ಏಕಮೇವಾದ್ವತೀಯ ಪದ್ಮವಿಭೂಷಣ ರತನ ಟಾಟಾ

ಭಾರತದ ಆದರ್ಶ ಉದ್ಯಮಿ, ‘ಪದ್ಮವಿಭೂಷಣ’ ಪ್ರಶಸ್ತಿ ವಿಜೇತ ಗೌರವಾನ್ವಿತ, ಜಾಗತಿಕ ಯಶಸ್ಸಿನ ಶಿಖರದಲ್ಲಿನ ಮಹತ್ವಪೂರ್ಣ ವ್ಯಕ್ತಿಯೆಂದು ಖ್ಯಾತಿ ಪಡೆದ ಮತ್ತು ಟಾಟಾ ಉದ್ಯೋಗ ಸಮೂಹದ ಸರ್ವಸ್ವವೂ ಆಗಿರುವ ರತನ ಟಾಟಾ ಅವರು ಅಕ್ಟೋಬರ್‌ ೯ ರಂದು ರಾತ್ರಿ ೧೧.೩೦ ಗಂಟೆಗೆ ತಮ್ಮ ೮೬ ನೇ ವಯಸ್ಸಿನಲ್ಲಿ ನಿಧನರಾದರು. ಟಾಟಾ ಇವರು ಅನೇಕ ಉದ್ಯಮಿಗಳ ಶ್ರದ್ಧಾಸ್ಥಾನವಾಗಿದ್ದರು. ಈ ಕಾರಣದಿಂದಾಗಿ ‘ಒಂದು ರೀತಿಯಲ್ಲಿ ಉದ್ಯೋಗ ಸಮೂಹದ ಧ್ರುವತಾರೆ ಅಸ್ತಂಗತವಾಯಿತು’ ಎಂದು ಎಲ್ಲರಿಗೂ ಅನಿಸಿತು. ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವ ‘ಸ್ಟೇಟಸ್’ ಅನ್ನು ಅನೇಕ ಜನರು ಇಟ್ಟಿದ್ದರು. ಅವರ ಸಂದರ್ಭದಲ್ಲಿನ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ಪ್ರಸಾರವಾಗಲು ಪ್ರಾರಂಭವಾಯಿತು. ಹುದ್ದೆಗಿಂತ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ರತನ್‌ ಟಾಟಾ ಅವರ ವಿಷಯದಲ್ಲಿ ಸಣ್ಣವರು ದೊಡ್ಡವರು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಒಂದು ವಿಶೇಷ ಸ್ಥಾನವಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಟಾಟಾರವರ ವಿಷಯದಲ್ಲಿ ಭಾವನೆ ವ್ಯಕ್ತಪಡಿಸುತ್ತಾ, “ರತನ್‌ ಟಾಟಾ ಎಂದರೆ ದೂರದೃಷ್ಟಿಯ ವ್ಯಾಪಾರಿ ನಾಯಕ ಮತ್ತು ಸಹಾನುಭೂತಿಯ ವ್ಯಕ್ತಿತ್ವ ಹೊಂದಿದ್ದರು. ಅವರ ನಮ್ರತೆ, ದಯೆ ಮತ್ತು ಸಮಾಜಪ್ರೀತಿಯ ಅಚಲ ಬದ್ಧತೆಯಿಂದಾಗಿ ಅವರು ಜನಪ್ರಿಯರಾದರು. ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ”, ಎಂದು ಹೇಳಿದರು. ಟಾಟಾರವರು ಭಾರತೀಯ ಸಮಾಜಕ್ಕಾಗಿ ಮಾಡಿರುವ ಕಾರ್ಯವು ಶ್ಲಾಘನೀಯ ಮತ್ತು ಅತುಲನೀಯವಾಗಿದೆ. ಅವರು ಏನೇ ಮಾಡಿದರೂ, ಅದಕ್ಕೆ ನೈತಿಕತೆಯ ಅಡಿಪಾಯವಿತ್ತು. ಇದರಿಂದಲೇ ಅವರು ಜೀವನದಲ್ಲಿ ಯಶಸ್ವಿಯಾದರು ಮತ್ತು ಮಾನವೀಯತೆಯ ಆದರ್ಶವೆಂದು ಇಂದು ಭಾರತೀಯರೆದುರಿಗೆ ಅವರು ಅತ್ಯುತ್ತಮ ಮೌಲ್ಯಗಳ ಅತ್ಯುನ್ನತ ದಾರಿದೀಪವಾಗಿದ್ದಾರೆ.

ರತನ್‌ ಟಾಟಾ ಅವರ ಅಹಂಶೂನ್ಯತೆಯನ್ನು ಎತ್ತಿ ತೋರಿಸುವ ಒಂದು ಘಟನೆ. ಒಮ್ಮೆ ಪ್ರಯಾಣದಲ್ಲಿರುವಾಗ ರತನ್‌ ಟಾಟಾ ಅವರ ಕಾರಿನ ಟಯರ್‌ ಪಂಕ್ಚರ್‌ ಆಯಿತು. ಹೀಗಾಗಿ ಎಲ್ಲರೂ ಕೆಳಗೆ ಇಳಿದರು. ಚಾಲಕನೂ ‘ಸ್ವಲ್ಪ ಸಮಯ ಕಾಲನ್ನು ಸಡಿಲಗೊಳಿಸಿ, ಬಳಿಕ ಪಂಕ್ಚರ್‌ ತೆಗೆಯಲು ನಿರ್ಧರಿಸಿದನು. ಕೆಲ ಹೊತ್ತಿನ ಬಳಿಕ ಚಾಲಕನು ವಾಹನದ ಹತ್ತಿರ ಬಂದಾಗ ಅವನ ಕೈಗೆ ಸ್ಟೆಪ್ನಿಯ ಚಕ್ರವನ್ನು ಯಾರೋ ನೀಡಿದರು. ಆವನಿಗೆ ಆಶ್ಚರ್ಯವಾಯಿತು. ಆ ಚಕ್ರವನ್ನು ನೀಡಿದವರು ಬೇರಿನ್ನಾರೂ ಆಗಿರದೇ ರತನ ಟಾಟಾ ಆಗಿದ್ದರು. ಎಲ್ಲರೂ ಕಾಲನ್ನು ಸಡಿಲಗೊಳಿಸಲು ಹೋದಾಗ ಟಾಟಾರವರು ಸ್ವತಃ ಶರ್ಟಿನ ತೋಳುಗಳನ್ನು ಮಡಚಿದರು ಮತ್ತು ಪಂಕ್ಚರ ತೆಗೆದರು. ಆಗ ಅವರು ಬೆವರಿನಿಂದ ಸಂಪೂರ್ಣ ಒದ್ದೆಯಾಗಿದ್ದರು. ಚಾಲಕನಿಗೆ ಏನು ಮಾತನಾಡಬೇಕು ಎಂದೇ ತಿಳಿಯಲಿಲ್ಲ. ನಿಜ ಹೇಳಬೇಕೆಂದರೆ ಟಾಟಾರಂತಹ ಉದ್ಯಮಿಗೆ ಹೀಗೆ ಬೆವರು ಸುರಿಸುವ ಅವಶ್ಯಕತೆಯೇ ಇರಲಿಲ್ಲ; ಆದರೆ ಕೇವಲ ಆದೇಶ ನೀಡುವುದು, ಅಧಿಕಾರ ತೋರಿಸುವುದು ಅವರ ತತ್ವದಲ್ಲಿಯೇ ಇರಲಿಲ್ಲ. ಅವರು ಈ ಕೆಲಸವನ್ನು ಮಾಡಿ, ‘ನೀವು ಯಶಸ್ಸಿನ ಎಷ್ಟೇ ಎತ್ತರಕ್ಕೆ ತಲುಪಿದರೂ, ಕಾಲು ನೆಲದ ಮೇಲಿರಬೇಕು’, ಎನ್ನುವುದನ್ನು ಕೃತಿಯಿಂದ ತೋರಿಸಿಕೊಟ್ಟರು. ಕೊರೊನಾ ಮಹಾಮಾರಿಯ ಪ್ರತಿಕೂಲ ಸಮಯದಲ್ಲಿ ಟಾಟಾ ಅವರು ಕೋವಿಡ ಯೋಧರಾಗಿದ್ದ ಆಧುನಿಕ ವೈದ್ಯರು ಮತ್ತು ದಾದಿಯವರಿಗೆ ದುಬಾರಿ ತಾಜ್‌ ಹೋಟೆಲ್‌ನಲ್ಲಿ ಉಚಿತ ಸೌಕರ್ಯವನ್ನು ಒದಗಿಸಿಕೊಟ್ಟಿದ್ದರು. ೨೦೦೮ ರಲ್ಲಿ, ಮುಂಬಯಿಯ ತಾಜ್‌ ಹೋಟೆಲ್‌ ಮೇಲೆ ಭಯೋತ್ಪಾದಕ ದಾಳಿ ನಡೆದಿರುವುದನ್ನು ತಿಳಿದ ತಕ್ಷಣವೇ ರತನ್‌ ಟಾಟಾ ಅಲ್ಲಿಗೆ ತಲುಪಿದ್ದರು. ಅವರು ಮೂರು ದಿನಗಳ ಕಾಲ ಹೋಟೆಲ್‌ ಆಡಳಿತ ವರ್ಗದವರೊಂದಿಗೆ ತಂಗಿದ್ದರು. ಅವರು ಗಾಯಗೊಂಡಿರುವವರ ಹಾಗೆಯೇ ಮೃತರ ಕುಟುಂಬದವರಿಗೆ ಆರ್ಥಿಕ ಸಹಾಯವನ್ನು ನೀಡಿದರು. ಅವರ ಈ ಸಮಾಜಭಾವನೆ ಖಂಡಿತವಾಗಿಯೂ ಪ್ರಶಂಸೆಗೆ ಯೋಗ್ಯವಾಗಿದೆ.

ಭಾರತಮಾತೆಯ ನಿಜವಾದ ರತ್ನ !

ರತನ ಟಾಟಾ

ಇಂದು ಭಾರತೀಯ ಉದ್ಯೋಗವಿಶ್ವದಲ್ಲಿ ಎಲ್ಲೆಡೆ ಭ್ರಷ್ಟ ಮನೋವೃತ್ತಿಯೇ ಕಂಡು ಬರುತ್ತದೆ. ಅನೇಕ ಜನರು ರಹಸ್ಯ ಒಪ್ಪಂದದಿಂದ ಹಣವನ್ನು ಗಳಿಸುತ್ತಿರುವುದು ಕಂಡು ಬರುತ್ತದೆ. ಕೆಲವೇ ಬೆರಳೆಣಿಕೆಯಷ್ಟು ವ್ಯಕ್ತಿಗಳು ಸಮರ್ಪಣೆಯ ಭಾವನೆಯಿಂದ ಉದ್ಯಮದ ಯಶಸ್ಸಿನ ಮುಂದಾಳತ್ವವನ್ನು ನಡೆಸುತ್ತಾರೆ. ಅವರಲ್ಲಿಯೇ ರತನ ಟಾಟಾ ಒಬ್ಬರಾಗಿದ್ದರು. ‘ಮಾನವನಿಗಾಗಿ ಕೆಲಸ ಮಾಡುವ ನಿಜವಾದ ಮನುಷ್ಯ’ ಎಂದು ಅವರು ಭಾರತ ದಲ್ಲಿ ಮಾತ್ರವಲ್ಲ, ಬದಲಾಗಿ ವಿಶ್ವದಲ್ಲಿಯೇ ಜನಪ್ರಿಯರಾದರು. ಇಂದು ಅವರು ನಮ್ಮ ನಡುವೆ ಇಲ್ಲವಾದರೂ ಅವರ ದಕ್ಷ ನಾಯಕತ್ವದ ಹೆಜ್ಜೆ ಗುರುತುಗಳಿಂದಾಗಿ ‘ನಿಧನರಾದರೂ ಕೀರ್ತಿರೂಪದಲ್ಲಿರಬೇಕು’ ಎಂಬ ಮಾತನ್ನು ಟಾಟಾ ಅವರು ಸಾರ್ಥಕಗೊಳಿಸಿದ್ದಾರೆ ಎಂದು ಹೇಳಬಹುದು.

ರತನ್‌ ಟಾಟಾ ಇವರಿಗೆ ಅನೇಕ ಸರ್ವೋತ್ಕೃಷ್ಟ ಪ್ರಶಸ್ತಿಗಳು ದೊರಕಿದವು; ಆದರೆ ಇದುವರೆಗೂ ‘ಭಾರತ ರತ್ನ’ ಸಿಗದಿರುವುದು ಭಾರತೀಯರೆಲ್ಲರ ಮನಸ್ಸಿನ ಮೂಲೆಯಲ್ಲಿ ಸಣ್ಣ ನೋವು ಉಳಿದಿದೆ. ನಿಜ ಹೇಳಬೇಕೆಂದರೆ ಅವರಂತಹ ಉಚ್ಚ ವ್ಯಕ್ತಿತ್ವಕ್ಕೆ ಪ್ರಶಸ್ತಿಗಳ ಅವಶ್ಯಕತೆಯೇ ಇಲ್ಲ; ಕಾರಣ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅವರ ಬಗ್ಗೆ ದೃಢವಾದ ಶಾಶ್ವತ ಸ್ಥಾನವಿದೆ. ಇದೇ ಅವರಿಗೆ ಅತ್ಯುನ್ನತ ಪ್ರಶಸ್ತಿಯಾಗಿದೆ.

೯೦ ರ ದಶಕದಲ್ಲಿ ಟಾಟಾ ಮೋಟಾರ್ಸ್ ತುಂಬಾ ನಷ್ಟ ದಲ್ಲಿತ್ತು. ಆಗ ತನ್ನ ಪ್ರವಾಸಿ ಕಾರಿನ ಉದ್ಯಮವನ್ನು ಮಾರಾಟ ಮಾಡಲು ಟಾಟಾ ನಿರ್ಧರಿಸಿದರು. ಅವರು ಅಮೇರಿಕಾದ ಕಾರು ತಯಾರಿಕಾ ಸಂಸ್ಥೆಯಾಗಿರುವ ‘ಫೋರ್ಡ್ ಮೋಟಾರ್ಸ್‌’ ಜೊತೆ ಮಾತನಾಡಿದರು. ಫೋರ್ಡ್ ಸಂಸ್ಥೆಯ ಅಧ್ಯಕ್ಷ ಬಿಲ್‌ ಫೋರ್ಡ್ ಅವರು ಟಾಟಾ ಅವರ ಲೇವಡಿ ಮಾಡುತ್ತಾ, ”ನಿಮಗೆ ಏನೂ ಗೊತ್ತಿಲ್ಲದಿದ್ದರೆ, ನೀವು ಈ ಉದ್ಯಮವನ್ನು ಏಕೆ ಪ್ರಾರಂಭಿಸಿದಿರಿ ? ಒಂದು ವೇಳೆ ನಾನು ನಿಮ್ಮೊಂದಿಗೆ ಈ ವ್ಯವಹಾರವನ್ನು ಮಾಡಿದರೆ, ನಿಮ್ಮ ಮೇಲೆ ದೊಡ್ಡ ಉಪಕಾರ ವಾದಂತಾಗುತ್ತದೆ’,’ ಎಂದರು. ಅವರು ಈ ಅಪಮಾನವನ್ನು ಅತ್ಯಂತ ಗಾಂಭೀರ್ಯತೆಯಿಂದ ಒಪ್ಪಿಕೊಂಡು ಉದ್ಯಮವನ್ನು ಮಾರಾಟ ಮಾಡುವ ನಿರ್ಣಯವನ್ನು ರದ್ದು ಪಡಿಸಿದರು. ಅಮೇರಿಕಾದಿಂದ ಮುಂಬಯಿಗೆ ಮರಳಿದ ಬಳಿಕ ಅವರು ನಡೆದ ಘಟನೆಯನ್ನು ಎಲ್ಲಿಯೂ ಉಲ್ಲೇಖಿಸದೆ ಕಾರು ಉದ್ಯಮವನ್ನು ಲಾಭದ ಹಾದಿಗೆ ತರಲು ಸಂಪೂರ್ಣ ಗಮನವನ್ನು ಹರಿಸಿದರು. ಇದಕ್ಕಾಗಿ ಹಗಲಿರುಳು ಶ್ರಮಿಸಿದರು. ೯ ವರ್ಷಗಳ ನಂತರ, ಟಾಟಾ ಮೋಟಾರ್ಸ್ ಮತ್ತೊಮ್ಮೆ ಮುಗಿಲೆತ್ತರಕ್ಕೆ ಜಿಗಿದು ಸಂಪೂರ್ಣ ಜಗತ್ತಿನಲ್ಲಿ ಮತ್ತೊಮ್ಮೆ ಪ್ರಸಿದ್ಧಿಯನ್ನು ಪಡೆಯಿತು ಮತ್ತು ಇನ್ನೊಂದೆಡೆ ‘ಫೋರ್ಡ’ ಸಂಸ್ಥೆಗೆ ಸೆಡ್ಡು ಹೊಡೆದು ಭಾರತೀಯತ್ವದ ಸಾಮರ್ಥ್ಯವನ್ನು ತೋರಿಸಿದರು. ‘ಟಾಟಾ ಮೋಟಾರ್ಸ’ ಯಶಸ್ಸಿನ ಶಿಖರವನ್ನು ತಲುಪುತ್ತಿರುವಾಗಲೇ ಫೋರ್ಡ ಸಂಸ್ಥೆಯು ನಷ್ಟವನ್ನು ಅನುಭವಿಸತೊಡಗಿತ್ತು. ಫೋರ್ಡ ಸಂಸ್ಥೆಯು ಟಾಟಾರವರನ್ನು ಅಪಮಾನಿಸಿದ್ದರೂ, ಮನುಷ್ಯತ್ವಕ್ಕೆ ಬೆಲೆ ಕೊಡುವ ಟಾಟಾರವರು ಇದನ್ನು ಗಮನದಲ್ಲಿಟ್ಟುಕೊಳ್ಳದೇ ಫೋರ್ಡ ಸಂಸ್ಥೆಗೆ ಸಹಾಯಹಸ್ತ ನೀಡಿದರು. ಇದರಿಂದ ಬಿಲ್‌ ಫೋರ್ಡ ಅವರಿಗೆ ಮುಂಬಯಿಯಲ್ಲಿ ಟಾಟಾರವರ ಕಾಲು ಹಿಡಿಯಲು ಬರಬೇಕಾಯಿತು. ಇಂತಹ ಈ ಅಸಾಮಾನ್ಯ ಮತ್ತು ಆದರ್ಶ ವ್ಯಕ್ತಿತ್ವದ ಬಗ್ಗೆ ಎಷ್ಟೇ ಬರೆದರೂ ಅದು ಬಹಳ ಕಡಿಮೆಯೇ ಆಗಿದೆ.

ರತನ್‌ ಟಾಟಾ ಅವರ ಬೋಧನೆಗಳನ್ನು ಸ್ವೀಕರಿಸಿ

ರತನ್‌ ಟಾಟಾ ಅವರ ಜೀವನವು ಅನುಭವದಿಂದ ಮತ್ತು ಬೋಧನೆಗಳಿಂದ ತುಂಬಿದೆ. ಅವರು ಇಂದಿನ ವರೆಗೆ ಎಲ್ಲರಿಗೂ ನೀಡಿದ ಅತ್ಯಮೂಲ್ಯ ಬೋಧನೆಗಳನ್ನು ಸ್ವೀಕರಿಸಿದರೆ, ‘ನಾವು ನಿಜವಾದ ಅರ್ಥದಿಂದ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದಂತೆ’ ಆಗುವುದು. ‘ನಿಮ್ಮ ಸೋಲು ನಿಮ್ಮೊಬ್ಬರದ್ದೇ ಆಗಿದೆ, ಅದಕ್ಕಾಗಿ ಯಾರನ್ನೂ ದೂಷಿಸಬೇಡಿ. ನಿಮ್ಮ ತಪ್ಪುಗಳಿಂದ ಕಲಿಯಿರಿ ಮತ್ತು ಜೀವನದಲ್ಲಿ ಮುನ್ನಡೆಯಿರಿ. ನಿಮ್ಮ ಜೀವನವು ಏರಿಳಿತಗಳಿಂದ ತುಂಬಿದೆ. ಅದನ್ನು ರೂಢಿಸಿಕೊಳ್ಳಿರಿ. ಯೋಗ್ಯ ನಿರ್ಣಯವನ್ನು ತೆಗೆದುಕೊಳ್ಳುವುದರಲ್ಲಿ ನನಗೆ ವಿಶ್ವಾಸವಿಲ್ಲ. ನಾನು ನಿರ್ಣಯವನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಅದು ಯೋಗ್ಯವಾಗಿದೆಯೆಂದು ಸಾಬೀತುಪಡಿಸುತ್ತೇನೆ. ನಾವು ಮನುಷ್ಯರಾಗಿದ್ದೇವೆ, ಕಂಪ್ಯೂಟರ್‌ ಅಲ್ಲ. ಆದ್ದರಿಂದ ಜೀವನದ ಆನಂದವನ್ನು ಪಡೆಯಿರಿ. ಯಾವಾಗಲೂ ಗಂಭೀರವಾಗಿ ಇರಬೇಡಿರಿ. ಒಂದು ವೇಳೆ ಜನರು ನಿಮ್ಮ ಮೇಲೆ ಕಲ್ಲು ಎಸೆದರೆ, ಆ ಕಲ್ಲನ್ನು ಅರಮನೆಯನ್ನು ಕಟ್ಟಲು ಬಳಸಿ’ ಹೀಗೆ ಮತ್ತು ಇಂತಹ ಅನೇಕ ಬೋಧನೆಗಳು ಎಲ್ಲರಿಗೂ ಮಾದರಿಯಾಗಿದೆ. ಇಂತಹ ಈ ದೇಶಭಕ್ತ, ಸೃಜನಶೀಲ, ದೂರದರ್ಶಿ, ಧೈರ್ಯಶಾಲಿ ಮತ್ತು ತ್ಯಾಗದ ವ್ಯಕ್ತಿತ್ವದ ಅನುಮಪ ಕೊಡುಗೆ ಭಾರತದ ಇತಿಹಾಸದಲ್ಲಿ ಅಜರಾಮರವಾಗಿರಲಿದೆ. ‘ಉಪ್ಪಿ’ನಿಂದ ಹಿಡಿದು ‘ಮೋಟಾರು ವಾಹನ’ದ ವರೆಗಿನ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದ ರತನ ಟಾಟಾ ಅವರ ಮುಂದೆ ಪ್ರತಿಯೊಬ್ಬರೂ ನತಮಸ್ತಕರಾಗುತ್ತಾರೆ. ಭಾರತಕ್ಕೆ ನಿಜವಾದ ಅರ್ಥದಿಂದ ಸಮೃದ್ಧಗೊಳಿಸಿದ ರತನ ಟಾಟಾರಂತಹ ಮಹಾಪುರುಷನಿಗೆ ಕೋಟಿ ಕೋಟಿ ನಮಸ್ಕಾರಗಳು. ರತನಜಿ ಟಾಟಾ ಇವರಿಗೆ ‘ಸನಾತನ ಪ್ರಭಾತ’ ಸಮೂಹದಿಂದ ಭಾವಪೂರ್ಣ ಶ್ರದ್ಧಾಂಜಲಿ.