ಭಾರತ ವಿಶ್ವಗುರುವಾಗಬೇಕು ! 

ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ‘ಕಳೆದ ೭೪ ವರ್ಷಗಳಲ್ಲಿ ಭಾರತವು ಏನೆಲ್ಲ ಗಳಿಸಿದೆ ಹಾಗೂ ಏನೆಲ್ಲ ಕಳೆದುಕೊಂಡಿದೆ ?’, ಎಂಬುದರ ಬಗ್ಗೆ ಕೂಡ ಈ ನಿಮಿತ್ತದಲ್ಲಿ ವಿಚಾರಮಂಥನವಾಗಬೇಕು. ಅದರೊಂದಿಗೆ ‘ಭವಿಷ್ಯದಲ್ಲಿ ಪ್ರಗತಿಪಥದಲ್ಲಿ ಸಾಗುವ ದೃಷ್ಟಿಯಿಂದ ಹೇಗೆ ಹೆಜ್ಜೆ ಇಡಬೇಕು ?’, ಎಂಬುದೂ ಅಷ್ಟೇ ಮಹತ್ವದ್ದಾಗಿದೆ. ಕೇಂದ್ರ ಸರಕಾರವು ಇತ್ತೀಚೆಗಷ್ಟೆ ‘ಭಾರತೀಯ ಶಿಕ್ಷಣ ಬೋರ್ಡ್’ ಸ್ಥಾಪಿಸಿ ಅದನ್ನು ನಡೆಸುವ ಹೊಣೆಯನ್ನು ಯೋಗಋಷಿ ರಾಮ ದೇವಬಾಬಾ ಇವರ ‘ಪತಂಜಲಿ ಯೋಗಪೀಠ ಟ್ರಸ್ಟ್’ಗೆ ಒಪ್ಪಿಸಿದೆ. ಅದಕ್ಕಾಗಿ ರಾಮದೇವಬಾಬಾ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ‘ಭಾರತೀಯ ಶಿಕ್ಷಣ ಬೋರ್ಡ್’ ಇದು ದೇಶದ ಶಾಲೆಗಳಿಗೆ ಮೊತ್ತಮೊದಲ ರಾಷ್ಟ್ರೀಯ ಶಿಕ್ಷಣ ಮಂಡಳಿಯಾಗಿರುವುದು. ಪಠ್ಯಕ್ರಮಗಳನ್ನು ತಯಾರಿಕೆ, ಶಾಲೆಗಳ ನೋಂದಣಿ, ಪರೀಕ್ಷೆಗಳ ಆಯೋಜನೆ, ಪ್ರಮಾಣಪತ್ರಗ ವಿತರಣೆ ಇತ್ಯಾದಿ ಕಾರ್ಯವನ್ನು ಈ ಮಂಡಳಿಯ ಮೂಲಕ ಮಾಡಲಾಗುವುದು. ಈ ಮಂಡಳಿಯ ಮೂಲಕ ಭಾರತೀಯ ಪಾರಂಪರಿಕ ಜ್ಞಾನವನ್ನು ಕಲಿಸುವುದರೊಂದಿಗೆ ಆಧುನಿಕ ಶಿಕ್ಷಣವನ್ನೂ ನೀಡಲಾಗುವುದು. ಕೇಂದ್ರ ಸರಕಾರದ ಈ ನಿರ್ಣಯವು ನಿಜವಾಗಿಯೂ ಪ್ರಶಂಸನೀಯವಾಗಿದೆ. ಸ್ವಾತಂತ್ರ್ಯದ ೭೫ ನೇ ವರ್ಷದ ನಿಮಿತ್ತ ಹಮ್ಮಿಕೊಂಡಿರುವ ಈ ನಿರ್ಣಯವು ದೇಶವನ್ನು ಗುಣಾತ್ಮಕ ಪ್ರಗತಿಯ ಶಿಖರಕ್ಕೆ ಒಯ್ಯುವುದು ಎಂಬುದರಲ್ಲಿ ಸಂಶಯವಿಲ್ಲ. ಹಿಂದಿನ ಕಾಲದಲ್ಲಿದ್ದ ಗುರುಕುಲ ಪದ್ಧತಿಯನ್ನು ನಷ್ಟಗೊಳಿಸಿ ಮೆಕಾಲೆ ಎಂಬ ವ್ಯಕ್ತಿ ತನ್ನ ಸ್ವಂತದ ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿ ಜಾರಿಗೊಳಿಸಿದನು ಹಾಗೂ ಅದರ ಮೂಲಕ ರಾಷ್ಟ್ರದ ಸಂಸ್ಕೃತಿ ಮತ್ತು ಸಭ್ಯತೆಯನ್ನು ನಷ್ಟಗೊಳಿಸಲು ಪ್ರಯತ್ನಿಸಲಾಯಿತು. ರಾಷ್ಟ್ರದ್ವೇಷಿ, ಧರ್ಮದ್ವೇಷಿ, ಜಾತ್ಯತೀತವಾದಿ, ಪ್ರಗತಿ(ಅಧೋಗತಿ)ಪರರು ಮುಂತಾದವರೆಲ್ಲರೂ ಇದರಲ್ಲಿ ಭಾಗವಹಿಸಿ ದೇಶಕ್ಕೆ ಅಪಾರ ಹಾನಿಯನ್ನುಂಟು ಮಾಡಿದರು. ಅದರಿಂದ ನಿರ್ಮಾಣವಾದ ಬಿರುಕನ್ನು ಈಗ ತುಂಬಿಸಿ ಕೊಳ್ಳಬೇಕಾಗಿದೆ. ಈ ಕಾರ್ಯವು ಸರಕಾರದ ಈ ಬೋರ್ಡ್‌ನ ಮೂಲಕ ಪೂರ್ಣಗೊಳ್ಳಬಹುದು. ಇದರಿಂದಲೆ ಭಾರತದಲ್ಲಿ ನಿಜವಾಗಿಯೂ ಶೈಕ್ಷಣಿಕ ಕ್ರಾಂತಿಯಾಗುವುದು. ಈ ಕ್ರಾಂತಿಗೆ ನಾವು ಸಾಕ್ಷಿದಾರರಾಗಲಿಕ್ಕಿದ್ದೇವೆ. ರಾಷ್ಟ್ರದ್ವೇಷಿಗಳ ಕುಕೃತ್ಯಗಳಿಂದಾಗಿ ಇಷ್ಟು ವರ್ಷಗಳಿಂದ ಅದುಮಿಟ್ಟಿರುವ ಭಾರತದ ಗೌರವಶಾಲಿ ಇತಿಹಾಸವು ಇದರ ಮೂಲಕ ಮತ್ತೊಮ್ಮೆ ಬೆಳಕಿಗೆ ಬರುವುದು. ಆದ್ದರಿಂದ ಕೇಂದ್ರಸರಕಾರದ ಈ ಹೆಜ್ಜೆಯು ಭಾರತಕ್ಕೆ ನಿಜವಾಗಿಯೂ ಹರ್ಷ ತರುವಂತಿದೆ.

‘ಭಾರತೀಯ ಶಿಕ್ಷಣ ಬೋರ್ಡ್’ನ ಹೊಣೆ !

ಭಾರತದಲ್ಲಿ ಈ ಹಿಂದೆ ಗುರುಕುಲ ಶಿಕ್ಷಣಪದ್ಧತಿ ಅಸ್ತಿತ್ವದಲ್ಲಿತ್ತು. ಚಿತ್ರಕಲೆ, ಶಿಲ್ಪಕಲೆ, ಸಂಗೀತ, ನಾಟ್ಯಕಲೆ, ವಾಸ್ತುಶಾಸ್ತ್ರ, ಜ್ಯೋತಿ ರ್ವಿದ್ಯಾ ಹಾಗೂ ಆಯುರ್ವೇದ ಮತ್ತು ಅಭಿಯಾಂತ್ರಿಕ ಇತ್ಯಾದಿ ಮತ್ತು ಇಂತಹ ವಿವಿಧ ವಿಷಯಗಳ ಅಥವಾ ವಿವಿಧ ಕ್ಷೇತ್ರಗಳಿಗೆ ಸಂಬಂಧಿತ ಶಿಕ್ಷಣವನ್ನು ನೀಡಲಾಗುತ್ತಿತ್ತು. ಆ ಕಾಲದ ಅಧ್ಯಯನ ಹಾಗೂ ಅಧ್ಯಾಪನ ಪದ್ಧತಿಯು ಆದರ್ಶ ಹಾಗೂ ಅತ್ಯಂತ ಪ್ರಗತಿಪಥದಲ್ಲಿತ್ತು. ಅದರ ಮೂಲಕ ವಿವಿಧ ಪ್ರಕಾರದ ವಿದ್ಯೆಗಳನ್ನು ಕರಗತ ಮಾಡಿಕೊಂಡು ವಿದ್ಯಾರ್ಥಿಗಳು ನಿಜವಾದ ಅರ್ಥದಲ್ಲಿ ಪಾರಂಗತರಾಗುತ್ತಿದ್ದರು. ಅವರಲ್ಲಿನ ಕೌಶಲ್ಯಗಳ ವಿಕಾಸವಾಗುತ್ತಿತ್ತು. ಗುರುಕುಲದಲ್ಲಿನ ಜ್ಞಾನರೂಪಿ ಬಂಡವಾಳದಿಂದ ಮುಂದಿನ ಜೀವನದಲ್ಲಿ ಬರುವ ಪ್ರತಿಕೂಲ ಪರಿಸ್ಥಿತಿಯಲ್ಲಿ ಲಾಭವಾಗುತ್ತಿತ್ತು. ಆ ಜ್ಞಾನದಿಂದ ವಿವಿಧ ಪ್ರಕಾರದ ಸಾಮರ್ಥ್ಯವು ಪ್ರಾಪ್ತಿಯಾಗುತ್ತಿತ್ತು. ಗುರುಕುಲದಲ್ಲಿನ ಶಿಕ್ಷಣವು ನಿಜವಾಗಿಯೂ ವ್ಯಾವಹಾರಿಕ, ವಾಸ್ತವ ಹಾಗೂ ಮಾನವರನ್ನು ರೂಪಿಸುವಂತಿತ್ತು. ಆದ್ದರಿಂದ ಗುರುಕುಲದಲ್ಲಿನ ವಿದ್ಯಾರ್ಥಿಯು ‘ಪುಸ್ತಕದ ಹುಳ’ವೆಂದು ತಯಾರಾಗದೆ ಅವನಲ್ಲಿ ಒಂದು ಆದರ್ಶ ವ್ಯಕ್ತಿತ್ವವು ರುಜುವಾಗುತ್ತಿತ್ತು. ‘ಕೇಂದ್ರಸರಕಾರವು ಆರಂಭಿಸಿದ ಈ ಬೋರ್ಡ್‌ನ ಮೂಲಕ ಭಾರತದಲ್ಲಿ ಮತ್ತೊಮ್ಮೆ ಗುರುಕುಲ ಶಿಕ್ಷಣ ವ್ಯವಸ್ಥೆಯು ಬೇರೂರಬೇಕು’, ಎಂದು ಪ್ರತಿಯೊಬ್ಬ ಭಾರತೀಯನಿಗೆ ಅನಿಸುತ್ತದೆ; ಏಕೆಂದರೆ ಭಾರತೀಯರ ವೈಭವವಾಗಿರುವ ಈ ಶಿಕ್ಷಣ ಪದ್ಧತಿಯೆ ಆದರ್ಶ ಭಾರತವನ್ನು ನಿರ್ಮಿಸಲು ಸಾಧ್ಯ. ಅಂದಿನ ಗುರುಕುಲದಲ್ಲಿ ಅಧ್ಯಾಪನ ಮಾಡುವ ಶಿಕ್ಷಕರು ಅಥವಾ ಆಚಾರ್ಯರ ವಿದ್ವತ್ತು ಸಹ ಅಪಾರವಾಗಿತ್ತು. ಅವರಿಗೆ ಕೇವಲ ಬುದ್ಧಿವಂತಿಕೆಯಲ್ಲ, ಧರ್ಮ ಮತ್ತು ಅಧ್ಯಾತ್ಮ ಶಿಕ್ಷಣದ ಅಡಿಪಾಯವೂ ಲಭಿಸಿತ್ತು; ಆದರೆ ಇಂದು ಇಂತಹ ಶಿಕ್ಷಕರು ಲಭಿಸುವುದು ದುರ್ಲಭವಾಗಿದೆ. ತಂತ್ರ ಜ್ಞಾನ, ಭೌತಿಕ ಪ್ರಗತಿ, ವಿಕಾಸ ಇವೆಲ್ಲವನ್ನೂ ಬುದ್ಧಿವಂತಿಕೆಯ ಪ್ರಭಾವದಿಂದ ಸಾಧಿಸಬಹುದು; ಆದರೆ ಮಾನವನನ್ನು ರೂಪಿಸುವ ಕಾರ್ಯವನ್ನು ಸಾಧನೆ ಅಥವಾ ಅಧ್ಯಾತ್ಮ ಬಲದಿಂದಲೆ ಸಾಧಿಸಲು ಸಾಧ್ಯವಿದೆ. ಕೇಂದ್ರ ಸರಕಾರ ಸ್ಥಾಪಿಸಿರುವ ಈ ಬೋರ್ಡ್‌ನ ಮೂಲಕ ನಿಯುಕ್ತಿ ಮಾಡುವ ಮೊದಲು ‘ಆ ಹೊಣೆಯನ್ನು ಹೊರುವ ಅಧಿಕಾರಿಯಲ್ಲಿ ಅಷ್ಟು ಕ್ಷಮತೆಯಿದೆಯೇ ?’, ‘ಅವರಿಗೆ ಭಾರತೀಯ ಪಾರಂಪರಿಕ ಜ್ಞಾನವಿದೆಯೇ ?’, ‘ಜಗತ್ತಿನ ನೇತೃತ್ವವನ್ನು ಮಾಡುವ ಭಾರತೀಯ ಪೀಳಿಗೆಯನ್ನು ರೂಪಿಸಲು ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ರೀತಿಯಲ್ಲಿ ಸಕ್ಷಮವಾಗಿರುವರೇ ?’, ಇತ್ಯಾದಿ ವಿಷಯಗಳ ಪರೀಕ್ಷಣೆ ಮತ್ತು ಅಧ್ಯಯನ ಮಾಡಿಯೇ ನಿರ್ಣಯಿಸಬೇಕು. ‘ಕೇವಲ ಬೋರ್ಡ್ ಸ್ಥಾಪನೆ ಮಾಡಿದರೆ ಆಯಿತು’, ಎಂಬುದಷ್ಟೇ ವಿಚಾರ ಮಾಡದೆ ಅದರ ಸಂಪೂರ್ಣ ವ್ಯವಸ್ಥೆಯ ಕಡೆಗೂ ಗಮನ ಹರಿಸಬೇಕು. ‘ಪತಂಜಲಿ ಯೋಗಪೀಠ ಟ್ರಸ್ಟ್’ ಕೂಡ ಈ ಹೊಣೆಯನ್ನು ನಿರ್ವಹಿಸುವಾಗ ಬೋರ್ಡ್‌ನ ಫಲಿತಾಂಶದ ಬಗ್ಗೆ ಅಭ್ಯಾಸ ಮಾಡಬೇಕು. ಹಾಗೆ ಆದರೆ ಮಾತ್ರ ಈ ಯೋಜನೆಯು ಸಾರ್ಥಕವಾಗಬಹುದು.

ಭಾರತೀಯರ ಮುಂದಾಳತ್ವ !

ಗುರುಕುಲದಲ್ಲಿ ಹೊಸ ಪಾಠ ಆರಂಭವಾದ ನಂತರ ಆಚಾರ್ಯರು ಹಿಂದಿನ ಪಾಠವನ್ನು ಪೂರ್ವಾಲೋಕನ ಮಾಡುತ್ತಾರೆ. ಆ ವಿಷಯದಲ್ಲಿ ಪರೀಕ್ಷಣೆ ಮಾಡುತ್ತಾರೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಆ ವಿದ್ಯಾರ್ಥಿಗೆ ಪ್ರತಿದಿನವೂ ಪರೀಕ್ಷೆಯ ದಿನವಾಗಿರುತ್ತದೆ. ಆದ್ದರಿಂದ ಪರೀಕ್ಷೆಗಾಗಿ ಪ್ರತ್ಯೇಕವಾಗಿ ಸಿದ್ಧತೆ ಮಾಡುವ, ಆ ವಿಷಯದಲ್ಲಿ ಬರುವ ಒತ್ತಡ ಇತ್ಯಾದಿ ಏನೂ ಇರ ಲಿಲ್ಲ. ಈ ಮಾದರಿಯಲ್ಲಿ ಪಠ್ಯಕ್ರಮವನ್ನು ಸಿದ್ಧಪಡಿಸಬಹುದೇ?, ಎಂಬುದರ ಬಗ್ಗೆಯೂ ಬೋರ್ಡ್ ಅಭ್ಯಾಸ ಮಾಡಬೇಕು. ಒತ್ತಡ-ಕಿರಿಕಿರಿ, ನಿರಾಶೆ ಹಾಗೂ ಅದರಿಂದಾಗುವ ಆತ್ಮಹತ್ಯೆ ಇತ್ಯಾದಿಗಳನ್ನು ತಡೆಯಲು ಈ ಬೋರ್ಡ್‌ನ ಪಾತ್ರವೂ ಮಹತ್ವದ್ದಾಗುವುದು. ಬೋರ್ಡ್‌ನ ಮೂಲಕ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ರುವ ಆದರ್ಶ ಭಾರತವು ಸಾಕಾರವಾಗಲಿಕ್ಕಿದೆ. ಅದಕ್ಕಾಗಿ ‘ಶೈಕ್ಷಣಿಕ ದೃಷ್ಟಿಯಲ್ಲಿ ಏನು ಮಾಡಬಹುದು ?’, ‘ಪಠ್ಯಕ್ರಮ ಹಾಗೂ ಪರೀಕ್ಷೆಯ ಸ್ವರೂಪ ಹೇಗಿರಬೇಕು ?’, ಇತ್ಯಾದಿ ವಿಷಯಗಳ ಬೇಡಿಕೆಯು ಭಾರತೀಯರಿಂದ ಬರಬೇಕು. ಆಧುನಿಕ ತಂತ್ರ ಜ್ಞಾನ, ವಿಜ್ಞಾನದ ಜೊತೆಗೆ ರಾಷ್ಟ್ರ, ಧರ್ಮ, ಅಧ್ಯಾತ್ಮ, ಈಶ್ವರ ಇತ್ಯಾದಿ ಎಲ್ಲ ವಿಷಯಗಳ ಅಭ್ಯಾಸವನ್ನು ಸಮಾವೇಶಗೊಳಿಸುವ ದೃಷ್ಟಿಯಲ್ಲಿಯೂ ಭಾರತೀಯರು ಆಗ್ರಹಿಸಬೇಕು. ದಿಶೆಯನ್ನು ನೀಡುವ ಶಿಕ್ಷಣಪದ್ಧತಿಯನ್ನು ವಿಕಸಿತಗೊಳಿಸಲು ಆ ಸ್ವರೂಪದ ಮನವಿಯನ್ನೂ ಬೋರ್ಡ್‌ಗೆ ಮಾಡಬೇಕು. ‘ವಿದ್ಯಾರ್ಥಿಗಳ ಮೂಲಕ ಅಪರಾಧಿಗಳು ತಯಾರಾಗುವುದು ಇಂದಿನ ಜಾತ್ಯತೀತ ಶಿಕ್ಷಣಪದ್ಧತಿಯ ವೈಫಲ್ಯ’ ಎಂಬುದನ್ನು ಬೋರ್ಡ್ ಗಮನದಲ್ಲಿಡ ಬೇಕು. ಗುರುಕುಲ ಶಿಕ್ಷಣಪದ್ಧತಿಯು ಅಸ್ತಿತ್ವದಲ್ಲಿರುವಾಗ ವಿಶ್ವ ಗುರುವಿನ ಸ್ಥಾನದಲ್ಲಿದ್ದ ಭಾರತ ಎಲ್ಲರಿಗೂ ಇಷ್ಟವಾಗುತ್ತದೆ. ಗುರುಕುಲ ಪದ್ಧತಿಯ ಪುನರುಜ್ಜೀವನವಾದರೆ ಮಾತ್ರ ಅದು ಸಾಧ್ಯವಿದೆ. ಇವೆಲ್ಲವೂ ‘ಭಾರತೀಯ ಶಿಕ್ಷಣ ಬೋರ್ಡ್’ನ ಕೈಯಲ್ಲಿದೆ. ಆದರ್ಶ ಹಾಗೂ ಉಜ್ವಲ ಭಾರತವನ್ನು ನಿರ್ಮಿಸಲು ‘ಭಾರತೀಯ ಶಿಕ್ಷಣ ಬೋರ್ಡ್’ನ ಮುಂದಿನ ಪ್ರಯಾಣಕ್ಕೆ ಎಲ್ಲ ಭಾರತೀಯರ ಮನಃಪೂರ್ವಕ ಶುಭಾಶಯಗಳು !