೧. ಧ್ಯಾನಾವಸ್ಥೆಯಲ್ಲಿರುವಾಗ ಕಾಡುಹಂದಿಯು ಕೋರೆಹಲ್ಲಿನಿಂದ ಇರಿದಿದ್ದು ಅರಿವಾಗದಿರುವ ಪ.ಪೂ. ಭಗವಾನದಾಸ ಮಹಾರಾಜರು !
‘ಪ.ಪೂ. ಭಗವಾನದಾಸ ಮಹಾರಾಜರು (ಪ.ಪೂ. ದಾಸ ಮಹಾರಾಜರ ತಂದೆ) ಒಮ್ಮೆ ಧ್ಯಾನ ಮಾಡಲು ಕುಳಿತರೆ, ಅವರು ಆ ಸ್ಥಿತಿಯಲ್ಲಿ ೨-೩ ದಿನಗಳವರೆಗೆ ಏಳುತ್ತಿರಲಿಲ್ಲ. ಒಮ್ಮೆ ಮಹಾರಾಜರು ದಟ್ಟ ಕಾಡಿನಲ್ಲಿ ಧ್ಯಾನಕ್ಕೆ ಕುಳಿತಿದ್ದರು. ಆಗ ಅವರ ಬೆನ್ನಿನ ಹಿಂದೆ ಒಂದು ದೊಡ್ಡ ಕಾಡುಹಂದಿ ಬಂದಿತು ಮತ್ತು ಮಹಾರಾಜರ ಬೆನ್ನಿಗೆ ಚೂಪಾದ ಕೋರೆಹಲ್ಲಿನಿಂದ ಇರಿದು ಓಡಿ ಹೋಯಿತು. ಆ ಸ್ಥಿತಿಯಲ್ಲಿ ಮಹಾರಾಜರು ಶಾಂತ ಮತ್ತು ಸ್ಥಿರವಾಗಿದ್ದು ನಾಮಜಪದಲ್ಲಿ ಮಗ್ನರಾಗಿದ್ದರು. ಬೆನ್ನಿನಲ್ಲಿ ರಕ್ತ ಹರಿದು ಗಾಯವಾಗಿದ್ದರೂ ಮಹಾರಾಜರ ಮುಖದಲ್ಲಿ ಯಾವ ನೋವೂ ಕಾಣಿಸುತ್ತಿರಲಿಲ್ಲ.
೨. ಕಾಡಿಗೆ ಹೋದಾಗ ಕಾಡುಹಂದಿಗಳ ಮರಿಗಳ ಧ್ವನಿ ಕೇಳಿಸುವುದು ಮತ್ತು ಮಹಾರಾಜರ ಬೆನ್ನಿನ ಹಿಂದಿನಿಂದ ಹೋಗಿದ್ದರಿಂದ ಅವರ ಬೆನ್ನಿಗೆ ಗಾಯವಾಗಿರುವುದು ಕಾಣಿಸುವುದು
ನಾನು ಮಹಾರಾಜರಿಗಾಗಿ ಹಾಲು ಮತ್ತು ಹಣ್ಣುಗಳನ್ನು ತೆಗೆದುಕೊಂಡು ಕಾಡಿನಲ್ಲಿ ಅವರ ಉಪಾಸನೆಯ ಸ್ಥಳಕ್ಕೆ ಹೋದೆನು. ಮಹಾರಾಜರು ಕುಳಿತಿರುವ ಜಾಗದ ಹಿಂದಿನ ಬದಿಯ ಗಿಡಗಳಲ್ಲಿ ಏನೋ ಧ್ವನಿ ಕೇಳಿಸುತ್ತಿತ್ತು. ನಾನು ಅದನ್ನು ನೋಡಲು ಆ ಕಡೆಗೆ ಹೋದಾಗ ನನಗೆ ಅಲ್ಲಿ ಕಾಡುಹಂದಿ ಮರಿಗಳು ಕಿರಿಚುವುದು ಕಾಣಿಸಿತು. ನಾನು ಹಿಂತಿರುಗಿ ಬರುವಾಗ ಮಹಾರಾಜರ ಬೆನ್ನಿಗಾದ ಗಾಯ ಕಾಣಿಸಿತು. ಮಹಾರಾಜರ ಬೆನ್ನಿಗೆ ಗಾಯವಾಗಿ ಅದರಿಂದ ರಕ್ತಸ್ರಾವವಾಗಿದೆ, ಎಂದು ತಿಳಿಯಿತು. ನಾನು ಅವರ ಬೆನ್ನಿನ ಹಿಂದಿನಿಂದ ನಡೆದುಕೊಂಡು ಬಂದಿದ್ದರಿಂದ ಗಾಯ ಕಾಣಿಸಿತು. ಇಲ್ಲದಿದ್ದರೆ ನನಗೆ ಆ ಗಾಯವಾಗಿರುವುದೇ ತಿಳಿಯುತ್ತಿರಲಿಲ್ಲ.
ಅನುಭವಜನ್ಯ ಜ್ಞಾನವಿರುವ ಪ.ಪೂ. ದಾಸ ಮಹಾರಾಜರ ಲೇಖನ ! ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ’ಪ.ಪೂ. ದಾಸ ಮಹಾರಾಜರ ಅನುಭವ ಮತ್ತು ಅವರ ಅನುಭೂತಿಯ ಬರವಣಿಗೆಯು ತುಂಬಾ ವೈಶಿಷ್ಟ್ಯಪೂರ್ಣವಾಗಿದೆ; ಏಕೆಂದರೆ ಪ.ಪೂ. ದಾಸ ಮಹಾರಾಜರು ಅದೆಲ್ಲವನ್ನು ಅನುಭವಿಸಿದ್ದಾರೆ ಮತ್ತು ಪ್ರತಿಕೂಲ ಸ್ಥಿತಿಯಲ್ಲಿ ಅವರು ಸಾಧನೆಗಾಗಿ ಕಠಿಣ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಇನ್ನೂ ಮಾಡುತ್ತಿದ್ದಾರೆ. ನಮಗೆ ಇಂತಹ ಸಂತರ ಸಾನಿಧ್ಯವು ಲಭಿಸಿದೆ. ‘ಅವರಿಗೆ ಕೇವಲ ತಾತ್ತ್ವಿಕ ಜ್ಞಾನ ಗೊತ್ತಿದ್ದು ಅವರು ಹೇಳುತ್ತಿದ್ದಾರೆ’, ಎಂದಲ್ಲ ಅವರು ಸ್ವತಃ ಕೃತಿ ಮಾಡಿರುವುದರಿಂದ ಇದು ಅವರ ಅನುಭವದಲ್ಲಿನ ಜ್ಞಾನವಾಗಿದೆ. ಅಧ್ಯಾತ್ಮದಲ್ಲಿ ಕೃತಿಗೆ ಶೇ. ೯೮ ರಷ್ಟು ಮಹತ್ವವಿದೆ. ಈ ಬರವಣಿಗೆ ಮತ್ತು ಇಂತಹ ಸಂತರು ನಮಗೆ ಎಲ್ಲಿಯೂ ಸಿಗುವುದಿಲ್ಲ. ಎಲ್ಲರಿಗೂ ಈ ಜ್ಞಾನದ ಲಾಭವಾಗಬೇಕು. ಇದರಿಂದ ಸಮಷ್ಟಿಗೆ ಕಲಿಯಲು ಸಾಧ್ಯವಾಗುವುದು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ. |
೩. ಕಾಡುಹಂದಿಯು ಬೆನ್ನಿಗೆ ಕೋರೆಹಲ್ಲಿನಿಂದ ಇರಿದು ಗಾಯವಾಗಿದ್ದರೂ ವಿದೇಹಿ ಸ್ಥಿತಿಯಲ್ಲಿರುವುದರಿಂದ ಅದರ ಅರಿವಾಗದ ಪ.ಪೂ. ಭಗವಾನದಾಸ ಮಹಾರಾಜರು !
ಮಹಾರಾಜರು ಧ್ಯಾನದ ಸ್ಥಿತಿಯಿಂದ ಎಚ್ಚರವಾದ ನಂತರ ನಾನು ಅವರಿಗೆ, ”ನಿಮ್ಮ ಬೆನ್ನಿಗೆ ಗಾಯವಾಗಿದೆ. ಆ ಗಾಯವಾಗಿ ೩-೪ ದಿನಗಳಾಗಿರಬಹುದು’ ಎಂದೆನಿಸುತ್ತದೆ ಮತ್ತು ಆ ಗಾಯದಿಂದ ಬಿಳಿ ಸಣ್ಣ ಹುಳಗಳು ಹೊರಗೆ ಬೀಳುತ್ತಿವೆ. ಅಲ್ಲಿ ರಕ್ತಸ್ರಾವವಾಗಿದೆ. ಮಹಾರಾಜರೇ, ನಿಮಗೆ ಅದರ ಅರಿವಾಗಲಿಲ್ಲವೇ ?” ಎಂದು ಕೇಳಿದೆನು. ಆಗ ಮಹಾರಾಜರು, ”ಇಲ್ಲ ಮಗು ! ನಾನು ಧ್ಯಾನಾವಸ್ಥೆಯಲ್ಲಿದ್ದಾಗ ದೇಹಕ್ಕೆ ಏನೇ ಆದರೂ, ನನಗೆ ಅದರ ಅರಿವಾಗುವುದಿಲ್ಲ. ನಾನು ವಿದೇಹಿ ಸ್ಥಿತಿಯಲ್ಲಿರುತ್ತೇನೆ” ಎಂದು ಹೇಳಿದರು. ಆಗ ನನಗೆ ‘ಧ್ಯಾನಾವಸ್ಥೆಯಲ್ಲಿರುವಾಗ ಮಹಾರಾಜರು ವಿದೇಹಿ ಸ್ಥಿತಿಯಲ್ಲಿರುತ್ತಾರೆ’ ಎಂದು ತಿಳಿಯಿತು.
೪. ಗಾಯದೊಳಗೆ ಬೆಲ್ಲವನ್ನು ತುಂಬುವುದು; ಮಹಾರಾಜರ ಆಧ್ಯಾತ್ಮಿಕ ಬಲದಿಂದ ಗಾಯ ಗುಣಮುಖವಾಗುವುದು
ಅನಂತರ ನಾನು ಮಹಾರಾಜರಿಗೆ, ”ವೈದ್ಯರನ್ನು ಕರೆಯೋಣವೇ ?” ಎಂದು ಕೇಳಿದೆನು. ಅದಕ್ಕೆ ಮಹಾರಾಜರು, ”ಬೇಡ, ಏನೂ ಆಗುವುದಿಲ್ಲ. ಬೆನ್ನಿಗಾದ ಗಾಯಕ್ಕೆ ಕೇವಲ ಬೆಲ್ಲವನ್ನು ತುಂಬಿಸು, ಅದರಿಂದ ಗುಣಮುಖವಾಗುವುದು” ಎಂದು ಹೇಳಿದರು. ಪ್ರತ್ಯಕ್ಷದಲ್ಲಿ ಆ ಹಂದಿಯು ಮಹಾರಾಜರ ಬೆನ್ನಿಗೆ ತುಂಬಾ ದೊಡ್ಡ ತೂತು ಮಾಡಿತ್ತು. ಮಹಾರಾಜರು ಹೇಳಿದಂತೆ ನಾನು ಆ ಗಾಯದೊಳಗೆ ಬೆಲ್ಲವನ್ನು ತುಂಬಿಸಿದೆನು. ಅನಂತರ ಆ ಗಾಯದಿಂದ ಬಿಳಿ ಬಣ್ಣದ ಹುಳಗಳು ಹೊರಗೆ ಬರತೊಡಗಿದವು. ಬೆಲ್ಲವನ್ನು ತಿಂದಿದ್ದರಿಂದ ಗಾಯದಲ್ಲಾದ ಹುಳಗಳು ಸತ್ತು ಬೀಳುತ್ತಿದ್ದವು. ಕೆಲವು ದಿನಗಳ ವರೆಗೆ ನಾನು ಮಹಾರಾಜರ ಗಾಯದೊಳಗೆ ಬೆಲ್ಲವನ್ನು ತುಂಬಿಸುತ್ತಿದ್ದೆನು. ಈ ಉಪಚಾರದಿಂದ ಮತ್ತು ಮಹಾರಾಜರ ಆಧ್ಯಾತ್ಮಿಕ ಬಲದಿಂದ ಅವರ ಗಾಯವು ಕೆಲವು ದಿನಗಳ ನಂತರ ಪೂರ್ಣ ಗುಣಮುಖವಾಯಿತು. – ತಮ್ಮ ಚರಣಸೇವಕ ದಾಸ, – ಪ.ಪೂ. ದಾಸ ಮಹಾರಾಜ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೩.೨೦೨೨)
ಅನುಭೂತಿ : ಇಲ್ಲಿ ನೀಡಿದ ಸಾಧಕರ/ಸಂತರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ/ಸಂತರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |