ಅಪಘಾತಕ್ಕೀಡಾದವರ ಸಹಾಯಕ್ಕಾಗಿ ಸರ್ವೋಚ್ಚ ನ್ಯಾಯಾಲಯದಿಂದ ಹೇಳಲಾದ ಉಪಾಯಯೋಜನೆಗಳು !

ನ್ಯಾಯವಾದಿಶೈಲೇಶ ಕುಲಕರ್ಣಿ

೧. ಪೊಲೀಸರಿಂದಾಗುವ ತೊಂದರೆಗಳನ್ನು ತಪ್ಪಿಸಲು ಜನರು ಅಪಘಾತಕ್ಕೀಡಾದವರಿಗೆ ಸಹಾಯ ಮಾಡಲು ಹಿಂಜರಿಯುತ್ತಾರೆ

ನಾವು ಎಷ್ಟೋ ಸಲ ರಸ್ತೆಯ ಮೇಲೆ ಅಪಘಾತಕ್ಕೀಡಾಗಿ ಬಿದ್ದಿರುವ ಜನರನ್ನು ಮತ್ತು ಅವರಿಗೆ ತಕ್ಷಣ ವೈದ್ಯಕೀಯ ಸಹಾಯದ ಅವಶ್ಯಕತೆಯಿರುವುದನ್ನು ನೋಡುತ್ತೇವೆ ಅಥವಾ ಯಾರಿಂದಾದರೂ ಕೇಳುತ್ತೇವೆ. ನಾವು ಇಂತಹ ದೃಶ್ಯಗಳನ್ನು ಚಲನಚಿತ್ರಗಳಲ್ಲಿಯೂ ನೋಡುತ್ತೇವೆ. ಇಂತಹ ಸಮಯದಲ್ಲಿ ಪೊಲೀಸರ ಕಿರುಕುಳದಿಂದ ತಪ್ಪಿಸಿಕೊಳ್ಳಲು ಜನರು ಅಪಘಾತಕ್ಕೀಡಾದವರಿಗೆ ಸಹಾಯ ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪ ದಿರುವುದರಿಂದ ಅಪಘಾತಕ್ಕೀಡಾದವರ ಪ್ರಾಣ ಹೋಗುತ್ತದೆ. ಅನೇಕ ಸಲ ಜನರು ಕೇವಲ ಮೂಕಪ್ರೇಕ್ಷಕರಾಗಿರುತ್ತಾರೆ. ಕೆಲವರಂತೂ ಸಹಾಯ ಮಾಡದೆ ಸಂಚಾರಿವಾಣಿಯಿಂದ ಪ್ರಸಂಗದ ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ‘ಅಪ್‌ಲೋಡ್’ ಮಾಡುತ್ತಾರೆ. ಅನೇಕ ಸಲ ಅಪಘಾತಕ್ಕೀಡಾದ ವ್ಯಕ್ತಿಗೆ ಸಹಾಯ ಮಾಡಿದ ವ್ಯಕ್ತಿ ನ್ಯಾಯಾಲಯ ಮತ್ತು ಪೊಲೀಸರ ತೊಂದರೆ ಗೊಳಗಾಗುತ್ತಾನೆ. ಕೆಲವೊಮ್ಮೆ ಅವನು ಸಾಕ್ಷಿದಾರನೂ ಆಗಿರುತ್ತಾನೆ. ಆದ್ದರಿಂದ ಪೊಲೀಸರ ಕಿರುಕುಳದಿಂದ ಅವನು ಬೇಸತ್ತಿರುತ್ತಾನೆ. ಅದರ ಪರಿಣಾಮದಿಂದ ಸಮಾಜಸಹಾಯ ಮಾಡಲು ಆ ವ್ಯಕ್ತಿ ಹಿಂಜರಿಯುತ್ತಾನೆ. ಅದರಿಂದ ಭವಿಷ್ಯದಲ್ಲಿ ಮಾನವತೆಯ ಮೇಲೆ ಅದರ ದೂರಗಾಮಿ ಪರಿಣಾಮವಾಗುತ್ತದೆ. ಸುಪ್ರಸಿದ್ಧ ‘ಮಶಾಲ’ ಚಲನಚಿತ್ರದಲ್ಲಿ ದಿಲೀಪ್ ಕುಮಾರ ರಾತ್ರಿಯ ಸಮಯ ದಲ್ಲಿ ತನ್ನ ಅಸಹಾಯಕ ಪತ್ನಿಗಾಗಿ ರಸ್ತೆಯ ಮೇಲೆ ಸಹಾಯ ವನ್ನು ಕೇಳುತ್ತಿರುತ್ತಾನೆ; ಆದರೆ ಯಾರೂ ಅವನಿಗೆ ಸಹಾಯ ಮಾಡುವುದಿಲ್ಲ. ಕಾರಣ ಏನೇ ಇರಲಿ, ಯಾವುದೇ ವ್ಯಕ್ತಿ ಇಂತಹ ಕಿರುಕುಳದ (ಪೊಲೀಸರು, ನ್ಯಾಯಾಲಯ ಇತ್ಯಾದಿಗಳ) ಭಯ ದಿಂದ ಸದ್ಭಾವನೆಯಿಂದ ದೂರ ಹೋಗುತ್ತಾನೆ. ಆದ್ದರಿಂದ ಅನೇಕ ಬಾರಿ ಇಂತಹ ಅನೇಕ ಅಪಘಾತಕ್ಕೀಡಾದವರ ಜೀವವು ರಸ್ತೆಯಲ್ಲೇ ಹೋಗುತ್ತದೆ.

೨. ಅಪಘಾತಕ್ಕೀಡಾದವರಿಗೆ ತಕ್ಷಣ ಸಹಾಯಮಾಡುವವರ ರಕ್ಷಣೆಗಾಗಿ ಸರ್ವೋಚ್ಚನ್ಯಾಯಾಲಯದಿಂದ ಕೇಂದ್ರೀಯ ರಸ್ತೆ ಹಾಗೂಸಾರಿಗೆ ವಿಭಾಗಕ್ಕೆ ನಿಯಮಗಳನ್ನು ಮಾಡಲು ಆದೇಶ

ಮಾನ್ಯ ಸರ್ವೋಚ್ಚ ನ್ಯಾಯಾಲಯವು ‘ಪರಮಾನಂದ ಕಟರಾ ವಿರುದ್ಧ ಭಾರತ ಸರಕಾರ’ ಈ ಖಟ್ಲೆಯಲ್ಲಿ ಅಪಘಾತಕ್ಕೀಡಾದವರಿಗೆ ತಕ್ಷಣ ಸಹಾಯ ಸಿಗುವುದು ಅವರ ಮೂಲಭೂತ ಅಧಿಕಾರವಾಗಿದೆ ಎಂದು ಹೇಳಿದೆ. ಪೊಲೀಸ್ ಪ್ರಕರಣ ಇತ್ಯಾದಿಗಳನ್ನು ನಂತರ ನೋಡಬಹುದು. ಅಪಘಾತದ ಸಮಯದಲ್ಲಿ ಸಹಾಯಕ್ಕಾಗಿ ಧಾವಿಸಿ ಬರುವವನು ಹಾಗೂ ಅಪಘಾತಕ್ಕೀಡಾದವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸುವವನು ನಿಜವಾಗಿಯೂ ದೇವದೂತನೆ ಆಗಿರುತ್ತಾನೆ. ಆಂಗ್ಲದಲ್ಲಿ ಅವರಿಗೆ ‘ಗುಡ್ ಸಮಾರಿಟನ್ಸ್ (ಒಳ್ಳೆಯ ಪರೋಪಕಾರಿ ಮನುಷ್ಯ)’, ಎಂದು ಹೇಳುತ್ತಾರೆ. ಇಂತಹ ‘ಗುಡ್ ಸಮಾರಿಟನ್ಸ್’ಗಳಿಗೆ ಕಾನೂನಿನಂತೆ ಸಂಪೂರ್ಣ ರಕ್ಷಣೆಯನ್ನು ನೀಡಲು ‘ಸೇವ್ ಲೈಫ್ ಫೌಂಡೇಶನ್ ವಿರುದ್ಧ ಭಾರತ ಸರಕಾರ’ ಈ ಖಟ್ಲೆಯು ತುಂಬಾ ಪ್ರಸಿದ್ಧಿ ಪಡೆದಿತ್ತು. ೨೦೧೨ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸ್ಥಾಪಿಸಿದ ಸಮಿತಿಯ ವರದಿಗನುಸಾರ ಕೇಂದ್ರೀಯ ರಸ್ತೆ ಮತ್ತು ಸಾರಿಗೆ ಸಚಿವಾಲಯಕ್ಕೆ ತಕ್ಷಣ ನಿಯಮಾವಳಿಯನ್ನು ಮಾಡ ಬೇಕೆಂದು ಆದೇಶಿಸಿತು. ೧೨.೫.೨೦೧೫ ರಂದು ಸಂಬಂಧಿತ ಸಚಿವಾಲಯವು ‘ಗುಡ್ ಸಮಾರಿಟನ್ಸ್ (ಒಳ್ಳೆಯ ಪರೋಪಕಾರಿ ಮನುಷ್ಯ) ಗೈಡ್ ಲೈನ್ಸ’ಗಳನ್ನು ಪ್ರಸಿದ್ಧ ಪಡಿಸಿತು. ಮುಂದೆ ಈ ಗುಡ್ ಸಮಾರಿಟನ್ಸ್ ಗೈಡ್‌ಲೈನ್ಸ್ಗಳನ್ನು ಕಾನೂನುಗಳಲ್ಲಿ ರೂಪಾಂತರಗೊಳಿಸಲಾಯಿತು. ಈ ಗುಡ್ ಸಮಾರಿಟನ್ಸ್ ಗೈಯ್ಡ್ಲೈನ್ಸಗಳಿಗೆ ಪ್ರೋತ್ಸಾಹ ನೀಡಲು ಹಾಗೂ ದೇಶಕ್ಕೆ ಇದರ ಸಂಪೂರ್ಣ ಮಾಹಿತಿಯನ್ನು ನೀಡಲು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪೊಲೀಸ್ ಠಾಣೆ ಮತ್ತು ಆಸ್ಪತ್ರೆಗಳಿಗೆ ಈ ನಿಯಮಾವಳಿಯನ್ನು ನೀಡಿದೆ.

೩. ಸಹಾಯ ಮಾಡುವವರಿಗೆ ಪ್ರೋತ್ಸಾಹ ನೀಡಲು ಸರ್ವೋಚ್ಚ ನ್ಯಾಯಾಲಯವು ಪೊಲೀಸರಿಗೆ ಮತ್ತು ಆಸ್ಪತ್ರೆಗಳಿಗಾಗಿ ನಿರ್ಧರಿಸಿಕೊಟ್ಟಿರುವ ನಿಯಮಗಳು !

ಅ. ಒಂದು ವೇಳೆ ಸಹಾಯಕನು ಅಪಘಾತಕ್ಕೀಡಾದ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೆ ಅವನನ್ನು ಯಾವುದೇ ಕಾರಣಕ್ಕಾಗಿ ಅಲ್ಲಿ ನಿಲ್ಲಿಸಬಾರದು.

ಆ. ಸರಕಾರ ಇಂತಹ ವ್ಯಕ್ತಿಗಳಿಗೆ ಸೂಕ್ತ ಬಹುಮಾನ ಕೊಡಬೇಕು.

ಇ. ಆಧುನಿಕ ವೈದ್ಯರು (ಡಾಕ್ಟರರು) ಅಪಘಾತಕ್ಕೀಡಾದ ಜನರಿಗೆ ಉಪಚಾರ ಮಾಡಲು ಹಿಂದೇಟು ಹಾಕಿದರೆ ಇಂತಹ ಆಧುನಿಕ ವೈದ್ಯರ ವಿರುದ್ಧ ಶಿಸ್ತುಭಂಗದ ಕ್ರಮ ತೆಗೆದುಕೊಳ್ಳಲಾಗುವುದು.

ಈ. ಎಲ್ಲ ಆಸ್ಪತ್ರೆಗಳಲ್ಲಿ ಹಿಂದಿ, ಆಂಗ್ಲ ಮತ್ತು ಪ್ರಾದೇಶಿಕ ಭಾಷೆಯಲ್ಲಿ ‘ನಾವು ಅಪಘಾತಕ್ಕೀಡಾದ ಜನರಿಗೆ ಸಹಾಯ ಮಾಡುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕಾಗಿ ಆಸ್ಪತ್ರೆಯಲ್ಲಿ ನಿಲ್ಲಿಸಿಕೊಳ್ಳುವುದಿಲ್ಲ ಹಾಗೂ ಅವರಿಂದ ಹಣವನ್ನೂ ಕೇಳುವುದಿಲ್ಲ’, ಹೀಗೆ ಆಸ್ಪತ್ರೆಯ ಎದುರು ಭಾಗದಲ್ಲಿ ಕಡ್ಡಾಯವಾಗಿ ಬೋರ್ಡ್ ಹಾಕಬೇಕು.

ಉ. ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಅಥವಾ ಕಾರ್ಯಾಚರಣೆಯನ್ನು ಎದುರಿಸಬೇಕು.

ಊ. ಯಾವುದಾದರೂ ಪೊಲೀಸ್ ಅಧಿಕಾರಿ ಸಹಾಯ ಮಾಡುವ ವ್ಯಕ್ತಿಗೆ ಯಾವುದೇ ರೀತಿಯ ತೊಂದರೆಗಳನ್ನು ಕೊಡಲು ಪ್ರಯತ್ನಿಸಿದರೆ, ಅಂತಹವರ ವಿರುದ್ಧ ಅವರ ಮೇಲಧಿಕಾರಿಗಳು ಕ್ರಮತೆಗೆದುಕೊಳ್ಳಲೇ ಬೇಕು.

ಎ. ಯಾವ ಸಹಾಯ ಮಾಡುವ ವ್ಯಕ್ತಿ ಪೊಲೀಸ್ ಠಾಣೆ ಅಥವಾ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿ ಅಪಘಾತದ ಮಾಹಿತಿಯನ್ನು ನೀಡುವನೋ, ಆ ವ್ಯಕ್ತಿ ಪ್ರತ್ಯಕ್ಷ ಸಾಕ್ಷಿದಾರನಾಗಿರದಿದ್ದರೆ ಇಂತಹ ವ್ಯಕ್ತಿಯು ಹೆಸರು, ವಿಳಾಸ, ದೂರವಾಣಿ ಕ್ರಮಾಂಕವನ್ನು ಹೇಳ ಬೇಕು ಎಂಬ ಯಾವುದೇ ಕಡ್ಡಾಯವಿಲ್ಲ.

ಐ. ಇಂತಹ ಮಾಹಿತಿಯನ್ನು ಕೊಡಬೇಕೋ ಅಥವಾ ಕೊಡ ಬಾರದೋ ? ಎನ್ನುವುದನ್ನು ನಿರ್ಧರಿಸುವ ಅಧಿಕಾರ ಸಹಾಯ ಮಾಡುವ ವ್ಯಕ್ತಿಗಿದೆ. ಆ ವ್ಯಕ್ತಿಯನ್ನು ಸಾಕ್ಷಿದಾರನೆಂದು ಕರೆಯುವುದು ಕಡ್ಡಾಯವಲ್ಲ. ಆ ವ್ಯಕ್ತಿ ಸ್ವೇಚ್ಛೆಯಿಂದ ಬಂದರೆ, ಅವನೊಂದಿಗೆ ಪೊಲೀಸರು ಪೊಲೀಸ್ ಠಾಣೆಯಲ್ಲಿ ಗೌರವದಿಂದ ವರ್ತಿಸಬೇಕು. ಸಾಕ್ಷಿಯನ್ನು ನೋಂದಾಯಿಸುವುದಿದ್ದರೆ, ಸಮವಸ್ತ್ರವಿಲ್ಲದ ಪೊಲೀಸ್ ಸಹಾಯಕರು ಅವರ ಮನೆಗೆ ಹೋಗಿ ಗೌರವದಿಂದ ಅವರ ಸಾಕ್ಷಿಯನ್ನು ಪಡೆಯಬೇಕು. ಹೀಗಾದರೆ ಅವನಿಗೆ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಕಾರ್ಯಗಳಲ್ಲಿ ತೊಂದರೆಯಾಗಲಿಕ್ಕಿಲ್ಲ. ಇದರ ಜೊತೆಗೆ ಆವಶ್ಯಕವಿದ್ದಲ್ಲಿ ಪೊಲೀಸರು ಅನುವಾದಕರ (ಬೇರೆಬೇರೆ ಭಾಷೆಗಳನ್ನು ಮಾತನಾಡುವವನ) ವ್ಯವಸ್ಥೆಯನ್ನು ಮಾಡಬೇಕು.

ಒ. ಪೊಲೀಸರು ಸಹಾಯ ಮಾಡಿದ ವ್ಯಕ್ತಿಗೆ ಧನ್ಯವಾದ ಹೇಳಬೇಕು, ಏಕೆಂದರೆ ಅವನ ಸಹಾಯದಿಂದ ಪೊಲೀಸರ ಬಹಳಷ್ಟು ಕೆಲಸ ಕಡಿಮೆಯಾಗುತ್ತದೆ. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಅಪಘಾತಕ್ಕೀಡಾದವನ ಜೀವ ಉಳಿಯುತ್ತದೆ.

ಔ. ಶಿಕ್ಷೆಯಾಗಿರುವ ಅಪರಾಧಿಯಾಗಿರಲಿ ಅಥವಾ ಯಾವುದೇ ಮನುಷ್ಯನಿರಲಿ ಅವನ ಪ್ರಾಣವನ್ನು ಉಳಿಸುವುದು ಮಹತ್ವದ್ದಾಗಿದೆ.’ – ನ್ಯಾಯವಾದಿ ಶೈಲೇಶ ಕುಲಕರ್ಣಿ, ಕುರ್ಟಿ ಫೋಂಡಾ, ಗೋವಾ. (೫.೧೧.೨೦೨೨)