ರಷ್ಯಾ-ಯುಕ್ರೇನ್‌ನ ನಡುವೆ ನಡೆಯುತ್ತಿರುವ ಯುದ್ಧಕ್ಕೆ ೧೦ ತಿಂಗಳು ಪೂರ್ಣವಾಗಿದೆ. ಅದರ ನಿಮಿತ್ತ …
ಕಳೆದ ೧೦ ತಿಂಗಳಿಂದ (೨೪ ಫೆಬ್ರವರಿ ೨೦೨೨ ರಿಂದ) ನಡೆಯುತ್ತಿರುವ ರಷ್ಯಾ-ಯುಕ್ರೇನ್ ನಡುವಿನ ಯುದ್ಧ ನಿಲ್ಲುವ ಲಕ್ಷಣವೆ ಕಾಣಿಸದಿರುವುದರಿಂದ ಈಗ ಅಮೇರಿಕಾ ‘ಜಿ-೭’ (ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಹಾಗೂ ಅಮೇರಿಕಾ ಈ ವಿಕಸಿತ ದೇಶಗಳ ಸಂಘಟನೆ) ಸಂಘಟನೆಗಳ ಮೂಲಕ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರಲು ಹೊಸ ಹೆಜ್ಜೆಯಿಟ್ಟಿದೆ. ಅದಕ್ಕನುಸಾರ ರಷ್ಯಾದಿಂದ ರಫ್ತಾಗುವ ತೈಲವನ್ನು ೬೦ ಡಾಲರ್‌ಗಿಂತ (೪ ಸಾವಿರದ ೯೬೭ ರೂಪಾಯಿ) ‘ಗರಿಷ್ಠ ಬೆಲೆ ಮಿತಿ’ಯನ್ನು (ಪ್ರೈಸ್ ಕ್ಯಾಪಿಂಗ್) ಹೇರಿದೆ. ರಷ್ಯಾ ಜಗತ್ತಿನ ಪ್ರಮುಖ ತೈಲ ಪೂರೈಕೆಯ ದೇಶವಾಗಿದ್ದು ಅದರ ಅರ್ಥವ್ಯವಸ್ಥೆಗೆ ತೈಲ ಮತ್ತು ವಾಯು ರಫ್ತಿನಿಂದ ಸಿಗುವ ಉತ್ಪನ್ನವೆ ಪ್ರಮುಖ ಆಧಾರವಾಗಿದೆ. ಆದ್ದರಿಂದ ಇಂತಹ ‘ಪ್ರೈಸ್ ಕ್ಯಾಪಿಂಗ್’ ಹೇರಿ ಈ ದೇಶವನ್ನು ಆರ್ಥಿಕ ದೃಷ್ಟಿಯಲ್ಲಿ ಸಂಕಷ್ಟಕ್ಕೀಡು ಮಾಡಬಹುದು, ಎಂಬುದು ಇದರ ಹಿಂದಿನ ಉದ್ದೇಶವಾಗಿದೆ; ಆದರೆ ಅದರಿಂದ ಏನೂ ಸಾಧಿಸಲಾಗದು. ತದ್ವಿರುದ್ಧ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಹೆಚ್ಚಾಗಿ ಇಡೀ ಜಗತ್ತಿಗೆ ಅದರ ಬಿಸಿ ತಟ್ಟುವ ಸಾಧ್ಯತೆಯಿದೆ.
೧. ರಷ್ಯಾದ ಮೇಲೆ ೫ ಸಾವಿರಕ್ಕಿಂತಲೂ ಹೆಚ್ಚು ಆರ್ಥಿಕ ನಿರ್ಬಂಧಗಳನ್ನು ಹೇರಿದರೂ ಅದಕ್ಕೆ ಯಾವುದೇ ಪರಿಣಾಮವಾಗದಿರುವುದು
ಫೆಬ್ರವರಿ ತಿಂಗಳಲ್ಲಿ ಆರಂಭವಾದ ರಷ್ಯಾ-ಯುಕ್ರೇನ್ ಯುದ್ಧವು ಇನ್ನೂ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಈ ಯುದ್ಧ ಆರಂಭವಾಗುತ್ತಲೇ ಅಮೇರಿಕಾ ರಷ್ಯಾದ ಮೇಲೆ ೫ ಸಾವಿರಕ್ಕಿಂತಲೂ ಹೆಚ್ಚು ರೀತಿಯ ಆರ್ಥಿಕ ನಿರ್ಬಂಧಗಳನ್ನು ಹೇರಿತು. ‘ಜಿ-೭’, ಯುರೋಪಿಯನ್ ಮಹಾಸಂಘ ಹಾಗೂ ಆಸ್ಟ್ರೇಲಿಯಾ ಈ ದೇಶಗಳು ಈ ಆರ್ಥಿಕ ನಿರ್ಬಂಧದಲ್ಲಿ ಪಾಲ್ಗೊಂಡಿವೆ. ಇದರಿಂದ ‘ರಷ್ಯಾದ ಅರ್ಥ ವ್ಯವಸ್ಥೆ ಮೇಲೆ ತುಂಬ ಪರಿಣಾಮವಾಗಬಹುದು’, ಎಂದು ಹೇಳಲಾಗುತ್ತಿತ್ತು. ಈ ನಿರ್ಬಂಧಕ್ಕನುಸಾರ ಯುರೋಪಿಯನ್ ದೇಶಗಳಿಗೆ ರಷ್ಯಾದಿಂದ ತೈಲ ಹಾಗೂ ನೈಸರ್ಗಿಕ ಅನಿಲದ (ಗ್ಯಾಸ್) ಆಮದನ್ನು ಸಂಪೂರ್ಣ ನಿಲ್ಲಿಸಬೇಕು, ಎಂದು ತಾಕೀತು ಮಾಡಲಾಗಿತ್ತು; ಆದರೆ ಇಂದು ೧೦ ತಿಂಗಳು ಕಳೆದರೂ ರಷ್ಯಾದ ಅರ್ಥವ್ಯವಸ್ಥೆಗೆ ಹೆಚ್ಚೇನು ನಕಾರಾತ್ಮಕ ಪರಿಣಾಮ ಆಗಿರುವುದು ಕಂಡುಬಂದಿಲ್ಲ. ಪ್ರಾರಂಭದ ಕೆಲವು ವಾರಗಳಲ್ಲಿ ರಷ್ಯನ್ ಕರೆನ್ಸಿ ಹಾಗೂ ಅಲ್ಲಿನ ಶೇಯರ್ ಮಾರುಕಟ್ಟೆಯಲ್ಲಿ ಐತಿಹಾಸಿಕ ಕುಸಿತವಾಗಿತ್ತು. ಅದನ್ನು ಹೊರತುಪಡಿಸಿ ರಷ್ಯಾಗೆ ಸ್ವಲ್ಪ ಪ್ರಮಾಣದಲ್ಲಿ ಆರ್ಥಿಕ ಹಾನಿಯಾಯಿತು; ಆದರೆ ಅಮೇರಿಕಾವು ನಿರೀಕ್ಷಿಸಿದಂತೆ ‘ರಷ್ಯಾ ಆರ್ಥಿಕ ದೃಷ್ಟಿಯಲ್ಲಿ ಕಂಗೆಡುವಷ್ಟು’ ಸ್ಥಿತಿ ಇಂದಿನ ವರೆಗೆ ಉದ್ಭವಿಸಿಲ್ಲ. ಆದ್ದರಿಂದಲೆ ಈ ಯುದ್ಧವು ನಿಲ್ಲುವ ಯಾವುದೇ ಸಾಧ್ಯತೆಯು ಕಾಣಿಸುವುದಿಲ್ಲ. ತದ್ವಿರುದ್ಧ ರಷ್ಯಾದಿಂದ ಯುಕ್ರೇನ್‌ನ ಮೇಲಾಗುತ್ತಿರುವ ಆಕ್ರಮಣಗಳು ಹೆಚ್ಚಾಗಬಹುದೆಂದು ಹೇಳಲಾಗುತ್ತದೆ.
೨. ರಷ್ಯಾದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಲು ‘ಜಿ-೭’ ದೇಶಗಳಿಂದ ಕಚ್ಚಾ ತೈಲಕ್ಕೆ ‘ಗರಿಷ್ಠ ಬೆಲೆ ಮಿತಿ’ಯ ನಿರ್ಬಂಧ !
ಈ ಪರಿಸ್ಥಿತಿಯು ಅರಿವಾದುದರಿಂದ ರಷ್ಯಾದ ಮೇಲೆ ಇನ್ನೂ ಹೆಚ್ಚಿನ ಆರ್ಥಿಕ ಒತ್ತಡ ಹೇರಲು ಈಗ ಒಂದು ಹೊಸ ಹೆಜ್ಜೆಯನ್ನಿಡಲಾಗಿದೆ. ಅದಕ್ಕನುಸಾರ ರಷ್ಯಾದಿಂದ ರಫ್ತಾಗುವ ಕಚ್ಚಾ ತೈಲದ ‘ಗರಿಷ್ಠ ಬೆಲೆ ಮಿತಿ’ಯನ್ನು ‘ಜಿ-೭’ ದೇಶಗಳು ಹಾಕಿವೆ. ಇದಕ್ಕೆ ‘ಪ್ರೈಸ್ ಕ್ಯಾಪಿಂಗ್’ ಎಂದು ಹೇಳಲಾಗುತ್ತದೆ. ಅದಕ್ಕನುಸಾರ ರಷ್ಯಾಗೆ ೬೦ ಡಾಲರ್ ಪ್ರತಿ ಬ್ಯಾರೆಲ್‌ಗಿಂತ ಹೆಚ್ಚು ಬೆಲೆಗೆ ಅದರ ಕಚ್ಚಾ ತೈಲವನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಅಥವಾ ಯಾವುದೇ ದೇಶವೂ ಅದಕ್ಕಿಂತ ಹೆಚ್ಚು ಬೆಲೆಗೆ ತೈಲವನ್ನು ಖರೀದಿಸಲು ಸಾಧ್ಯವಿಲ್ಲ, ಎನ್ನುವ ಒಂದು ರೀತಿಯ ಫತ್ವಾವನ್ನೆ ಹೊರಡಿಸಲಾಗಿದೆ.
೩. ‘ಗರಿಷ್ಠ ಬೆಲೆ ಮಿತಿ’ಯನ್ನು ಹಾಕುವುದರ ಹಿಂದಿನ ೩ ಉದ್ದೇಶಗಳು ಮತ್ತು ಅದರಲ್ಲಿನ ಟೊಳ್ಳುತನ
ಇದರ ಹಿಂದೆ ೩ ಉದ್ದೇಶಗಳಿವೆ. ಒಂದೆಂದರೆ ರಷ್ಯಾದ ಮೇಲೆ ಹೇರಿದ ಆರ್ಥಿಕ ನಿರ್ಬಂಧಗಳನ್ನು ಇನ್ನಷ್ಟು ಬಿಗಿ ಮಾಡುವುದು. ಅದೇ ರೀತಿ ತೈಲದ ರಫ್ತು ಮಾಡಿ ಆ ವ್ಯಾಪಾರದಿಂದ ರಷ್ಯಾ ಗಳಿಸುವ ಆದಾಯದಲ್ಲಿ ಕುಸಿತವಾಗಬೇಕು; ಏಕೆಂದರೆ, ಇದೇ ಹಣವು ಕೊನೆಗೆ ಯುಕ್ರೇನ್‌ನ ವಿರುದ್ಧದ ಯುದ್ಧಕ್ಕಾಗಿ ಉಪಯೋಗಿಸಲಾಗುತ್ತದೆ. ಆದ್ದರಿಂದ ಈ ‘ವಾರ್ ಫಂಡಿಂಗ್’ಗೆ ಕಡಿವಾಣ ಬೀಳಬೇಕು, ಎಂಬುದು ಇದರ ಹಿಂದಿನ ಇನ್ನೊಂದು ಉದ್ದೇಶವಾಗಿದೆ. ಮೂರನೇ ಉದ್ದೇಶವೆಂದರೆ ತೈಲದ ವ್ಯವಸ್ಥಾಪನೆಯನ್ನು ನಿಯಂತ್ರಿಸುವುದು. ಇವುಗಳಿಗಾಗಿ ಈ ‘ಪ್ರೈಸ್ ಕ್ಯಾಪ್’ ಹಾಕಲಾಗಿದೆ.
ಆದರೂ, ಈ ‘ಪ್ರೈಸ್ ಕ್ಯಾಪಿಂಗ್’ನಿಂದ ರಷ್ಯಾದ ಅರ್ಥವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮವಾಗಬಹುದೇ ? ಅದೇ ರೀತಿ ಇದರಿಂದ ರಷ್ಯಾ-ಯುಕ್ರೇನ್ ಯುದ್ಧ ನಿಲ್ಲಬಹುದೇ ? ಎಂಬುದು ಮಹತ್ವದ ಪ್ರಶ್ನೆಯಾಗಿದೆ. ಇವೆರಡಕ್ಕೂ ಉತ್ತರ ‘ಇಲ್ಲ’ ಎಂದೇ ಆಗಿದೆ. ಇದರ ಕಾರಣವೆಂದರೆ ಅಮೇರಿಕಾ ಹೇರಿದ ೫ ಸಾವಿರ ಆರ್ಥಿಕ ನಿರ್ಬಂಧಗಳು ಸಂಪೂರ್ಣ ವಿಫಲವಾಗಿವೆ. ಅದೇ ರೀತಿ ಈ ಹೊಸ ಹೆಜ್ಜೆಯೂ ವಿಫಲವಾಗುವ ಸಾಧ್ಯತೆಯೆ ಹೆಚ್ಚಿದೆ.
೪. ಯುದ್ಧ ಆರಂಭವಾದ ನಂತರವೂ ಯುರೋಪಿಯನ್ ಮಹಾಸಂಘಗಳು ರಷ್ಯಾದಿಂದ ೬ ಪಟ್ಟು ಹೆಚ್ಚು ತೈಲವನ್ನು ಆಮದು ಮಾಡಿಕೊಂಡಿವೆ
೨೪ ಫೆಬ್ರವರಿ ೨೦೨೨ ರಂದು ರಷ್ಯಾ-ಯುಕ್ರೇನ್ ಯುದ್ಧ ಆರಂಭವಾಗುವಾಗ ರಷ್ಯಾದ ತೈಲದ ಉತ್ಪಾದನೆ ಪ್ರತಿದಿನ ಸುಮಾರು ೧ ಸಾವಿರ ದಶಲಕ್ಷ ಬ್ಯಾರೆಲ್‌ನಷ್ಟಿತ್ತು. ಇದರಲ್ಲಿ ೪೦೦ ದಶಲಕ್ಷ ಬ್ಯಾರೆಲ್ಸ್ ತೈಲವನ್ನು ಅದು ತನಗಾಗಿ ಉಪಯೋಗಿಸುತ್ತಿತ್ತು ಹಾಗೂ ೬೦೦ ದಶಲಕ್ಷ ಬ್ಯಾರೆಲ್ಸ್ ತೈಲವನ್ನು ರಫ್ತು ಮಾಡಲಾಗುತ್ತಿತ್ತು. ಅದರಲ್ಲಿ ಶೇ. ೫೦ ರಷ್ಟು ಅಂದರೆ ೩೦೦ ದಶಲಕ್ಷ ಬ್ಯಾರೆಲ್ಸ್ ತೈಲವು ಯುರೋಪ್‌ಗೆ ರಫ್ತಾಗುತ್ತಿತ್ತು; ಏಕೆಂದರೆ ಪ್ರಾರಂಭದಿಂದಲೇ ಯುರೋಪಿಯನ್ ದೇಶಗಳು ಆಮದು ಮಾಡುವ ಸಂಪೂರ್ಣ ತೈಲ ಮತ್ತು ನೈಸರ್ಗಿಕ ಅನಿಲಕ್ಕಾಗಿ ರಷ್ಯಾವನ್ನೇ ಅವಲಂಬಿಸಿವೆ. ಯುರೋಪಿಯನ್ ದೇಶಗಳಲ್ಲಿನ ವಿದ್ಯುತ್ ಉತ್ಪಾದನೆ ಯೋಜನೆಗಾಗಿ ರಷ್ಯಾದಿಂದ ಬರುವ ನೈಸರ್ಗಿಕ ಅನಿಲವು ಮಹತ್ವದ್ದಾಗಿದೆ. ಅಮೇರಿಕಾ ರಷ್ಯಾದ ಮೇಲೆ ಹೇರಿದ ಆರ್ಥಿಕ ನಿರ್ಬಂಧದಲ್ಲಿ ಯುರೋಪಿಯನ್ ಮಹಾಸಂಘವೂ ಪಾಲ್ಗೊಂಡಿತ್ತು; ಆದರೆ ಈ ನಿರ್ಬಂಧಗಳನ್ನು ಯುರೋಪಿಯನ್ ಮಹಾಸಂಘವೇ ಮೊದಲಿಗೆ ಕಡೆಗಣಿಸಿತು ಎಂಬುದನ್ನು ಗಮನಿಸಬೇಕು. ಸದ್ಯ ಬೆಳಕಿಗೆ ಬರುವ ಅಂಕಿ ಅಂಶಗಳಿಗನುಸಾರ ೨೪ ಫೆಬ್ರವರಿಯಿಂದ ೧೭ ನವೆಂಬರ್ ೨೦೨೨ ಈ ಅವಧಿಯಲ್ಲಿ ಭಾರತ ಮತ್ತು ಚೀನಾ ಎಷ್ಟು ತೈಲವನ್ನು ಆಮದು ಮಾಡಿವೆಯೊ, ಅದರ ೬ ಪಟ್ಟು ಹೆಚ್ಚು ತೈಲವನ್ನು ಯುರೋಪಿಯನ್ ದೇಶಗಳು ರಷ್ಯಾದಿಂದ ಮಾಡಿವೆ. ಅದರ ಜೊತೆಗೆ ಅವು ೫೦ ಅಬ್ಜ ಯುರೋದ ನೈಸರ್ಗಿಕ ಅನಿಲ ಹಾಗೂ ಕಲ್ಲಿದ್ದಲನ್ನು ರಷ್ಯಾದಿಂದ ಆಮದು ಮಾಡಿಕೊಂಡಿವೆ, ಅಂದರೆ ಯುರೋಪಿಯನ್ ಮಹಾಸಂಘದಿಂದಲೆ ರಷ್ಯಾಗೆ ಕೋಟಿಗಟ್ಟಲೆ ಡಾಲರ್ಸ್ ಸಿಕ್ಕಿದೆ. ಇದರ ಅರ್ಥ ರಷ್ಯಾದಿಂದ ಆಮದು ಮಾಡುವುದು ಯುರೋಪಿಯನ್ ದೇಶಗಳಿಗೆ ಅನಿವಾರ್ಯವಾಗಿತ್ತು.
೫. ಯುರೋಪಿಯನ್ ದೇಶಗಳು ಅಮೇರಿಕಾದ ನಿರ್ಬಂಧವನ್ನು ಬೆಂಬಲಿಸಿದರೂ ಪ್ರತ್ಯಕ್ಷದಲ್ಲಿ ಮಾತ್ರ ಅದನ್ನು ಕಡೆಗಣಿಸುತ್ತದೆ
ಕೋವಿಡ್ ಮಹಾಮಾರಿಯಿಂದ ಯುರೋಪಿಯನ್ ದೇಶಗಳ ಅರ್ಥವ್ಯವಸ್ಥೆಯು ಕುಸಿಯುತ್ತಿದ್ದು ಅವುಗಳು ಅತ್ಯಂತ ಅಪಾಯದ ಸ್ಥಿತಿಯಲ್ಲಿವೆ. ಯುರೋಪ್‌ನಲ್ಲಿ ಅನೇಕ ಉದ್ಯೋಗ ವ್ಯಾಪಾರಗಳು ಮುಚ್ಚಲ್ಪಟ್ಟಿವೆ. ಈ ಸ್ಥಿತಿಯಲ್ಲಿ ರಷ್ಯಾದಿಂದ ತೈಲ ಹಾಗೂ ನೈಸರ್ಗಿಕ ಅನಿಲದ ಆಮದನ್ನು ನಿಲ್ಲಿಸುತ್ತಿದ್ದರೆ ಅವರ ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತಿತ್ತು. ಮೊದಲೆ ಈ ಯುದ್ಧ ಆರಂಭವಾದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ ಕಾರಣ ಅನೇಕ ದೇಶಗಳ ವಿದೇಶಿ ಕರೆನ್ಸಿ ಬತ್ತಿಹೋಗಿತ್ತು. ಇದರಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಸಹಿತ ಯುರೋಪಿಯನ್ ದೇಶಗಳ ಸಮಾವೇಶವಿದೆ. ಯುರೋಪಿಯನ್ ದೇಶಗಳು ಕಾಗದದಲ್ಲಿ ಅಮೇರಿಕಾದ ನಿರ್ಬಂಧವನ್ನು ಸಮರ್ಥಿಸಿದ್ದರೂ, ಪ್ರತ್ಯಕ್ಷವಾಗಿ ಅದನ್ನು ಕಡೆಗಣಿಸಿ ಪರೋಕ್ಷವಾಗಿ ಹಾಗೂ ಕಳ್ಳಮಾರ್ಗದಿಂದ ಅಥವಾ ಗುಪ್ತವಾಗಿ ರಷ್ಯಾದಿಂದ ತೈಲ ಮತ್ತು ಗ್ಯಾಸ್ ಆಮದನ್ನು ಮುಂದುವರಿಸಿದ್ದವು. ಇದರಲ್ಲಿ ಹಿಂದಿನ ತುಲನೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಗೊಳಿಸಿರಬಹುದು; ಆದರೆ ಅದರಿಂದ ರಷ್ಯಾಗೆ ಯಾವುದೇ ವ್ಯತ್ಯಾಸವಾಗಿಲ್ಲ.
೬. ಭಾರತ ಹಾಗೂ ಚೀನಾ ದೇಶಗಳು ತೈಲ ಆಮದು ಮಾಡುವುದರಿಂದ ರಷ್ಯಾಗೆ ಅಮೇರಿಕಾದ ನಿರ್ಬಂಧಗಳಿಂದ ಅತ್ಯಲ್ಪ ಪರಿಣಾಮವಾಗಿದೆ
ಈ ಕಾರಣದಿಂದ ರಷ್ಯಾಗೆ ಚೀನಾ ಮತ್ತು ಭಾರತದ ಮಾರುಕಟ್ಟೆ ಸಿಕ್ಕಿತು. ಇವೆರಡೂ ದೇಶಗಳಿಗೆ ರಷ್ಯಾ ಈ ಹಿಂದೆಯೆ ತೈಲವನ್ನು ರಫ್ತು ಮಾಡುತ್ತಿತ್ತು; ಆದರೆ ಯುಕ್ರೇನ್ ಯುದ್ಧ ಆರಂಭವಾದ ನಂತರ ಅದರಲ್ಲಿ ತುಂಬಾ ಹೆಚ್ಚಳವಾಯಿತು. ಭಾರತದ ವಿಚಾರ ಮಾಡಿದರೆ ಕಳೆದ ೮ ತಿಂಗಳಲ್ಲಿ ಭಾರತ ೭ ಅಬ್ಜ ಡಾಲರ್ಸ್ನ (೫೬೦ ಕೋಟಿ ರೂಪಾಯಿಗಳ) ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿದೆ. ಯುದ್ಧ ಆರಂಭವಾದಾಗ ರಷ್ಯಾ ಭಾರತದ ೧೨ ನೇ ಕ್ರಮಾಂಕದ ತೈಲ ಪೂರೈಕೆಯ ದೇಶವಾಗಿತ್ತು; ಆದರೆ ಜೂನ್-ಜುಲೈ ತಿಂಗಳಿಂದ ರಷ್ಯಾ ಭಾರತದ ಒಂದನೆ ಕ್ರಮಾಂಕದ ತೈಲ ಪೂರೈಕೆಯ ದೇಶವಾಗಿದೆ. ಫೆಬ್ರವರಿ ತಿಂಗಳಲ್ಲಿ ಭಾರತ ತನ್ನ ಒಟ್ಟು ತೈಲ ಆಮದಿನಲ್ಲಿ ಶೇ. ೨ ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿತ್ತು. ಆದರೆ ಜೂನ್ ತಿಂಗಳಲ್ಲಿ ಅದು ಶೇ. ೨೨ ರಷ್ಟಾಯಿತು. ಇಂದು ಭಾರತವು ಒಟ್ಟು ತೈಲ ಆಮದಿನಲ್ಲಿ ಅತೀ ಹೆಚ್ಚು ತೈಲ ರಷ್ಯಾದಿಂದ ಖರೀದಿಸುತ್ತದೆ.
ಭಾರತದ ರೂಪದಲ್ಲಿ ರಷ್ಯಾಗೆ ಒಂದು ದೊಡ್ಡ ಮಾರುಕಟ್ಟೆ ಸಿಕ್ಕಿತು. ವಿಶೇಷವೆಂದರೆ ಭಾರತದ ಎರಡು ಪಟ್ಟು ತೈಲವನ್ನು ಚೀನಾ ರಷ್ಯಾದಿಂದ ಆಮದು ಮಾಡಿದೆ. ಆದ್ದರಿಂದ ಈ ಎರಡೂ ದೇಶಗಳಿಂದ ರಷ್ಯಾಗೆ ದೊಡ್ಡ ಪ್ರಮಾಣದಲ್ಲಿ ಹಣ ಸಿಕ್ಕಿತು. ಅದರ ಪರಿಣಾಮದಿಂದ ಅಮೇರಿಕನ್ ನಿರ್ಬಂಧದಿಂದ ರಷ್ಯಾಗೆ ಹೆಚ್ಚೇನೂ ಪರಿಣಾಮವಾಗಿಲ್ಲ.
೭. ‘ಗರಿಷ್ಠ ಬೆಲೆ ಮಿತಿ’ಯ ಹೆಜ್ಜೆಯಿಂದ ಭಾರತಕ್ಕೆ ಯಾವುದೇ ಪರಿಣಾಮವಾಗಲಿಕ್ಕಿಲ್ಲ
ಈಗ ಕೂಡ ‘ಜಿ-೭’ ‘ಪ್ರೈಸ್ ಕ್ಯಾಪ್’ ಘೋಷಣೆ ಮಾಡಿದ್ದರೂ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ‘ಬ್ರೇಂಟ್ ಕ್ರೂಡ್ ಆಯಿಲ್’ನ ಬೆಲೆ ಸುಮಾರು ೭೪ ರಿಂದ ೭೫ ಡಾಲರ್ಸನ ವರೆಗೆ ಕುಸಿದಿದೆ. ಹೀಗಿರುವಾಗ ೬೦ ಡಾಲರ್‌ನ ಗರಿಷ್ಠ ಬೆಲೆ ನಿಯಂತ್ರಣದಿಂದ ಕೇವಲ ಶೇ.೧೦ ರಿಂದ ೧೫ ರಷ್ಟು ಅಂತರವಿರುತ್ತದೆ. ಅಂದರೆ ಜಾಗತಿಕ ಬೆಲೆಗಿಂತ ಅಷ್ಟು ಕಡಿಮೆ ಬೆಲೆಗೆ ರಷ್ಯನ್ ತೈಲವನ್ನು ಖರೀದಿಸಬೇಕಾಗುತ್ತದೆ. ಈ ಹೊಸ ನಿರ್ಬಂಧದಿಂದ ಇಷ್ಟೇ ಪರಿಣಾಮವಾಗಿದೆ. ಇದರಿಂದ ರಷ್ಯಾಗೆ ದೊಡ್ಡ ಆಘಾತವಾಗುವ ಸಂಭವವಿಲ್ಲ. ಅದರ ಬದಲು ಅಮೇರಿಕಾ ಯುರೋಪಿಯನ್ ದೇಶಗಳ ಬಗ್ಗೆ ಕಠೋರವಾದ ನಿಲುವನ್ನು ತೆಗೆದುಕೊಂಡು ಅವರು ರಷ್ಯಾದಿಂದ ಆಮದು ಮಾಡುವ ತೈಲವನ್ನು ಸಂಪೂರ್ಣ ನಿಲ್ಲಿಸುವಂತೆ ಒತ್ತಡ ಹೇರುತ್ತಿದ್ದರೆ, ಅದರಿಂದ ರಷ್ಯಾಗೆ ಪೆಟ್ಟು ಬೀಳುತ್ತಿತ್ತು; ಆದರೆ ಹಾಗೆ ಮಾಡಿಲ್ಲ. ಇನ್ನೊಂದು ವಿಷಯವೆಂದರೆ, ನಿಜವಾಗಿಯೂ ರಷ್ಯಾಗೆ ಆಘಾತ ನೀಡಲಿಕ್ಕಿದ್ದರೆ, ‘ಪ್ರೈಸ್ ಕ್ಯಾಪ್’ಗನುಸಾರ ಹೇರಿದ ಮಿತಿಯನ್ನು ೩೦ ಡಾಲರ್ಸ್ ಮಾಡಬೇಕಿತ್ತು. ಆದರೆ ಹಾಗೆಯೂ ಮಾಡಿಲ್ಲ. ಭಾರತದ ವಿಚಾರ ಮಾಡಿದರೆ ನಮಗೆ ಈ ‘ಪ್ರೈಸ್ ಕ್ಯಾಪಿಂಗ್’ನಿಂದ ಏನೂ ಪರಿಣಾಮವಾಗದು; ಏಕೆಂದರೆ ಭಾರತ ರಷ್ಯಾದಿಂದ ಈಗಲೆ ಶೇ. ೨೫ ರಿಂದ ೩೦ ರಷ್ಟು ರಿಯಾಯಿತಿ ಬೆಲೆಗೆ ತೈಲವನ್ನು ಖರೀದಿಸುತ್ತಿದೆ. ಆದ್ದರಿಂದ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ‘ಬ್ರೇಂಟ್ ಕ್ರೂಡ್ ಆಯಿಲ್’ನ ಬೆಲೆ ೭೫ ಡಾಲರ‍್ಸ್ ಪ್ರತಿ ಬ್ಯಾರಲ್ ಇರುವಾಗ ಭಾರತ ಹಾಗೂ ಚೀನಾಗೆ ಅದನ್ನು ೬೦ ಡಾಲರ್ಸ್ಗಿಂತ ಕಡಿಮೆ ಬೆಲೆಗೆ ರಷ್ಯಾ ಕೊಡುತ್ತಿದೆ. ಸಹಜವಾಗಿಯೇ ಭಾರತಕ್ಕೆ ಈ ಹೊಸ ನಿರ್ಬಂಧದಿಂದ ಪರಿಣಾಮವಾಗಲಿಕ್ಕಿಲ್ಲ.
೮. ಜಗತ್ತಿನಾದ್ಯಂತ ತೈಲವನ್ನು ಮಾರಾಟ ಮಾಡುವ ‘ಓಪೆಕ್ ಸಂಘಟನೆ’ಯು ‘ಜಿ-೭’ರ ನಿರ್ಣಯವನ್ನು ದುರ್ಲಕ್ಷಿಸಿದೆ
‘ಜಿ-೭’ ಹೇರಿದ ಈ ‘ಪ್ರೈಸ್ ಕ್ಯಾಪಿಂಗ್’ಅನ್ನು ಕಡೆಗಣಿಸು ತ್ತಿರುವಾಗಲೇ ರಷ್ಯಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವುದಾಗಿ ಎಚ್ಚರಿಕೆ ನೀಡಿದ ನಂತರ ಎಲ್ಲಕ್ಕಿಂತ ಮಹತ್ವದ ಪ್ರತಿಕ್ರಿಯೆ ಬಂದಿರುವುದು ‘ಓಪೆಕ್ ಸಂಘಟನೆ’ಯಿಂದ (ಆರ್ಗನೈಸೇಶನ್ ಆಫ್ ಪೆಟ್ರೋಲಿಯಮ್ ಎಕ್ಸ್ಪೋರ್ಟ್ ಕಂಟ್ರೀಸ್). ರಷ್ಯಾದ ತೈಲ ಉತ್ಪಾದನೆಯನ್ನು ಕಡಿಮೆಗೊಳಿಸುವ ಬೆದರಿಕೆಯ ನಂತರ ‘ಓಪೆಕ್’ನ ನಿಲುವು ಮಹತ್ವದ್ದಾಗಿತ್ತು. ‘ಓಪೆಕ್’ ದೇಶಗಳು ಮೊದಲೆ ತೈಲದ ಉತ್ಪಾದನೆಯನ್ನು ಕಡಿಮೆಗೊಳಿಸಿವೆ. ರಷ್ಯನ್ ತೈಲದ ಮಾರಾಟ ಕಡಿಮೆಯಾಗಿ ‘ಓಪೆಕ್’ನಿಂದ ಬರುವ ತೈಲ ಹೆಚ್ಚು ಮಾರಾಟವಾಗಬೇಕು ಹಾಗೂ ಅದಕ್ಕಾಗಿ ಆ ದೇಶಗಳು ತೈಲ ಉತ್ಪಾದನೆಯನ್ನು ಹೆಚ್ಚಿಸಬೇಕು, ಎಂಬುದು ಅಮೇರಿಕಾ ಬಯಸಿತ್ತು. ಇದರಿಂದ ತೈಲದ ಪೂರೈಕೆಯು ಸಮತೋಲನವಾಗಿ ತೈಲದ ಬೆಲೆಯು ನಿಯಂತ್ರಣಕ್ಕೆ ಬರಬಹುದು ಎಂಬುದು ಅಮೇರಿಕಾದ ಚಿಂತನೆಯಾಗಿತ್ತು. ಆದರೆ ಆ ದೇಶಗಳು ಇದನ್ನು ಸ್ಪಷ್ಟವಾಗಿ ನಿರಾಕರಿಸಿದವು. ‘ರಷ್ಯಾದ ಮೇಲಿನ ‘ಪ್ರೈಸ್ ಕ್ಯಾಪಿಂಗ್’ನಿಂದ ನಮಗೆ ಯಾವುದೇ ಪರಿಣಾಮವಾಗದಿರುವುದರಿಂದ ನಾವು ಪ್ರತಿ ದಿನದ ತೈಲ ಉತ್ಪಾದನೆಯನ್ನು ಕಡಿಮೆಗೊಳಿಸುವ ನಿರ್ಣಯವನ್ನು ಬದಲಾಯಿಸುವುದಿಲ್ಲ’, ಎಂದು ಸ್ಪಷ್ಟವಾಗಿ ಹೇಳಿವೆ. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಹೆಚ್ಚಾಗುವ ಸಾಧ್ಯತೆ ಉದ್ಭವವಾಗಿದೆ. ಅದರ ಬಿಸಿ ಅನೇಕ ದೇಶಗಳಿಗೆ ತಟ್ಟಲಿಕ್ಕಿದೆ.
೯. ರಷ್ಯಾದ ಮೇಲೆ ಒತ್ತಡ ತರಲು ಅಮೇರಿಕಾ ಕೈಗೊಂಡ ನಿರ್ಣಯವು ಅಯೋಗ್ಯ ಹಾಗೂ ಮೋಸಗಾರಿಕೆ !
ಸಂಕ್ಷಿಪ್ತದಲ್ಲಿ ಹೇಳುವುದಾದರೆ ಅಮೇರಿಕಾದ ಮುಂದಾಳತ್ವ ಹಾಗೂ ಒತ್ತಡದಿಂದ ತೆಗೆದುಕೊಂಡಿರುವ ಈ ನಿರ್ಣಯವು ಜಗತ್ತಿಗೆ ಮಾರಕವಾಗಿರುವುದರಿಂದ ಅದು ದೊಡ್ಡ ತಪ್ಪು. ಈ ನಿರ್ಣಯದಿಂದ ರಷ್ಯಾಗೆ ಯಾವುದೇ ರೀತಿಯ ಅಡಚಣೆಯಾಗಲಿಕ್ಕಿಲ್ಲ, ತದ್ವಿರುದ್ಧ ರಷ್ಯಾ-ಯುಕ್ರೇನ್ ಯುದ್ಧ ಹಾಗೂ ರಾಜಕಾರಣ ಇವುಗಳೊಂದಿಗೆ ಸಂಬಂಧವಿಲ್ಲದ ದೇಶಗಳಿಗೆ ಇದರಿಂದ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಯಿದೆ. ವಿಶೇಷವಾಗಿ ವಿಕಸನ ಶೀಲ, ಬಡ ದೇಶಗಳ ಅರ್ಥವ್ಯವಸ್ಥೆಗೆ ತೈಲದ ಬೆಲೆ ಹೆಚ್ಚಳದಿಂದ ಪೆಟ್ಟು ಬೀಳಬಹುದು. ಅದಕ್ಕೆ ಅಮೇರಿಕಾ ಹೊಣೆಯಾಗುತ್ತದೆ.
ಇನ್ನೊಂದೆಡೆ ಯುರೋಪಿಯನ್ ದೇಶಗಳಿಗೆ ತೈಲವನ್ನು ನೀಡಲು ರಷ್ಯಾ ನಿರಾಕರಿಸಿದರೆ ಅಲ್ಲಿನ ಜನಜೀವನ ಸಂಕಟಕ್ಕೀಡಾಗಬಹುದು; ಏಕೆಂದರೆ ಈ ದೇಶಗಳ ಬಳಿ ತೈಲಕ್ಕಾಗಿ ಇತರ ಪರ್ಯಾಯವಿಲ್ಲ. ಅಮೇರಿಕಾದಲ್ಲಿ ಎಷ್ಟು ತೈಲ ಸಂಗ್ರಹವಿದ್ದರೂ ಅದನ್ನು ಇತರ ದೇಶಗಳಿಗೆ ಸಾಗಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಅದರ ಖರ್ಚು ಮತ್ತು ವಿಮೆಯ ಖರ್ಚು ಹೆಚ್ಚಾಗುತ್ತದೆ ಹಾಗೂ ಸುರಕ್ಷೆಯ ಪ್ರಶ್ನೆ ಉದ್ಭವಿಸುತ್ತದೆ. ತದ್ವಿರುದ್ಧ ರಷ್ಯಾ ಜರ್ಮನಿಯ ವರೆಗೆ ಪೈಪ್‌ಲೈನ್ ನಿರ್ಮಾಣ ಮಾಡಿರುವುದರಿಂದ ಅದರ ಮೂಲಕ ನೇರವಾಗಿ ತೈಲವನ್ನು ಪೂರೈಸಲಾಗುತ್ತದೆ. ಆದ್ದರಿಂದ ‘ಪ್ರೈಸ್ ಕ್ಯಾಪಿಂಗ್’ನ ಈ ಹೆಜ್ಜೆಯು ಸಂಪೂರ್ಣ ತಪ್ಪಾಗುತ್ತದೆ ಹಾಗೂ ಮೋಸಗಾರಿಕೆಯದ್ದಾಗುತ್ತದೆ.
– ಡಾ. ಶೈಲೇಂದ್ರ ದೇವಳಾಣಕರ್, ವಿದೇಶ ವಿಷಯಗಳ ವಿಶ್ಲೇಷಕರು, ಮುಂಬಯಿ. (ಆಧಾರ : ‘ಫೇಸಬುಕ್’ ಪೇಜ್) (೧೨.೧೨.೨೦೨೨)