತ್ಯಸಂಸ್ಕಾರದ ಸಮಯದಲ್ಲಿ ಅವಳ ಶವಪೆಟ್ಟಿಗೆಯ ಮೇಲೆ ಇಡಲಾಯಿತು. ಅನಂತರ ಈ ವಜ್ರವನ್ನು ‘ಟವರ್ ಆಫ್ ಲಂಡನ್’ನಲ್ಲಿ ಸುರಕ್ಷಾರಕ್ಷಕರ ಕಣ್ಗಾವಲಿನಲ್ಲಿ ಇಡಲಾಗಿದೆ.

೪. ಭಾರತೀಯ ಒಡೆತನದ ಕೊಹಿನೂರ್ ವಜ್ರವನ್ನು ಬ್ರಿಟಿಷ ರಾಣಿ ಉಪಯೋಗಿಸುವುದು ಎಷ್ಟರ ಮಟ್ಟಿಗೆ ಯೋಗ್ಯ ?

ನಿಜವಾಗಿ ನೋಡಿದರೆ ಈ ವಜ್ರದ ಒಡೆತನ ಭಾರತದ್ದಾಗಿದ್ದು ಅದನ್ನು ಪುನಃ ಭಾರತಕ್ಕೆ ಕೊಡಬೇಕೆಂದು ಅನಿಸದಿರುವುದು, ಇದು ಬ್ರಿಟಿಷ ಆಡಳಿತದವರಿಗೆ ನಾಚಿಕೆಗೇಡಾಗಿದೆ. ಅದೇ ರೀತಿ ಇಂದಿನವರೆಗೆ ಭಾರತದ ಯಾವ ಪ್ರಧಾನಮಂತ್ರಿಗಳು ಕೂಡ ಈ ವಜ್ರದ ಬಗ್ಗೆ ತಮ್ಮ ಹಕ್ಕು ಸಾಧಿಸಿ ಹಿಂತಿರುಗಿ ಪಡೆಯುವ ಧೈರ್ಯವನ್ನು ಮಾಡಲಿಲ್ಲ, ಎಂಬುದೂ ಅಷ್ಟೇ ನಾಚಿಕೆಗೇಡಿ ವಿಷಯವಾಗಿದೆ. ಭಾರತದಿಂದ ಲೂಟಿ ಮಾಡಿ ಕೊಂಡೊಯ್ದ ಅನೇಕ ದೇವಸ್ಥಾನಗಳ ಅಮೂಲ್ಯ ಪ್ರಾಚೀನ ಮೂರ್ತಿಗಳು, ಆಭರಣಗಳು, ಮೂರ್ತಿಗಳು ಇಂದು ಬ್ರಿಟನ್‌ನ ಸಂಗ್ರಹಾಲಯದಲ್ಲಿವೆ. ಬ್ರಿಟಿಷರ ರಾಣಿ ಅವಳ ಪ್ರಜೆಗಳ ದೃಷ್ಟಿಯಲ್ಲಿ ಒಳ್ಳೆಯವಳಾಗಿರಬಹುದು; ಆದರೆ ಅವಳಿಗೆ ಭಾರತದಲ್ಲಿ ಬ್ರಿಟಿಷರ ವಸಾಹತು ಇದ್ದ ಬಗ್ಗೆ (ಬ್ರಿಟಿಷರ ಆಳ್ವಿಕೆಯ ಬಗ್ಗೆ) ಸ್ವಲ್ಪವೂ ದುಃಖವಿಲ್ಲ. ಅವಳು ಈ ವಜ್ರವನ್ನು ತನ್ನ ಆಭರಣಗಳಲ್ಲಿ ಅಳವಡಿಸಿಕೊಂಡಳು. ಇದು ಎಷ್ಟರ ಮಟ್ಟಿಗೆ ಯೋಗ್ಯವಾಗಿದೆ ?

– ಫ್ರಾನ್ಸುಆ ಗೋತಿಯೇ, ಫ್ರೆಂಚ್ ಪತ್ರಕರ್ತ (ಅಕ್ಟೋಬರ್ ೨೦೨೨)