ಭಗತಸಿಂಗ, ರಾಜಗುರು ಮತ್ತು ಸುಖದೇವ ಇವರನ್ನು ಗಲ್ಲಿಗೇರಿಸುವ ಮೊದಲು ಅವರ ಅಂತಿಮ ಭೇಟಿ ಪಡೆದ ಸಹಚರರು

೨೩ ಮಾರ್ಚ ೨೦೨೨ ರಂದು ಭಗತಸಿಂಗ, ರಾಜಗುರು ಮತ್ತು ಸುಖದೇವ ಇವರ ಬಲಿದಾನದ ದಿನವಿದೆ. ಅದರ ನಿಮಿತ್ತ….

‘ಭಗತಸಿಂಗ, ರಾಜಗುರು ಮತ್ತು ಸುಖದೇವ ಈ ಕ್ರಾಂತಿಕಾರರಿಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸಲಾಯಿತು. ಆ ಸಮಯದಲ್ಲಿ ಯೋಜನೆಯಲ್ಲಿ ಅವರೊಂದಿಗಿದ್ದ ಶಿವಕರ್ಮಾ, ಜಯದೇವ ಕಪೂರ ಮತ್ತು ಇತರ ಸಹಚರರು ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಜೀವಾವಧಿ ಶಿಕ್ಷೆಯಾಗಿರುವ ಈ ಕೈದಿಗಳನ್ನು ಅವರ ಶಿಕ್ಷೆಯನ್ನು ಭೋಗಿಸಲು ಬೇರೆ ಸೆರೆಮನೆಗೆ ಕರೆದುಕೊಂಡು ಹೋಗುವರಿದ್ದರು. ಆಗ ಸೆರೆಮನೆಯ ಮೇಲಧಿಕಾರಿಗಳು ಭಗತಸಿಂಗ, ರಾಜಗುರು ಮತ್ತು ಸುಖದೇವ ಇವರ ಅಂತಿಮ ಭೇಟಿಯನ್ನು ತೆಗೆದುಕೊಳ್ಳಲು ಅವರಿಗೆ ಅನುಮತಿ ನೀಡಿದರು.

ಆ ಭೇಟಿಯಲ್ಲಿ ಜಯದೇವ ಕಪೂರ ಇವರು ಭಗತಸಿಂಗರಿಗೆ, “ನಿಮ್ಮನ್ನು ಗಲ್ಲಿಗೇರಿಸುವುದೆಂದು ನಿಶ್ಚಯಿಸಲಾಗಿದೆ. ಇಂತಹ  ಯುವ ವಯಸ್ಸಿನಲ್ಲಿ ಮೃತ್ಯುವನ್ನು ಎದುರಿಸುವಾಗ ನಿಮಗೆ ಕೆಡುಕೆನಿಸುವುದಿಲ್ಲವೇ ?” ಎಂದು ಕೇಳಿದರು. ಆಗ ಭಗತಸಿಂಗರು ನಗುತ್ತ, “ಅರೆ ! ನನ್ನ ಪ್ರಾಣಕ್ಕೆ ಬದಲಾಗಿ ‘ಇನ್ಕಲಾಬ್ ಝಿಂದಾಬಾದ್’ ಎಂಬ ಘೋಷಣೆಯನ್ನು ಹಿಂದೂಸ್ಥಾನದ ಮೂಲೆಮೂಲೆಗಳಲ್ಲಿ ತಲುಪಿಸುವುದರಲ್ಲಿ ನಾನು ಯಶಸ್ವಿಯಾಗಿದ್ದೇನೆ ಮತ್ತು ಇದೇ ನನ್ನ ಪ್ರಾಣದ ಮೌಲ್ಯವಾಗಿದೆ ಎಂದು ತಿಳಿಯುತ್ತೇನೆ. ಇಂದು ಬಂಧನದಲ್ಲಿದ್ದ (ಜೈಲಿನಲ್ಲಿರುವ) ನನ್ನ ಲಕ್ಷಾಂತರ ಬಾಂಧವರಿಂದ ನಾನು ಇದೇ ಘೋಷಣೆಯನ್ನು ಕೇಳುತ್ತಿದ್ದೇನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇದಕ್ಕಿಂತ ಹೆಚ್ಚು ಬೆಲೆ ಯಾವುದಿರಲು ಸಾಧ್ಯ ?” ಎಂದು ಹೇಳಿದರು. ಅವರ ತೇಜಸ್ವಿವಾಣಿಯಿಂದ ಎಲ್ಲರ ಕಣ್ಣುಗಳಲ್ಲಿ ನೀರು ತುಂಬಿಕೊಂಡವು. ಅವರು ಕಷ್ಟಪಟ್ಟು ದುಃಖವನ್ನು ಸಹಿಸಿಕೊಂಡರು. ಆಗ ಅವರ ಅವಸ್ಥೆಯನ್ನು ನೋಡಿ ಭಗತಸಿಂಗರು, “ಗೆಳೆಯರೇ, ಇದು ಭಾವನೆಯಲ್ಲಿ ಸಿಲುಕುವ ಸಮಯವಲ್ಲ. ನನ್ನ ಪ್ರವಾಸವಂತು ಮುಗಿದಿದೆ; ಆದರೆ ನಿಮಗೆ ಇನ್ನೂ ತುಂಬಾ ದೂರದ ಪ್ರವಾಸವನ್ನು ಮಾಡಬೇಕಾಗಿದೆ. ನನಗೆ ವಿಶ್ವಾಸವಿದೆ, ನೀವು ಸೋಲುವುದಿಲ್ಲ ಮತ್ತು ದಣಿದು ಸುಮ್ಮನೇ ಕಳಿತುಕೊಳ್ಳುವುದೂ ಇಲ್ಲ”, ಎಂದರು.

ಆ ಶಬ್ದಗಳಿಂದ ಅವರ ಸಹಕಾರಿಗಳಿಗೆ ಹೆಚ್ಚು ಹುರುಪು ಬಂದಿತು. ಅವರು ಭಗತಸಿಂಗರಿಗೆ ‘ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಕೊನೆಯ ಉಸಿರಿರುವ ತನಕ ಹೋರಾಡುವೆವು’, ಎಂಬ ಆಶ್ವಾಸನೆಯನ್ನು ನೀಡಿದರು ಮತ್ತು ಆ ಭೇಟಿಯು ಮುಗಿಯಿತು. ಅನಂತರ ಭಗತಸಿಂಗ, ರಾಜಗುರು ಮತ್ತು ಸುಖದೇವ ಇವರ ಬಲಿದಾನದಿಂದ ಹಿಂದೂಸ್ಥಾನದ ಜನರ ಮನಸ್ಸಿನಲ್ಲಿ ದೇಶಭಕ್ತಿಯ ಜ್ಯೋತಿಯು ಇನ್ನೂ ಹೆಚ್ಚು ತೀವ್ರತೆಯಿಂದ ಉರಿಯತೊಡಗಿತು.’

(‘ಸಾಪ್ತಾಹಿಕ ಜಯ ಹನುಮಾನ’, ೧೩.೨.೨೦೧೦)