ಅಮೇರಿಕಾದಲ್ಲಿ ಸಿಖ್ಖರ ವಿರುದ್ಧ ಭೇದಭಾವ ಹೆಚ್ಚಳ ! – ಮಾನವ ಹಕ್ಕುಗಳ ತಜ್ಞರ ಅಭಿಪ್ರಾಯ

ಭಾರತವು ಅಮೇರಿಕಾದಲ್ಲಿರುವ ಸಿಖ್ಖರ ಮೇಲೆ ಆಗುತ್ತಿರುವ ಅತ್ಯಾಚಾರಗಳ ವಿರುದ್ಧ ಧ್ವನಿ ಎತ್ತಬೇಕು !

ವಾಶಿಂಗ್ಟನ್ – ಅಮೇರಿಕಾದಲ್ಲಿರುವ ಸಿಖ್ಖ ಸಮುದಾಯದ ವಿರುದ್ಧ ಧಾರ್ಮಿಕ ಭೇದಭಾವ ಮತ್ತು ದ್ವೇಷಪೂರಿತ ಅಪರಾಧಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗಿದೆಯೆಂದು ಹೆಸರಾಂತ ಮಾನವ ಹಕ್ಕುಗಳ ತಜ್ಞರಾದ ಶ್ರೀಮತಿ ಅಮೃತಕೌರ ಆಕರೆಯವರು ಇತ್ತೀಚೆಗಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಸರಕಾರ ಮತ್ತು ಅಮೇರಿಕನ್ ಕಾಂಗ್ರೆಸ್ ಇವರಿಗೆ ಈ ಭೇದಭಾವ ಕೊನೆಗೊಳಿಸಲು ಕ್ರಮ ಜರುಗಿಸುವಂತೆ ವಿನಂತಿಸಿದ್ದಾರೆ.

ಕಾಂಗ್ರೆಸ್ಸಿನ ‘ಮಾನವ ಹಕ್ಕುಗಳ ದಮನ’ ಈ ವಿಷಯದ ಮೇಲೆ ನಡೆದ ಚರ್ಚೆಯ ಸಮಯದಲ್ಲಿ ಆಕರೆಯವರು ಸದಸ್ಯರಿಗೆ ಈ ಮಾಹಿತಿಯನ್ನು ನೀಡಿದರು. ಆಕರೆಯವರು ‘ಸಿಖ್ಖ ಕೋಎಲಿಶನ್’ ಈ ಸಂಘಟನೆಯ ಕಾನೂನಿನನ್ವಯ ಪ್ರಕರಣಗಳ ಸಂಚಾಲಕರಾಗಿದ್ದಾರೆ. ಈ ಸಂದರ್ಭದಲ್ಲಿ ಸಂಸದೆ ಶೀಲಾ ಜಾಕ್ಸನ್ ಮಾತನಾಡುತ್ತಾ, “ಅಮೇರಿಕಾದಲ್ಲಿ ಪಗಡಿ ಹಾಕುವ ಸಿಖ್ಖ ಮಕ್ಕಳನ್ನು ‘ಭಯೋತ್ಪಾದಕರು’ ಎಂದು ಕರೆಯುತ್ತಾರೆ ಮತ್ತು ಸಿಖ್ಖ ಹೆಣ್ಣು ಮಕ್ಕಳ ಕೂದಲು ಉದ್ದವಿರುವುದರಿಂದ ಅವರನ್ನು ಪೀಡಿಸಲಾಗುತ್ತದೆ. ಇಂತಹ ಅನೇಕ ಸಿಖ್ಖ ಮಕ್ಕಳು ಹಿಂಸಾಚಾರಕ್ಕೆ ಬಲಿಯಾಗುತ್ತಾರೆ. ನಮ್ಮ ಒಂದು ಅಧ್ಯಯನದ ಅನುಸಾರ ಕಂಡು ಬಂದಿರುವುದೇನೆಂದರೆ, ಶೇ. ೫೦ ಕ್ಕಿಂತ ಅಧಿಕ ಸಿಖ್ಖ ಮಕ್ಕಳಿಗೆ ಶಾಲೆಯಲ್ಲಿ ಇತರ ವಿದ್ಯಾರ್ಥಿಗಳಿಂದ ದೌರ್ಜನ್ಯವನ್ನು ಎದುರಿಸಬೇಕಾಗುತ್ತದೆ. ಸಂಸದೆ ಪ್ರಮಿಳಾ ಜಯಪಾಲ ಇವರೂ ಈ ಬಗ್ಗೆ ನಿಷೇಧವನ್ನು ವ್ಯಕ್ತಪಡಿಸಿದ್ದಾರೆ.