ಸಾಧಕರ ಸೇವೆಯಲ್ಲಿ ಸಹಾಯಕವಾಗಿರುವ ಸಂಚಾರವಾಣಿ, ಗಣಕಯಂತ್ರ, ‘ಇಯರಫೋನ್’ ಇತ್ಯಾದಿ ಉಪಕರಣಗಳ ಮೇಲೆ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿದುದರಿಂದ ಸಾಧಕರ ಸೇವೆಯಲ್ಲಿ ಅಡಚಣೆಗಳು ಉದ್ಭವಿಸುವುದು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಸದ್ಯ ಆಪತ್ಕಾಲದ ತೀವ್ರತೆ ಹೆಚ್ಚಾಗುತ್ತಾ ಹೋಗುತ್ತಿದೆ. ಆದುರಿಂದ ಸಾಧಕರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ಪ್ರಮಾಣವು ಬಹಳ ಹೆಚ್ಚಾಗಿವೆ. ಸಾಧಕರು ಸೇವೆಗಾಗಿ ಬಳಸುತ್ತಿರುವ ಉಪಕರಣಗಳ ಮೇಲೆ, ಉದಾ. ಗಣಕಯಂತ್ರ, ಸಂಚಾರವಾಣಿ, ‘ಇಯರಫೋನ್’ ಇತ್ಯಾದಿಗಳ ಮೇಲೆ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿ ಸಾಧಕರ ಸೇವೆಯಲ್ಲಿ ವ್ಯತ್ಯಯವನ್ನುಂಟು ಮಾಡಲು ಪ್ರಯತ್ನಿಸುತ್ತಿವೆ. ಆದುದರಿಂದ ಸಂಚಾರ ವಾಣಿ ಉಪಕರಣವು ತನ್ನಿಂದತಾನೇ ಹಾಳಾಗುವುದು, ಅವುಗಳ ವೇಗ ಕಡಿಮೆಯಾಗುವುದು, ಸಂಚಾರವಾಣಿಯ ನೆಟ್‌ವರ್ಕ್ ಮತ್ತು ‘ಇಂಟರ್‌ನೆಟ್’ಗೆ ಅಡಚಣೆ ಬಂದುದರಿಂದ ಸಾಧಕರನ್ನು ಸಂಪರ್ಕಿಸಲು ಸಾಧ್ಯವಾಗದಿರುವುದು, ಹಾಗೆಯೇ ಕಿರುಸಂದೇಶ ಕಳುಹಿಸಲು ಸಾಧ್ಯವಾಗದಿರುವುದು ಮತ್ತು ‘ವಾಟ್ಸ್ಆ್ಯಪ್’ನಂತಹ ಸಂದೇಶ ಕಳುಹಿಸುವ ವ್ಯವಸ್ಥೆಯು (ಮೆಸೆಜಿಂಗ್ ಆ್ಯಪ್ಸ್) ತಾನಾಗಿಯೇ ನಿಂತು ಹೋಗುವುದರಿಂದ ಸೇವೆಯ ಸಂದೇಶಗಳ ಕೊಡು – ಕೊಳ್ಳುವಿಕೆ ಸಾಧ್ಯವಾಗದಿರುವುದು; ಸಂಚಾರವಾಣಿಯಲ್ಲಿ ನಮ್ಮ ಧ್ವನಿ ಎದುರಿನ ವ್ಯಕ್ತಿಗೆ ಕೇಳಿಸದಿರುವುದು; ಗಣಕೀಯ ಕಡತ ಅಥವಾ ಅದರಲ್ಲಿನ ಬರವಣಿಗೆ ತಾನಾಗಿಯೇ ‘ಕರಪ್ಟ್’ ಆಗುವುದು, ಗಣಕಯಂತ್ರವು ‘ಹ್ಯಾಂಗ್’ ಆಗುವುದು ಇತ್ಯಾದಿ ಅಡಚಣೆಗಳು ಸಾಧಕರಿಗೆ ಬರುತ್ತಿವೆ.

ಸನಾತನ ಸಂಸ್ಥೆಯ ಧರ್ಮಪ್ರಸಾರದ ಕಾರ್ಯವು ವ್ಯಾಪಕ ಸ್ತರದಲ್ಲಿ ಶೀಘ್ರ ಗತಿಯಲ್ಲಿ ನಡೆದಿದೆ. ಸಾಧಕರ ಸೇವೆಯು ವೇಗದಿಂದ ನಡೆಯಲು ಸಂಚಾರವಾಣಿ ಬಳಕೆ ಅನಿವಾರ್ಯವಾಗಿದೆ. ಆದುದರಿಂದ ಕೆಟ್ಟ ಶಕ್ತಿಗಳು ಉಪಕರಣಗಳ ಮೇಲೆ ಆಕ್ರಮಣ ಮಾಡಿ ಧರ್ಮಪ್ರಸಾರದ ಕಾರ್ಯ ಮತ್ತು ಸೇವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಚಣೆಗಳನ್ನು ತರುತ್ತಿವೆ. ಇದರಿಂದ ‘ಕೆಟ್ಟ ಶಕ್ತಿಗಳ ತೊಂದರೆಯ ತೀವ್ರತೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ’, ಎಂಬುದು ಗಮನಕ್ಕೆ ಬರುತ್ತದೆ. ಇದಕ್ಕಾಗಿ ಎಲ್ಲ ಸಾಧಕರು ಆಧ್ಯಾತ್ಮಿಕ ಸ್ತರದ ಉಪಾಯವನ್ನು ಪರಿಣಾಮಕಾರಿಯಾಗಿ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ಸಾಧಕರು ಮುಂದಿನ ರೀತಿಯಲ್ಲಿ ಉಪಾಯ ಮಾಡಬೇಕು.

೧. ಅಮಾವಾಸ್ಯೆ ಮತ್ತು ಹುಣ್ಣಿಮೆಯ ತಿಥಿಗಳಂದು ನಿಂಬೆಹಣ್ಣಿನಿಂದ ಸಂಚಾರವಾಣಿ, ಹಾಗೆಯೇ ಗಣಕಯಂತ್ರದ ದೃಷ್ಟಿಯನ್ನು ತೆಗೆಯಬೇಕು ಮತ್ತು ಅದನ್ನು ನಂತರ ವಿಸರ್ಜಿಸಬೇಕು.

೨. ‘ಮಾನಿಟರ್’ ಹಿಂದೆ ೧ ಪೆಟ್ಟಿಗೆ, ಹಾಗೆಯೇ ‘ಸಿ.ಪಿ.ಯು.’ನ ಸುತ್ತಲೂ ಮೂರು ಪೆಟ್ಟಿಗೆಗಳನ್ನು ಇಡಬೇಕು.

೩. ರಾತ್ರಿ ಮಲಗುವ ಮೊದಲು ಸಂಚಾರವಾಣಿಯನ್ನು ಪೆಟ್ಟಿಗೆಯಲ್ಲಿ ಭರಿತ ಮಾಡಲು ಇಡಬೇಕು ಅಥವಾ ಅದರ ಸುತ್ತಲೂ ಪೆಟ್ಟಿಗೆಗಳನ್ನು ಇಡಬೇಕು.

೪. ಗಣಕಯಂತ್ರಕ್ಕೆ ಅಥವಾ ಸಂಚಾರವಾಣಿಗೆ ಕಾಲಕ್ಕನುಸಾರ ಸಾಪ್ತಾಹಿಕದಲ್ಲಿ ಹೇಳಲಾದ ನಾಮಪಟ್ಟಿಗಳನ್ನು ಅಂಟಿಸಿಡಬೇಕು.

೫. ವಾರದಲ್ಲಿ ಒಂದು ಸಲ ಉಪಾಯಗಳಿಗಾಗಿ ಬಳಸಲಾದ ಪೆಟ್ಟಿಗೆಗಳನ್ನು ಬಿಸಿಲಿನಲ್ಲಿಟ್ಟು ಅವುಗಳ ಶುದ್ಧಿ ಮಾಡಬೇಕು.

೬. ಗಣಕಯಂತ್ರಕ್ಕೆ ಅಥವಾ ಸಂಚಾರವಾಣಿಗೆ ಹೆಚ್ಚು ಅಡಚಣೆ ಬರುತ್ತಿದ್ದರೆ ನಿಂಬೆಹಣ್ಣಿನಿಂದ ದೃಷ್ಟಿಯನ್ನು ತೆಗೆಯಬೇಕು ಮತ್ತು ಅದನ್ನು ವಿಸರ್ಜಿಸಬೇಕು.

೭. ಗಣಕಯಂತ್ರ ಅಥವಾ ಸಂಚಾರವಾಣಿಗಳಲ್ಲಿ ಮಹತ್ವದ ಸೇವೆ ನಡೆಯುತ್ತಿದ್ದರೆ, ಅವುಗಳ ಪಕ್ಕದಲ್ಲಿ ನಿಂಬೆಹಣ್ಣನ್ನು ಇಡಬೇಕು ಮತ್ತು ಅದು ಹಾಳಾದಾಗ ವಿಸರ್ಜಿಸಬೇಕು.

೮. ಮೇಲಿನ ಉಪಾಯವನ್ನು ಮಾಡುವ ಮೊದಲು ಮುಂದಿನ ಪ್ರಾರ್ಥನೆಯನ್ನು ಭಾವಪೂರ್ಣವಾಗಿ ಮಾಡಬೇಕು – ‘ಹೇ ಶ್ರೀಕೃಷ್ಣಾ, ನನ್ನ ಸುತ್ತಲೂ ಮತ್ತು ಎಲ್ಲ ಉಪಕರಣಗಳ ಸುತ್ತಲೂ ಚೈತನ್ಯದ ಕವಚವು ರಚನೆಯಾಗಲಿ. ಕೆಟ್ಟ ಶಕ್ತಿಗಳಿಂದ ಅವುಗಳ ಮೇಲೆ ಆಕ್ರಮಣವಾಗದಿರಲಿ’. ಕೊನೆಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಬೇಕು.

‘ಧರ್ಮಪ್ರಸಾರದ ಕಾರ್ಯಕ್ಕಾಗಿ ಭಗವಂತನು ಲಭ್ಯ ಮಾಡಿ ಕೊಟ್ಟ ಉಪಕರಣಗಳು ಎಂದರೆ ಗುರುಸೇವಕರಾಗಿದ್ದಾರೆ’, ಎಂಬ ಭಾವವನ್ನಿಟ್ಟು ಅವುಗಳಿಗಾಗಿ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಮಾಡಬೇಕು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೧೦.೨೦೨೨)

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದ’ದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.