Doctors on Strike Again : ಬಂಗಾಳದಲ್ಲಿ ಕಿರಿಯ ವೈದ್ಯರು ಪುನಃ ಮುಷ್ಕರಕ್ಕೆ ಇಳಿದರು

ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣ

ಕೋಲಕಾತಾ (ಬಂಗಾಳ) – ನಮ್ಮ ಭದ್ರತೆಯ ಬೇಡಿಕೆಗಳನ್ನು ಪೂರ್ಣಗೊಳಿಸುವ ವಿಷಯದಲ್ಲಿ ಮಮತಾ ಬ್ಯಾನರ್ಜಿ ಸರಕಾರದ ದೃಷ್ಟಿಕೋನವು ಸಕಾರಾತ್ಮಕವಾಗಿರುವಂತೆ ಕಂಡು ಬರುತ್ತಿಲ್ಲ ಇವತ್ತು 52ನೇ ದಿನವಾಗಿದೆ. ನಮ್ಮ ಮೇಲೆ ಈಗಲೂ ದಾಳಿಗಳಾಗುತ್ತಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನೀಡಿರುವ ಭರವಸೆ ಈಡೇರಿಸಲು ಯಾವುದೇ ಪ್ರಯತ್ನಗಳನ್ನು ನಡೆಸುತ್ತಿರುವಂತೆ ಕಂಡು ಬರುತ್ತಿಲ್ಲ. ಇಂದಿನಿಂದ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸದೇ ನಮಗೆ ಬೇರೆ ಪರ್ಯಾಯವಿಲ್ಲ. ರಾಜ್ಯ ಸರಕಾರದಿಂದ ಕ್ರಮ ಕೈಗೊಳ್ಳುವವರೆಗೆ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಹೇಳುತ್ತಾ, ಅಲ್ಲಿಯ ಕಿರಿಯ ವೈದ್ಯರು ಪುನಃ ಮುಷ್ಕರಕ್ಕೆ ಇಳಿದಿದ್ದಾರೆ. `ನಮಗೆ ಸಂಪೂರ್ಣ ಭದ್ರತೆ ನೀಡಬೇಕು’, ಎನ್ನುವುದು ವೈದ್ಯರ ಆಗ್ರಹವಾಗಿದೆ. ಅಕ್ಟೋಬರ 2 ರಂದು ಕಿರಿಯ ವೈದ್ಯರು ಕೋಲಕಾತಾದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ಹಿಂದೆಯೂ ಆಗಸ್ಟ 10 ರಿಂದ ಕಿರಿಯ ವೈದ್ಯರು 42 ದಿನಗಳ ವರೆಗೆ ಮುಷ್ಕರ ನಡೆಸಿದ್ದರು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅವರ ಬೇಡಿಕೆಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ ಬಳಿಕ ಅವರು ಸಪ್ಟೆಂಬರ 21 ರಂದು ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದರು. ರಾಧಾ ಗೋವಿಂದ ಕರ ಆಸ್ಪತ್ರೆಯಲ್ಲಿ ತರಬೇತಿ ಮಹಿಳಾ ವೈದ್ಯರ ಮೇಲೆ ಬಲಾತ್ಕಾರ ಮಾಡಿ ಹತ್ಯೆ ಮಾಡಿದ್ದರಿಂದ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದರು.

ಸೆಪ್ಟೆಂಬರ್ 21 ರಂದು ಒಬ್ಬ ರೋಗಿಯ ಮರಣದ ನಂತರ ಕೋಲಕಾತಾದ ಸಾಗರ ದತ್ತಾ ಆಸ್ಪತ್ರೆಯಲ್ಲಿ 3 ವೈದ್ಯರು ಮತ್ತು 3 ದಾದಿಯರನ್ನು ಥಳಿಸಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆಯಿಂದ ಕಿರಿಯ ವೈದ್ಯರು ಆಕ್ರೋಶಗೊಂಡರು. ಅವರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ 4 ಪ್ರತಿಭಟನಾ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. `ಆಸ್ಪತ್ರೆಗೆ ಭದ್ರತೆ ಒದಗಿಸಬೇಕು. ಇದರಿಂದ ನಿರ್ಭಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ’, ಎಂಬುದು ವೈದ್ಯರ ಆಗ್ರಹವಾಗಿದೆ.

ಸಂಪಾದಕೀಯ ನಿಲುವು

ವೈದ್ಯರಿಗೆ ಪುನಃ ಮುಷ್ಕರ ನಡೆಸಬೇಕಾಗುತ್ತಿರುವುದು, ದೇಶದ ಎಲ್ಲ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ! ವೈದ್ಯರನ್ನು ರಕ್ಷಿಸಲು ಸಾಧ್ಯವಾಗದ ಸರಕಾರ ಮತ್ತು ಪೊಲೀಸರು ಏನು ಉಪಯೋಗ ?