೨ ಅಕ್ಟೋಬರ ೨೦೨೨ ರಂದು ಮಾಜಿ ಪ್ರಧಾನಮಂತ್ರಿ ಲಾಲಬಹದ್ದೂರ ಶಾಸ್ತ್ರಿ ಇವರ ಜಯಂತಿ ಇದೆ. ಆ ನಿಮಿತ್ತ ನಮನಗಳು
ಭಾರತದ ಎರಡನೆಯ ಪ್ರಧಾನ ಮಂತ್ರಿ ಲಾಲಬಹದ್ದೂರ ಶಾಸ್ತ್ರಿ ಎಂದರೆ ಸರಳತೆ ಮತ್ತು ಮಹಾನತೆಯ ಮೂರ್ತಿಯಾಗಿದ್ದರು. ಅವರ ಜೀವನದ ಅನೇಕ ಪ್ರಸಂಗಗಳು ಪ್ರೇರಣಾದಾಯಕವಾಗಿವೆ. ಅವರು ದೇಶದ ಪ್ರಧಾನಿಯಾಗಿರುವ ಸಮಯದ ಒಂದು ಘಟನೆಯಾಗಿದೆ. ಒಂದು ದಿನ ಅವರು ಬಟ್ಟೆಯ ಗಿರಣಿಯನ್ನು ನೋಡಲು ಹೋದರು. ಅವರ ಜೊತೆಗೆ ಗಿರಣಿಯ ಮಾಲೀಕರು, ಮೇಲಧಿಕಾರಿಗಳು ಮತ್ತು ಇತರ ಮಹತ್ವದ ಜನರಿದ್ದರು. ಗಿರಣಿಯನ್ನು ನೋಡಿದ ನಂತರ ಶಾಸ್ತ್ರಿಜಿಯವರು ಗಿರಣಿಯ ಗೋದಾಮಿಗೆ ಹೋದಾಗ ಅವರು ಸೀರೆಗಳನ್ನು ತೋರಿಸಲು ಹೇಳಿದರು. ಗಿರಣಿಯ ಮಾಲೀಕರು ಮತ್ತು ಅಧಿಕಾರಿಗಳು ಒಂದಕ್ಕಿಂತ ಒಂದು ಸುಂದರವಾದ ಸೀರೆಗಳನ್ನು ಅವರಿಗೆ ತೋರಿಸಿದರು. ಶಾಸ್ತ್ರಿಜಿಯವರು ಸೀರೆಗಳನ್ನು ನೋಡಿ, ‘ಸೀರೆಗಳು ತುಂಬಾ ಸುಂದರವಾಗಿವೆ, ಇವುಗಳ ಬೆಲೆ ಎಷ್ಟು ?’, ಎಂದು ಕೇಳಿದರು.
ಗಿರಣಿಯ ಮಾಲೀಕರು, ‘ಈ ಸೀರೆಗೆ ೮೦೦ ರೂಪಾಯಿ ಇದೆ ಹಾಗೂ ಇನ್ನೊಂದರ ಬೆಲೆ ೧ ಸಾವಿರ ರೂಪಾಯಿಗಳು ಇದೆ’, ಎಂದರು. ಆಗ ಶಾಸ್ತ್ರಿಜಿಯವರು, ‘ಇವು ತುಂಬಾ ದುಬಾರಿಯಾಗಿವೆ. ನನಗೆ ಕಡಿಮೆ ಬೆಲೆಯ ಸೀರೆಗಳನ್ನು ತೋರಿಸಿ’, ಎಂದರು. ಇಲ್ಲಿ ಗಮನಿಸುವ ಅಂಶವೆಂದರೆ ಈ ಘಟನೆಯು ೧೯೬೫ ರದ್ದಾಗಿತ್ತು, ಆಗ ೧ ಸಾವಿರ ರೂಪಾಯಿಗಳೆಂದರೆ ದೊಡ್ಡ ಮೊತ್ತವಾಗಿತ್ತು.
ಗಿರಣಿಯ ಮಾಲೀಕರು ಬೇರೆ ಸೀರೆಗಳನ್ನು ತೋರಿಸುತ್ತಾ, ‘ಸರಿ ಇದನ್ನು ನೋಡಿ. ಈ ಸೀರೆಗೆ ೫೦೦ ರೂಪಾಯಿ ಹಾಗೂ ಇದಕ್ಕೆ ೪೦೦ ರೂಪಾಯಿ ಇದೆ’, ಎಂದರು. ‘ಅರೆ ಬಾಬಾ, ಇವು ಕೂಡ ತುಂಬಾ ದುಬಾರಿಯಾಗಿವೆ. ನನ್ನಂತಹ ಬಡವನು ಖರೀದಿಸುವಂತಹ ಕಡಿಮೆ ಬೆಲೆಯ ಸೀರೆಗಳನ್ನು ತೋರಿಸಿರಿ’, ಎಂದು ಶಾಸ್ತ್ರಿಯವರು ಹೇಳಿದರು. ‘ತಾವು ನಮ್ಮ ಪ್ರಧಾನಮಂತ್ರಿ ಆಗಿದ್ದೀರಿ. ನಿಮಗೆ ಬಡವರೆಂದು ಹೇಗೆ ಹೇಳಬಹುದು ? ನಾವಂತೂ ಈ ಸೀರೆಗಳನ್ನು ನಿಮಗೆ ಉಡುಗೊರೆಯಾಗಿ ಕೊಡುತ್ತಿದ್ದೇವೆ’, ಎಂದು ಗಿರಣಿಯ ಮಾಲೀಕರು ಹೇಳಿದರು.
ಆಗ ಶಾಸ್ತ್ರಿಯವರು, ‘ಇಲ್ಲ, ನಾನು ಉಡುಗೊರೆಯನ್ನು ಸ್ವೀಕರಿಸುವ ಹಾಗಿಲ್ಲ’, ಎಂದರು. ಅದಕ್ಕೆ ಆ ಗಿರಣಿಯ ಮಾಲೀಕರು, ನಾವು ನಮ್ಮ ಪ್ರಧಾನಮಂತ್ರಿಗಳಿಗೆ ಉಡುಗೊರೆ ಕೊಡುವುದು ನಮ್ಮ ಅಧಿಕಾರವಾಗಿದೆ, ಎಂದರು. ಅದಕ್ಕೆ ಶಾಸ್ತ್ರೀಜಿಯವರು ‘ನಾನು ಪ್ರಧಾನಮಂತ್ರಿಯಾಗಿದ್ದರೂ, ಯಾವ ವಸ್ತುವನ್ನು ನಾನು ಖರೀದಿಸಲು ಸಾಧ್ಯವಿಲ್ಲವೋ, ಆ ವಸ್ತುವನ್ನು ಉಡುಗೊರೆಯಾಗಿ ಸ್ವೀಕರಿಸಿ ಅದನ್ನು ನನ್ನ ಪತ್ನಿಗೆ ಹೇಗೆ ಕೊಡಲಿ. ನಾನು ಪ್ರಧಾನಮಂತ್ರಿ ಆಗಿದ್ದರೂ ಬಡವನೇ ಅಲ್ಲ ! ನೀವು ನನಗೆ ಅಗ್ಗದ ಸೀರೆಗಳನ್ನು ತೋರಿಸಿರಿ. ನಾನು ನನ್ನ ಕ್ಷಮತೆಗನುಸಾರ ಸೀರೆಯನ್ನು ಖರೀದಿಸುವೆನು’, ಎಂದು ಶಾಸ್ತ್ರಿಯವರು ಶಾಂತವಾಗಿ ಹೇಳಿದರು. ಗಿರಣಿ ಮಾಲೀಕರ ಎಲ್ಲ ವಿನಂತಿಗಳು ವ್ಯರ್ಥವಾದವು. ದೇಶದ ಪ್ರಧಾನಮಂತ್ರಿಯವರು ಅಗ್ಗದ ಸೀರೆಗಳನ್ನು ಖರೀದಿಸಿದರು. ಶಾಸ್ತ್ರಿಯವರು ಎಷ್ಟು ಮಹಾನ್ ಆಗಿದ್ದರೆಂದರೆ, ಮೋಹ ಅವರನ್ನು ಸ್ಪರ್ಶಿಸಲು ಸಾಧ್ಯವಿರಲಿಲ್ಲ. (ಇಂದು ಇಂತಹ ಎಷ್ಟು ಜನಪ್ರತಿನಿಧಿಗಳು ಕಾಣಲು ಸಿಗುವರು ? – ಸಂಪಾದಕರು)
(ಆಧಾರ : ‘ಬಾಲಸಂಸ್ಕಾರ’ ಜಾಲತಾಣ)