ಜನಸಾಮಾನ್ಯರ ಲೂಟಿಯನ್ನು ತಡೆಯಲು ‘ಟ್ರೇಡ್ ಮಾರ್ಜಿನ್ ಕ್ಯಾಪ್’ ಅನ್ನು ಅನ್ವಯಿಸಿ ! – ಶ್ರೀ. ಪುರುಷೋತ್ತಮ ಸೋಮಾನಿ ಇವರಿಂದ ಕೇಂದ್ರ ಸರಕಾರಕ್ಕೆ ಆಗ್ರಹ

‘ಔಷಧಿಗಳ ಅವಾಸ್ತವಿಕ ಮೌಲ್ಯಗಳ ಮೂಲಕ ಜನರ ಲೂಟಿ’ ಈ ಕುರಿತು ‘ಆರೋಗ್ಯ ಸಹಾಯ ಸಮಿತಿ’ಯಿಂದ ವಿಶೇಷ ಸಂವಾದ !*

ಔಷಧಗಳ ಗರಿಷ್ಟ ಬೆಲೆ (ಎಂ.ಆರ್.ಪಿ.) ಹೆಚ್ಚಿರಬೇಕೆಂದು ಸಗಟು ಔಷಧ ಮಾರಾಟಗಾರರು, ಚಿಲ್ಲರೆ ಔಷಧ ವ್ಯಾಪಾರಿಗಳು ಇವರಿಂದ ಔಷಧ ನಿರ್ಮಿತಿ ಮತ್ತು ಮಾರಾಟ ಮಾಡುವ ಫಾರ್ಮಾ ಕಂಪನಿಗಳ ಮೇಲೆ ಸಾಕಷ್ಟು ಒತ್ತಡವಿದೆ. ಅಲ್ಲದೆ, ಆಸ್ಪತ್ರೆಗಳು, ವೈದ್ಯರು ಮುಂತಾದವರ ಈ ಸರಪಳಿಯಲ್ಲಿರುವ ಸಹಭಾಗ ಮತ್ತು ‘ಎಂ.ಆರ್.ಪಿ’ಯ ಮೇಲೆ ಕೇಂದ್ರ ಸರಕಾರದ ಬಳಿ ಯಾವುದೇ ನಿಯಂತ್ರಣವಿಲ್ಲ. ಇದರಿಂದ ಗ್ರಾಹಕರಿಗೆ ಮನಸೋ ಇಚ್ಛೆಯಂತೆ ಹೆಚ್ಚಿನ ಬೆಲೆಗೆ ಔಷಧಗಳ ಮಾರಾಟ ಮಾಡಲಾಗುತ್ತಿದೆ. ಜನರೂ ‘ಎಂ.ಆರ್.ಪಿ’ಯನ್ನು ಕೇಂದ್ರ ಸರಕಾರವೇ ನಿಯಂತ್ರಿಸುತ್ತದೆ ಎಂಬ ಭ್ರಮೆಯಲ್ಲಿದ್ದು ಔಷಧಗಳನ್ನು ಖರೀದಿಸುತ್ತಿದ್ದಾರೆ. ಕ್ಯಾನ್ಸರ್ ಔಷಧಿಗಳ ಮೇಲೆ ಶೇಕಡಾ 30 ರಷ್ಟು ‘ಟ್ರೇಡ್ ಮಾರ್ಜಿನ್ ಕ್ಯಾಪ್’ ಅನ್ನು ವಿಧಿಸಲಾಗಿದೆ. ಅಂದರೆ 100 ರೂಪಾಯಿ ಮೌಲ್ಯದ ಔಷಧವನ್ನು ಗರಿಷ್ಠ 130 ರೂಪಾಯಿಗೆ ಮಾರಾಟ ಮಾಡಬಹುದು; ಆದರೆ ಇಂತಹ ಔಷಧಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿವೆ. ಜನಸಾಮಾನ್ಯರ ಈ ಲೂಟಿಯನ್ನು ತಡೆಯಲು ಕೇಂದ್ರ ಸರಕಾರವು ಎಲ್ಲಾ ರೀತಿಯ ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ಮೇಲೆ ‘ಟ್ರೇಡ್ ಮಾರ್ಜಿನ್ ಕ್ಯಾಪ್’ ಅನ್ನು ವಿಧಿಸಬೇಕು. ಇದರಿಂದಾಗಿ ಔಷಧಗಳು ಶೇ. 80 ರಿಂದ 90 ರಷ್ಟು ಅಗ್ಗವಾಗಲಿವೆ ಎಂದು ತೆಲಂಗಾಣದ ಉದ್ಯಮಿ ಹಾಗೂ ‘ನಿಜಾಮಾಬಾದ್ ಚೇಂಬರ್ಸ್ ಆಫ್ ಕಾಮರ್ಸ್’ನ ಅಧ್ಯಕ್ಷ ಶ್ರೀ. ಪುರುಷೋತ್ತಮ ಸೋಮಾನಿ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ‘ಆರೋಗ್ಯ ಸಹಾಯ ಸಮಿತಿ’ ಮತ್ತು ‘ಸುರಾಜ್ಯ ಅಭಿಯಾನ’ ವತಿಯಿಂದ ಆಯೋಜಿಸಿದ್ದ ‘ಔಷಧಿಗಳ ಅವಾಸ್ತವಿಕ ಮೌಲ್ಯಗಳ ಮೂಲಕ ಜನರ ಲೂಟಿ’ ಕುರಿತ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನರೇಂದ್ರ ಸರ್ವೇ ಇವರು ಶ್ರೀ. ಸೋಮಾನಿ ಅವರೊಂದಿಗೆ ಸಂವಾದ ನಡೆಸಿದರು.

ಶ್ರೀ. ಪುರುಷೋತ್ತಮ ಸೋಮಾನಿ

‘ಜನರಿಗೆ ಅಗ್ಗದ ಮತ್ತು ಉತ್ತಮ ಔಷಧಗಳನ್ನು ಪಡೆಯಲು ಏನು ಮಾಡಬೇಕು’, ಎಂಬ ಕುರಿತು ಶ್ರೀ. ಸೋಮಾನಿಯವರು ಮಾತನಾಡುತ್ತಾ, ‘ಹೆಚ್ಚಿನವರಿಗೆ ಮಾರುಕಟ್ಟೆಯಲ್ಲಿರುವ ಹಲವು ಔಷಧಗಳು ಜೆನರಿಕ್ ಆಗಿವೆ ಎಂದು ತಿಳಿದಿಲ್ಲ. ಆದರೆ ಅನೇಕ ಪ್ರಸಿದ್ಧ ಔಷಧ ನಿರ್ಮಿತಿ ಕಂಪನಿಗಳು ಆ ಔಷಧಗಳನ್ನು ತಮ್ಮ ಹೆಸರಿನಲ್ಲಿ (ಬ್ರಾಂಡ್) ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತವೆ. ಈ ಬ್ರಾಂಡೆಡ್ ಔಷಧಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ, ಅಂಗಡಿಯವನು ಕೇವಲ ಶೇ. 5 ರಿಂದ 10 ರಷ್ಟು ರಿಯಾಯಿತಿ ನೀಡುತ್ತಾನೆ. ಜೆನೆರಿಕ್ ಔಷಧಿಗಳು ಬ್ರಾಂಡೆಡ್ ಔಷಧಿಗಳಂತೆಯೇ ಉತ್ತಮ ಗುಣಮಟ್ಟದ್ದಾಗಿರುತ್ತದೆ; ಆದರೆ ಜನರು ವೈದ್ಯರ ಮೇಲಿನ ಅತಿಯಾದ ವಿಶ್ವಾಸದಿಂದ ವೈದ್ಯರು ಬರೆದ ಔಷಧಿಗಳನ್ನು ಸೇವಿಸುತ್ತಾರೆ. ಜೆನೆರಿಕ್ ಔಷಧಿಗಳ ಮೇಲೂ ಹೆಚ್ಚು ರಿಯಾಯತಿ ಲಭ್ಯವಿದೆ. ಈಗ ಎಲ್ಲೆಡೆ ‘ಪ್ರಧಾನಮಂತ್ರಿ ಜನೌಷಧಿ ಅಂಗಡಿ’ಗಳು ಇವೆ. ಈ ಅಂಗಡಿಗಳಲ್ಲಿ ‘ಎಂ.ಆರ್.ಪಿ.’ ಔಷಧಿಗಳು ಅಗ್ಗದ ದರದಲ್ಲಿ ದೊರೆಯುತ್ತವೆ. ಜನರು ಈ ದುಬಾರಿ ಬ್ರಾಂಡೆಡ್ ಔಷಧಗಳನ್ನು ಖರೀದಿಸುವ ಬದಲು ‘ಪ್ರಧಾನಮಂತ್ರಿ ಜನೌಷಧಿ ಅಂಗಡಿ’ಗಳಿಂದ ಔಷಧಿಗಳನ್ನು ಖರೀದಿಸಬೇಕು ಅಥವಾ ಜೆನೆರಿಕ್ ಔಷಧಿಗಳನ್ನು ಖರೀದಿಸಬೇಕು’ ಎಂದು ಅವರು ಹೇಳಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ನಮ್ಮ ದೇಶದಲ್ಲಿ ಜನರಲ್ಲಿ ಜಾಗರೂಕತೆ ಇಲ್ಲದಿದ್ದರಿಂದ ಫಾರ್ಮಾ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಇದರಿಂದ ಜನಸಾಮಾನ್ಯರು ಭಾರಿ ನಷ್ಟ ಅನುಭವಿಸುತ್ತಿದ್ದು, ಕೇಂದ್ರ ಸರಕಾರಕ್ಕೂ 5.50 ಲಕ್ಷ ಕೋಟಿ ನಷ್ಟವಾಗುತ್ತಿದೆ. ಇದರಿಂದ ಕಪ್ಪುಹಣ ನಿರ್ಮಾಣವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮಣ ಅವರೊಂದಿಗೂ ಪತ್ರ ವ್ಯವಹಾರ ನಡೆಸಿದ್ದೇನೆ. ಅಧಿಕ ಬೆಲೆಯಲ್ಲಿ ಮಾರಾಟ ಮಾಡುವ ಔಷಧಗಳ ಲೂಟಿಯ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ; ಆದರೆ ಈಗ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಕೂಡ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡುವ ಮೂಲಕ ಸರಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಹೇಳಿದರು.