ಅರಿವಿಲ್ಲದೇ ಮಾಡಿದ ಶಿವನ ಉಪಾಸನೆಯಿಂದ ಪ್ರಸನ್ನನಾಗುವ ಶಿವ

ಓರ್ವ ನಿರ್ದಯಿ ಮತ್ತು ಮಹಾಪಾಪಿ ಬೇಟೆಗಾರನಿದ್ದನು. ಒಂದು ದಿನ ಅವನು ಬೇಟೆಗೆಂದು ಹೋಗುವಾಗ ದಾರಿಯಲ್ಲಿ ಒಂದು ಶಿವನ ದೇವಸ್ಥಾನವು ಕಾಣಿಸಿತು. ಅಂದು ಮಹಾಶಿವರಾತ್ರಿಯಾಗಿರುವುದರಿಂದ ಅಲ್ಲಿ ಭಕ್ತರು ಪೂಜೆ, ಭಜನೆ, ಕೀರ್ತನೆ ಇತ್ಯಾದಿಗಳನ್ನು ಮಾಡುತ್ತಿದ್ದರು. ಅದನ್ನು ನೋಡಿ ಆ ಬೇಟೆಗಾರನು, ಕಲ್ಲಿಗೆ ದೇವರೆಂದು ತಿಳಿದು ‘ಶಿವ ಶಿವ ‘ಹರ ಹರ ಎಂದು ಹೇಳುವ ಮೂರ್ಖ ಜನರು ಎಂದು ಅವರ ನಿಂದನೆಯನ್ನು ಮಾಡುತ್ತಾ ಬೇಟೆಗಾಗಿ ವನಕ್ಕೆ ಹೋದನು. ಬೇಟೆಯನ್ನು ನೋಡಲು ಅವನು ಒಂದು ಮರದ ಮೇಲೆ ಏರಿ ಕುಳಿತನು, ಆದರೆ ಮರದ ಎಲೆಗಳಿಂದಾಗಿ ಅವನಿಗೆ ಬೇಟೆಯು ಕಾಣಿಸುತ್ತಿರಲಿಲ್ಲ. ಆಗ ಅವನು ಒಂದೊಂದೇ ಎಲೆಯನ್ನು ಕಿತ್ತು ಕೆಳಗೆ ಎಸೆಯತೊಡಗಿದನು. ಎಲೆಗಳನ್ನು ಕಿತ್ತೆಸೆಯುವಾಗ ಅವನು ‘ಶಿವ ಶಿವ ಎನ್ನುತ್ತಿದ್ದನು. ಆ ಎಲೆಗಳು ಮರದ ಕೆಳಗಿದ್ದ ಶಿವಲಿಂಗದ ಮೇಲೆ ಬೀಳುತ್ತಿದ್ದವು. ಬೆಳಗಿನ ಸಮಯದಲ್ಲಿ ಅವನಿಗೆ ಒಂದು ಜಿಂಕೆಯು ಕಾಣಿಸಿತು. ಬೇಟೆಗಾರನು ಅದಕ್ಕೆ ಬಾಣವನ್ನು ಬಿಡಲು ಸಿದ್ಧತೆಯನ್ನು ಮಾಡುವಾಗ ಆ ಜಿಂಕೆಯು ಅವನಿಗೆ ಬಾಣವನ್ನು ಬಿಡಬೇಡವೆಂದು ವಿನಂತಿಸಿತು. ಪಾಪವನ್ನು ಮಾಡಿದರೆ ಏನಾಗುತ್ತದೆ ಎಂಬುದನ್ನು ಹೇಳಿ ಆ ಜಿಂಕೆಯು ಅಲ್ಲಿಂದ ಹೊರಟುಹೋಯಿತು. ತನಗೆ ಅರಿವಿಲ್ಲದೇ ಆಗಿರುವ ಮಹಾಶಿವರಾತ್ರಿಯ ಜಾಗರಣೆ, ಶಿವನಿಗೆ ಮಾಡಿದ ಬಿಲ್ವಾರ್ಚನೆ ಮತ್ತು ಶಿವನ ಜಪ ಇವುಗಳಿಂದಾಗಿ ಆ ಬೇಟೆಗಾರನ ಎಲ್ಲ ಪಾಪಗಳು ನಾಶವಾಗಿ ಅವನಿಗೆ ಜ್ಞಾನಪ್ರಾಪ್ತವಾಯಿತು.

ಇದರಿಂದ ಅರಿವಿಲ್ಲದೇ ಮಾಡಿದ ಶಿವನ ಉಪಾಸನೆಯಿಂದ ಶಿವನು ಹೇಗೆ ಪ್ರಸನ್ನನಾಗುತ್ತಾನೆ ಎಂಬುದು ಗಮನಕ್ಕೆ ಬರುತ್ತದೆ.