ಜಾಗತಿಕ ತಾಪಮಾನದ ಹೆಚ್ಚಳದಿಂದ ಆಗುವ ಹವಾಮಾನ ಬದಲಾವಣೆಯಿಂದ ಕೃಷಿ ಕ್ಷೇತ್ರ ಮಾತ್ರವಲ್ಲ, ಸಂಪೂರ್ಣ ಅರ್ಥವ್ಯವಸ್ಥೆಯ ಮೇಲೆ ವಿಪರೀತ ಪರಿಣಾಮವಾಗಲಿಕ್ಕಿದೆ ಮತ್ತು ತಾಪಮಾನ ಹೆಚ್ಚಳದಿಂದ ಸಮುದ್ರದ ಮಟ್ಟವೂ ಹೆಚ್ಚಾಗಿ ಅನೇಕ ನಗರಗಳು ಮುಳುಗುವವು, ಜಗತ್ತಿನ ಒಂದು ಭಾಗದಲ್ಲಿ ಭಯಂಕರ ನೆರೆಹಾವಳಿ ಮತ್ತು ಇನ್ನೊಂದು ಭಾಗದಲ್ಲಿ ತೀವ್ರ ಬರಗಾಲ, ಇಂತಹ ಘಟನೆಗಳಿಂದ ಕೃಷಿಯ ಮೇಲೆ ವಿಪರೀತ ಪರಿಣಾಮವಾಗಿ ಆಹಾರಸುರಕ್ಷೆಯು (ಫುಡ್‌ಸ್ಟಾಕ್) ಅಪಾಯಕ್ಕೀಡಾಗಬಹುದು’, ಹೀಗೆ ಒಂದಲ್ಲ ಅನೇಕ ವರದಿಗಳು ಕಳೆದ ದಶಮಾನದಲ್ಲಿ ಪ್ರಸಿದ್ಧವಾಗಿವೆ. ಈಗಂತೂ ಹವಾಮಾನ ಬದಲಾವಣೆಯ ಪರಿಣಾಮವು ಹೆಚ್ಚು ತೀವ್ರತೆಯಿಂದ ಆಗುವುದು ಕಾಣಿಸುತ್ತಿದೆ. ಸಂಪೂರ್ಣ ಜಗತ್ತಿನಲ್ಲಿ ವಿಸ್ತಾರವಾದಿ ಮಹತ್ವಾಕಾಂಕ್ಷೆಯಿಂದ ಮತ್ತು ಜಾಗತಿಕ ವ್ಯಾಪಾರದಲ್ಲಿ ವರ್ಚಸ್ವವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಸತತ ಕಾಲುಕೆದರಿ ಜಗಳ ಕಾಯುವ ಚೀನಾಗೆ ಅಭೂತಪೂರ್ವ (ಎಂದೂ ಕಾಣದ) ಬರಗಾಲವನ್ನು ಎದುರಿಸಬೇಕಾಗುತ್ತಿದೆ.
೧. ಚೀನಾದಲ್ಲಿನ ಬರಗಾಲದ ವ್ಯಾಪ್ತಿ
ಚೀನಾದಲ್ಲಿ ಬಂದು ಹೋದ ತೀವ್ರ ಉಷ್ಣತೆಯ ತೆರೆಗಳ ಅಬ್ಬರದಿಂದ ಚೀನಾದ ಸುಮಾರು ೪೫ ಲಕ್ಷ ಚದರ ಕಿಲೋಮೀಟರ್‌ಗಳಷ್ಟು ಕ್ಷೇತ್ರ, ಅಂದರೆ ಚೀನಾದ ಸುಮಾರು ಅರ್ಧಭೂಭಾಗವು ಉಷ್ಣತೆಯ ಹಾವಳಿಗೆ ತುತ್ತಾಗಿದೆ. ದೇಶದ ಉತ್ತರಕ್ಕಿರುವ ಹುಬೇಯಿ ಪ್ರಾಂತದ ನಂತರ ಈ ಬರಗಾಲವು ಮಧ್ಯ ಮತ್ತು ದಕ್ಷಿಣ ಭಾಗಕ್ಕೆ ಹರಡಿದೆ. ಈ ದೇಶದ ಹೆಚ್ಚು ಕಡಿಮೆ ೬೬ ನದಿಗಳು ಒಣಗಿವೆ. ತಾಪಮಾನ ಹೆಚ್ಚಳದಿಂದ ದೊಡ್ಡ ಪ್ರಮಾಣದಲ್ಲಿ ಕಾಡ್ಗಿಚ್ಚು ಹರಡಿದ್ದು ಅದರಲ್ಲಿ ಅರಣ್ಯಸಂಪತ್ತಿಗೆ ಕೂಡ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಒಣಗಿರುವ ೬೬ ನದಿಗಳಲ್ಲಿ ಮಹತ್ವದ ನದಿ ‘ಯಾಂಗತ್ಸೆ ನದಿ’ (ಇದು ಜಗತ್ತಿನ ಮೂರನೇ ಕ್ರಮಾಂಕದ ಉದ್ದ ನದಿಯಾಗಿದೆ) ಆಗಿದ್ದು ಅದು ಚೀನಾದಲ್ಲಿನ ೪೦ ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಗೆ ಕುಡಿಯುವ ನೀರನ್ನು ಪೂರೈಸುತ್ತದೆ. ಈ ನದಿಯ ಕೆಲವು ಭಾಗ ಒಣಗಿದೆ. ಈ ನದಿಯಿಂದ ಚೀನಾದ ಬೃಹತ್ ಅರ್ಥವ್ಯವಸ್ಥೆಗೆ ಬಹುದೊಡ್ಡ ಯೋಗದಾನವಿದೆ. ಚೀನಾ ದೇಶವು ಈ ನದಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಿದೆ. ಈಗ ಈ ನದಿಯೇ ಒಣಗಿಹೋಗಿರುವುದರಿಂದ ಅಲ್ಲಿನ ಅನೇಕ ಕಂಪನಿಗಳಿಗೆ ತಮ್ಮ ಕಾರ್ಯವನ್ನು ನಿಲ್ಲಿಸಬೇಕಾಗಿದೆ ಮತ್ತು ಸಿಚುಆನ್ ಪ್ರಾಂತದಲ್ಲಿನ ಶೇ. ೮೦ ರಷ್ಟು ಜನರಿಗೆ ವಿದ್ಯುತ್ ಕೊರತೆಯನ್ನು ಅನುಭವಿಸಬೇಕಾಗಿದೆ.
೨. ಚೀನಾದ ಬರಗಾಲದಿಂದ ಕೃಷಿಕ್ಷೇತ್ರದ ಮೇಲಾಗುವ ಪರಿಣಾಮ
‘ದೇಶದಲ್ಲಿನ ಧಾನ್ಯ ಉತ್ಪಾದನೆಯಲ್ಲಿ ದೊಡ್ಡ ಕುಸಿತವಾಗಲಿಕ್ಕಿಲ್ಲ’, ಎಂದು ಸ್ವತಃ ಚೀನಾ ಮತ್ತು ‘ಫೀಚ್’ನಂತಹ ಜಾಗತಿಕ ಸಂಶೋಧನ ಸಂಸ್ಥೆಗಳು ಹೇಳಿವೆ. ಆದರೂ ಚೀನಾದಲ್ಲಿನ ನಕಾರಾತ್ಮಕ ಮಾಹಿತಿಯು ಹೆಚ್ಚಾಗಿ ದೇಶದ ಹೊರಗೆ ಹೋಗುವುದಿಲ್ಲ. ಅದೇ ರೀತಿ ದೇಶದಾದ್ಯಂತ ಪ್ರಸಿದ್ಧಪಡಿಸುವ ಮಾಹಿತಿಯನ್ನು ಚೀನಾದ ನಾಗರಿಕರೇ ನಂಬುವುದಿಲ್ಲ; ಆದರೆ ‘ಬ್ಲೂಮ್‌ಬರ್ಗ್’ ನಂತಹ ಪ್ರಸಿದ್ಧಿಮಾಧ್ಯಮಗಳ ವಾರ್ತೆ ಮತ್ತು ಕೆಲವು ಸಂಶೋಧನ ಸಂಸ್ಥೆಗಳ ವರದಿಗನುಸಾರ ಚೀನಾದಲ್ಲಿನ ಅಕ್ಕಿಯ ಉತ್ಪಾದನೆ ೧ ರಿಂದ ೧.೪ ಕೋಟಿ ಟನ್‌ಗಳಷ್ಟು ಕಡಿಮೆಯಾಗಬಹುದು. ಜೋಳದ ಉತ್ಪಾದನೆಯಲ್ಲಿ ಶೇ. ೨ ರಿಂದ ೩ ರಷ್ಟು, ಅಂದರೆ ೫೦ ರಿಂದ ೭೦ ಲಕ್ಷ ಟನ್‌ಗಳಷ್ಟು ಕುಸಿತವಾಗಬಹುದು. ಚೀನಾದ ಆಹಾರಧಾನ್ಯದಲ್ಲಾಗುವ ಕುಸಿತವನ್ನು ಆಮದಿನಿಂದ ತುಂಬಿಸಿಕೊಳ್ಳಬಹುದು. ಹವಾಮಾನದ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆಯಾಗಿಲ್ಲ, ಆದುದರಿಂದ ಮುಂದಿನ ಕಾಲದಲ್ಲಿ ಬೆಳೆಗಳಿಗೆ ಅದರಿಂದ ಖಂಡಿತ ಪರಿಣಾಮವಾಗುವುದು. ಕಳೆದ ವರ್ಷವಿಡೀ ಜಗತ್ತಿನಲ್ಲಿ ಬೆಲೆ ಏರಿಕೆ ಹೆಚ್ಚುತ್ತಿರುವಾಗ ಚೀನಾ ಬೆಲೆ ಏರಿಕೆಗೆ ಕಡಿವಾಣ ಹಾಕುವುದರಲ್ಲಿ ಯಶಸ್ವಿಯಾಗಿತ್ತು; ಆದರೆ ಈಗ ಮಾತ್ರ ಅವರ ಪರಿಸ್ಥಿತಿ ಬಿಕ್ಕಟ್ಟಾಗುತ್ತಾ ಹೋಗುತ್ತಿದೆ. ಅನೇಕ ಕಂಪನಿಗಳು ಮುಚ್ಚಲ್ಪಟ್ಟು ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ.
೩. ಭಾರತವು ತನ್ನ ದೇಶದಲ್ಲಿ ಆಹಾರ ಸುರಕ್ಷತೆಯ ಕಡೆಗೆ ಗಮನ ಹರಿಸುವುದು ಆವಶ್ಯಕ
ಚೀನಾದಲ್ಲಿ ಬರಗಾಲದಿಂದಾಗಿ ಭಾರತಕ್ಕೆ ಬಹಳ ದೊಡ್ಡ ಲಾಭವಾಗುವುದು, ಎಂಬ ಪರಿಸ್ಥಿತಿ ಇಲ್ಲ; ಭಾರತದಲ್ಲಿ ಇಷ್ಟು ತೀವ್ರ ಬರಗಾಲ ಇಲ್ಲದಿದ್ದರೂ ಕೇವಲ ಒಂದು ತಿಂಗಳ ಉಷ್ಣಅಲೆಗಳಿಂದ ಗೋದಿಯ ಉತ್ಪಾದನೆಯಲ್ಲಿ ಸುಮಾರು ೭೦ ಲಕ್ಷದಿಂದ ೧ ಕೋಟಿ ಟನ್ ಮತ್ತು ಅಕ್ಕಿಯ ಉತ್ಪಾದನೆಯಲ್ಲಿ ಅನುಮಾನಕ್ಕಿಂತ ೧ ಕೋಟಿ ಟನ್ ಕುಸಿತವಾಗುವ ಸಾಧ್ಯತೆಯಿದೆ. ಇವೆರಡೂ ಉತ್ಪಾದನೆಗಳ ರಫ್ತಿಗೆ ಸರಕಾರ ಮೊದಲೇ ನಿರ್ಬಂಧ ಹೇರಿದೆ; ಆದರೆ ‘ಸುಗ್ಗಿಯ ಕೊನೆಗೆ ನಮಗೆ ಆಮದು ಮಾಡಿಕೊಳ್ಳಬೇಕಾಗಬಹುದು’, ಎಂದು ಕೂಡ ಹೇಳಲಾಗುತ್ತಿದೆ. ಜೋಳದ ರಫ್ತಿಗೆ ಅವಕಾಶವಿದೆ. ಆದರೆ ಸರಕಾರದಿಂದ ಇಂತಹ ನಿರ್ಣಯ ತೆಗೆದುಕೊಳ್ಳುವುದು ಕಠಿಣವಾಗಿದೆ.
ಒಟ್ಟಾರೆ ನೋಡಿದರೆ ಚೀನಾದ ತಲೆನೋವು ಭಾರತಕ್ಕೆ ಲಾಭದಾಯಕವಾಗುವ ಸಂಭವ ಕಡಿಮೆಯಿದೆ. ಒಂದು ವೇಳೆ ಚೀನಾ ಕೃಷಿ ಉತ್ಪಾದನೆಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಲು ಆರಂಭಿಸಿದರೆ, ಆಹಾರಧಾನ್ಯಗಳ ಬೆಲೆಏರಿಕೆಯು ಇನ್ನೂ ತೀವ್ರವಾಗಬಹುದು ಮತ್ತು ಅದರಿಂದ ಅನೇಕ ದೇಶಗಳ ಆಹಾರಸುರಕ್ಷೆಯು (ಸ್ಟಾಕ್) ಅಪಾಯಕ್ಕೀಡಾಗಬಹುದು, ಎಂಬುದು ಖಚಿತ. ಆದ್ದರಿಂದ ಎಲ್ಲ ದೇಶಗಳು ಚೀನಾದ ಪರಿಸ್ಥಿತಿಯ ಮೇಲೆ ಸೂಕ್ಷ್ಮ ನಿಗಾ ಇಡುವುದು ಅವಶ್ಯಕವಾಗಿದೆ.’
– ಶ್ರೀಕಾಂತ ಕುವಳೆಕರ್ (ಆಧಾರ : ಸಾಪ್ತಾಹಿಕ ವಿವೇಕ, ೧೬.೯.೨೨)