ಸ್ವತಂತ್ರ ಭಾರತದ ಸೈನಿಕರ ಪಾರತಂತ್ರ್ಯ !

ಭಾರತೀಯ ಸೇನೆ ಎಂದಾಕ್ಷಣ ಪ್ರತಿಯೊಬ್ಬ ಭಾರತೀಯನಿಗೆ ಅವರ ಬಗ್ಗೆ ಅಭಿಮಾನವೆನಿಸುತ್ತದೆ. ಸೈನಿಕರು ಸೈನ್ಯದಳ ದಲ್ಲಿ ಉತ್ತಮ ಕಾರ್ಯಸಾಧನೆಯನ್ನು ಮಾಡಿದಾಗ, ಶತ್ರುಗಳ ಹೆಡೆಮುರಿಕಟ್ಟಿದಾಗ ಎಲ್ಲರ ಎದೆಯು ಹೆಮ್ಮೆಯಿಂದ ಬೀಗುತ್ತದೆ. ಪ್ರತಿಯೊಬ್ಬ ಸೈನಿಕನು ರಾಷ್ಟ್ರದ ರಕ್ಷಣೆಗಾಗಿ ಸದಾ ಸನ್ನದ್ಧನಾಗಿರುತ್ತಾನೆ; ಆದರೆ ಹೆಚ್ಚಿನ ಬಾರಿ ಅವರಿಗೆ ‘ಮೇಲಿ ನಿಂದ ಬರುವ’ ಆದೇಶಗಳಿಗಾಗಿ ಕಾಯಬೇಕಾಗುತ್ತದೆ. ಇದಕ್ಕನು ಗುಣವಾಗಿ ಭಾರತೀಯ ಸೇನೆಯ ‘ಚಿನಾರ್ ಕಾರ್ಪ್ಸ್’ನ ಕಮಾಂಡರ್ ಲೆಫ್ಟ್‌ನಂಟ್ ಜನರಲ್ ಎ.ಡಿ.ಎಸ್. ಔಜ್ಲಾ ಅವರು, ‘ಯಾವುದೇ ಆದೇಶವು ದೊರಕಿದರೂ ಕಾರ್ಯಾಚರಣೆ ಮಾಡಲು ಸೇನೆಯು ಸಂಪೂರ್ಣ ಸಿದ್ಧವಿದೆ. ನಾವು ನಮ್ಮ ಕ್ಷಮತೆಯನ್ನು ಇನ್ನು ಹೆಚ್ಚಿಸುತ್ತಿದ್ದೇವೆ. ನಮಗೆ ಆದೇಶ ಸಿಕ್ಕಿದರೆ ನಾವು ಹಿಂದಿರುಗಿ ನೋಡುವುದಿಲ್ಲ’ ಎಂದು ಹೇಳಿದರು. ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಕೆಲವು ದಿನಗಳ ಹಿಂದೆ, “ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್‌ಗಿಟ್ ಮತ್ತು ಬಾಲ್ಟಿಸ್ತಾನ್ ಈ ಪ್ರದೇಶಗಳವರೆಗೆ ತಲುಪಿದ ನಂತರವೇ ಕಾಶ್ಮೀರದ ಸಂಪೂರ್ಣ ಅಭಿವೃದ್ಧಿಯ ನಮ್ಮ ಗುರಿ ತಲುಪಿದಂತಾಗುವುದು. ಪಾಕ್ ಆಕ್ರಮಿತ ಕಾಶ್ಮೀರದ ನಾಗರಿಕರ ಮೇಲೆ ಪಾಕಿಸ್ತಾನ ದೌರ್ಜನ್ಯ ವೆಸಗುತ್ತಿದ್ದು ಅದರ ಗಂಭೀರ ಪರಿಣಾಮವನ್ನು ಪಾಕ್ ಭೋಗಿಸ ಬೇಕಾಗುವುದು”, ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಮಾಂಡರ್ ಲೆಫ್ಟಿನಂಟ್ ಜನರಲ್ ಎ.ಡಿ.ಎಸ್. ಔಜ್ಲಾ ಇವರ ಹೇಳಿಕೆಯು ಮಹತ್ವಪೂರ್ಣ ಮತ್ತು ಅಷ್ಟೇ ಗಂಭೀರವೂ ಇದೆ; ಏಕೆಂದರೆ ಸೇನಾದಳಕ್ಕೆ ಆದೇಶಕ್ಕಾಗಿ ಕಾಯುವುದು ದುರ್ದೈವವಾಗಿದೆ. ಇಂದು ಶತ್ರುರಾಷ್ಟ್ರಗಳು ಎಲ್ಲ ಬದಿಗಳಿಂದ ಭಾರತವನ್ನು ಸುತ್ತುವರಿಯುತ್ತಿವೆ; ಆಗಾಗ ಕಿರುಕುಳ ಕೊಡುತ್ತಿವೆ; ಭಾರತವನ್ನು ನಿರ್ನಾಮ ಮಾಡಲು ಪ್ರಯತ್ನಿಸುತ್ತಿವೆ. ಅವರ ದಾಳಿಗಳಿಗೆ ಪ್ರತ್ಯುತ್ತರ ನೀಡುವಾಗ ಅನೇಕ ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಗುತ್ತಿದೆ. ಯಾರೋ ಬರುತ್ತಾರೆ ಮತ್ತು ಭಾರತದ ಪರಿಹಾಸ್ಯ ಮಾಡಿ ಹೋಗುತ್ತಾರೆ, ಇದು ಇನ್ನೆಷ್ಟು ಕಾಲ ಮುಂದುವರಿಯುವುದು ? ಇನ್ನಷ್ಟು ಹೇಳಬೇಕೆಂದರೆ ಅದಕ್ಕಾಗಿ ಸೇನೆಗೆ ಮೇಲಿಂದಮೇಲೆ ಕ್ರಮ ಕೈಗೊಳ್ಳಲು ಸರಿಯಾದ ಆದೇಶ ದೊರಕಬೇಕು. ಕೇಂದ್ರ ಸರಕಾರ ಮತ್ತು ಸೇನಾದಳವು ಯೋಗ್ಯ ಸಮನ್ವಯವನ್ನು ಸಾಧಿಸಿ ಸೇನೆಗೆ ಆದೇಶವನ್ನು ನೀಡಿದರೆ ಅದು ಶತ್ರುರಾಷ್ಟ್ರಗಳಿಗೆ ತಕ್ಕ ಪಾಠ ಕಲಿಸುವುದು ಖಚಿತ ಮತ್ತು ಯಾರೂ ಭಾರತವನ್ನು ವಕ್ರದೃಷ್ಟಿಯಿಂದ ನೋಡುವ ಧೈರ್ಯ ವಷ್ಟೇ ಅಲ್ಲ ಯಾರೂ ಆ ರೀತಿಯ ವಿಚಾರ ಸಹ ಮಾಡಲು ಧೈರ್ಯ ತೋರಲಾರರು. ಭಾರತದ ಈ ರೀತಿಯ ವರ್ಚಸ್ಸು ಜಗತ್ತಿನಲ್ಲಿ ನಿರ್ಮಾಣವಾಗುತ್ತದೆ. ಭಾರತದ ಯುದ್ಧದ ತಯಾರಿ ಎಷ್ಟೇ ಇದ್ದರೂ ಮತ್ತು ನಾವು ರಕ್ಷಣೆಯ ದೃಷ್ಟಿಯಿಂದ ಪರಿಪೂರ್ಣವಿದ್ದರೂ ಬಾಹುವಿನಲ್ಲಿ ಶಕ್ತಿ, ಶರೀರದಲ್ಲಿ ಉತ್ಸಾಹ ಮತ್ತು ಹೃದಯದಲ್ಲಿ ರಾಷ್ಟ್ರಾಭಿಮಾನವಿರಲೇ ಬೇಕಾಗುತ್ತದೆ; ಏಕೆಂದರೆ ಯುದ್ಧಭೂಮಿಯಲ್ಲಿ ಕೇವಲ ಶಸ್ತ್ರಗಳಲ್ಲ, ಆದರೆ ಈ ಶಕ್ತಿ, ಈ ಉತ್ಸಾಹ ಮತ್ತು ಇದೇ ರಾಷ್ಟ್ರಾಭಿಮಾನವು ಕಾರ್ಯ ಮಾಡುತ್ತಿರುತ್ತದೆ. ಆದೇಶಕ್ಕಾಗಿ ಕಾಯುವ ಪ್ರತಿಯೊಬ್ಬ ಸೈನಿಕನಲ್ಲಿ ಈ ಶಕ್ತಿ, ಉತ್ಸಾಹ ಮತ್ತು ರಾಷ್ಟ್ರಾಭಿಮಾನ ಇದ್ದೇ ಇದೆ, ಎಂಬುದನ್ನು ಸರಕಾರವು ಗಮನದಲ್ಲಿಡಬೇಕು.

ಭಾರತವು ಇಲ್ಲಿಯವರೆಗೆ ‘ಸರ್ಜಿಕಲ್ ಸ್ಟ್ರೈಕ್’ ಮಾಡಿ ಶತ್ರು ಗಳಿಗೆ ಸ್ವಲ್ಪ ಪ್ರಮಾಣದಲ್ಲಿ ದೇಶದ ಸಾಮರ್ಥ್ಯವನ್ನು ತೋರಿಸಲು ಪ್ರಯತ್ನಿಸಿಯೇ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಪ್ರತಿವರ್ಷ ದೀಪಾವಳಿಯ ಕಾಲಾವಧಿಯಲ್ಲಿ ಸೈನಿಕರನ್ನು ಭೇಟಿ ಯಾಗಿ ಅವರ ಮನೋಧೈರ್ಯವನ್ನು ಹೆಚ್ಚಿಸುತ್ತಾರೆ. ಜನವರಿ ೨೬ ರಂದು ಮೂರೂ ಸೇನಾದಳಗಳು ತಮ್ಮ ಯುದ್ಧಸಾಮರ್ಥ್ಯವನ್ನು ವಿವಿಧ ಪ್ರಾಯೋಗಿಕ ಭಾಗಗಳ ಮೂಲಕ ದೇಶವಾಸಿಗಳಿಗೆ ತೋರಿಸು ತ್ತವೆ; ಆದರೆ ಒಂದು ಖೇದದ ವಿಷಯವೆಂದರೆ ಈ ಯುದ್ಧಸಾಮಗ್ರಿಗಳು ಕೇವಲ ೧ ದಿನದ ಮಟ್ಟಿಗೆ ಹೊರಗೆ ಬರುತ್ತವೆ ಮತ್ತು ಪುನಃ ತಮ್ಮ ತಮ್ಮ ಜಾಗಕ್ಕೆ ಹೋಗುತ್ತವೆ.

ದೇಶಹಿತದ ನೀತಿಯ ಕೊರತೆ !

ಸ್ವಾತಂತ್ರ್ಯದ ನಂತರ ಅಂದಿನ ಪ್ರಧಾನಿ ಪಂಡಿತ ನೆಹರು ಇವರಿಗೆ ಭಾರತಕ್ಕೆ ಯಾರೂ ಶತ್ರುವಿಲ್ಲ ಎಂದೆನಿಸುತ್ತಿತ್ತು. ಆದುದರಿಂದ ಆ ಸಮಯದಲ್ಲಿ ಸೇನೆಗಾಗಿ ಯಾವುದೇ ಖರ್ಚು ಮಾಡಲಿಲ್ಲ. ಮೂಲತಃ ರಕ್ಷಣೆಯ ದೃಷ್ಟಿಯಿಂದ ಆಗಿನ ಸರಕಾರದ ಮಾನಸಿಕತೆಯೇ ಇರಲಿಲ್ಲ. ಆದುದರಿಂದ ಆ ಸರಕಾರವು ಅಲಕ್ಷ್ಯ ಮಾಡಿತು. ಕಾಲಾಂತರದಲ್ಲಿ ಪಾಕಿಸ್ತಾನ ಮತ್ತು ೧೯೬೨ ರಲ್ಲಿ ಚೀನಾದ ಆಕ್ರಮಣಗಳಲ್ಲಿ ಭಾರತವು ಬಹುದೊಡ್ಡ ಬೆಲೆತೆರಬೇಕಾಯಿತು. ಇದರಿಂದ ಯುದ್ಧದ ಸಿದ್ಧತೆ ಮತ್ತು ಶಸ್ತ್ರಾಸ್ತ್ರಗಳ ಆವಶ್ಯತೆಯ ಅರಿವಾಗತೊಡಗಿತು. ನೆಹರೂರವರ ಅಂದಿನ ನಿಷ್ಕ್ರಿಯತೆ ಮತ್ತು ದೇಶಹಿತದ ನೀತಿಗಳ ಕೊರತೆಯಿಂದಾಗಿ ದೇಶವು ಇಂದಿಗೂ ದೂರಗಾಮಿ ಮತ್ತು ಭೀಕರ ಪರಿಣಾಮಗಳನ್ನು ಅನುಭವಿಸುತ್ತಿದೆ. ‘ಪಾಕ್ ಆಕ್ರಮಿತ ಕಾಶ್ಮೀರ’ ಎಂಬ ಅಂದಿನ ಗಾಯವು ಇಂದಿಗೂ ಮಾಸಿಲ್ಲ. ನೆಹರೂರವರ ಅವಧಿಯಲ್ಲಿ ರಕ್ಷಣಾ ಕ್ರೇತ್ರದಲ್ಲಿ ಬಹಳ ದೊಡ್ಡ ಅಂತರ ನಿರ್ಮಾಣವಾಗಿತ್ತು. ಈ ಸ್ಥಿತಿಯ ದುರ್ಲಾಭವನ್ನು ಪಡೆದು ಶತ್ರುರಾಷ್ಟ್ರಗಳು ಭಾರತದ ಮೇಲೆ ಆಕ್ರಮಣಗಳ ತೂಗು ಗತ್ತಿಯನ್ನೇ ನೇತಾಡಿಸಿದರು; ಆದರೆ ಪ್ರಧಾನಿ ನರೇಂದ್ರ ಮೋದಿ ಯವರ ಆಡಳಿತದಲ್ಲಿ ಈ ಚಿತ್ರಣ ಬದಲಾಯಿತು ! ಅಂದಿ ನಿಂದ ಸೇನೆ ಮತ್ತು ಯುದ್ಧದ ರಣನೀತಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಇದರ ಪರಿಣಾಮವೆಂದು ಜಗತ್ತಿನಲ್ಲಿ ರಕ್ಷಣೆಯ ದೃಷ್ಟಿಯಿಂದ ಭಾರತದ ವರ್ಚಸ್ಸು ಈಗ ಬದಲಾವಣೆಯಾಗುತ್ತಿದೆ. ಈ ಕ್ಷೇತ್ರದಲ್ಲಿ ಭಾರತವು ಆತ್ಮನಿರ್ಭರದ ದೃಷ್ಟಿಯಿಂದಲೂ ಹೆಜ್ಜೆಯಿಡುತ್ತಿದೆ. ಆದುದರಿಂದ ‘ಭಾರತವು ರಕ್ಷಣಾತ್ಮಕವಾಗಿ ಅಲ್ಲ, ಆದರೆ ಯುದ್ಧಸನ್ನದ್ಧವಾಗಿದೆ’ ಎಂದು ಈಗ ಶತ್ರುರಾಷ್ಟ್ರಗಳು ಅರಿತುಕೊಂಡಿವೆ. ಅವರಿಗೂ ಒಂದು ರೀತಿ ಯಲ್ಲಿ ಭಾರತದ ಭಯವಿದ್ದೇ ಇದೆ ! ಇದಾಗಿದೆ ರಾಷ್ಟ್ರದ ಬಲಿಷ್ಠ ನೇತೃತ್ವದ ಪರಿಣಾಮ ! ಎಲ್ಲಿ ಆಗಿನ ತಿಳಿಗೇಡಿ ಪ್ರಧಾನಿ ನೆಹರು ಮತ್ತು ಎಲ್ಲಿ ರಾಷ್ಟ್ರಹಿತೈಷಿ ನಿಲುವನ್ನು ತಳೆಯುವ ಪ್ರಧಾನಿ ನರೇಂದ್ರ ಮೋದಿ ! ಮೋದಿಯವರಿಂದ ಆಗುತ್ತಿರುವ ರಕ್ಷಣಾ ಕ್ರೇತ್ರದ ಪ್ರಗತಿಯು ಗೌರವಾಸ್ಪದವೇ ಆಗಿದೆ; ಆದರೆ ‘ಸೈನ್ಯಾಧಿಕಾರಿಗಳು ಆದೇಶಕ್ಕಾಗಿ ಕಾಯುವ ಹೇಳಿಕೆಯ ಬಗ್ಗೆಯೂ ಇಲ್ಲಿ ಆಳವಾಗಿ ವಿಚಾರವಾಗಬೇಕು’, ಎಂದು ಜನತೆಗೆ ಅನಿಸುತ್ತದೆ.

ವಾಸ್ತವದಲ್ಲಿ ರಾಷ್ಟ್ರದ ರಕ್ಷಣೆಯನ್ನು ಮಾಡುವ ಸೈನಿಕರಿಗೆ ಆದೇಶಕ್ಕಾಗಿ ಕಾಯುವ ಪ್ರವೇಯವೇಕೆ ಬರುತ್ತದೆ ? ಇದು ‘ಆತ್ಮನಿರ್ಭರ’ ಭಾರತಕ್ಕೆ ದೌರ್ಭಾಗ್ಯವಲ್ಲವೇ ? ಇತ್ತೀಚೆಗಷ್ಟೇ ನಾವು ಸ್ವಾತಂತ್ರ್ಯದ ೭೫ ನೇ ವಾರ್ಷಿಕೋತ್ಸವವನ್ನು ಬಹಳ ಸಡಗರದಿಂದ ಆಚರಿಸಿದೆವು. ವಿವಿಧ ಕಾರ್ಯಕ್ರಮ ಮತ್ತು ಸಮಾರಂಭಗಳನ್ನು ಸಹ ಈ ನಿಮಿತ್ತ ಆಯೋಜಿಸಿದೆವು ಆದರೆ ಕಾಶ್ಮೀರದ ಕೆಲವು ಭಾಗಗಳು ಇಂದಿಗೂ ಪಾಕ್‌ನಲ್ಲಿವೆ. ಅದನ್ನು ಪ್ರಾಪ್ತಮಾಡಿಕೊಳ್ಳಲು ಸೈನಿಕರು ವರ್ಷನುಗಟ್ಟಲೇ ಆದೇಶಕ್ಕಾಗಿ ಕಾಯಬೇಕಾಗಿದೆ, ಈ ಸ್ಥಿತಿ ಎಂದರೆ ಖಂಡಿತ ಸ್ವಾತಂತ್ರ್ಯವಲ್ಲ. ಪ್ರತಿಯೊಬ್ಬ ಸೈನಿಕನಿಗಾಗಿ ಈ ಸ್ವಾತಂತ್ರ್ಯದಲ್ಲಿನ ಒಂದು ರೀತಿಯ ಪಾರತಂತ್ರ್ಯವೇ ಆಗಿದೆ. ಸಂಕ್ಷಿಪ್ತದಲ್ಲಿ ‘ಸ್ವತಂತ್ರ ಭಾರತದಲ್ಲಿ ಸೈನಿಕರು ಪಾರತಂತ್ರ್ಯದಲ್ಲಿದ್ದಾರೆ’, ಎಂದು ಖೇದದಿಂದ ಹೇಳ ಬೇಕಾಗಿದೆ. ಆದೇಶವನ್ನು ನೀಡದಿರುವ ಹಿಂದಿನ ಅಡಚಣೆಗಳು ಅಥವಾ ಕಾರಣಗಳು ಭಾರತಿಯರೆದುರು ಬರಲೇ ಬೇಕು. ‘ಉರಿ : ದಿ ಸರ್ಜಿಕಲ್ ಸ್ಟ್ರೈಕ್’ ಈ ಚಲನಚಿತ್ರದಲ್ಲಿ ‘ಹೌ ಈಸ್ ದ ಜೋಶ್ ?’ ಸೈನ್ಯಾಧಿಕಾರಿಯ ಪ್ರಶ್ನೆಗೆ ಎಲ್ಲ ಸೈನಿಕರು ‘ಹೈ (high) ಸರ್’ ಎಂದು ಉತ್ತರಿಸುತ್ತಾರೆ. ಈ ಉತ್ತರವನ್ನು ಕೃತಿಯಿಂದ ದರ್ಶಿಸುವ ಅವಕಾಶವು ಅವರಿಗೆ ಈಗ ಲಭಿಸಬೇಕು. ಭಾರತೀಯ ಸೈನಿಕರು ಶೌರ್ಯ ಮತ್ತು ಪರಾಕ್ರಮಗಳ ದಾರಿಯನ್ನು ನೋಡುತ್ತಲೇ ಇದ್ದಾರೆ. ಒಬ್ಬೊಬ್ಬ ಭಾರತೀಯ ಸೈನಿಕನು ಶತ್ರುವನ್ನು ಸದೆ ಬಡಿಯಬಲ್ಲನು. ಈಗ ಕಾದಿರುವೆವು ಕೇವಲ ಆದೇಶಕ್ಕಾಗಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದಲ್ಲಿ ಸೇರಿಸಿಕೊಂಡು ಪಾಕಿಸ್ತಾನವನ್ನು ವಿನಾಶಗೊಳಿಸುವುದಕ್ಕಾಗಿ !