೧. ಝಾರಖಂಡ ಸರಕಾರವು ಜೈನರ ಅತ್ಯಂತ ಪವಿತ್ರ ಸಮ್ಮೇದ ಶಿಖರ್ಜಿ ತೀರ್ಥಸ್ಥಳವನ್ನು ಪ್ರವಾಸೀತಾಣವೆಂದು ಘೋಷಿಸಿದ್ದರಿಂದ ಅಲ್ಲಿನ ಪಾವಿತ್ರ್ಯಕ್ಕೆ ಧಕ್ಕೆ !
‘ಸಮ್ಮೇದ ಶಿಖರ್ಜಿ’ಯು ಜೈನರ ಪವಿತ್ರಸ್ಥಾನವಾಗಿದೆ. ಅದು ಝಾರಖಂಡದ ಗಿರಿಡೀಹ ಜಿಲ್ಲೆಯ ಛೋಟಾ ನಾಗಪುರದ ತಪ್ಪಲಿನ ಒಂದು ಪರ್ವತದ ಮೇಲಿದೆ. ಅದನ್ನು ಪಾರಸನಾಥ ಬೆಟ್ಟ ಅಥವಾ ಪಾರಸನಾಥ ಪರ್ವತದ ಪವಿತ್ರಸ್ಥಳವೆಂದು ತಿಳಿಯುತ್ತಾರೆ. ಅಲ್ಲಿ ಜೈನ ಧರ್ಮೀಯರ ೨೪ ರಲ್ಲಿನ ೨೦ ತೀರ್ಥಂಕರರು ತಪಸ್ಸು ಮಾಡಿ ನಿರ್ವಾಣ (ಮೋಕ್ಷ) ಪ್ರಾಪ್ತಮಾಡಿಕೊಂಡಿದ್ದಾರೆ. ಅಲ್ಲಿ ಲಕ್ಷಗಟ್ಟಲೆ ಜೈನ ಮುನಿಗಳು ಸಾಧನೆಯನ್ನು ಮಾಡಿ ಮೋಕ್ಷವನ್ನು ಪಡೆದಿದ್ದಾರೆ. ಈ ರೀತಿಯಲ್ಲಿ ಈ ಸ್ಥಾನಕ್ಕೆ ಧಾರ್ಮಿಕ ದೃಷ್ಟಿಯಿಂದ ಮಹತ್ವವಿದೆ. ಈ ಸ್ಥಳವು ಸಮುದ್ರಮಟ್ಟದಿಂದ ೪ ಸಾವಿರದ ೪೩೦ ಅಡಿ ಎತ್ತರದಲ್ಲಿದ್ದು ನಿಸರ್ಗರಮ್ಯ ದೃಷ್ಟಿಯಿಂದಲೂ ಅದು ಶೋಭಿನೀಯವಾಗಿದೆ. ಝಾರಖಂಡ ಸರಕಾರವು ಇತ್ತೀಚೆಗೆ ಇದನ್ನು ‘ಪ್ರವಾಸೀತಾಣ’ವೆಂದು ಘೋಷಿಸಲು ಆದೇಶ ನೀಡಿದೆ. ಅದೇ ರೀತಿ ಅದರಲ್ಲಿನ ಒಂದು ಭಾಗವನ್ನು ‘ವನ್ಯಜೀವಿ ಅಭಯಾರಣ್ಯ’ವೆಂದು ಘೋಷಿಸಿದೆ.
ಈ ಸ್ಥಳವು ಪ್ರವಾಸೀತಾಣವಾದರೆ, ಅಲ್ಲಿಗೆ ಶ್ರದ್ಧೆ ಇಲ್ಲದವರು, ಮೋಜು ಮಜಾ ಮಾಡುವವರು ಹಾಗೂ ಕಾಲಕಳೆಯುವರೆಲ್ಲ ಬರುವರು. ಇದರ ಅರ್ಥ ಅಲ್ಲಿ ಅಸಾಮಾಜಿಕ ಹಾಗೂ ಧರ್ಮ ವಿರೋಧಿ ಕೃತ್ಯಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಬಹುದು. ಆದ್ದರಿಂದ ಈ ತೀರ್ಥಕ್ಷೇತ್ರವನ್ನು ಪ್ರವಾಸೀತಾಣವೆಂದು ಅಭಿವೃದ್ಧಿ ಪಡಿಸಲು ಜೈನ ಸಮಾಜವು ತೀವ್ರವಾಗಿ ವಿರೋಧಿಸುತ್ತಿದೆ. ಒಂದು ಸುತ್ತೋಲೆಗನುಸಾರ ರಾಜ್ಯ ಸರಕಾರ ಅಲ್ಲಿ ಕಿರುಉದ್ಯೋಗಗಳಿಗೆ ಚಾಲನೆ ನೀಡಲು ಕೋಳಿ ಸಾಕಣೆ ಮತ್ತು ಮೀನು ಇತ್ಯಾದಿಗಳ ಮಾರಾಟಕ್ಕೂ ಅನುಮತಿಯನ್ನೂ ನೀಡಿದೆ. ಇದರಿಂದ ಅಲ್ಲಿ ಮಾಂಸ ಹಾಗೂ ಮದಿರಾ ಸೇವನೆಯಾಗುವ ಸಾಧ್ಯತೆ ಜಾಸ್ತಿಯಿದೆ.
೨. ಸರಕಾರದ ನಿರ್ಧಾರದ ವಿರುದ್ಧ ಜೈನ ಧರ್ಮೀಯರ ಸಂಘಟಿತ ವಿರೋಧ ಹಾಗೂ ಜೈನಮುನಿಗಳ ಪ್ರಾಣತ್ಯಾಗ
ಈ ಸುತ್ತೋಲೆಯನ್ನು, ಅಂದರೆ ಪ್ರವಾಸೀತಾಣವೆಂದು ಘೋಷಿಸುವುದನ್ನು ಜೈನ ಧರ್ಮೀಯರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅವರು ೨೧ ಡಿಸೆಂಬರ್ ೨೦೨೨ ರಂದು ‘ಭಾರತ ಬಂದ್’ಗೆ ಕರೆ ನೀಡಿದ್ದರು. ಈ ಕರೆಗೆ ಭಾರತದಾದ್ಯಂತದ ಅನೇಕ ರಾಜ್ಯಗಳಲ್ಲಿ ಅತ್ಯುತ್ತಮ ಬೆಂಬಲ ಲಭಿಸಿತು. ಅನೇಕ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮತ್ತು ಕಂಪನಿಗಳನ್ನು ಮಧ್ಯಾಹ್ನ ೨ ಗಂಟೆಯ ವರೆಗೆ ಮುಚ್ಚಿದ್ದರು. ‘ಆ ದಿನ ಕೇವಲ ಭೋಪಾಲದಲ್ಲಿಯೇ ೧೦೦ ಕೋಟಿ ರೂಪಾಯಿಗಳಿಗಿಂತ ಹೆಚ್ಚು ವ್ಯಾಪಾರವಹಿವಾಟು ನಿಂತಿತ್ತು’, ಎಂದು ಜೈನ ಮುನಿಗಳು ಹೇಳಿದ್ದಾರೆ. ಈ ದಿನ ಮೈನಪುರಿ, ಅಲಾವಾ, ಕಿಸಣೀ, ಕರರ್ಹಲ, ದೇವರ ಹಾಗೂ ಭೋಗಾವ ಈ ಮಾರುಕಟ್ಟೆಗಳು ಸ್ವಯಂಪ್ರೇರಿತರಾಗಿ ಮುಚ್ಚಲ್ಪಟ್ಟಿದ್ದವು. ಮಧ್ಯಪ್ರದೇಶದ ಖಂಡವಾ, ಗ್ವಾಲಿಯರ್, ಇಂದೂರ, ಬಾಲಾಘಾಟ ಹಾಗೂ ನರ್ಮದಾಪುರಮ್ ಇಲ್ಲಿಯೂ ಬಂದ್‌ಗೆ ಉತ್ತಮ ಸ್ಪಂದನ ಸಿಕ್ಕಿತು. ಸರಕಾರದ ನಿರ್ಣಯದ ವಿರುದ್ಧ ಜೈನ ಮಹಿಳೆಯರು, ಪುರುಷರು ಮತ್ತು ಬಾಲಕರು ಬೀದಿಗಿಳಿದಿದ್ದರು. ಈ ನಿಷೇಧವು ೩ ದಿನಗಳ ವರೆಗೆ ನಡೆದಿತ್ತು. ಎಲ್ಲರೂ ಪ್ರಜಾಪ್ರಭುತ್ವಮಾರ್ಗದಿಂದ ಸರಕಾರವನ್ನು ವಿರೋಧಿಸಿದರು. ಅನಂತರ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ೧೦೮ ಅಡಿ ಉದ್ದದ ಮನವಿಪತ್ರವನ್ನು ಕಳುಹಿಸಿದರು. ಜೈನ ಭಕ್ತರು ಬಾಲಘಾಟದಿಂದಲೂ ತಮ್ಮ ರಕ್ತದಿಂದ ಬರೆದ ಒಂದು ಮನವಿಪತ್ರವನ್ನು ಕಳುಹಿಸಿದರು. ವ್ಯಾಪಾರಿ ಬಾಂಧವರು ತೋಳಿಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಸರಕಾರವನ್ನು ಖಂಡಿಸಿದರು. ವಕೀಲರು ತಮ್ಮ ಕೋಟಿನ ಕೈ ಮೇಲೆ ಬಿಳಿ ಪಟ್ಟಿಯನ್ನು ಕಟ್ಟಿ ಸರಕಾರವನ್ನು ಪ್ರತಿಭಟಿಸಿದರು. ಇವೆಲ್ಲ ಚಟುವಟಿಕೆಗಳ ವಿಚಾರ ಮಾಡಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಹ ಮತ್ತು ಕಮಲನಾಥ ಸಹಿತ ಕಾಂಗ್ರೆಸ್ಸಿನ ಹಲವು ನೇತಾರರು ಜೈನ ಬಾಂಧವರಿಗೆ ನಮ್ಮ ಬೆಂಬಲ ಸೂಚಿಸಿದರು.
ಝಾರಖಂಡದ ಮುಖ್ಯಮಂತ್ರಿಗಳಿಗೆ ಜೈನ ಸಮಾಜದ ನಿಯೋಗವು ಮನವಿಪತ್ರವನ್ನು ನೀಡಿದ ನಂತರ ಅವರು ‘ಈ ನಿರ್ಣಯವನ್ನು ತಕ್ಷಣ ರದ್ದುಪಡಿಸಲು ವಿನಂತಿಸುವೆನು’, ಎಂದು ಜೈನ ಬಾಂಧವರಿಗೆ ಭರವಸೆ ನೀಡಿದ್ದರು. ಹೀಗಿದ್ದರೂ ಸರಕಾರವು ಈ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ.
‘ಎಲ್ಲಿಯವರೆಗೆ ತೀರ್ಥಸ್ಥಾನವನ್ನು ಪ್ರವಾಸೀತಾಣವೆಂದು ಮಾಡಿದ ಘೋಷಣೆಯನ್ನು ರದ್ದು ಮಾಡುವುದಿಲ್ಲವೋ, ಅಲ್ಲಿಯ ವರೆಗೆ ಜೈನ ಸಮಾಜ ಇದನ್ನು ವಿರೋಧಿಸುವುದು’, ಎಂಬ ನಿರ್ಧಾರವನ್ನು ಜೈನ ಧರ್ಮೀಯರು ಮಾಡಿದ್ದಾರೆ. ಇದರೊಂದಿಗೆ ಝಾರಖಂಡ ರಾಜ್ಯ ಸರಕಾರದ ಈ ನಿರ್ಣಯದ ವಿರುದ್ಧ ಮುನಿ ಸುಗ್ಯಸಾಗರ ಮಹಾರಾಜರು ೨೫ ಡಿಸೆಂಬರ್ ೨೦೨೨ ರಿಂದ ಜಯಪುರದ ಸಾಂಗಾನೇರನ ಜೈನಮಂದಿರದಲ್ಲಿ ಆಮರಣ ಉಪವಾಸ ಆರಂಭಿಸಿದ್ದರು. ಉಪವಾಸದ ಹತ್ತನೆ ದಿನ ಅಂದರೆ ೩ ಜನವರಿ ೨೦೨೩ ರಂದು ಅವರು ಪ್ರಾಣತ್ಯಾಗ ಮಾಡಿದರು.
೩. ಧರ್ಮ ಮತ್ತು ತೀರ್ಥಸ್ಥಳಗಳ ಬಗ್ಗೆ ಜೈನರ ಜಾಗರೂಕತೆ !
ಜೈನ ಬಾಂಧವರು ತಮ್ಮ ಧರ್ಮ ಹಾಗೂ ಅವರ ಪವಿತ್ರ ತೀರ್ಥಸ್ಥಳಗಳ ಬಗ್ಗೆ ತುಂಬಾ ಜಾಗರೂಕರಾಗಿದ್ದಾರೆ. ಇದರ ಇನ್ನೊಂದು ಉದಾಹರಣೆಯನ್ನು ನೋಡುವುದಾದರೆ ಪರ್ಯುಷಣ ಪರ್ವಕಾಲದಲ್ಲಿ ಅವರು ಮಹಾರಾಷ್ಟ್ರದಲ್ಲಿ ಮುಂಬಯಿ ಸಹಿತ ಅನೇಕ ಸ್ಥಳಗಳಲ್ಲಿ ಮಾಂಸ, ಮೀನು ಇತ್ಯಾದಿಗಳ ವ್ಯಾಪಾರಗಳನ್ನು ಮುಚ್ಚುವಂತೆ ಮಹಾನಗರಪಾಲಿಕೆಗಳಿಗೆ ಒತ್ತಡವನ್ನು ಹೇರುತ್ತಾರೆ. ಮುಂಬಯಿಯಲ್ಲಿ ಪ್ರತಿವರ್ಷ ಪರ್ಯುಷಣ ಪರ್ವಕಾಲದಲ್ಲಿ ನಿರ್ದಿಷ್ಠ ದಿನಗಳವರೆಗೆ ಮಾಂಸ ಹಾಗೂ ಮೀನುಗಳ ಮಾರಾಟವಿರುವುದಿಲ್ಲ. ಈ ಪ್ರಕರಣದಲ್ಲಿ ಒಬ್ಬ ಮತಾಂಧನು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿ ಸರಕಾರದ ಈ ಕೃತಿಗೆ ಸವಾಲೊಡ್ಡಿದನು; ಆದರೆ ಅವನಿಗೆ ನ್ಯಾಯಾಲಯದ ಚಾಟಿ ಬೀಸುತ್ತಾ ‘ಎರಡು ದಿನ ಮಾಂಸ ಮತ್ತು ಮೀನುಗಳನ್ನು ತಿನ್ನದಿದ್ದರೆ ನಿಮಗೇನು ನಷ್ಟವಾಗುತ್ತದೆ ?’, ಎಂದು ಹೇಳಿ ಅವನ ಅರ್ಜಿಯನ್ನು ತಳ್ಳಿಹಾಕಿತು. ಇದೊಂದೇ ಉದಾಹರಣೆಯಲ್ಲ, ಜೈನ ಬಾಂಧವರು ಅನೇಕ ಬಾರಿ ಪ್ರತಿಯೊಂದು ಅಧರ್ಮದ ಕೃತಿಯ ವಿರುದ್ಧ ಜಾಗರೂಕತೆಯಿಂದ, ಸಂಘಟಿತರಾಗಿ ಹಾಗೂ ಪ್ರಜಾಪ್ರಭುತ್ವಮಾರ್ಗದಿಂದ ಆದರೆ ಅಷ್ಟೇ ಆಕ್ರಮಕವಾಗಿ ವಿರೋಧಿಸಿ ಯಶಸ್ಸನ್ನು ಪಡೆದಿದ್ದಾರೆ. ಇದು ಖಂಡಿತ ಪ್ರಶಂಸನೀಯವಾಗಿದೆ. ಹಿಂದೂಗಳು ಇದರ ಅನುಕರಣೆ ಮಾಡಬೇಕು.
೪. ಹಿಂದೂಗಳು ಜೈನರಿಂದ ಆದರ್ಶವನ್ನು ಪಡೆಯಬೇಕು
ಸರಕಾರವು ಹಿಂದೂಗಳ ಅನೇಕ ಪವಿತ್ರ ದೇವಸ್ಥಾನಗಳನ್ನು ಮತ್ತು ಧಾರ್ಮಿಕ ಸ್ಥಳಗಳನ್ನು ಅನೇಕ ದಶಕಗಳ ಹಿಂದೆಯೇ ‘ಪ್ರವಾಸೀತಾಣ’ವನ್ನಾಗಿ ಘೋಷಿಸಿದೆ. ಇಂದು ಆ ಪವಿತ್ರ ದೇವಸ್ಥಾನಗಳ ಪರಿಸರದಲ್ಲಿ ಮಾಂಸ ಹಾಗೂ ಮೀನುಗಳ, ಮದ್ಯ ಹಾಗೂ ಅಮಲು ಪದಾರ್ಥಗಳ ವ್ಯಾಪಾರ ನಡೆಯುತ್ತದೆ. ಇಷ್ಟಾದರೂ ಹಿಂದೂಗಳು ಯಾವತ್ತೂ ಅದನ್ನು ವಿರೋಧಿಸಲಿಲ್ಲ.
೫. ಹಿಂದೂಗಳ ಪ್ರಮುಖ ತೀರ್ಥಸ್ಥಳಗಳ ಪಾವಿತ್ರ್ಯವನ್ನು ಉಳಿಸಲು ಎಲ್ಲರೂ ಪ್ರಜಾಪ್ರಭುತ್ವದ ಮಾರ್ಗದಿಂದ ಸಂಘಟಿತರಾಗಿ ಪ್ರಯತ್ನಿಸುವುದು ಆವಶ್ಯಕ !
ರಾಷ್ಟ್ರೀಯ ಸ್ತರದಲ್ಲಿ ಅಯೋಧ್ಯೆ, ಕಾಶಿ, ಮಥುರಾ ಈ ಪ್ರಸಿದ್ಧ ಮಂದಿರಗಳ ಸಹಿತ ಅನೇಕ ಪವಿತ್ರಸ್ಥಳಗಳಲ್ಲಿ ವ್ಯಾಪಾರದ ದೃಷ್ಟಿಕೋನದಿಂದ ಒಡಂಬಡಿಕೆ ಮಾಡಲಾಯಿತು ಹಾಗೂ ಈ ಸ್ಥಳಗಳನ್ನು ಅಧ್ಯಾತ್ಮದ ಜೊತೆಗೆ ಪ್ರವಾಸೀತಾಣಗಳೆೆಂದು ನೋಡಲಾರಂಭವಾಯಿತು. ದಕ್ಷಿಣ ಭಾರತದಲ್ಲಿಯೂ ಹಿಂದೂಗಳ ಅನೇಕ ಪವಿತ್ರ ತೀರ್ಥಕ್ಷೇತ್ರಗಳಿವೆ. ಇವುಗಳೊಂದಿಗೆ ಮಧ್ಯ ಹಾಗೂ ಉತ್ತರಭಾರತದಲ್ಲಿ ಭಗವಾನ ಶಂಕರನ ಅನೇಕ ಜ್ಯೋತಿರ್ಲಿಂಗಗಳಿವೆ. ಅವುಗಳನ್ನು ‘ಪವಿತ್ರಸ್ಥಳ’ಗಳೆಂದು ಘೋಷಿಸಿಲ್ಲ. ಆದ್ದರಿಂದ ಜಾಲತಾಣಗಳಲ್ಲಿ ಅವುಗಳು ಪ್ರವಾಸೀತಾಣಗಳೆಂದು ಕಾಣಿಸುತ್ತವೆ. ಇವೆಲ್ಲ ವಿಷಯಗಳ ವಿರುದ್ಧ ಹಿಂದೂಗಳು ಕಾನೂನು ಮಾರ್ಗದಿಂದ ಧ್ವನಿಯೆತ್ತಬೇಕು. ಕಡಿಮೆ ಪಕ್ಷ ಮಂದಿರ ಪರಿಸರದ ೫ ಕಿ.ಮೀ. ವ್ಯಾಪ್ತಿಯಲ್ಲಿ ಇತರ ಧರ್ಮದವರ ಅಧಾರ್ಮಿಕ ವ್ಯವಸಾಯವನ್ನು ನಿಷೇಧಿಸಬೇಕು. ಹಾಗೆಯೇ ಈ ಕ್ಷೇತ್ರಗಳಲ್ಲಿ ಅಭಕ್ಷ (ಮಾಂಸ) ಭಕ್ಷಣೆ ಮತ್ತು ಅಪೇಯಪಾನ ಆಗಲಾರದು ಎಂಬ ಆಶ್ವಾಸನೆಯನ್ನು ಸರಕಾದಿಂದ ಪಡೆಯಬೇಕು. ಅದೇ ರೀತಿ ತೀರ್ಥಸ್ಥಳಗಳ ಚೈತನ್ಯ ಮತ್ತು ಪಾವಿತ್ರ್ಯವನ್ನು ಕಾಪಾಡಲು ಒಳ್ಳೆಯ ವಿಷಯಗಳ ಆಗ್ರಹವನ್ನು ಮಾಡಬೇಕು. ಇದಕ್ಕಾಗಿ ಎಲ್ಲಕ್ಕಿಂತ ಮೊದಲು ಹಿಂದೂ ಬಾಂಧವರಲ್ಲಿ ಜಾಗರೂಕತೆ ಮೂಡಿಸುವುದು ಆವಶ್ಯಕವಾಗಿದೆ. ಇದನ್ನು ಕಾನೂನುಮಾರ್ಗಗಳಿಂದ ವಿರೋಧಿಸಿ ಧರ್ಮಕರ್ತವ್ಯವನ್ನು ನಿರ್ವಹಿಸಬೇಕು, ಎಂಬುದು ಕಲಿಯಲು ಸಿಗುತ್ತದೆ.
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ. (೨೩.೧೨.೨೦೨೨)