ಮನುಷ್ಯ ಜನ್ಮದ ಮಹತ್ವವನ್ನು ತಿಳಿದು ಮನಃಶಾಂತಿ ಪಡೆಯಿರಿ !

೧. ಭೌತಿಕ ವಿಕಾಸವನ್ನು ಸಾಧಿಸುವುದೆಂದರೆ ಶಾಂತಿಯಲ್ಲ !

ಅಮೇರಿಕಾ ಅಥವಾ ಪಾಶ್ಚಾತ್ಯ ದೇಶಗಳು ಅರ್ಥಿಕ ದೃಷ್ಟಿಯಿಂದ ಎಷ್ಟೇ ಸಮೃದ್ಧವಾಗಿದ್ದರೂ, ಆ ದೇಶಗಳ ಜನರಲ್ಲಿ ಶಾಂತಿ ಇದೆಯೇ ? ಆ ದೇಶಗಳಲ್ಲಿ ಕಳ್ಳತನ, ಹೊಡೆದಾಟ, ಸುಲಿಗೆ, ಪರಸ್ಪರರನ್ನು ಮೋಸಗೊಳಿಸುವುದು ನಿಂತಿದೆಯೇ ? ಶ್ರೀಮಂತಿಕೆ ಎಂದರೆ ಶಾಂತಿ ಅಲ್ಲ. ಶ್ರೀಮಂತ ಮನುಷ್ಯನು ಸಮಾಧಾನದಿಂದ ಮಲಗಬಹುದೇ ? ಅದೇ ರೀತಿ ವೈಜ್ಞಾನಿಕವಾಗಿ ಬಲಿಷ್ಠರಾಗುವುದೆಂದರೆ ಶಾಂತಿಯನ್ನು ಸಾಧಿಸುವುದಲ್ಲ; ಏಕೆಂದರೆ ಇಂತಹ ದೇಶಗಳ ಮೇಲೆ ಇತರ ದೇಶಗಳ ಆಕ್ರಮಣದ ತೂಗುಗತ್ತಿಯು ಇರುತ್ತದೆ.

೨. ಸಮಾನತೆಯ ಧೋರಣೆಯಿಂದಲೂ ಶಾಂತಿ ಸಿಗಲಾರದು !

ಕೆಲವರಿಗೆ, ‘ಸಮಾಜದಲ್ಲಿ ಎಲ್ಲ ಜನರೊಂದಿಗೆ ಒಂದೇ ರೀತಿಯಲ್ಲಿ ವರ್ತಿಸಿದರೆ, ಎಲ್ಲರಿಗೂ ಸಮಾನ ಅಧಿಕಾರವನ್ನು ನೀಡಿದರೆ, ಆಹಾರ ಧಾನ್ಯವನ್ನು ನೀಡಿದರೆ, ಜನರಲ್ಲಿ ಶಾಂತಿ ಹರಡುವುದು’ ಎಂದೆನಿಸುತ್ತದೆ. ಸಮಾನತಾವಾದಿ, ಸಾಮ್ಯವಾದಿ ಜನರ ಧೋರಣೆ ಇದೇ ಆಗಿದೆ. ಎಲ್ಲ ಜನರು ಹೇಗೆ ಸಮಾನರಾಗಬಲ್ಲರು ? ಸೃಷ್ಟಿಯಲ್ಲಿ ವೈವಿಧ್ಯವಿದೆ, ಒಂದೇ ರೀತಿಯಲ್ಲಿ ಏನೂ ಇರುವುದಿಲ್ಲ. ನಮ್ಮ ಶರೀರದ ಅವಯವಗಳು ಮತ್ತು ಅವುಗಳ ಕಾರ್ಯ ಸಮಾನವಾಗಿಲ್ಲ. ಕೈಗಳು ಕೈಗಳ ಕೆಲಸವನ್ನೇ ಮಾಡುತ್ತವೆ ಮತ್ತು ಕಾಲುಗಳು ಕಾಲುಗಳ ಕೆಲಸವನ್ನೇ ಮಾಡುತ್ತವೆ. ಎಷ್ಟೇ ಹೇಳಿದರೂ, ಕಾಲುಗಳ ಕೆಲಸವನ್ನು ಕೈಗಳು ಮಾಡಲಾರವು. ಆದುದರಿಂದ ಸಮಾನತೆಯ ಧೋರಣೆಯಿಂದಲೂ ಶಾಂತಿ ಸಿಗಲಾರದು. ಪ್ರತಿಯೊಬ್ಬರ ಅಧಿಕಾರವು ಅವರವರ ಅರ್ಹತೆ, ಯೋಗ್ಯತೆಗನುಸಾರ ಇರುತ್ತದೆ.

೩. ಮನುಷ್ಯಜನ್ಮದ ಮಹತ್ವ

ಇಂದು ನಾವು, ಮನುಷ್ಯನ ಸೆಳೆತವು ಸಂಪೂರ್ಣ ಮಾಯೆಯ ಕಡೆಗಿರುವುದನ್ನು ನೋಡುತ್ತೇವೆ. ಹಣ, ಗಾಡಿ, ಬಂಗಲೆ, ಮೋಜಿನ ವಸ್ತುಗಳು, ಮಾನ-ಸನ್ಮಾನ ಇತ್ಯಾದಿಗಳನ್ನು ಪಡೆಯಲು ಮನುಷ್ಯನು ಶ್ರಮಪಡುತ್ತಿದ್ದಾನೆ. ಇದಕ್ಕಾಗಿ ಅವನು ಹೇಗೆ ಬೇಕಾದರು, ಅಂದರೆ ಅನೈತಿಕತೆಯಿಂದಲೂ ನಡೆದುಕೊಳ್ಳುತ್ತಾನೆ ಮತ್ತು ಅವನು ತನ್ನ ಅಧೋಗತಿಯನ್ನು ಮಾಡಿಕೊಳ್ಳುತ್ತಾನೆ. ಮನುಷ್ಯ ಜನ್ಮವು ಇದೆಲ್ಲವನ್ನು ಪಡೆಯಲು ಅಲ್ಲ ಈಶ್ವರಪ್ರಾಪ್ತಿಗಾಗಿ, ಅಂದರೆ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡು ಈಶ್ವರನಲ್ಲಿ ವಿಲೀನವಾಗುವುದಕ್ಕಾಗಿ ಇದೆ. ಇದರಿಂದಲೇ ಅವನಿಗೆ ನಿಜವಾದ ಶಾಂತಿ ಸಿಗುವುದು. ಜೀವ, ಜಂತು, ಹುಳ, ಇರುವೆ, ಪಶು, ಪ್ರಾಣಿ, ಪಕ್ಷಿ ಇಂತಹ ೮೪ ಲಕ್ಷ ಯೋನಿಗಳಿಂದ ತಿರುಗಿದ ನಂತರ ಯಾವುದಾದರೊಂದು ಜೀವಕ್ಕೆ ಮನುಷ್ಯಜನ್ಮವು ದೊರಕುತ್ತದೆ. ಇದರ ಅರ್ಥವು ಲಕ್ಷಗಟ್ಟಲೆ ವರ್ಷಗಳು ಕಳೆದ ನಂತರ ಒಳ್ಳೆಯ ಕರ್ಮವನ್ನು ಮಾಡಲು, ಅಂದರೆ ಸತ್ಕರ್ಮಕ್ಕಾಗಿ ಮತ್ತು ಮೋಕ್ಷಪ್ರಾಪ್ತಿಗಾಗಿ ದುರ್ಲಭವಾಗಿರುವ ಮನುಷ್ಯ ಜನ್ಮವು ದೊರಕಿರುತ್ತದೆ. ಈ ಮನುಷ್ಯಜನ್ಮದ ಬೆಲೆಯು ಎಷ್ಟು ಜನರಿಗೆ ತಿಳಿದಿದೆ ?

 – (ಸದ್ಗುರು) ಡಾ. ಮುಕುಲ ಗಾಡಗೀಳ